ಯುಗಾದಿಗೆ ತೆರಿಗೆ ಹೆಚ್ಚಳವಿಲ್ಲದ ಬಜೆಟ್ ಗಿಪ್ಟ್!

ತುಮಕೂರು

227.73 ಕೋಟಿ ಮೊತ್ತದ ಪಾಲಿಕೆ ಆಯವ್ಯಯ ಮಂಡನೆ

    ತುಮಕೂರು ಮಹಾನಗರಪಾಲಿಕೆಯಿಂದ ನಗರದ ನಾಗರಿಕರಿಗೆ ಯುಗಾದಿ ಹಬ್ಬದ ಕೊಡುಗೆ ಯೆಂಬಂತೆ ಯಾವುದೇ ತೆರಿಗೆ ಹೆಚ್ಚಳವಿಲ್ಲದೆ 227.53 ಕೋಟಿ ಮೊತ್ತದ ಬಜೆಟ್ ಅನ್ನು ಮಂಗಳವಾರ ಮಂಡಿಸಲಾಯಿತು. ಮುಂಗಡಪತ್ರದಲ್ಲಿ 227 ಕೋಟಿ 73 ಲಕ್ಷ 30 ಸಾವಿರ ಆದಾಯ ಸಂಗ್ರಹ ನಿರೀಕ್ಷೆ ಹೊಂದಲಾಗಿದ್ದು, 223 ಕೋಟಿ 15ಲಕ್ಷ 60 ಸಾವಿರ ವೆಚ್ಚದ ನಿರೀಕ್ಷೆಯೊಂದಿಗೆ 4 ಕೋಟಿ 57 ಲಕ್ಷ 70 ಸಾವಿರ ಉಳಿತಾಯ ನಿರೀಕ್ಷೆಯನ್ನು ತೋರಿಸಲಾಗಿದೆ.

    ಹಣಕಾಸು ತೆರಿಗೆ ನಿರ್ಧರಣೆ ಸ್ಥಾಯಿ ಸಮಿತಿ ಅಧ್ಯಕ್ಷೆ ನೂರುನ್ನೀಸಾ ಬಾನು ಮಂಡನೆ ಮಾಡಿದ ಬಜೆಟ್ ಅನ್ನು ಅವರಿಗೆ ಅನಾರೋಗ್ಯದ ಕಾರಣ ಸಭೆಯ ಅಧ್ಯಕ್ಷತೆ ವಹಿಸಿದ್ದ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್ ವಿಸ್ತೃತವಾಗಿ ಓದಿದರು.

ಪ್ರಮುಖ ಆದಾಯ ನಿರೀಕ್ಷೆಗಳು:

    ಬಜೆಟ್‌ನಲ್ಲಿ ಪಾಲಿಕೆಯ ಸ್ವಂತ ಆದಾಯ ಮೂಲದಿಂದ 78.63 ಕೋಟಿ ಆದಾಯ ನಿರೀಕ್ಷಿಸಲಾಗಿದ್ದು, ಸರ್ಕಾರದಿಂದ 125.46 ಲಕ್ಷ ವಿವಿಧ ಯೋಜನಾ ಅನುದಾನ ನಿರೀಕ್ಷಿಸಲಾಗಿದೆ. ಆಸ್ತಿ ತೆರಿಗೆಯಲ್ಲಿ 45 ಕೋಟಿ, ತೆರಿಗೆ ದಂಡ 3 ಕೋಟಿ, ಘನ ತ್ಯಾಜ್ಯ ಉಪಕರದಿಂದ 2 ಕೋಟಿ, ನೀರಿನ ಕಂದಾಯ ನಲ್ಲಿ ಸಂಘದ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರಿನ ಮಾರಾಟದಿಂದ 12.75 ಕೋಟಿ.

