ತುಮಕೂರು :
ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಬುಧವಾರ ನಿರ್ಣಯ ಕೈಗೊಂಡಿದೆ. ಆದರೆ ಹೆಚ್ಚಳವಾಗಿರುವ ಈ ಬೆಂಬಲ ಬೆಲೆ ನ್ಯಾಯೋಚಿತ ರೀತಿಯಲ್ಲಿಲ್ಲ ಎಂಬ ಅಸಮಾಧಾನಗಳು ರೈತ ವರ್ಗದಲ್ಲಿ ಕೇಳಿಬರುತ್ತಿದೆ. ಕೇವಲ 375 ರೂ.ಗಳಿಗೆ ಮಾತ್ರ ಹೆಚ್ಚಿಸಲಾಗಿದ್ದು, ಇದು ಮೂಗಿಗೆ ತುಪ್ಪ ಸವರುವಂತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಆರ್ಥಿಕ ವ್ಯವಹಾರಗಳ ಕುರಿತ ಸಚಿವ ಸಂಪುಟ ಸಮಿತಿಯು 2021ನೇ ಹಂಗಾಮಿನ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ) ಗೆ ತನ್ನ ಅನುಮೋದನೆ ನೀಡಿದೆ. ಗಿರಣಿ ಬಳಕೆಯ ಅಂದರೆ ಮಿಲ್ಲಿಂಗ್ ಸಾಧಾರಣ ಗುಣಮಟ್ಟದ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 375 ರೂ.ಗಳಿಗೆ ಹೆಚ್ಚಿಸಲಾಗಿದ್ದು, 2021 ರಲ್ಲಿ ಈ ದರ 10,600 ರೂ.ಗಳಿಗೆ ಏರಿಕೆಯಾಗಲಿದೆ.
ಗಿಟುಕು ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು 300 ರೂ.ಗಳಿಗೆ ಹೆಚ್ಚಿಸಲಾಗಿದ್ದು, 2020 ರಲ್ಲಿ ಪ್ರತಿ ಕ್ವಿಂಟಾಲ್‍ಗೆ ಈ ದರ 10,300 ರೂ.ಗಳಿತ್ತು. ಘೋಷಿತ ಎಂ.ಎಸ್.ಪಿ. ಅಖಿಲ ಭಾರತ ಮಟ್ಟದ ತೂಕದ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಗಿರಣಿ ಕೊಬ್ಬರಿಗೆ ಶೇ.51.87 ಮತ್ತು ಗಿಟುಕು ಕೊಬ್ಬರಿಗೆ ಶೇ.55.76 ರಷ್ಟು ಪ್ರತಿಫಲವನ್ನು ಖಾತರಿಪಡಿಸುತ್ತದೆ ಎಂದು ಹೇಳಿರುವ ಸರ್ಕಾರವು ಕೃಷಿ ವೆಚ್ಚ ಮತ್ತು ದರ ಆಯೋಗ ಶಿಫಾರಸ್ಸಿನ ಆಧಾರದ ಮೇಲೆ ಈ ಅನುಮೋದನೆ ನೀಡಲಾಗಿದೆ ಎಂದು ಹೇಳಿದೆ.
