ತುಮಕೂರು :
ಕಳೆದ ಜನವರಿ 16 ರಿಂದ ಪ್ರಾರಂಭವಾದ ಕೋವಿಶೀಲ್ಡ್ ಲಸಿಕೆ ಅಭಿಯಾನದಡಿ ಸದ್ಯ ಜಿಲ್ಲೆಯಲ್ಲಿ 3ನೇ ಹಂತದಲ್ಲಿ ಹಿರಿಯ ನಾಗರಿಕರು, 45 ರಿಂದ 59 ವರ್ಷದೊಳಗಿನವರಿಗೆ ವ್ಯಾಕ್ಸಿನ್ ಮಾಡಲಾಗುತ್ತಿದ್ದು, ವ್ಯಾಕ್ಸಿನ್ ಪಡೆಯಲು ಕೆಲವು ದಾಖಲಾತಿಗಳನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ.
ಲಸಿಕೆ ಪಡೆಯುವ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ವಯಸ್ಸಿನ ಪ್ರಮಾಣ ಪತ್ರದ ಪ್ರತಿ ಲಗತ್ತಿಸಿದರೆ ಸಾಕು. ಆದರೆ 45 ರಿಂದ 60 ವರ್ಷದೊಳಗಿನವರು ಬಿಪಿ, ಶುಗರ್, ಅಸ್ತಮಾ ಇತ್ಯಾದಿ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರೆ ಆ ಕುರಿತು ಸಂಬಂಧಿಸಿದ ವೈದ್ಯಕೀಯ ದೃಢೀಕರಣ ಪತ್ರವನ್ನು ಲಗತ್ತಿಸಿದರೆ ಮಾತ್ರ ವ್ಯಾಕ್ಸಿನ್ ಹಾಕಲಾಗುತ್ತದೆ ಎಂಬ ನಿಯಮ ವಿಧಿಸಲಾಗಿದೆ. ಆದರೆ ಈ ನಿಯಮ ಎಷ್ಟೋ ಮಂದಿ ಮಧ್ಯ ವಯಸ್ಸಿನವರಿಗೆ ತಿಳಿಯದೇ ನೋಂದಾವಣಿಯಾಗದೆ ನೇರವಾಗಿ ವ್ಯಾಕ್ಸಿನ್ ಪಡೆಯಲು ಆಸ್ಪತ್ರೆಗೆ ಬಂದು, ಲಸಿಕೆ ಹಾಕಿಸಿಕೊಳ್ಳಲಾಗದೆ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳುತ್ತಿರುವುದು ಕಂಡುಬಂದಿದೆ.
ವ್ಯಾಕ್ಸಿನ್ ಪಡೆಯಲು ಏನು ಮಾಡಬೇಕು?:
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಆಸ್ಪತ್ರೆಗೆ ತಮ್ಮ ವಯಸ್ಸನ್ನು ದೃಢೀಕರಿಸುವ ಆಧಾರ್, ಮತದಾರರ ಗುರುತಿನ ಚೀಟಿ, ಪ್ಯಾನ್ ಹೀಗೆ ಅಗತ್ಯವಾದ ಯಾವುದಾದರೊಂದು ದಾಖಲಾತಿಯೊಂದಿಗೆ ಸರಕಾರಿ ಆಸ್ಪತ್ರೆಗೆ ಹಾಜರಾಗಿ ಸ್ಥಳದಲ್ಲೇ ನೋಂದಾಯಿಸಿ ಸರದಿಯಲ್ಲಿ ವ್ಯಾಕ್ಸಿನ್ ಪಡೆಯಬಹುದು. ಇಲ್ಲವೇ ಮುಂಚಿತವಾಗಿ www.covin.gov.in ವೆಬ್‍ಸೈಟ್‍ನಲ್ಲಿ ಲಾಗಿನ್ ಆಗಿ ಅಥವಾ ಆರೋಗ್ಯ ಸೇತು ಆ್ಯಪ್ ಮೂಲಕ ಸ್ವಯಂ ನೋಂದಾವಣಿ ಮಾಡಿ ತಮಗನುಕೂಲವಾದ ನಿಗದಿತ ದಿನ, ಆಸ್ಪತ್ರೆಗಳನ್ನು ಆಯ್ಕೆ ಮಾಡಿ ವ್ಯಾಕ್ಸಿನ್ ಪಡೆಯಬಹುದು. ಇವರಿಗೆ ವೈದ್ಯಕೀಯ ಶುಶ್ರೂಷೆಯ ದೃಢೀಕರಣ ಪತ್ರದ ಅವಶ್ಯಕತೆಯಿಲ್ಲ. ಆದರೆ 45 ವರ್ಷ ಮೇಲ್ಪಟ್ಟ 60 ವರ್ಷದೊಳಗಿನವರು ಮಾತ್ರ ನೋಂದಾವಣಿ ಮಾಡಿಕೊಳ್ಳುವ ಸಂದರ್ಭದಲ್ಲಿ ವಯಸ್ಸನ್ನು ದೃಢೀಕರಿಸುವ ಜೊತೆಗೆ ವೈದ್ಯಕೀಯ ದೃಢೀಕರಣ ಪತ್ರ ಅಪ್ಲೋಡ್ ಮಾಡಬೇಕಿರುವುದು ಕಡ್ಡಾಯವಾಗಿದೆ.
