ತುಮಕೂರು : 7 ಕಡೆ ಕೋವಿಡ್-19 ಲಸಿಕಾ ವಿತರಣಾ ತಾಲೀಮು!!

ತುಮಕೂರು : 

     ಯಾವುದೇ ಲೋಪ, ಆತಂಕವಿಲ್ಲದಂತೆ ಲಸಿಕಾ ಅಭಿಯಾನವನ್ನು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಸರಕಾರದ ಮಾರ್ಗಸೂಚಿಯನ್ವಯ ಶುಕ್ರವಾರ ಜಿಲ್ಲೆಯ ಏಳು ಕಡೆ ಅಣುಕು ಲಸಿಕಾ ವಿತರಣಾ ತಾಲೀಮು ನಡೆಸಲಾಯಿತು.

      ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಅಣುಕು ಲಸಿಕಾ ವಿತರಣಾ ತಾಲೀಮು ಪೂರ್ವ ಸಿದ್ಧತೆಯನ್ನು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‍ಕುಮಾರ್ ಪರಿಶೀಲಿಸಿ, ಅಣುಕು ಲಸಿಕಾ ವಿತರಣೆಯಲ್ಲಿ ಬದಲಾವಣೆಗಳ ಅಂಶಗಳೇನಾದರೂ ಕಂಡುಬಂದಲ್ಲಿ ಅದನ್ನು ಸರಿಪಡಿಸುವ ಪ್ರಕ್ರಿಯೆ ಮಾಡಲಾಗುವುದು ಎಂದು ಹೇಳಿದರು.

      ಈಗಾಗಲೇ ಜಿಲ್ಲೆಯಲ್ಲಿ ಪೋಲಿಯೋ ಸೇರಿದಂತೆ ಅನೇಕ ಲಸಿಕಾ ಅಭಿಯಾನಗಳನ್ನು ವರ್ಷ ಪೂರ್ತಿ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ. ಆದರೂ, ಕೋವಿಡ್-19ಕ್ಕೆ ಮೊದಲ ಬಾರಿ ಲಸಿಕಾ ಅಭಿಯಾನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಅಣುಕು ಲಸಿಕಾ ತಾಲೀಮು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಗೆ ಲಸಿಕೆ ತರಲು ಸಂಪೂರ್ಣ ಸಿದ್ಧತೆಯಾಗಿದೆಯೆ, ಲಸಿಕೆ ಪಡೆದ ಫಲಾನುಭವಿ ವಿಶ್ರಾಂತಿ ಪಡೆದುಕೊಳ್ಳಲು ಲಸಿಕಾ ಕೇಂದ್ರಗಳಲ್ಲಿ ವಿಶ್ರಾಂತಿ ಕೊಠಡಿ ವ್ಯವಸ್ಥೆ ಇದೆಯೆ ಎಂಬುದನ್ನು ಪರಿಶೀಲಿಸಲಾಗಿದೆ ಎಂದು ತಿಳಿಸಿದರು.

      ಕೋವಿನ್ ತಂತ್ರಾಶದ ಅಭಿವೃದ್ಧಿ, ಕಾರ್ಯಕ್ಷಮತೆ, ಲಸಿಕೆ ನೀಡುವ ಕಾರ್ಯಕ್ರಮಗಳ ಪೂರ್ವ ಸಿದ್ಧತೆ ಪರೀಕ್ಷಿಸಲು ಜಿಲ್ಲೆಯಲ್ಲಿ ತುಮಕೂರು ಜಿಲ್ಲಾಸ್ಪತ್ರೆ, ಕ್ಯಾತ್ಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ, ಕೋತಿತೋಪು ನಗರ ಆರೋಗ್ಯ ಕೇಂದ್ರ, ಗುಬ್ಬಿ ತಾಲೂಕು ಎಂ.ಎನ್. ಕೋಟೆಯ ಸಮುದಾಯ ಆರೋಗ್ಯ ಕೇಂದ್ರ, ಶಿರಾಗೇಟ್‍ನ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಸೇರಿದಂತೆ ಏಳು ಕಡೆ ಅಣುಕು ಲಸಿಕಾ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಲಸಿಕೆ ನೀಡಲು ಕೋವಿನ್ ತಂತ್ರಾಂಶದಲ್ಲಿ 19485 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದು, ಲಸಿಕೆ ಸಂಗ್ರಹಿಸಲು ಜಿಲ್ಲೆಯಲ್ಲಿ 132 ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ. ಲಸಿಕಾ ವಿತರಣೆಗೆ ಸಂಬಂಧಿಸಿದಂತೆ ನಿಯೋಜಿತ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದ್ದು, ಈ ಅಭಿಯಾನವನ್ನು ಪರಿಣಾಮಕಾರಿಯಾಗಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