ಕೊಬ್ಬರಿಯ ಉತ್ಪಾದನಾ ವೆಚ್ಚಕ್ಕಿಂತ ಶೇ.52 ಮತ್ತು ಶೇ.55ಕ್ಕೂ ಹೆಚ್ಚು ಬೆಲೆ ನೀಡುತ್ತಿದ್ದೇವೆ. ಇದು ತೆಂಗು ಕೃಷಿಯಲ್ಲಿ ತೊಡಗಿರುವ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ. ದೇಶದ 12 ಕರಾವಳಿ ರಾಜ್ಯಗಳ ರೈತರ ಮೇಲೆ ಪರಿಣಾಮ ಬೀರಲಿದೆ ಎಂದು ಜಾವ್ಡೇಕರ್ ಹೇಳಿದ್ದಾರೆ. ಆದರೆ ಈಗಾಗಲೇ ಖಾಸಗಿ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಕೊಬ್ಬರಿಯ ಬೆಲೆ 14 ಸಾವಿರ ರೂ.ಗಳಿಂದ 15 ಸಾವಿರ ರೂ.ಗಳವರೆಗೆ ಮಾರಾಟವಾಗುತ್ತಿದೆ. ತಿಪಟೂರು ಮಾರುಕಟ್ಟೆಯಲ್ಲಿ ಜನವರಿ 27ರಂದು ನಡೆದ ವಹಿವಾಟಿನಂತೆ ಕ್ವಿಂಟಾಲ್ ಕೊಬ್ಬರಿ ಧಾರಣೆ 14,200. ವಾಸ್ತವ ಸ್ಥಿತಿ ಹೀಗಿರುವಾಗ ಕೇಂದ್ರ ಸರ್ಕಾರ ಕೊಬ್ಬರಿ ಬೆಲೆಯನ್ನು 10 ಸಾವಿರದಿಂದ 10,600 ರೂ.ಗಳ ಆಸುಪಾಸಿಗೆ ತಂದು ನಿಲ್ಲಿಸಿರುವುದು ಅಷ್ಟೇನೂ ಸಮಾಧಾನಕರ ತಂದಿಲ್ಲ.
2020 ರಲ್ಲಿಯೇ ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಉಂಡೆ ಕೊಬ್ಬರಿಯನ್ನು 10,300 ರೂ.ಗಳಂತೆ ಖರೀದಿಸಲು ತೀರ್ಮಾನಿಸಿತ್ತು. 2020 ರ ಜೂನ್, ಜುಲೈ ತಿಂಗಳಿನಲ್ಲಿ ರೈತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಜಿಲ್ಲಾಡಳಿತ ಅವಕಾಶ ನೀಡಿತ್ತು. ಆದರೆ ರೈತರು ಇದಕ್ಕೆ ಸ್ಪಂದಿಸಲಿಲ್ಲ ಎಂಬುದನ್ನು ಇಲ್ಲಿ ಸ್ಮರಿಸಬಹುದು.
ದಶಕಗಳಿಂದಲೂ ರೈತ ಸಮುದಾಯ ಕೊಬ್ಬರಿಯನ್ನು ಕನಿಷ್ಠ ಬೆಂಬಲ ಬೆಲೆಗೆ ಘೋಷಿಸಲು ಅಥವಾ ವೈಜ್ಞಾನಿಕ ಬೆಲೆ ನಿಗದಿಪಡಿಸಲು ಆಗ್ರಹಪಡಿಸುತ್ತಲೇ ಬಂದಿದೆ. ಎಲ್ಲೋ ಕೆಲವು ಬಾರಿ 15 ಸಾವಿರ ರೂ.ಗಳಿಂದ 18 ಸಾವಿರ ರೂ.ಗಳವರೆಗೆ ಕೊಬ್ಬರಿ ಮಾರಾಟವಾಗಿರುವುದನ್ನು ಬಿಟ್ಟರೆ ಉಳಿದಂತೆ ಎಪಿಎಂಸಿ ಯಾರ್ಡ್‍ಗಳಲ್ಲಿ 10 ಸಾವಿರ ರೂ.ಗಳಿಂದ 15 ಸಾವಿರ ರೂ.ಗಳವರೆಗೆ ಮಾರಾಟವಾಗಿರುವುದೆ ಹೆಚ್ಚು. ಇದಕ್ಕೂ ಮಿಗಿಲಾಗಿ ಬಹಳಷ್ಟು ಸಲ ಕೊಬ್ಬರಿ ಬೆಲೆ 10 ಸಾವಿರಕ್ಕೂ ಕಡಿಮೆ ದರಕ್ಕೆ ಇಳಿದು ರೈತರು ಕಂಗಾಲಾಗಿ ಹೋಗಿದ್ದಾರೆ.