    ಯುಜಿಡಿ ಸಂಪರ್ಕ ಶುಲ್ಕ 2.75 ಕೋಟಿ ಅಂಗಡಿ ಕಟ್ಟಡಗಳ ಬಾಡಿಗೆಯಿಂದ 2.15 ಕೋಟಿ, ಆಸ್ತಿ ಹಕ್ಕು ಬದಲಾವಣೆ 85 ಲಕ್ಷ, ಕಟ್ಟಡ ಪರವಾನಗಿ ಶುಲ್ಕ 2 ಕೋಟಿ, ಉದ್ದಿಮೆ ಪರವಾನಗಿ ಶುಲ್ಕದಿಂದ 2.20 ಕೋಟಿ ಜಾಹೀರಾತು ತೆರಿಗೆ ಮೂಲಕ 10 ಲಕ್ಷ, ರಸ್ತೆ ಕಡಿತ ಶುಲ್ಕ 50 ಲಕ್ಷಹಾಗೂ ಇತರೆ ಸ್ವೀಕೃತಿಗಳಿಂದ 2.12 ಕೋಟಿ ನಿರೀಕ್ಷಿಸಲಾಗಿದೆ. ಸರ್ಕಾರದಿಂದ ಎಸ್‌ಎಫ್‌ಸಿ ವೇತನ ಅನುದಾನ 20.85 ಕೋಟಿ ಮುಕ್ತನಿಧಿ ಅನುದಾನ 5.72 ಕೋಟಿ, ಎಸ್‌ಎಫ್‌ಸಿ ವಿಶೇಷ ಅನುದಾನ 10 ಕೋಟಿ, ವಿದ್ಯುತ್ ವೆಚ್ಚ ಅನುದಾನ 29.20 ಕೋಟಿ, ಜನಗಣತಿ ಅನುದಾನ 65 ಲಕ್ಷ ನಲ್ಮ್ ಯೋಜನೆ ಅನುದಾನ 50 ಲಕ್ಷ, 15ನೇ ಹಣಕಾಸು ಅನುದಾನ 12.54 ಕೋಟಿ ನಗರ ವಿಕಾಸಯೋಜನೆ ಅನುದಾನದ ವಂತಿಕೆ 20 ಕೋಟಿ. ಎಸ್‌ಎಫ್‌ಸಿ ಕುಡಿಯುವ ನೀರಿನ ಅನುದಾನ 20 ಲಕ್ಷ, ಎಂಪಿ, ಎಂಎಲ್‌ಎ, ಎಂಎಲ್ಸಿ ಗ್ರಾಂಟ್ ಟ್‌ನಿಂದ 30 ಲಕ್ಷವನ್ನು ನಿರೀಕ್ಷಿಸಲಾಗಿದೆ.‌

 ಪ್ರಮುಖ ವೆಚ್ಚಗಳು:

