ತುಮಕೂರು : ಮೂರು ಸಾವಿರಕ್ಕೂ ಅಧಿಕ ಸಕ್ರಿಯ ಕೇಸ್!!

ತುಮಕೂರು :

      ಲಾಕ್‍ಡೌನ್ ಸಡಿಲಿಕೆಯಾಗಿದ್ದರೂ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ನಿರೀಕ್ಷಿತ ಮಟ್ಟದಲ್ಲಿ ಕಡಿಮೆಯಾಗಿಲ್ಲ. ಸಾವಿನ ಪ್ರಕರಣಗಳು ನಿತ್ಯ ವರದಿಯಾಗುತ್ತಲೇ ಇವೆ. ಒಂದು ಸಾವಿರ ದಾಟಿ ಸಾವು ಪ್ರಕರಣಗಳು ಏರುಗತಿಯಲ್ಲಿ ಸಾಗಿವೆ. ಪ್ರತಿದಿನ ಮೂರರಿಂದ ಐದು ಪ್ರಕರಣಗಳು ವರದಿಯಾಗುತ್ತಲೇ ಇವೆ.

      ಲಾಕ್‍ಡೌನ್ ನಿರ್ಬಂಧ ಸಡಿಲಿಕೆಯಾಗಿ ಸರ್ಕಾರ ಅನ್‍ಲಾಕ್ ಘೋಷಣೆ ಮಾಡಿದೆ ಎಂದಾಕ್ಷಣ ಕೊರೊನಾ ಸೋಂಕು ಇನ್ನಿಲ್ಲವಾಗಿದೆ ಎಂದುಕೊಳ್ಳುವವರೆ ಅಧಿಕ. ಆದರೆ ಸರ್ಕಾರ ಸಡಿಲಿಕೆ ಮಾಡಿರುವುದು ಜನಜೀವನ ಹಾಗೂ ಆರ್ಥಿಕತೆಯ ಮೇಲೆ ಹೊಡೆತ ತಗ್ಗಿಸುವ ಸಲುವಾಗಿ. ನಿರ್ಬಂಧಗಳು ಇನ್ನೂ ಮುಂದುವರೆದಿವೆ ಎಂದರೆ ಸೋಂಕು ಪ್ರಕರಣಗಳು ಇವೆ ಎಂದೇ ಅರ್ಥ.

      ಜಿಲ್ಲೆಯಲ್ಲಿ ಒಟ್ಟು 1,14,011 ಒಟ್ಟು ಸೋಂಕು ಪ್ರಕರಣಗಳು ದಾಖಲಾಗಿವೆ. 1004 ಮಂದಿ ಕೊರೊನಾ ಸೋಂಕಿನಿಂದ ಮರಣ ಹೊಂದಿದ್ದಾರೆ. ಜಿಲ್ಲೆಯಲ್ಲಿ 3193 ಒಟ್ಟು ಸಕ್ರಿಯ ಪ್ರಕರಣಗಳು ಇವೆ. ಅಂದರೆ ಇಷ್ಟು ಮಂದಿ ಸೋಂಕಿಗೆ ಒಳಗಾಗಿ ವಿವಿಧ ಆಸ್ಪತ್ರೆಗಳಲ್ಲಿ ಇದ್ದಾರೆ. ಇವರೆಲ್ಲ ಗುಣಮುಖರಾಗಿ ಹೊರಬರಬೇಕು. ಸಾವಿರ ಲೆಕ್ಕದಲ್ಲಿ ಇರುವ ಸಕ್ರಿಯ ಪ್ರಕರಣಗಳ ಸಂಖ್ಯೆ ನೂರರ ಒಳಗೆ ಬರಬೇಕು. ಆಗ ತುಸು ಸಮಾಧಾನಕರ ಸಂಗತಿ. ಅಲ್ಲಿಯವರೆಗೂ ಸೋಂಕು ನಿಯಂತ್ರಣ, ಸಾವು ನೋವುಗಳ ವರದಿಗಳನ್ನು ಕಾಣುವುದು ಸಾಮಾನ್ಯ.
ಈಗಾಗಲೇ ಸೋಂಕಿಗೆ ಒಳಗಾಗಿ ಬಿಡುಗಡೆಯಾಗಿರುವ ಬಹಳಷ್ಟು ಮಂದಿ ಇದ್ದಾರೆ. ಮೇಲ್ಕಂಡ ಒಟ್ಟು ಸೋಂಕಿತರ ಪೈಕಿ 109814 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಕಳೆದ ಒಂದು ವಾರದಿಂದ ಪ್ರತಿನಿತ್ಯ ಬಿಡುಗಡೆಯಾಗುವವರ ಸಂಖ್ಯೆ 300 ರಿಂದ 350ರವರೆಗೆ ಇದೆ. ಸೋಂಕಿನಿಂದ ಗುಣಮುಖರಾಗಿ ಹೊರಬಂದವರು ಹಾಗೂ ಸೋಂಕು ಲಕ್ಷಣ ಇಲ್ಲದೆ ಸಮಾಜದೊಳಗೆ ಜೀವಿಸುತ್ತಿರುವವರು ಎಲ್ಲರೂ ಈಗ ಪರಸ್ಪರ ಮುಖಾಮುಖಿಯಾಗುತ್ತಾರೆ. ನಿರ್ಬಂಧಗಳು ಸಡಿಲಿಕೆಯಾಗಿರುವ ಕಾರಣ ಗುಂಪುಗೂಡುವುದು, ಪರಸ್ಪರ ಸಂಪರ್ಕ ಬೆಳೆಸುವುದು ಹೆಚ್ಚುತ್ತದೆ. ಇದು ಆತಂಕಗಳಿಗೂ ಕಾರಣವಾಗುತ್ತದೆ.