ಒಂದು ಕ್ವಿಂಟಾಲ್ ಕೊಬ್ಬರಿ ಬೆಳೆಯಲು ಕನಿಷ್ಠ 13 ಸಾವಿರ ರೂ.ಗಳಿಂದ 15 ಸಾವಿರ ರೂ.ಗಳಾಗುತ್ತವೆ ಎಂದು ಈಗಾಗಲೇ ವರದಿಗಳು ತಿಳಿಸಿವೆ. ಈ ಕನಿಷ್ಠ ಬೆಲೆಯನ್ನಾದರೂ ಕೊಡಿ ಎಂಬುದು ರೈತರ ಒಕ್ಕೊರಲ ಆಗ್ರಹ. ಕನಿಷ್ಠ 15 ಸಾವಿರ ರೂ.ಗಳಿಂದ 20 ಸಾವಿರ ರೂ.ಗಳವರೆಗೆ ವಿವಿಧ ಸಂಘಟನೆಗಳು ಬೆಂಬಲ ಬೆಲೆಗೆ ಒತ್ತಾಯಿಸುತ್ತಲೇ ಬಂದಿವೆ. ಆದರೆ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಂಬಲ ಬೆಲೆ ಇರುವುದು ರೈತರಿಗೆ ಅಸಮಾಧಾನ ಉಂಟು ಮಾಡಿದೆ. ಹೀಗೆ 10 ಸಾವಿರ ರೂ.ಗಳ ಆಸುಪಾಸಿನಲ್ಲಿ ಕನಿಷ್ಠ ಬೆಂಬಲ ಬೆಲೆ ಇರುವುದನ್ನು ನೋಡಿಕೊಂಡು ಖಾಸಗಿಯವರು ಅದಕ್ಕಿಂತ ಹೆಚ್ಚಿನ ಟೆಂಡರ್ ಕೂಗುತ್ತಾರೆ. ಯಾವತ್ತೂ ಸಹ ಸರ್ಕಾರಿ ಟೆಂಡರ್‍ಗಿಂತ ಹೆಚ್ಚಿನ ದರಕ್ಕೆ ಖಾಸಗಿಯವರು ಕೊಳ್ಳುತ್ತಾರೆ. ಹೀಗೆ ಮಾರುಕಟ್ಟೆಯಲ್ಲಿ ದರ ಪೈಪೋಟಿ ಯಾವತ್ತಿಗೂ ಏರಿಳಿತವಾಗಿಯೇ ಇದೆ. ಇದನ್ನು ನಿಯಂತ್ರಿಸಲು ಬೆಂಬಲ ಬೆಲೆ ನ್ಯಾಯೋಚಿತವಾಗಿರಬೇಕು ಎಂಬುದು ರೈತರ ಆಗ್ರಹ.
2020 ರಲ್ಲಿ ಕ್ವಿಂಟಾಲ್ ಕೊಬ್ಬರಿ ದರ 15 ಸಾವಿರ ರೂ.ಗಳನ್ನು ದಾಟಿದ ನಂತರ ಕ್ರಮೇಣ 10 ಸಾವಿರ ರೂ.ಗಳವರೆಗೆ ಬಂದು ನಿಂತಿತು. ಸರ್ಕಾರವು ಜಿಲ್ಲಾಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಿತು. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಹುಳಿಯಾರು, ತಿಪಟೂರು, ಗುಬ್ಬಿ, ತುರುವೇಕೆರೆ, ತುಮಕೂರು, ಕುಣಿಗಲ್, ಶಿರಾ, ಚೇಳೂರಿನ ಎಪಿಎಂಸಿ ಪ್ರಾಂಗಣದಲ್ಲಿ 9 ಖರೀದಿ ಕೇಂದ್ರಗಳನ್ನು ತೆರೆಯಿತು. ಪ್ರತಿ ರೈತರಿಂದ ಎಕರೆಗೆ 6 ಕ್ವಿಂಟಾಲ್‍ನಂತೆ ಕನಿಷ್ಠ 20 ಕ್ವಿಂಟಾಲ್ ಉಂಡೆ ಕೊಬ್ಬರಿಯನ್ನು ಮಾತ್ರ ಖರೀದಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಆದರೆ ಇದೇನು ಅಷ್ಟಾಗಿ ಫಲದಾಯಕವಾಗಲಿಲ್ಲ. ರೈತರು ಎಪಿಎಂಸಿಗಳ ಕಡೆಗೆ ಸುಳಿಯಲಿಲ್ಲ. ಇದಾದ ನಂತರ ಇತ್ತೀಚಿನ ದಿನಗಳಲ್ಲಿ 14 ಸಾವಿರ ರೂ.ಗಳಿಂದ 15 ಸಾವಿರ ರೂ.ಗಳವರೆಗೆ ಕ್ವಿಂಟಾಲ್ ಕೊಬ್ಬರಿ ಬೆಲೆ ಮಾರಾಟವಾಗುತ್ತಿದೆ. ಹೀಗಿರುವಾಗ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಯಾವ ಸಾರ್ಥಕಕ್ಕೆ ಎನ್ನುತ್ತಾರೆ ರೈತರು.
ಬೆಂಬಲ ಬೆಲೆ ಭಿಕ್ಷೆಯಂತಾಗದಿರಲಿ :
ಉತ್ಪಾದನಾ ವೆಚ್ಚವನ್ನು ಆಧರಿಸಿ ವೈಜ್ಞಾನಿಕವಾಗಿ ಬೆಂಬಲ ಬೆಲೆ ನಿಗದಿಪಡಿಸಬೇಕು. ಒಮ್ಮೆ ಈ ಬೆಲೆ ನಿಗದಿಪಡಿಸಿದ ಮೇಲೆ ಅದು ಕಾನೂನಾತ್ಮಕವಾಗಿ ಖಾಯಂ ಆಗಿ ಜಾರಿಗೆ ಬರಬೇಕು. ಯಾವುದೇ ಕಾರಣಕ್ಕೂ ಅದಕ್ಕಿಂತ ಕಡಿಮೆ ಮಾರಾಟ ಮಾಡುವ ವ್ಯವಸ್ಥೆ ಇರಲೇಬಾರದು. ಬೇಕಾದರೆ ಹೆಚ್ಚಿನ ದರದಲ್ಲಿ ಖರೀದಿಗೆ ಅವಕಾಶವಿರುವಂತಿರಬೇಕು. ಖರೀದಿ ಕೇಂದ್ರಗಳನ್ನು ತೆರೆದಾಗ ಕೆಲವು ಮಾನದಂಡಗಳನ್ನು ಸಡಿಲಿಸಬೇಕು. ಪಹಣಿ ಇತ್ಯಾದಿ ದಾಖಲೆಗಳನ್ನು ತರುವುದನ್ನು ಕಡ್ಡಾಯಗೊಳಿಸಬಾರದು. ಅಲ್ಲದೆ, ಖರೀದಿಯಾದ ನಂತರ ಹಣ ಪಾವತಿಸುವಂತಿರಬೇಕು. ರೈತ ತಾನು ಬೆಳೆದ ಕೊಬ್ಬರಿ ಅಥವಾ ಕೃಷಿ ಉತ್ಪಾದನಾ ವಸ್ತುಗಳನ್ನು ಖರೀದಿ ಕೇಂದ್ರಗಳಿಗೆ ಬಿಟ್ಟಾಗ ಹಲವು ತಿಂಗಳ ನಂತರ ಹಣ ಪಾವತಿಸುತ್ತಾರೆ. ಈ ವ್ಯವಸ್ಥೆಯಿಂದ ರೈತರು ಹಿಂದೇಟು ಹಾಕುತ್ತಾರೆ. ಕೊಬ್ಬರಿ ಇರಲಿ ಮತ್ಯಾವುದೇ ರೈತರ ಉತ್ಪಾದನಾ ವಸ್ತುಗಳಿರಲಿ ವೈಜ್ಞಾನಿಕ ಬೆಲೆ ಇರಬೇಕೇ ಹೊರತು ಭಿಕ್ಷೆಯಂತೆ ಬೆಂಬಲ ಬೆಲೆ ನೀಡಬಾರದು. ಕೊಬ್ಬರಿಗೆ ಕನಿಷ್ಠ 20 ಸಾವಿರ ರೂ.ಗಳ ಬೆಂಬಲ ಬೆಲೆ ನಿಗದಿಪಡಿಸಬೇಕು.
-ಎ.ಗೋವಿಂದರಾಜು, ರೈತ ಸಂಘದ ಮುಖಂಡರು.