      ಮೊದಲನೇ ಹಂತದ ಮುಗಿದ ನಂತರ ಸರ್ಕಾರದ ಆದೇಶ ಬಂದ ಬಳಿಕ 2ನೇ ಹಂತವಾಗಿ ಸಕ್ಕರೆ ಕಾಯಿಲೆ, ಬಿ.ಪಿ. ಇತರೆ ರೋಗಗಳಿಗೆ ತುತ್ತಾಗಿರುವವರಿಗೆ ಕೋವಿಡ್ 19 ಲಸಿಕೆ ನೀಡಲಾಗುವುದು. ಇಂದು ಯಾವುದೇ ರೀತಿಯ ಲಸಿಕೆ ಕೊಡುತ್ತಿಲ್ಲ. ಪೂರ್ವಭಾವಿ ಸಿದ್ದತೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಅಷ್ಟೆ ಎಂದು ಹೇಳಿದರು.

      ಈಗಾಗಲೇ ಲಸಿಕೆಯನ್ನು ಯಾವ ರೀತಿ ಕೊಡಬೇಕು ಎಂಬುದರ ಬಗ್ಗೆಯೂ ಆರೋಗ್ಯ ಇಲಾಖೆಯ ಸಿಬ್ಬಂದಿ ತರಬೇತಿ ನೀಡಲಾಗಿದೆ ಎಂದು ಅವರು, ಹೆಚ್ಚಿನ ಸಂಖ್ಯೆಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ಇರುವ ಕಡೆಗೆ ನಾವೇ ಹೋಗಿ ವ್ಯಾಕ್ಸಿನ್ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

     ಈ ಸಂದರ್ಭದಲ್ಲಿ ಡಿಹೆಚ್‍ಓ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ಡಾ.ರಜನಿ, ಡಾ.ಕೇಶವರಾಜ್, ಡಾ.ಮೋಹನ್‍ದಾಸ್ ಮತ್ತಿತರರು ಹಾಜರಿದ್ದರು.

ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ :

       ಆರೋಗ್ಯ ಕಾರ್ಯಕರ್ತರಂತಹ ತುರ್ತು ಇರುವವರಿಗೆ ಮೊದಲ ಹಂತದಲ್ಲಿ ಲಸಿಕೆ ಕೊಡಲಾಗುತ್ತದೆ. ನಂತರದಲ್ಲಿ ಲಸಿಕೆ ಲಭ್ಯತೆ ಆಧರಿಸಿ ಜನಸಾಮಾನ್ಯರಿಗೂ ಲಸಿಕೆ ವಿತರಿಸಲಾಗುತ್ತದೆ. ಕೋವಿಡ್ ಲಸಿಕಾ ವಿತರಣೆಗಾಗಿ ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಸಂಸ್ಥೆ ಸಿಬ್ಬಂದಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳು ಸೇರಿದಂತೆ 19485 ಫಲಾನುಭವಿಗಳನ್ನು ನೋಂದಣಿ ಮಾಡಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 132 ಆರೋಗ್ಯ ಕೇಂದ್ರಗಳಲ್ಲಿ ಲಸಿಕಾ ಶೇಖರಣ ಪರಿಕರಣಗಳನ್ನು ಸಿದ್ಧಪಡಿಲಾಗಿದೆ. ಲಸಿಕಾ ವಿತರಣೆಗೆ ಸಂಬಂಧಿಸಿದಂತೆ ನಿಯೋಜಿತ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.

ಎರಡು ಡೊಸ್‍ಗಳಲ್ಲಿ ಲಸಿಕೆ ವಿತರಣೆ

       ಕೇಂದ್ರ ಸರ್ಕಾರವು ಈಗಾಗಲೇ ಎರಡು ಕೊರೊನಾ ಲಸಿಕೆಗಳಿಗೆ ಅನುಮೋದನೆ ನೀಡಿದೆ. ಜೊತೆಗೆ, ಲಸಿಕೆ ನೀಡುವ ಅಣುಕು ಕಾರ್ಯಾಚರಣೆಯನ್ನೂ ನಡೆಸಿದೆ. ಮುಂದೆ ಜನಸಾಮಾನ್ಯರಿಗೆ ಲಸಿಕೆ ವಿತರಿಸುವ ಉದ್ದೇಶವಿದೆ. ಲಸಿಕೆ ಪಡೆಯುವವರು ನೊಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ. ಆನಂತರವೇ ಲಸಿಕೆ ಸಮಯ, ದಿನಾಂಕ ನಿಗದಿಯಾಗಲಿದೆ. ಲಸಿಕೆ ಪಡೆಯುವ ದಿನಾಂಕ, ಸ್ಥಳ ಮತ್ತು ಸಮಯವನ್ನು ಆನ್‍ಲೈನ್‍ನಲ್ಲಿ ನೊಂದಣಿ ಮಾಡಿದ ನಂತರ ರಿಜಿಸ್ಟರ್ ಆದ ಮೊಬೈಲ್‍ಗೆ ಎಸ್‍ಎಂಎಸ್ ಮೂಲಕ ಮಾಹಿತಿ ಬರಲಿದೆ.
ಲಸಿಕೆ ಪಡೆಯುವವರ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸುವ ಕಾರಣ ಅವರ ಫೋಟೋ ಐಡಿ ಕಡ್ಡಾಯವಾಗಿ ನೀಡಬೇಕು. ಎರಡು ಡೋಸ್‍ಗಳಲ್ಲಿ ಲಸಿಕೆಯನ್ನು 28 ದಿನಗಳ ಅಂತರದಲ್ಲಿ ನೀಡಲಾಗುತ್ತದೆ. ಲಸಿಕೆ ಪಡೆದು ಅರ್ಧ ಗಂಟೆ ಕೇಂದ್ರದಲ್ಲೇ ವಿಶ್ರಾಂತಿ ಪಡೆಯಬೇಕು. ಏನಾದರೂ ತೊಂದರೆ ಎನಿಸಿದರೆ ಆರೋಗ್ಯ ಕಾರ್ಯಕರ್ತರಿಗೆ ತಿಳಿಸಬೇಕು. ವ್ಯಾಕ್ಸಿನ್ ಪಡೆದ ನಂತರ ಎಷ್ಟು ಡೋಸ್ ಲಸಿಕೆ ನೀಡಲಾಯಿತು ಎಂಬ ಮಾಹಿತಿ ಮೊಬೈಲ್ ನಂಬರ್‍ಗೆ ಬರಲಿದೆ. ಎಲ್ಲಾ ಕೋರ್ಸ್‍ಗಳು ಮುಗಿದ ನಂತರ ಕ್ಯೂ ಆರ್ ಕೋಡ್ ತಂತ್ರಜ್ಞಾನದ ಇ-ಸರ್ಟಿಫಿಕೇಟ್ ಕಳಿಸಲಾಗುತ್ತದೆ. ಎರಡು ಡೋಸ್ ಲಸಿಕೆ ಪಡೆದ ಎರಡು ವಾರಗಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

 

Recent Articles

spot_img

Related Stories

Share via
Copy link
Powered by Social Snap