ತುಮಕೂರು :
ಸ್ವಚ್ಚ ನಗರ ನಿರ್ಮಾಣದಲ್ಲಿ ನಾಗರೀಕರು ನಗರಪಾಲಿಕೆಯೊಂದಿಗೆ ಕೈ ಜೋಡಿಸಬೇಕು. ಸಮಸ್ಯೆ, ಸಲಹೆಗಳಿದ್ದರೆ ಪಾಲಿಕೆಯ ಆಪ್‍ನಲ್ಲಿ ಅಭಿಪ್ರಾಯ ಹಂಚಿಕೊಳ್ಳಬೇಕು ಎಂದು ನಗರ ಪಾಲಿಕೆ ಮೇಯರ್ ಫರೀದಾ ಬೇಗಂ ಮನವಿ ಮಾಡಿದರು.
ನಗರದ ಟೌನ್‍ಹಾಲ್ ವೃತ್ತದಲ್ಲಿ ಮಹಾನಗರ ಪಾಲಿಕೆವತಿಯಿಂದ ಭಾನುವಾರ ಬೆಳಿಗ್ಗೆ ಹಮ್ಮಿಕೊಮಡಿದ್ದ ಸ್ವಚ್ಚ ಸರ್ವೇಕ್ಷಣ್- 2021 ಅಂಗವಾಗಿ ಸೈಕ್ಲಾಥಾನ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವಚ್ಚತೆಯಲ್ಲಿ 48ನೇ ಸ್ಥಾನದಲ್ಲಿದ್ದ ತುಮಕೂರು ಮಹಾನಗರ ಪಾಲಿಕೆ ಈಗ 2ನೇ ಸ್ಥಾನದಲ್ಲಿದೆ. ಇದು ಮೊದಲನೆ ಸ್ಥಾನಕ್ಕೆ ಬರಲು ಪಾಲಿಕೆಯ ಸಿಬ್ಬಂದಿಗಳು ಸೇರಿದಂತೆ ನಗರದ ನಾಗರಿಕರು ಸಹಕಾರ ನೀಡಬೇಕು. ತುಮಕೂರು ಮಹಾನಗರ ಪಾಲಿಕೆ ಮೈಸೂರನ್ನು ಹಿಂದಿಕ್ಕಿ ಮೊದಲನೆಯಯ ಸ್ಥಾನ ಪಡೆಯಲು ನಾವು ಕಾಳಜಿವಹಿಸಬೇಕು ಎಂದರು.
ಪಾಲಿಕೆಯ 35 ವಾರ್ಡ್ ಸದಸ್ಯರೊಂದಿಗೆ ಐನೂರಕ್ಕೂ ಹೆಚ್ಚು ಮಂದಿ ಪೌರ ಕಾರ್ಮಿಕರು, ಅಧಿಕಾರಿಗಳು, ಸಿಬ್ಬಂದಿಗಳ ಜತೆಗೂಡಿ ಸ್ವಚ್ಚತೆಗೆ ನಗರದ ಪ್ರತಿಯೊಬ್ಬರೂ ಸಹಕರಿಸಿದರೆ ರೋಗ ಮುಕ್ತ ನಗರವನ್ನಾಗಿ ಮಾಡಬಹುದು. ಸ್ವಚ್ಚತೆಗೆ ಸಂಬಂಧಿಸಿದಂತೆ ಪಾಲಿಕೆಯು ನೂತನವಾಗಿ ಬಿಡುಗಡೆ ಮಾಡಿರುವ ಆಪ್ ಇನ್‍ಸ್ಟಾಲ್ ಮಾಡಿಕೊಂಡು ಅದರ ಮೂಲಕ ಪ್ರತಿನಿತ್ಯ ಸಲಹೆ-ಸೂಚನೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದರು.