ಸೋಮವಾರದಿಂದ ಪಿಎಚ್‍ಸಿಗಳಲ್ಲಿ ವ್ಯಾಕ್ಸಿನ್‍ಗೆ ಚಿಂತನೆ:
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ, 45 ವರ್ಷ ಮೇಲ್ಪಟ್ಟ ಮಧ್ಯ ವಯಸ್ಸಿನವರಿಗೆ ಸದ್ಯ ತುಮಕೂರು ಜಿಲ್ಲಾಸ್ಪತ್ರೆ, ಆಯಾ ತಾಲೂಕು ಆಸ್ಪತ್ರೆಗಳಲ್ಲಿ ಮಾತ್ರ ಲಸಿಕೆಯನ್ನು ಉಚಿತವಾಗಿ ಹಾಕಲಾಗುತ್ತಿದ್ದು ಮಾ.8 ಸೋಮವಾರದಿಂದ ಎಲ್ಲಾ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು ಹಾಗೂ ಖಾಸಗಿ ವೈದ್ಯಕೀಯ ಕಾಲೇಜಾದ ಶ್ರೀದೇವಿ, ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಕಾಲೇಜುಗಳಲ್ಲೂ ಹಾಕಲು ಜಿಲ್ಲಾ ಆರೋಗ್ಯ ಇಲಾಖೆ ಚಿಂತನೆ ನಡೆಸಿದ್ದು, ಪಿಎಚ್‍ಸಿಗಳಲ್ಲಿ ಪ್ರಾರಂಭಿಸಿದ ಮೇಲೆ ಈ ಪ್ರಮಾಣದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಖಾಸಗಿಯವರು ಗರಿಷ್ಠ 250ರೂಪಾಯಿಗಿಂತಳೂ ಹೆಚ್ಚು ಹಣ ಪಡೆಯುವಂತಿಲ್ಲ. ಎಂದು ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.
82000 ಡೋಸೆಜ್ ಲಸಿಕೆ ದಾಸ್ತಾನು:
ಸದ್ಯ ಜಿಲ್ಲೆಯ 26 ಲಕ್ಷ ಜನಸಂಖ್ಯೆಯಲ್ಲಿ ಶೇ.5 ರಿಂದ 6ರಷ್ಟು ಮಂದಿ ಹಿರಿಯ ನಾಗರಿಕರಿರಬಹುದೆಂದು ಆರೋಗ್ಯ ಇಲಾಖೆ ಅಂದಾಜಿಸಿ 1, 40, 000 ಮಂದಿಗೆ 3ನೇ ಹಂತದಲ್ಲಿ ಲಸಿಕೆ ಪ್ರಯೋಗಕ್ಕೆ ಗುರಿ ಹಾಕಿಕೊಂಡಿದೆ. ಇದಕ್ಕಾಗಿ ಜಿಲ್ಲೆಯಲ್ಲಿ 82,000 ಡೋಸೆಜ್ ಲಸಿಕೆ ದಾಸ್ತಾನು ಮಾಡಲಾಗಿದ್ದು, ಲಸಿಕೆ ಪ್ರಾರಂಭಿಸಿದ ಕಳೆದ ಮೂರು ದಿನಗಳಲ್ಲಿ 45 ರಿಂದ 60 ವರ್ಷದೊಳಗಿನ 105 ಮಂದಿ ವ್ಯಾಕ್ಸಿನ್ ಪಡೆದಿದ್ದು, 60 ವರ್ಷ ಮೇಲ್ಪಟ್ಟ 620 ಮಂದಿ ಹಿರಿಯ ನಾಗರಿಕರಿಗೆ ಲಸಿಕೆ ಹಾಕಲಾಗಿದೆ. ಪಿಎಚ್‍ಸಿಗಳಲ್ಲಿ ಆರಂಭವಾದರೆ ಮಾತ್ರ ನಿಗದಿತ ಗುರಿ ತಲುಪಲು ಸಾಧ್ಯ.
