ತುಮಕೂರು :
ಕಳೆದ ವರ್ಷ ಕೋವಿಡ್ ಮೊದಲ ಅಲೆಯಲ್ಲಿ ಜಿಲ್ಲೆಯ ಮೊದಲ ಕೊರೊನಾ ಸಾವಿನ ಪ್ರಕರಣದೊಂದಿಗೆ ರಾಜ್ಯದ ಗಮನಸೆಳೆದಿದ್ದ ಶಿರಾ ತಾಲೂಕು ಪ್ರಸಕ್ತಕೋವಿಡ್ ಎರಡನೇ ಅಲೆಯಲ್ಲಿಯೂ ಜಿಲ್ಲೆಯಲ್ಲಿ ಅತ್ಯಧಿಕ ಪಾಸಿಟಿವ್ ರೇಟ್‍ನೊಂದಿಗೆ ಹೆಚ್ಚು ಪಾಸಿಟಿವ್ ಪ್ರಕರಣಗಳು ಕಂಡುಬರುತ್ತಿರುವ ತಾಲೂಕಾಗಿ ಗುರುತಿಸಲ್ಪಟ್ಟಿರುವುದು ಆತಂಕಕಾರಿ ಸಂಗತಿಯೆನಿಸಿದೆ.
ಕಳೆದ ಹತ್ತು ದಿನದಲ್ಲಿ ನಡೆಸಿದ ಕೋವಿಡ್ ಪರೀಕ್ಷೆ ಅಂಕಿ ಅಂಶದಲ್ಲಿ ಈ ಸಂಗತಿ ಬೆಳಕಿಗೆ ಬಂದಿದ್ದು, ಶಿರಾ ತಾಲೂಕಿನಲ್ಲಿ 6299 ಮಂದಿ ಪರೀಕ್ಷೆ ನಡೆಸಿದಾಗ 2924 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಬಂದಿದ್ದು, ಪಾಸಿಟಿವಿಟಿ ಪ್ರಮಾಣ ಶೇ.46.42ರಷ್ಟಾಗುವ ಮೂಲಕ ಜಿಲ್ಲೆಯಲ್ಲಿ ಅಧಿಕವೆನಿಸಿದೆ. 2ನೇ ಸ್ಥಾನದಲ್ಲಿ ಮಧುಗಿರಿ ತಾಲೂಕಿದ್ದು 3973 ಮಂದಿ ಸ್ವಾಬ್ ಟೆಸ್ಟ್ ಮಾಡಿದಾಗ 1821 ಮಂದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದ್ದು, ಶೇ.45.83ರಷ್ಟಿದೆ.
ಮೂರನೇ ಸ್ಥಾನದಲ್ಲಿ ಗುಬ್ಬಿ ತಾಲೂಕಿದ್ದು 4595 ಮಂದಿಗೆ ಟೆಸ್ಟ್ ಮಾಡಿಸಿದಾಗ 2059 ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದ್ದು, ಪಾಸಿಟಿವಿಟಿ ಪ್ರಮಾಣ ಶೇ.44.81ರಷ್ಟಿದೆ.