      ಸೋಂಕು ಪ್ರಕರಣ ಕಡಿಮೆ ಮಟ್ಟಕ್ಕೆ ಬಂದಿರಬಹುದು. ಆದರೆ ನಿಯಂತ್ರಣವಂತೂ ಆಗಿಲ್ಲ. ನಗರ ಪ್ರದೇಶದಿಂದ ಹಿಡಿದು ಗ್ರಾಮೀಣ ಪ್ರದೇಶದವರೆಗೆ ಪ್ರತಿ ತಾಲ್ಲೂಕಿನಲ್ಲಿಯೂ ನಿತ್ಯ ಸರಾಸರಿ 10ಕ್ಕೂ ಮೇಲ್ಪಟ್ಟು ಸೋಂಕು ಪ್ರಕರಣಗಳು ವರದಿಯಾಗುತ್ತಲೇ ಇವೆ. ರೋಗಿಗಳ ಸಂಖ್ಯೆ ಹೆಚ್ಚಾಗಿ ಲಾಕ್‍ಡೌನ್ ವಿಧಿಸಿದ್ದ ಸಂದರ್ಭದಲ್ಲಿ ಯಾರಿಗೆ ಜ್ವರ, ಕೆಮ್ಮು, ನೆಗಡಿ ಬಂದರೂ ಆತಂಕಕ್ಕೆ ಒಳಗಾಗುತ್ತಿದ್ದರು. ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದರು. ಕ್ರಮೇಣ ಸೋಂಕು ಕಡಿಮೆಯಾಗುತ್ತಿರುವುದರಿಂದ ಸೋಂಕು ಲಕ್ಷಣಗಳು ಈಗ ಕಂಡು ಬಂದರೂ ಅದನ್ನು ನಿರ್ಲಕ್ಷಿಸಲಾಗುತ್ತಿದೆ.

      ಒಬ್ಬರಿಗೆ ಸೋಂಕು ಇರುವುದು ದೃಢಪಟ್ಟರೆ ಆ ವ್ಯಕ್ತಿ 10 ಜನರಿಗೆ ಸೋಂಕು ಹರಡಬಲ್ಲ. ಕನಿಷ್ಠ 10 ಜನ ಎಂದಿಟ್ಟುಕೊಂಡರೂ ಆ 10 ಜನ 100 ಜನರಿಗೆ ಹರಡುತ್ತಾರೆ. ಇದು ದ್ವಿಗುಣಗೊಳ್ಳಲು ಕಾರಣವಾಗುತ್ತದೆ. ಸೋಂಕಿತರು ಸಮುದಾಯದಲ್ಲಿ ಬೆರೆಯುತ್ತಾ ಹೋದರೆ ಈಗ ಸ್ವಲ್ಪಮಟ್ಟಿಗೆ ತಹಬದಿಗೆ ಬಂದಿರುವ ಪ್ರಕರಣಗಳು ಮತ್ತೆ ಉಲ್ಬಣಿಸುತ್ತವೆ. ಈಗಾಗಲೇ ಮೂರನೇ ಅಲೆಯ ಆತಂಕದಲ್ಲಿರುವ ನಮಗೆ ಮತ್ತೆ ಅತಿಶೀಘ್ರದಲ್ಲಿಯೇ ಸೋಂಕು ಹರಡುವಿಕೆಯನ್ನು ಕಾಣಬಹುದಾದ ಸಾಧ್ಯತೆಗಳು ಹೆಚ್ಚಲೂಬಹುದು.