ನಗರದಲ್ಲಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಸ್ಮಾರ್ಟ್‍ಸಿಟಿ ಯೋಜನೆ ಸುಮಾರು 2000 ಕೋಟಿ ಅನುದಾನದಲ್ಲಿ ಅಭಿವೃದ್ಧಿಯಾಗುತ್ತಿದೆ. ಕೋವಿಡ್-19 ವೈರಸ್ ಹಿನ್ನೆಲೆಯಲ್ಲಿ ಕಳೆದ 9 ತಿಂಗಳಿಂದ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿದ ಪರಿಣಾಮವಾಗಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಈಗಾಗಲೇ ಶೇಕಡ 90ರಷ್ಟು ಕಾಮಗಾರಿಗಳು ಮುಗಿದಿವೆ . ಇನ್ನೊಂದು ವರ್ಷದಲ್ಲಿ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಆಗ ತುಮಕೂರು ನಗರ ಅತ್ಯಂತ ಸುಂದರವಾಗಿ ಕಾಣಲಿದೆ ಎಂದು ಫರೀದಾ ಬೇಗಂ ಹೇಳಿದರು.
ನಗರ ಪಾಲಿಕೆ ಆಯುಕ್ತರಾದ ರೇಣುಕಾ ಮಾತನಾಡಿ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಚ ಸರ್ವೇಕ್ಷಣೆಗೆ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ನೀಡಬೇಕು ಎಂಬ ಹಿನ್ನೆಲೆಯಲ್ಲಿ ಪದೇ ಪದೇ ಹೇಳುತ್ತಾ ಬಂದಿದೆ. ಹೀಗಾಗಿ ಸಮೀಕ್ಷೆಯಲ್ಲಿ 48ನೇ ಸ್ಥಾನದಲ್ಲಿದ್ದ ತುಮಕೂರು ಈಗ ಎರಡನೇ ಸ್ಥಾನಕ್ಕೆ ಬಂದಿರುವುದು ಹೆಮ್ಮೆ ತಂದಿದೆ ಎಂದರು.
ಮುಂಬರುವ ದಿನಗಳಲ್ಲಿ ಮೇಯರ್ ಅವರ ನಿರೀಕ್ಷೆಗೆ ಅನುಗುಣವಾಗಿ ಮೊದಲ ಸ್ಥಾನಕ್ಕೆ ತರುವುದರ ಜತೆಗೆ ಹಸಿರು ನಗರವನ್ನಾಗಿ ಮಾಡೋಣ. ಪ್ರತಿಯೂಂದು ಕುಟುಂಬದವರು ಮನೆಗೆ ಒಂದು ಸಸಿ ನೆಡುವ ಮೂಲಕ ನಗರವನ್ನು ಹಸಿರುನ್ನಾಗಿಸೋಣ. ನಗರದ ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡೋಣ. ಇದಕ್ಕೆ ಮಹಾನಗರ ಪಾಲಿಕೆಯ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಜಾಥಾದಲ್ಲಿ ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಟಿ.ಕೆ.ನರಸಿಂಹಮೂರ್ತಿ, ಹೆಚ್.ಮಲ್ಲಿಕಾರ್ಜುನ್, ಸದಸ್ಯರಾದ ಸಿ.ಎನ್.ರಮೇಶ್, ಶ್ರೀನಿವಾಸ್, ಧರಣೇಂದ್ರಕುಮಾರ್, ಪರಿಸರ ಇಂಜಿನಿಯರ್‍ಗಳಾದ ಕೃಷ್ಣಮೂರ್ತಿ, ನಿಖಿತಾ ಮತ್ತಿತರರು ಭಾಗವಹಿಸಿದ್ದರು.
ನಗರದ ಟೌನ್‍ಹಾಲ್ ವೃತ್ತದಿಂದ ಆರಂಭವಾದ ಸೈಕಲ್ ಜಾಥಾ ಅಶೋಕ ರಸ್ತೆ, ಕೋತಿತೋಪು, ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಸರ್ಕಲ್ ಮುಖೇನ ಸಂಚರಿಸಿ ಎಸ್.ಎಸ್.ಪುರಂನ ಕೆಂಪಣ್ಣ ಅಂಗಡಿ ಸರ್ಕಲ್‍ನಲ್ಲಿ ಮುಕ್ತಾಯಗೊಂಡಿತು. ಜಾಥಾದಲ್ಲಿ ಭಾಗವಹಿಸಿದ್ದವರಿಗೆ ನಗರಪಾಲಿಕೆಯಿಂದ ಪ್ರಶಂಸಾ ಪತ್ರ ನೀಡಿ ಅಭಿನಂದಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