ತುಮಕೂರಲ್ಲಿ ಇಳಿಮುಖ, ಚಿ.ನಾಹಳ್ಳಿ ಅತೀ ಕಡಿಮೆ ಪಾಸಿಟಿವಿಟಿ :
ಎರಡನೇ ಅಲೆ ಪ್ರಾರಂಭದಲ್ಲಿ ಪಾಸಿಟಿವಿಟಿ ರೇಟ್‍ನಲ್ಲಿ ಮೊದಲ ಸ್ಥಾನದಲ್ಲಿ ತುಮಕೂರು ತಾಲೂಕು ನಾಲ್ಕನೇ ಸ್ಥಾನಕ್ಕೆ ಇಳಿಕೆಯಾಗಿದ್ದು, 14997 ಮಂದಿ ಗಂಟಲುದ್ರವ ಪರೀಕ್ಷೆ ನಡೆಸಿದಾಗ 6471 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಪಾಸಿಟಿವಿಟಿ ಪ್ರಮಾಣ ಶೇ.43.15ರಷ್ಟಿದೆ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಕ್ಷೇತ್ರ ಚಿಕ್ಕನಾಯಕನಹಳ್ಳಿಯಲ್ಲಿ ಕೋವಿಡ್ ಪಾಸಿಟಿವಿಟಿ ಶೇ.29.38ರಷ್ಟು ದಾಖಲಾಗುವ ಮೂಲಕ ಜಿಲ್ಲೆಯಲ್ಲಿ ಅತೀ ಕಡಿಮೆ ಪಾಸಿಟಿವ್ ಪ್ರಮಾಣ ದಾಖಲಾಗಿರುವ ತಾಲೂಕೆನಿಸಿದೆ.
ಶೇ.35-36 ಪ್ರಮಾಣದಲ್ಲಿ ಐದು ತಾಲೂಕುಗಳು :
ಉಳಿದಂತೆ ಕೊರಟಗೆರೆಯಲ್ಲಿ ಶೇ.35.66, ಪಾವಗಡದಲ್ಲಿ ಶೇ.35.02, ತಿಪಟೂರು ಶೇ.38.73, ತುರುವೇಕೆರೆಯಲ್ಲಿ ಶೇ.35.82 ಹಾಗೂ ಕುಣಿಗಲ್‍ನಲ್ಲಿ ಶೇ 36 ಪಾಸಿಟಿವ್ ಪ್ರಮಾಣ ಕಂಡುಬಂದಿದ್ದು, ಸೋಂಕಿನ ಪ್ರಮಾಣದಲ್ಲಿ ಹೆಚ್ಚೂ ಇಲ್ಲ, ಕಡಿಮೆಯಿಲ್ಲದ ಮಧ್ಯಂತರ ಸ್ಥಿತಿಯಲ್ಲಿದೆ.
100 ಮಂದಿಯಲ್ಲಿ 40 ಮಂದಿಗೆ ಸೋಂಕು:
ಒಟ್ಟಾರೆ ಜಿಲ್ಲೆಯ ಹತ್ತು ತಾಲೂಕುಗಳಿಂದ ಕಳೆದ ಹತ್ತು ದಿನಗಳಲ್ಲಿ 54,266 ಮಂದಿಯ ಗಂಟಲುದ್ರವ ಪರೀಕ್ಷೆ ಮಾಡಿದ್ದು, ಅವರಲ್ಲಿ 21883 ಮಂದಿಯಲ್ಲಿ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಶೇ.40.33ರಷ್ಟು ಪಾಸಿಟಿವಿಟಿ ಪ್ರಮಾಣ ದಾಖಲಾಗಿದೆ. ಅಂದರೆ ಟೆಸ್ಟ್‍ಗೊಳಗಾದ 100 ಮಂದಿಯಲ್ಲಿ 40 ಮಂದಿ ಸೋಂಕಿತರಾಗುತ್ತಿರುವುದು ಕಂಡುಬರುತ್ತಿದ್ದು, ಇದು ಕಳವಳಕಾರಿ ಸಂಗತಿಯೇ ಆಗಿದೆ. ಜಿಲ್ಲೆಯ ಜನತೆ ಮತ್ತಷ್ಟು ಎಚ್ಚೆತ್ತು, ಸೋಂಕಿನ ಬಗ್ಗೆ ಜಾಗ್ರತೆ ವಹಿಸುವ ಅಗತ್ಯವಿದೆ. ತುಮಕೂರು ನಗರದಲ್ಲಿ ಸೋಂಕು ಇಳಿಮುಖವಾಗುತ್ತಿರುವುದು ಆಶಾದಾಯಕವಾದರೂ ಆಡಳಿತ –ಜನತೆ ಸ್ವಲ್ಪ ಎಚ್ಚರ ತಪ್ಪಿ ನಿರ್ಲಕ್ಷ್ಯ ತಾಳಿದರೂ ಮತ್ತೆ ಮೊದಲ ಸ್ಥಾನಕ್ಕೆ ಏರುವುದರಲ್ಲಿ ಸಂದೇಹವಿಲ್ಲ.
ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಶೇ.40.13
ತಾಲೂಕು ಪಾಸಿಟಿವಿಟಿ ಪ್ರಮಾಣ
ಶಿರಾ ಶೇ.46.42
ಮಧುಗಿರಿ ಶೇ.45.83
ಗುಬ್ಬಿ ಶೇ.44.81
ತುಮಕೂರು ಶೇ.43.15
ಕೊರಟಗೆರೆ ಶೇ.35.66
ಕುಣಿಗಲ್ ಶೇ.36.00
ಪಾವಗಡ ಶೇ.35.02
ತಿಪಟೂರು ಶೇ.38.73
ತುರುವೇಕೆರೆ ಶೇ.35.82
ಚಿ.ನಾ.ಹಳ್ಳಿ ಶೇ.29.38
ಜಿಲ್ಲಾ ಸರಾಸರಿ ಶೇ.40.13
ಕೊರೊನಾ ಹಾಟ್‍ಸ್ಪಾಟ್ ಆಗಿದ್ದ ತುಮಕೂರು ನಗರದಲ್ಲಿ ಇಳಿಮುಖ!
ಜಿಲ್ಲಾ ಕೇಂದ್ರ ಹೊಂದಿರುವ ತುಮಕೂರು ನಗರ ಜಿಲ್ಲೆಯ ಕೊರೊನಾ ಹಾಟ್‍ಸ್ಪಾಟ್ ಆಗಿ ಗುರುತಿಸಲ್ಪಟ್ಟಿತ್ತು. ತುಮಕೂರು ತಾಲೂಕಿನ ಗ್ರಾಮಾಂತರ ಪ್ರದೇಶಕ್ಕೆ ಹೋಲಿಸಿದರೆ ನಗರದಲ್ಲಿ ಸೋಂಕಿನ ಪ್ರಮಾಣ ಇಳಿಮುಖವಾಗಿದ್ದು, ಮೇ 1 ರಿಂದ 11ರವರೆಗಿನ ಅಂಕಿಅಂಶದಲ್ಲಿ ತುಮಕೂರು ತಾಲೂಕಲ್ಲಿ 7408 ಸೋಂಕಿತರು ಪತ್ತೆಯಾಗಿದ್ದು, ಇವರಲ್ಲಿ 4777 ಮಂದಿ ಗ್ರಾಮಾಂತರ ಪ್ರದೇಶದವರಾದರೆ ತುಮಕೂರು ನಗರದಲ್ಲಿ 2631 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರ ಮಾರ್ಗದರ್ಶನದಂತೆ ಜನಪ್ರತಿನಿಧಿಗಳ ಸಹಕಾರದೊಂದಿಗೆ ಮಹಾನಗರಪಾಲಿಕೆ ಆಡಳಿತ ಕೈಗೊಂಡ ಹಲವು ಪರಿಣಾಮಕಾರಿ ಕ್ರಮಗಳು ಸೋಂಕಿನ ಪ್ರಮಾಣದಲ್ಲಿ ಇಳಿಮುಖವಾಗಲು ಕಾರಣವಾಗಿದೆ. ನಗರದ ಹಾಟ್‍ಸ್ಪಾಟ್‍ಗಳು 38 ರಿಂದ 28ಕ್ಕೆ ಇಳಿಕೆಯಾಗಿದೆ ಎಂದು ಆಯುಕ್ತೆ ರೇಣುಕಾ ಮಾಹಿತಿ ನೀಡಿದ್ದಾರೆ.
ಎಸ್.ಹರೀಶ್ ಆಚಾರ್ಯ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