      ಕೊರೊನಾ ಎರಡನೇ ಅಲೆಯ ಸಾವು ನೋವುಗಳು ಜನತೆಯ ಮನಸ್ಸಿನಲ್ಲಿ ಘಾಸಿ ಉಂಟು ಮಾಡಿವೆ. ಹತ್ತಿರದಿಂದ ನೋಡಿದವರು, ತಾವೇ ಅನುಭವಿಸಿದವರು ಈ ರೋಗದಿಂದ ದೂರವೇ ಇರಲು ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅವರಿಗೆ ಬದುಕಿನ ಪಾಠ ಕಲಿಸಿದೆ. ಆದರೆ ಮಾಧ್ಯಮಗಳಲ್ಲಿ ನೋಡುತ್ತ ಕೇಳಿ ತಿಳಿದುಕೊಂಡಿರುವವರಿಗೆ ಅದರ ಬಾಧಕತೆ ಎಷ್ಟೆಂಬುದರ ಅರಿವು ಆಗಿಲ್ಲದಿರಬಹುದು. ವಾಸ್ತವವಾಗಿ ಅನುಭವಿಸುವುದಕ್ಕೂ ಕೇಳಿ ತಿಳಿದುಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಹೀಗಿರುವಾಗ ಮತ್ತೆ ಸೋಂಕು ಉಲ್ಬಣಿಸಿದರೆ ಪರಿಣಾಮಗಳನ್ನು ಊಹಿಸುವುದೂ ಕಷ್ಟ.

ಎಲ್ಲ ತಾಲ್ಲೂಕುಗಳಲ್ಲಿಯೂ ಸೋಂಕಿತರು :

      ಜಿಲ್ಲೆಯ 10 ತಾಲ್ಲೂಕುಗಳಲ್ಲಿ ನಿತ್ಯವೂ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಕೆಲವೇ ತಾಲ್ಲೂಕುಗಳಲ್ಲಿ 10ಕ್ಕಿಂತ ಕಡಿಮೆ ವರದಿಗಳು ಮೊನ್ನೆ ದಾಖಲಾಗಿರುವುದನ್ನು ಬಿಟ್ಟರೆ ಉಳಿದಂತೆ 10ಕ್ಕೂ ಹೆಚ್ಚು ವರದಿಯಾಗುತ್ತಿರುವ ಪ್ರಕರಣಗಳೇ ಹೆಚ್ಚು. ಚಿ.ನಾ.ಹಳ್ಳಿ ತಾಲ್ಲೂಕಿನಲ್ಲಿ ಮಂಗಳವಾರ 25, ಸೋಮವಾರ 21, ಭಾನುವಾರ 35 ಪ್ರಕರಣಗಳು ವರದಿಯಾಗಿವೆ. ಈ ಮೂರು ದಿನಗಳಲ್ಲಿ ಎರಡು ಸಾವುಗಳಾಗಿವೆ. ಅದೇ ರೀತಿ ತುಮಕೂರು, ತಿಪಟೂರು, ಶಿರಾ, ತುರುವೇಕೆರೆ ತಾಲ್ಲೂಕುಗಳಲ್ಲಿಯೂ 10ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಲೇ ಇವೆ. ಸೋಂಕು ಹಾಗೂ ಸಾವಿನ ಪ್ರಕರಣಗಳು ನಿತ್ಯವೂ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಅತ್ಯಂತ ಎಚ್ಚರಿಕೆಯ ನಡೆ ಅಗತ್ಯ.

3,193 ಸಕ್ರಿಯ ಪ್ರಕರಣಗಳು :

      ಜಿಲ್ಲೆಯ 10 ತಾಲ್ಲೂಕುಗಳಿಂದ ಒಟ್ಟು 3193 ಸಕ್ರಿಯ ಕೋವಿಡ್ ರೋಗಿಗಳಿದ್ದಾರೆ. ಚಿ.ನಾ.ಹಳ್ಳಿ ತಾಲ್ಲೂಕಿನಲ್ಲಿ 352, ಗುಬ್ಬಿ 182, ಕೊರಟಗೆರೆ 106, ಕುಣಿಗಲ್ 100, ಮಧುಗಿರಿ 83, ಪಾವಗಡ 288, ಶಿರಾ 233, ತಿಪಟೂರು 390, ತುಮಕೂರು 685, ತುರುವೇಕೆರೆ ತಾಲ್ಲೂಕಿನಲ್ಲಿ 396 ಸಕ್ರಿಯ ಸೋಂಕು ಪ್ರಕರಣಗಳಿವೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ಸಕ್ರಿಯ ಪ್ರಕರಣಗಳು ಇರುವ ಕಾರಣ ಇವು ಮತ್ತಷ್ಟು ಕಡಿಮೆಯಾಗುವವರೆಗೆ ಹೆಚ್ಚು ಮುಂಜಾಗ್ರತೆ ಅಗತ್ಯ. ಏಕೆಂದರೆ, ಓರ್ವ ಸೋಂಕಿತ ಕನಿಷ್ಠ 10 ಮಂದಿಗೆ ಸೋಂಕು ಹರಡುವ ಸಾಧ್ಯತೆಗಳಿರುವ ಕಾರಣ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಎಚ್ಚರ ವಹಿಸಬೇಕು.

ವಾರದಲ್ಲಿ 21 ಸಾವು :

      ಕಳೆದ ಒಂದು ವಾರದ ಅವಧಿಯಲ್ಲಿ ಜಿಲ್ಲೆಯಲ್ಲಿ 21 ಮಂದಿ ಕೊರೊನಾ ಸೋಂಕಿನಿಂದ ಮರಣ ಹೊಂದಿದ್ದಾರೆ. ಮಂಗಳವಾರದವರೆಗಿನ ವರದಿಯಂತೆ 1004 ಸಾವಿನ ಪ್ರಕರಣಗಳಲ್ಲಿ ಅತಿ ಹೆಚ್ಚು ಪ್ರಕರಣ ತುಮಕೂರು ನಗರ ಮತ್ತು ತಾಲ್ಲೂಕಿನಲ್ಲಿಯೇ ವರದಿಯಾಗಿದೆ. ತುಮಕೂರು 446, ಪಾವಗಡ 91, ಮಧುಗಿರಿ 87, ಕೊರಟಗೆರೆ 66 ಮಂದಿ ಸಾವಿಗೀಡಾಗಿದ್ದು, ತುರುವೇಕೆರೆಯಲ್ಲಿ ಅತ್ಯಂತ ಕಡಿಮೆ 37 ಪ್ರಕರಣಗಳು ಸಾವಾಗಿವೆ.

      ಕಳೆದ ಒಂದು ವಾರದ ಅಂಕಿ ಅಂಶಗಳನ್ನು ಗಮನಿಸಿದರೆ ಪ್ರತಿನಿತ್ಯ ಬಿಡುಗಡೆಯಾಗುವವರ ಸಂಖ್ಯೆ 300 ರಿಂದ 350ರವರೆಗೆ ಇದೆ. ಸೋಂಕಿನಿಂದ ಗುಣಮುಖರಾಗಿ ಹೊರಬಂದವರು ಹಾಗೂ ಸೋಂಕು ಲಕ್ಷಣ ಇಲ್ಲದೆ ಸಮಾಜದೊಳಗೆ ಜೀವಿಸುತ್ತಿರುವವರು ಎಲ್ಲರೂ ಈಗ ಪರಸ್ಪರ ಮುಖಾಮುಖಿಯಾಗುತ್ತಾರೆ. ನಿರ್ಬಂಧಗಳು ಸಡಿಲಿಕೆಯಾಗಿರುವ ಕಾರಣ ಗುಂಪುಗೂಡುವುದು, ಪರಸ್ಪರ ಸಂಪರ್ಕ ಬೆಳೆಸುವುದು ಹೆಚ್ಚುತ್ತದೆ. ಒಬ್ಬ ಸೋಂಕಿತನು ಇತರೆಯವರಿಗೂ ರೋಗ ಹರಡುವ ಸಾಧ್ಯತೆಗಳು ಇರುವುದರಿಂದ ಇದು ಆತಂಕಗಳಿಗೂ ಕಾರಣವಾಗುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap