ತುಮಕೂರು :
ಭಾರತೀಯ ಪರಂಪರೆಯಲ್ಲಿ ಗೋವು ಪೂಜಾರ್ಹವೂ ಹೌದು. ರೈತನ ಒಡನಾಡಿಯೂ ಹೌದು. ಬಹುಪಯೋಗಿ ಗೋವಿನ ವಧೆಯನ್ನು ತಡೆಯಲು ರಾಜ್ಯ ಬಿಜೆಪಿ ಸರಕಾರ ಪರ-ವಿರೋಧದ ನಡುವೆಯೇ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮಕ್ಕೆ ತಿದ್ದು ಪಡಿ ತಂದು 2021 ಫೆ.21ರಂದು ರಾಜ್ಯಪಾಲರ ಅನುಮೋದನೆಯೊಂದಿಗೆ ಗೋವಿನ ವಧೆಯನ್ನು ನಿರ್ಬಂಧಿಸಿತು.
ಗೋವಧೆ ನಿಷೇಧಿಸಿದರೆ ಮುದಿ ಹಸು, ಹೋರಿ, ಗಂಡುಕರುಗಳನ್ನು ಏನು ಮಾಡಬೇಕು ಎಂಬ ಪ್ರಶ್ನೆ ಉದ್ಬವಿಸಿದಾಗ ಪ್ರತಿ ಜಿಲ್ಲೆಯಲ್ಲಿ ಗೋ ಶಾಲೆಗಳನ್ನು ತೆರೆಯುವುದಾಗಿ ಬಜೆಟ್ನಲ್ಲೇ ಘೋಷಿಸಿ ರೈತರು ಸಾಕಲಾಗದ ಮುದಿ ಹಸು, ಸೀಮೆ ಹಸುವಿನ ಗಂಡುಕರುಗಳನ್ನು ಗೋ ಶಾಲೆಗಳಿಗೆ ಬಿಡಬಹುದೆಂದು ಪರಿಹಾರ ಸೂಚಿಸಲಾಯಿತು. ಆದರೆ ಜಿಲ್ಲಾ ಮಟ್ಟದ ಗೋ ಶಾಲೆ ಸ್ಥಾಪನೆಯಲ್ಲಿ ಆಗುತ್ತಿರುವ ವಿಳಂಬದ ಕಾರಣ ಕೃಷಿ ಕಾಯಕಕ್ಕೂ ಬಾರದ, ಹಾಲು ಕೊಡಲಾಗದ ಸೀಮೆ ಹಸುವಿನ(ವಿದೇಶಿ ತಳಿ) ಗಂಡು ಕರುಗಳು ಬೀದಿಗೆ ಬೀಳುವಂತಾಗಿದೆ.
ಕಾಯ್ದೆಗೂ ಮುನ್ನ ಸೀಮೆ ಗಂಡು ಕರುಗಳನ್ನು ಸಾಕಲು ಅನುಕೂಲವಿರುವವರು ತಾವೇ ಸಾಕುತ್ತಿದ್ದರು. ಬಹುತೇಕರು ಅನಿವಾರ್ಯವಾಗಿ ಕಸಾಯಿ ಖಾನೆಗೆ ಕಳುಹಿಸುತ್ತಿದ್ದರು. ಪ್ರಸಕ್ತ ಗೋವಧೆ ನಿಷೇಧ 2021 ಫೆಬ್ರವರಿಯಿಂದಲೇ ಜಾರಿಗೆ ಬಂದಿರುವುದರಿಂದ ಹೈನುಗಾರರು ಮುದಿಹಸು, ಸೀಮೆ ಹಸುವಿನ ಗಂಡು ಕರುಗಳನ್ನು ಕಸಾಯಿ ಖಾನೆಗೂ ಕಳುಹಿಸಲಾಗದೆ, ತಾವೂ ಸಾಕಲಾಗದೆ ಬೀದಿಗೆ ಬಿಡುತ್ತಿದ್ದು, ಸಂತೆ, ಜಾತ್ರೆಯಲ್ಲಿ ಮಾರಾಟಕ್ಕೆ ತಂದು ಅಲ್ಲೇ ಬಿಟ್ಟು ಹೋಗುವ ಪ್ರಸಂಗಗಳು ಎದುರಾಗಿವೆ.
ಬೀದಿಗೆ ಬಿದ್ದ ಹೋರಿಕರಗಳು, ಹೆದ್ದಾರಿಯೆನ್ನದೆ, ಬೀದಿಬದಿಯೆನ್ನದೆ ರಸ್ತೆ, ಹೆದ್ದಾರಿಗಳಲ್ಲೇ ಅಡ್ಡಾಡುತ್ತಿದ್ದು, ಅಡ್ಡಾದಿಡ್ಡಿ ವೇಗವಾಗಿ ಚಲಾಯಿಸಿಕೊಂಡು ಬರುವ ವಾಹನಗಳು ಗುದ್ದಿ ಕೈ ಕಾಲು ಮುರಿದುಕೊಂಡು ಗಮನಿಸುವವರಿಲ್ಲದೆ ಪ್ರಾಣಕ್ಕೆ ಎರವು ತಂದುಕೊಳ್ಳುತ್ತಿವೆ. ರಸ್ತೆಯಲ್ಲೇ ಘರ್ಷಣೆ, ಚೆಲ್ಲಾಟವಾಡುತ್ತಾ ನಾಗರಿಕರು ಸಂಚರಿಸಲು ಭಯಪಡುವಂತಾಗಿದೆ. ಇನ್ನೂ ನಗರ-ಪಟ್ಟಣ ಪ್ರದೇಶದಲ್ಲಿ ಸೂಕ್ತ ಮೇವು ನೀರು ಸಿಗದೆ ಕೃಷವಾಗುವ ಜೊತೆಗೆ ರಸ್ತೆಯಲ್ಲಿ ಬಿಸಾಡಿದ ಪ್ಲಾಸ್ಟಿಕ್, ಪೇಪರ್ ಕಲ್ಮಶಗಳನ್ನು ತಿಂದು ರೋಗಕ್ಕೆ ತುತ್ತಾಗುತ್ತಿವೆ. ರಸ್ತೆಗೆ ನೂಕಲ್ಪಟ್ಟಿರುವ ಕರುಗಳನ್ನು ಕದ್ದುಮುಚ್ಚಿ ವಧೆ ಮಾಡುವ ಪ್ರಕರಣದ ದೂರುಗಳು ಕೇಳಿಬರುತ್ತಿವೆ. ಬೀದಿಗೆ ನೂಕಲ್ಪಟ್ಟ ಸೀಮೆ ಗಂಡುಕರುಗಳನ್ನು ಬೀದಿ ಹೆಣವಾಗಲು ಬಿಡದೆ ಸರಕಾರಿ ಗೋ ಶಾಲೆ ಸ್ಥಾಪನೆಯಾಗುವವರೆಗೂ ಕಾಯದೆ ಅನುದಾನಿತ ಗೋಶಾಲೆಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ತ್ವರಿತವಾಗಿ ಆಗಬೇಕಿದೆ. ಆಡಳಿತಾರೂಢ ಬಿಜೆಪಿ ಜನಪ್ರತಿನಿಧಿಗಳು ಈ ಬಗ್ಗೆ ಗಂಭೀರ ಗಮನಹರಿಸುವ ಅಗತ್ಯವಿದೆ.
ಜಮೀನು ಹಸ್ತಾಂತರ ಹಂತದಲ್ಲಿ ಜಿಲ್ಲಾ ಗೋ ಶಾಲೆ:
ಬಜೆಟ್ನಲ್ಲಿ ಘೋಷಿಸಲಾದ ಜಿಲ್ಲೆಗೊಂದು ಗೋ ಶಾಲೆ ಸ್ಥಾಪನೆಯನುಸಾರ ಸಿರಾ ತಾಲೂಕು ಚಿಕ್ಕಬಾಣಗೆರೆ ಸರ್ವೆ ನಂಬರ್ 204ರ 19 ಎಕರೆ 19 ಗುಂಟೆ ಸರಕಾರಿ ಗೋ ಮಾಳದಲ್ಲಿ ಸು.15 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಗೋ ಶಾಲೆ ನಿರ್ಮಿಸಲು ಜಾಗ ಗುರುತಿಸಿದ್ದು, ತಹಸೀಲ್ದಾರ್, ಮಧುಗಿರಿ ಉಪವಿಭಾಗಾಧಿಕಾರಿಗಳ ಹಂತದಲ್ಲಿ ಪತ್ರ ವ್ಯವಹಾರ ನಡೆಯುತ್ತಿದ್ದು, ಬೇಗ ಪ್ರಕ್ರಿಯೆ ಮುಗಿಸಿ ಜಿಲ್ಲಾಡಳಿತಕ್ಕೆ ಕಡತ ರವಾನಿಸಲು ಡಿಸಿಯವರು ಸೂಚಿಸಿದ್ದಾರೆ. ಜಮೀನು ಹಸ್ತಾಂತರ ಬಳಿಕ ಗೋಶಾಲೆ ನಿರ್ಮಾಣಕ್ಕೆ ಚಾಲನೆ ಸಿಗಲಿದೆ ಎಂದು ಪಶುಪಾಲನಾ ಇಲಾಖೆ ಪ್ರಭಾರ ಉಪನಿರ್ದೇಶಕ ಎ.ಸಿ.ದಿವಾಕರ್ ಮಾಹಿತಿ ನೀಡುತ್ತಾರೆ.
ನಾಲ್ಕು ಅನುದಾನಿತ ಗೋಶಾಲೆಗಳಿವೆ: ಜಿಲ್ಲೆಯಲ್ಲಿ ಸರಕಾರಿ ಅನುದಾನ ಕೊಡುತ್ತಿರುವ ನಾಲ್ಕು ಗೋ ಶಾಲೆಗಳಾದ ಸಿದ್ಧಗಂಗಾ ಮಠದ ಸಿದ್ದಲಿಂಗೇಶ್ವರ ಗೋಶಾಲೆ, ತಿಪಟೂರು ಕೆರಗೋಡಿ, ಕಾಡಸಿದ್ದೇಶ್ವರ ಮಠ ಹಾಗೂ ಗುಬ್ಬಿ ಧ್ಯಾನಫೌಂಡೇಶನ್ನ ಒಂದು ಗೋ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಪ್ರತಿ ರಾಸುವಿನ ನಿರ್ವಹಣೆಗೆ ದಿನಕ್ಕೆ 17.50 ಪೈಸೆಯಂತೆ ವಾರ್ಷಿಕ ಗರಿಷ್ಠ 100 ದಿನಗಳಿಗೆ ನಿರ್ವಹಣಾ ವೆಚ್ಚವನ್ನು ನೀಡಲಾಗುತ್ತದೆ. ಸದ್ಯ ಕೆರಗೋಡಿಯಲ್ಲಿ 121, ಸಿದ್ಧಗಂಗಾ ಮಠದಲ್ಲಿ 282, ಕಾಡಸಿದ್ದೇಶ್ವರ ಮಠದಲ್ಲಿ 51, ಮೈದಾಳದ ಕೃಷ್ಣ ಗೋಶಾಲೆಯಲ್ಲಿ 128 ರಾಸುಗಳಿಗೆ ಮೇವು-ನೀರಿನ ಆಶ್ರಯ ಒದಗಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕಾಯ್ದೆ ಜಾರಿಯ ಬಳಿಕ ಈ ವರ್ಷ ಗೋ ಶಾಲೆಗಳಿಗೆ ದಾಖಲಾಗುತ್ತಿರುವ ರಾಸುಗಳ ಸಂಖ್ಯೆಯೂ ಹೆಚ್ಚಾಗಿದೆ ಎಂಬ ಮಾಹಿತಿಯನ್ನು ಪಶುಪಾಲನಾ ಇಲಾಖೆಯವರು ನೀಡುತ್ತಾರೆ.
ಗೋ ಹತ್ಯೆ ಮಾಡಿದರೆ 3 ರಿಂದ 5ವರ್ಷ ಜೈಲು :
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ರ ಅನುಸಾರ ಗೋ ಹತ್ಯೆ, ಗೋಮಾಂಸಮಾರಾಟ ಕ್ರಿಮಿನಲ್ ಅಪರಾಧವಾಗಿದ್ದು, 13 ವರ್ಷ ದಾಟಿದ ಎಮ್ಮೆಗಳನ್ನು ಹೊರತುಪಡಿಸಿ ಹಸು,ಕರು, ಹೋರಿಗಳನ್ನು ವಧೆ ಮಾಡುವಂತಿಲ್ಲ. ಹತ್ಯೆ ಉದ್ದೇಶಕ್ಕಾಗಿ ಸಾಗಾಣಿಕೆ, ಮಾರಾಟವೂ ನಿಷಿದ್ಧ. ಒಂದು ವೇಳೆ ಗೋ ಹತ್ಯೆ ಮಾಡಿದರೆ ಕನಿಷ್ಠ 3 ರಿಂದ 5 ವರ್ಷ ಜೈಲು 50000 ದಿಂದ 5 ಲಕ್ಷದವರೆಗೆ ದಂಡ, 2ನೇ ಬಾರಿ ಅಪರಾಧ ಮಾಡಿದರೆ 7 ವರ್ಷದವರೆಗೆ ಜೈಲು 1 ರಿಂದ 10 ಲಕ್ಷದವರೆಗೆ ದಂಡ ತೆರಬೇಕಾಗುತ್ತದೆ. ನೂತನ ಕಾಯ್ದೆಯಡಿ ಜಿಲ್ಲೆಯಲ್ಲಿ ಜೂನ್-ಜುಲೈನಲ್ಲಿ 114 ಜಾನುವಾರುಗಳು, 9 ಒಂಟೆ, 39 ಎಮ್ಮೆ,66 ಹಸುಗಳನ್ನು ರಕ್ಷಣೆ ಮಾಡಲಾಗಿದೆ.
ನೂತನ ಕಾಯ್ದೆಯನ್ವಯ ಗೋವಧೆ ನಿಷಿದ್ಧ ಶಿಕ್ಷಾರ್ಹ ಅಪರಾಧ. ಸಾಕಲಾಗದ ಹಸು- ಕರುಗಳನ್ನು ಯಾರೂ ರಸ್ತೆಗೆ ಬಿಡಬಾರದು. ಜಿಲ್ಲಾ ಮಟ್ಟದ ಸರಕಾರಿ ಗೋ ಶಾಲೆ ನಿರ್ಮಾಣ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲಿಯವರೆಗೆ ಜಿಲ್ಲೆಯ ನಾಲ್ಕು ಅನುದಾನಿತ ಗೋ ಶಾಲೆಗಳಿಗೆ ಸಾಕಲಾಗದವರು ಬಿಡಬಹುದು.
-ಎ.ಸಿ.ದಿವಾಕರ್, ಪ್ರಭಾರ ಉಪನಿರ್ದೇಶಕರು, ಪಶುಪಾಲನಾ ಇಲಾಖೆ.
ಸರಕಾರ ಮುಂಗಾರು ಪ್ರಾರಂಭ ಆಗಿದೆ. ಗೋಶಾಲೆಗಳು ನಿರಂತರವಾಗಿರಬೇಕು. ಮಳೆಯಾಗಬಹುದು ಮಳೆಯಾಗದೇ ಇರಬಹುದು ಅಲ್ಲಿಗೆ ಬೇಕಾದ ಮೇವು ನೀರನ್ನು ಯಾವತ್ತೂ ಒದಗಿಸಿ ಸೆಕ್ಯೂರು ಮಾಡಬೇಕು. ಗೋವು ಸಾಕೋದು ತುಂಬಾ ಕಷ್ಟ, ನೂರು ಮನೆ ಗ್ರಾಮದಲ್ಲಿ 3 ಜೊತೆ ಧನ ಇಲ್ಲ. ಅಳಿದುಳಿದ ಗೋವುಗಳ ರಕ್ಷಣೆ ಮಾಡಬೇಕಾದ್ದು ಸರಕಾರ ಜವಾಬ್ದಾರಿ.
ಸರಕಾರ ಸಾಧಕ-ಬಾಧಕಗಳನ್ನು ಗಂಭೀರವಾಗಿ ಪರಿಗಣಿಸಿದೆ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿತು. ತಂದ ಮೇಲೆ ಅಶಕ್ತ ಗೋವುಗಳು, ರೈತನಿಗೆ ಹೊರೆಯಾಗುವ ಗಂಡು ಕರುಗಳ ನಿರ್ವಹಣೆ ಮಾಡುವುದು ಸರಕಾರದ ಜವಾಬ್ದಾರಿ, ಗೋ ಶಾಲೆ ತೆರೆಯುತ್ತೇವೆಂದು ಬಜೆಟ್ನಲ್ಲಿ ಘೋಷಿಸಿದ ಸರಕಾರ ಮರೆತಂದಿದೆ. ಇದರ ವೇದನೆಯನ್ನು ಮೂಕಪ್ರಾಣಿಗಳಾದ ಗೋವುಗಳು ಅನುಭವಿಸುವಂತಾಗಿದೆ. ಕೂಡಲೇ ಗೋ ಶಾಲೆ ತೆರೆದು ಗೋವುಗಳನ್ನು ರಕ್ಷಿಸುವ ಕಾರ್ಯ ಆಗಬೇಕು.
-ಅಳಿಲುಘಟ್ಟದ ಗೋವಿಂದರಾಜು, ರೈತ ಸಂಘದ ಜಿಲ್ಲಾಧ್ಯಕ್ಷ.
ಎಸ್.ಹರೀಶ್ ಆಚಾರ್ಯ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