ಒಂದು ಡೋಜ್ ಲಸಿಕೆ ಪಡೆದ 28 ದಿನಗಳ ಬಳಿಕ ಮತ್ತೊಂದು ಡೋಜ್ ಲಸಿಕೆ ಪಡೆಯಬೇಕು. ಲಸಿಕೆ ಪಡೆದ ಬಳಿಕ ಅರ್ಧ ತಾಸು ಆಸ್ಪತ್ರೆಯಲ್ಲೇ ಇರಬೇಕು. ಜೊತೆಎರಡು ಡೋಜ್ ಲಸಿಕೆ ಪಡೆದ ಮಾತ್ರಕ್ಕೆ ಕೋವಿಡ್‍ನಿಂದ ಪಾರಾದೆವು ಎಂದು ಭಾವಿಸುವಂತಿಲ್ಲ. ಮಾಸ್ಕ್, ಸ್ಯಾನಿಟೈಜ್, ಸಾಮಾಜಿಕ ಅಂತರ ಕಾಪಾಡಲೆಬೇಕು.
-ಡಾ.ನಾಗೇಂದ್ರಪ್ಪ, ಡಿಎಚ್‍ಒ ತುಮಕೂರು.
ಜಿಲ್ಲೆಯ ಕೋವಿಡ್ ಲಸಿಕೆ ಅಂಕಿ-ಅಂಶ
ಲಸಿಕೆ ಫಲಾನುಭವಿಗಳು ಗುರಿ ಸಾಧನೆ
ಆರೋಗ್ಯ ಕಾರ್ಯಕರ್ತರು 19,580 16,022
ಕೊರೊನಾ ವಾರಿಯರ್ಸ್ 11.355 10,119
ಹಿರಿಯ ನಾಗರಿಕರು 1,40,000 620
1 ಬಾಟೆಲ್‍ನಲ್ಲಿ ಹತ್ತು ಡೋಸ್, 4 ಗಂಟೆ ಒಳಗೆ ಪ್ರಯೋಗಿಸದಿದ್ದರೆ ನಿರರ್ಥಕ: 1 ಕೋವಿಶೀಲ್ಡ್ ವ್ಯಾಕ್ಸಿನ್ ವೇಲ್(ಬಾಟೆಲ್)ನಲ್ಲಿ ಹತ್ತು ಮಂದಿಗೆ ಪ್ರಯೋಗಿಸುವಷ್ಟು ಡೋಸೆಜ್ ಇದ್ದು, ಒಮ್ಮೆ ಬಾಟೆಲ್ ತೆರೆದ ಮೇಲೆ ಹತ್ತು ಮಂದಿಗೆ 4 ಗಂಟೆಯೊಳಗೆ ಲಸಿಕೆ ಹಾಕಬೇಕು.
ಒಬ್ಬಿಬ್ಬರಿಗೆ ಹಾಕಿ ಬಿಟ್ಟರೆ 4 ಗಂಟೆ ನಂತರ ಅದು ನಿರರ್ಥಕವಾಗುತ್ತದೆ. ಲಸಿಕೆ ತಯಾರಿ, ದಾಸ್ತಾನಿಗೆ ಸರಕಾರಗಳು ಸಾಕಷ್ಟು ಕಸರತ್ತು ಪಟ್ಟಿರುವಾಗ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಹೆಚ್ಚಿನ ಜವಾಬ್ದಾರಿಯಿದ್ದು, ನಿಗದಿತ ಹತ್ತು ಜನಕ್ಕೆ ವ್ಯಾಕ್ಸಿನ್ ಹಾಕುವುದರೊಂದಿಗೆ ಪೋಲಾಗದಂತೆ ಎಚ್ಚರವಹಿಸಬೇಕಿದೆ. ಹಾಗೆಯೇ ವ್ಯಾಕ್ಸಿನ್ ಹೆಸರಲ್ಲಿ ಮುಂದೆ ಸರಕಾರಿ ಆಸ್ಪತ್ರೆ, ನಿಯೋಜಿತ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲೂ ಹಣ ಪೀಕುವ ದಂಧೆಯೂ ಶುರುವಾಗುವ ಸಾಧ್ಯತೆಯಿದ್ದು, ಆರಂಭದಲ್ಲೇ ಕಠಿಣ ಎಚ್ಚರಿಕೆ ಮೂಲಕ ಆರೋಗ್ಯ ಇಲಾಖೆ ಉನ್ನತಾಧಿಕಾರಿಗಳು ಕಡಿವಾಣ ಹಾಕಬೇಕಿದೆ. ಕೋವಿಡ್ ಲಸಿಕೆ ಕುರಿತು ಏನೇ ಗೊಂದಲವಿದ್ದರೂ ಸ್ಥಳೀಯ ವೈದ್ಯಾಧಿಕಾರಿ ಅಥವಾ 104 ಸಹಾಯವಾಣಿಗೆ ಕರೆ ಮಾಡಿ ಪರಿಹರಿಸಿಕೊಳ್ಳಬಹುದಾಗಿದೆ.
ವೈದ್ಯಕೀಯ ದೃಢೀಕರಣ ಪತ್ರ ಎಲ್ಲಿಂದ ತರಬೇಕು?
ಈ ವೈದ್ಯಕೀಯ ದೃಢೀಕರಣ ಪತ್ರ ಎಲ್ಲಿಂದ ತರಬೇಕು. ಸರಕಾರಿ ವೈದ್ಯರಿಂದಲೇ ತರಬೇಕೇ? ಖಾಸಗಿ ವೈದ್ಯರು ನೀಡಿದರೂ ಸಮ್ಮತವೇ ಎಂಬ ಗೊಂದಲವೂ ನಾಗರಿಕರಲ್ಲಿದೆ. ಈ ಗೊಂದಲದ ಬಗ್ಗೆ ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಕೇಶವರಾಜ್ ಅವರು ಪ್ರತಿಕ್ರಿಯಿಸಿದ್ದು, ನಾಗರಿಕರು ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ. 45 ರಿಂದ 60 ವರ್ಷದೊಳಗಿನ ವರಿಗೆ ಮಾತ್ರ ವೈದ್ಯಕೀಯ ಪ್ರಮಾಣ ಪತ್ರ ಕಡ್ಡಾಯ. ಸರಕಾರಿ ವೈದ್ಯರಾಗಲೀ?, ಖಾಸಗಿ ವೈದ್ಯರಾಗಲೀ? ನೋಂದಾಯಿತ ವೈದ್ಯರಿಂದ ವೈದ್ಯಕೀಯ ಶುಶ್ರೂಷೆಗೆ ಸಂಬಂಧಿಸಿದಂತೆ ದೃಢೀಕರಣ ಪತ್ರ ಪಡೆದು ಸಲ್ಲಿಸಿದರೆ ಸಾಕು. ಬೇರೆ ಊರಿನಲ್ಲಿ ವೈದ್ಯರ ಬಳಿ ತೋರಿಸಿಕೊಳ್ಳುತ್ತಿದ್ದು, ಅವರ ಹಳೆಯ ತಪಾಸಣೆ ಚೀಟಿಯಿದ್ದರೂ ಅದಕ್ಕೆ ಸ್ಥಳೀಯ ನೋಂದಾಯಿತ ವೈದ್ಯರಿಂದ ದೃಢೀಕರಿಸಿದರೂ ಮಾನ್ಯ ಮಾಡಲಾಗುತ್ತದೆ. ಯಾವುದೇ ಗೊಂದಲ ಪಡದೆ ಇವಿಷ್ಟು ದಾಖಲಾತಿ ಸಲ್ಲಿಸಿ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