     ಬಜೆಟ್‌ನಲ್ಲಿ ಸಿಬ್ಬಂದಿ ವೇತನಕ್ಕೆ 21.10 ಕೋಟಿ, ಹೊರಗುತ್ತಿಗೆ ಮಾನವ ಸಂಪನ್ಮೂಲ ವೇತನ ಭತ್ಯೆಗೆ 1 ಕೋಟಿ. ಮೇಯರ್ ಕಪ್ ಕ್ರೀಡಾಕೂಟಕ್ಕೆ 20 ಲಕ್ಷ ನಾಡಹಬ್ಬ, ಸಾಂಸ್ಕೃತಿಕ ಕಾರ್ಯಕ್ರಮ ವಂತಿಕೆಗೆ 45 ಲಕ್ಷ, ವಿಪತ್ತು ನಿರ್ವಹಣಾ ತಂಡಕ್ಕೆ 10 ಲಕ್ಷ, ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ 150 ಲಕ್ಷ, ರಸ್ತೆ ಚರಂಡಿ ನಿರ್ಮಾಣ ವೃತ್ತಗಳ ಅಭಿವೃದ್ಧಿಗೆ 39.93 ಕೋಟಿ, ರಸ್ತೆ ಅಗಲೀಕರಣ ಭೂಸ್ವಾಧೀನ ವೆಚ್ಚ 12 ಕೋಟಿ ವೈಜ್ಞಾನಿಕ ಕಸ ವಿಲೇವಾರಿಗಾಗಿ 27.95 ಕೋಟಿ, ನೀರು ಸರಬರಾಜಿಗೆ 33.64 ಕೋಟಿ, ಸಾರ್ವಜನಿಕ ಬೀದಿದೀಪ ವ್ಯವಸ್ಥೆ 18.82ಕೋಟಿ, ಉದ್ಯಾನವನ ನಿರ್ಮಾಣ ಮತ್ತು ನಿರ್ವಹಣೆಗೆ 3.80 ಕೋಟಿ, ವೈಯಕ್ತಿಕ ಶೌಚಾಲಯ ನಿರ್ಮಾಣ 25 ಲಕ್ಷ, ಸ್ಮಶಾನಗಳ ಅಭಿವೃದ್ಧಿ ಮತ್ತು ನಿರ್ವಹಣೆ 130 ಲಕ್ಷ, ಸಾರ್ವಜನಿಕ ಆಸ್ತಿ ನಿರ್ಮಾಣ ನಿರ್ವಹಣೆ 10.10 ಕೋಟಿ, ಎಸ್‌ಸಿ ಎಸ್‌ಟಿ ಜನಾಂಗದ ಅಭಿವೃದ್ಧಿಗೆ 64.6.78 ಲಕ್ಷ ಹಿಂದುಳಿದ ವರ್ಗ ಅಲ್ಪಸಂಖ್ಯಾತರ ಅಭಿವೃದ್ಧಿಗೆ 104.23 ಲಕ್ಷ, ದಿವ್ಯಾಂಗ, ವಿಶೇಷಚೇತನರಿಗೆ ತ್ರಿಚಕ್ರ ವಾಹನ 71.88 ಲಕ್ಷ, ಗಣಕೀಕೃತ ಕಾಗದ ರಹಿತ ಕಚೇರಿಗೆ 115 ಲಕ್ಷ ಅಂಗನವಾಡಿ ಕಟ್ಟಡ ನಿರ್ವಹಣೆಗೆ 25 ಲಕ್ಷ ವೆಚ್ಚ ಹಾಗೂ ಪತ್ರಕರ್ತರ ಆರೋಗ್ಯ ವಿಮೆಗಾಗಿ 7 ಲಕ್ಷ ಮೀಸಲಿರಿಸಲಾಗಿದೆ. ನಾಗರಿಕರಿಗೆ ತೆರಿಗೆ ಹೊರೆಯಾಗಬಾರದೆಂದು ಈ ಬಾರಿ ಯಾವುದೇ ತೆರಿಗೆ ಹೆಚ್ಚಳ ಮಾಡುತ್ತಿಲ್ಲ ಎಂದು ಮೇಯರ್ ಪ್ರಭಾವತಿ ಸುಧೀಶ್ವರ್ ಇದೇ ವೇಳೆ ಘೋಷಿಸಿದರು. ಸದಸ್ಯರು ಕರತಾಡನ ಮಾಡಿ ಸ್ವಾಗತಿಸಿದರು. ಆಯುಕ್ತರಾದ ಎಚ್.ವಿ.ದರ್ಶನ್ ಪ್ರತಿಕ್ರಿಯಿಸಿ ಪ್ರತೀ 3 ವರ್ಷಕ್ಕೊಮ್ಮೆ ತೆರಿಗೆ ಹೆಚ್ಚಳ ಮಾಡಬೇಕೆಂಬುದು ನಿಯಮ. ಸರ್ಕಾರದ ಮಾರ್ಗಸೂಚಿ ನಿರ್ದೇಶನವೂ ಇದೆ. ಯಾವ ಸ್ಥಳೀಯ ಸಂಸ್ಥೆ ನಿರ್ದೇಶನವನ್ನು ಪಾಲಿಸುತ್ತದೋ ಅಂತಹ ಸಂಸ್ಥೆಗಳಿಗೆ ಸರ್ಕಾರದ ಅನುದಾನಗಳು ಲಭ್ಯವಾಗುತ್ತವೆ. ನಾನು ಸರ್ಕಾರದ ನಿಯಮ ಹೇಳಿದ್ದೇನೆ. ಅಂತಿಮವಾಗಿ ಹೆಚ್ಚಳ ಮಾಡುವುದು ಬಿಡುವುದು ಕೌನ್ಸಿಲ್ ತೀರ್ಮಾನ ಎಂದರು.

     ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ ತೆರಿಗೆ ಕಳ್ಳತನ ತಪ್ಪಿಸಿ ಪಾಲಿಕೆ ಸ್ವಂತ ಆದಾಯ ಹೆಚ್ಚಳಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಸರ್ಕಾರದ ಅನುದಾನಕ್ಕೆ ಭಿಕ್ಷೆಬೇಕಾಗುತ್ತದೆ. ಈಗೆಲ್ಲ ಸರ್ಕಾರದ ಮಟ್ಟದಲ್ಲಿ ಪಾಲಿಸಿಗಳು ಬದಲಾಗುತ್ತಿದ್ದು, ವಿಶೇಷವಾಗಿ ಕಾರ್ಪೋರೇಷನ್‌ಗಳ ಮಟ್ಟದಲ್ಲಿ ಒನ್‌ಟೈಮ್ ಗ್ರಾö್ಯಂಟ್ ಪರಿಕಲ್ಪನೆ ಬಂದಿದೆ. ಸ್ಮಾರ್ಟ್ಸಿಟಿಯಂತೆ ಒಟ್ಟಾಗಿ ದೊಡ್ಡ ಮೊತ್ತದ ಅನುದಾನ ಕೊಟ್ಟು, ನಿರ್ವಹಣೆ ಅನುದಾನ ನೀವೆ ಹೊಂದಿಸಿಕೊಳ್ಳಬೇಕೆಂದು ಸ್ಥಳೀಯ ಸಂಸ್ಥೆಗಳಿಗೆ ಬಿಡಲಾಗುತ್ತದೆ. ಸ್ವಾವಲಂಬನೆ ಸಾಧಿಸದಿದ್ದರೆ ಸ್ಥಳೀಯ ಸಂಸ್ಥೆಗಳೇ ದಿವಾಳಿಯಾಗುವ ಅಪಾಯವಿದೆ ಎಂದು ಎಚ್ಚರಿಸಿದರು. .

     ಸದಸ್ಯ ನಯಾಜ್ ಅಹಮದ್ ಪ್ರತಿಕ್ರಿಯಿಸಿಸರ್ಕಾರದಿಂದ ಕೇಳುವ ಅನುದಾನ ಭಿಕ್ಷೆ ಬೇಡುವುದಲ್ಲ. ಅದು ನಮ್ಮ ಹಕ್ಕು, ನಾವು ಜಿಎಸ್‌ಟಿ ಹೆಸರಲ್ಲಿ ಕೇಂದ್ರ ರಾಜ್ಯ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತೇವೆ. ನಾವು ಕೊಡುವ ಪಾಲಲ್ಲಿ 20% ಕೊಟ್ಟರೂ ನಗರ ಸಮಗ್ರ ಅಭಿವೃದ್ಧಿಯಾಗುತ್ತದೆ ಎಂದರು. ಸರ್ಕಾರದ ನಗರ ಹೊರವಲಯದ ವಾರ್ಡ್ಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು ಸೇರಿದಂತೆ ಹಲವು ವಿಷಯವಾಗಿ ಪಾಲಿಕೆ ವಿಪಕ್ಷ ನಾಯಕ ವಿಷ್ಣುವರ್ಧನ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಧರಣೇಂದ್ರಕುಮಾರ್, ಸಿ.ಎನ್.ರಮೇಶ್, ಲಕ್ಷ್ಮಿನರಸಿಂಹರಾಜು, ಮಲ್ಲಿಕಾರ್ಜುನ್, ಇನಾಯತ್‌ವುಲ್ಲಾ, ಎಚ್‌ಡಿಕೆ ಮಂಜುನಾಥ್, ಮಂಜುನಾಥ್ ಮತ್ತಿತರರು ಮಾತನಾಡಿದರು. ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ, ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ಮನೋಹರ್‌ಗೌಡ, ಪಾಲಿಕೆ ಸದಸ್ಯರು, ನಾಮಿನಿ ಸದಸ್ಯರು ಅಧಿಕಾರಿ ವರ್ಗದವರು ಹಾಜರಿದ್ದರು ಇದೇ ವೇಳೆ ಆಯುಕ್ತ ದರ್ಶನ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪಾಲಿಕೆ ಮೇಯರ್, ಉಪಮೇಯರ್, ಸದಸ್ಯರು ಶುಭಕೋರಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap