ತುಮಕೂರು : 11 ಸೋಂಕು ಪ್ರಕರಣ, 2 ಸಾವು, 3 ಕಡೆ ಸೀಲ್‍ಡೌನ್!!

 ತುಮಕೂರು :

      ರಾಜ್ಯದಲ್ಲಿ ಕೊರೊನ ಸೋಂಕು ಹರಡುತ್ತಲೇ ತುಮಕೂರು ಜಿಲ್ಲೆಯಲ್ಲಿ ಸೋಂಕಿನ ಭೀತಿ ಕಡಿಮೆಯಾಗಿದೆ. ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯ ಸತತ ಶ್ರಮ, ಜನರ ಸಹಕಾರದಿಂದ ಕಳೆದ 15 ದಿನಗಳಿಂದ ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣ ಇಲ್ಲದೆ, ಪರಿಸ್ಥಿತಿ ನಿಯಂತ್ರಣದಲ್ಲಿದೆ.

      ಜಿಲ್ಲೆಯಲ್ಲಿ ಈವರೆಗೆ 11 ಜನರಿಗೆ ಸೋಂಕು ದೃಢಪಟ್ಟಿದ್ದು, ಇವರಲ್ಲಿ ಇಬ್ಬರು ಮೃತಪಟ್ಟು, ಇನ್ನಿಬ್ಬರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಉಳಿದ ಏಳು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

      ಸೋಂಕು ಕಾಣಿಸಿದ ನಗರದ ಪಿ.ಹೆಚ್.ಕಾಲೋನಿ ಹಾಗೂ ಹೌಸಿಂಗ್ ಬೋರ್ಡ್ ಪ್ರದೇಶ ಮತ್ತು ಶಿರಾ ನಗರದ ಒಂದು ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದೆ.

      ಆದರೆ, ಕೊರೊನಾ ತಡೆ ಕಾರ್ಯ ನಿರಂತರವಾಗಿ ಮುಂದುವರೆದಿದೆ. ಜಿಲ್ಲೆಯ 1920 ಜನರನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಶಂಕಿತ 791 ಮಂದಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇದೂವರೆಗೂ 6878 ಜನರ ಗಂಟಲ ದ್ರವದ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಇದರಲ್ಲಿ 6392 ಜನರಿಗೆ ನೆಗೆಟೀವ್ ವರದಿ ಬಂದಿದೆ, 437 ಮಾದರಿಗಳ ವರದಿ ಬರುವುದು ಬಾಕಿ ಇದೆ.

      ಶಿರಾದ ಒಬ್ಬರು ಹಾಗೂ ತುಮಕೂರು ನಗರದ ಒಬ್ಬರು ಕೊರೊನಾ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪಿ.ಹೆಚ್.ಕಾಲೋನಿ ಪ್ರದೇಶವನ್ನು ಏಪ್ರಿಲ್ 24ರಿಂದ 28 ದಿನಗಳವರೆಗೆ ಸೀಲ್‍ಡೌನ್ ಮಾಡಲಾಗಿದೆ. ಈ ಮಧ್ಯೆ ಯಾವುದೇ ಸೋಂಕು ಕಂಡುಬರದಿದ್ದರೆ ಈ ತಿಂಗಳ 22ಕ್ಕೆ ಇಲ್ಲಿ ಸೀಲ್‍ಡೌನ್ ಮುಕ್ತಾಯವಾಗಲಿದೆ.

      ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ ಸೋಂಕು ಕಾಣಿಸಿಕೊಂಡು ಏಪ್ರಿಲ್ 29ರಿಂದ ಸೀಲ್‍ಡೌನ್ ಮಾಡಲಾಗಿತ್ತು. ಆದರೆ, ಇದೇ ಪ್ರದೇಶದಲ್ಲಿ ಮೇ 2ರಂದು ಮತ್ತೆರಡು ಸೋಂಕು ಪ್ರಕರಣ ದೃಢಪಟ್ಟ ಕಾರಣ, ಅಂದಿನಿಂದ 28 ದಿನ ಕಾಲ ಸೀಲ್‍ಡೌನ್ ವಿಸ್ತರಿಸಲಾಗಿದೆ. ಮತ್ತೆ ಇಲ್ಲಿ ಸೋಂಕು ಪ್ರಕರಣ ಪತ್ತೆಯಾಗದಿದ್ದರೆ ಮೇ 30ಕ್ಕೆ ಇಲ್ಲಿನ ಸೀಲ್‍ಡೌನ್ ಅವಧಿ ಕೊನೆಗೊಳ್ಳಲಿದೆ ಎಂದು ಡಿಹೆಚ್‍ಓ ಡಾ.ನಾಗೇಂದ್ರಪ್ಪ ಹೇಳಿದರು.

      ಸೀಲ್‍ಡೌನ್ ಪ್ರದೇಶದಲ್ಲಿ ಜನ ಓಡಾಟಕ್ಕೆ ಅವಕಾಶವಿಲ್ಲ. ಅಲ್ಲಿನವರು ಹೊರಗೆ ಹೋಗಲು, ಹೊರಗಿನವರು ಸೀಲ್‍ಡೌನ್ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಉಳಿದಂತೆ ಜಿಲ್ಲೆಯಾದ್ಯಂತ ಲಾಕ್‍ಡೌನ್ ಮಾರ್ಗಸೂಚಿಗಳು ಮುಂದುವರೆಯಲಿವೆ. ನಾಲ್ಕನೇ ಹಂತದ ಲಾಕ್‍ಡೌನ್‍ನಲ್ಲಿ ಸಣ್ಣಪುಟ್ಟ ಆರ್ಥಿಕ ವಹಿವಾಟು ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap