ತುಮಕೂರು :
45 ವರ್ಷ ಮೇಲ್ಪಟ್ಟ ಸರಕಾರಿ, ಅರೆ ಸರಕಾರಿ, ಖಾಸಗಿ ಸಂಸ್ಥೆಗಳ ನೌಕರರು ನೂರಕ್ಕಿಂತ ಹೆಚ್ಚು ಮಂದಿ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಅಂತಹ ನೌಕರರಿಗೆ ನಿಗದಿತ ಸ್ಥಳ, ಸಮಯದಲ್ಲಿ ಕೋವಿಡ್ ಲಸಿಕೆ ಹಾಕಲು ಕೇಂದ್ರ ಸರಕಾರದಿಂದ ಹೊಸ ಮಾರ್ಗಸೂಚಿ ಬಂದಿದೆ ಎಂದು ಡಿಎಚ್‍ಓ ಡಾ.ನಾಗೇಂದ್ರಪ್ಪ, ಆರ್‍ಸಿಎಚ್ ಅಧಿಕಾರಿ ಡಾ.ಕೇಶವಪ್ರಸಾದ್ ತಿಳಿಸಿದರು.
ಪ್ರಜಾಪ್ರಗತಿಗೆ ಮಾಹಿತಿ ನೀಡಿದ ಅವರು ಕೋವಿಡ್ ವ್ಯಾಕ್ಸಿನ್ ಪ್ರಮಾಣವನ್ನು ಹೆಚ್ಚಿಸಲು ಸರಕಾರ ನಿರ್ಧರಿಸಿದ್ದು, ಜಿಲ್ಲಾ,ತಾಲೂಕು ಆಸ್ಪತ್ರೆ, ಪಿಎಚ್‍ಸಿಗಳ ಜತೆಗೆ ಶಾಲಾ, ಕಾಲೇಜು ಮತ್ತಿತರ ಸಾರ್ವಜನಿಕ ಸ್ಥಳದಲ್ಲೂ ಕೋವಿಡ್ ವ್ಯಾಕ್ಸಿನ್ ಅಭಿಯಾನ ಹಮ್ಮಿಕೊಳ್ಳಲು ಅನುಮತಿಸಲಾಗಿದೆ. ಹೆಚ್ಚುತ್ತಿರುವ ಕೊರೊನಾವನ್ನು ನಿಯಂತ್ರಣಕ್ಕೆ ತರಲು ಪೂರಕಕ್ರಮವಾಗಿ ವ್ಯಾಕ್ಸಿನ್ ಅಭಿಯಾನ ಮಾಡಲಾಗುತ್ತಿದ್ದು, ನೂರಕ್ಕಿಂತ ಅಧಿಕ ಮಂದಿ ಕಾರ್ಯನಿರ್ವಹಿಸುವ ಸರಕಾರಿ, ಖಾಸಗಿ ಸಂಸ್ಥೆಗಳವರು ತಮ್ಮಲ್ಲಿ ಒಬ್ಬರನ್ನು ಕೋವಿಡ್ ನೋಡಲ್ ಅಧಿಕಾರಿಯೆಂದು ನಿಯೋಜಿಸಿಕೊಂಡು ಹತ್ತಿರದ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿ ದಿನಾಂಕ ನಿಗದಿಪಡಿಸಿಕೊಂಡು ಕೋವಿಡ್ ಲಸಿಕೆ ಪಡೆಯಬಹುದಾಗಿದೆ ಎಂದರು.
28ನೇ ದಿನಕ್ಕೆ ಪಡೆಯಬೇಕೆಂದಿನಿಲ್ಲ:
45 ವರ್ಷ ಮೇಲ್ಪಟ್ಟವರೆಲ್ಲರು ಎರಡು ಡೋಜ್ ಕೋವಿಡ್ ಲಸಿಕೆ ಪಡೆಯಬೇಕಿದ್ದು, ಮೊದಲ ಹಂತದ ಕೋವಿಶೀಲ್ಡ್ ಲಸಿಕೆ ಪಡೆದವರು 28ನೇ ದಿನಕ್ಕೆ ಹೋಗಿ 2ನೇ ಡೋಜ್ ಲಸಿಕೆ ಪಡೆಯಬೇಕೆಂದೇನಿಲ್ಲ. 6ರಿಂದ 8 ವಾರದೊಳಗೆ ಪಡೆಯಬಹುದು. ಅದೇರೀತಿ ಕೋವ್ಯಾಕ್ಸಿನ್ ಲಸಿಕೆ ಪಡೆದವರು 4 ರಿಂದ 6 ವಾರದೊಳಗೆ ಮತ್ತೊಂದು ಡೋಜ್ ಲಸಿಕೆಗೊಳಗಾಗಬೇಕು ಎಂದು ಮಾಹಿತಿ ನೀಡಿದರು.
ಮೊದಲ ವ್ಯಾಕ್ಸಿನ್ ಪಡೆದವರಿಗೆ ಎರಡನೇ ಡೋಜ್ ಪಡೆಯಬೇಕಾದ ಮಾಹಿತಿ ಮೊಬೈಲ್ ಸಂದೇಶ ಬರುತ್ತಿಲ್ಲ ಎಂಬ ದೂರುಗಳಿವೆ. ಸರ್ವರ್ ಸಮಸ್ಯೆಯಿಂದ ಹೀಗಾಗಿದೆ. ಹಾಗಾಗಿ ಮೊದಲ ಹಂತದ ಲಸಿಕೆ ಪಡೆಯುವಾಗಲೇ ಮುಂದಿನ ಲಸಿಕೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು
ಜಿಲ್ಲೆಯ ಲಸಿಕೆ ಅಂಕಿ-ಅಂಶ :
ಜಿಲ್ಲೆಯಲ್ಲಿ ಈವರೆಗೆ 2,07,013 ಮಂದಿಗೆ ಕೋವಿಡ್ ಲಸಿಕೆ ಹಾಕಲಾಗಿದ್ದು, 1,83,744 ಮಂದಿಗೆ ಮೊದಲ ಡೋಜ್, 23,270 ಮಂದಿಗೆ 2ನೇ ಡೋಜ್ ಹಾಕಲಾಗಿದೆ. ಇದರಲ್ಲಿ 20,006 ಮಂದಿ ಆರೋಗ್ಯ ಕಾರ್ಯಕರ್ತರು, 11,914 ಮಂದಿ ಫ್ರಂಟ್ ಲೈನ್ ವರ್ಕರ್ಸ್ ಎಂದು ಪರಿಗಣಿಸಲ್ಪಟ್ಟ ಪೊಲೀಸರು, ಪಂಚಾಯತ್, ಸರಕಾರಿ ನೌಕರರಿಗೆ ಮೊದಲ ಡೋಜ್ ಲಸಿಕೆ ಹಾಕಲಾಗಿದೆ. ಅಂತೆಯೇ 45 ವರ್ಷದಿಂದ 60 ವರ್ಷದೊಳಗಿನ 44,462 ಮಂದಿ ಹಾಗೂ 60 ವರ್ಷ ಮೇಲ್ಪಟ್ 1,07,301 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