‘ಆಚರಣೆಗಳಿಂದಷ್ಟೇ ಪರಂಪರೆ ಉಳಿವು’ – ಸಚ್ಚಿದಾನಂದ ಸರಸ್ವತಿ

 ತುಮಕೂರು :

     ಆಚರಣೆಗಳಿಂದಷ್ಟೇ ಸಂಪ್ರದಾಯ, ಪರಂಪರೆ ಉಳಿವು ಸಾಧ್ಯ. ಮನೆತನ, ಕುಲ, ಗ್ರಾಮಗಳಲ್ಲಿ ಹಿಂದಿನಿಂದ ಪಾಲಿಸಿಕೊಂಡು ಬಂದಿರುವ ಆಚರಣೆಯನ್ನು ಹೆಮ್ಮೆಯಿಂದ ಪಾಲಿಸೋಣ ಎಂದು ವಾಸವಿ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಕರೆಕೊಟ್ಟರು.

      ತುಮಕೂರು ದಸರಾ ಸಮಿತಿಯಿಂದ ನಡೆದ ಸಾಮೂಹಿಕಾ ಶಮೀಪೂಜೆ, ದಸರಾ ಉತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಭಾರತೀಯ ಸಂಸ್ಕøತಿ, ಹಿಂದೂಧರ್ಮದ ಪರಂಪರೆ ಅಳಿವು-ಉಳಿವಿನ ಬಗ್ಗೆ ವೇದಿಕೆಗಳಲ್ಲಿ ಸಭೆ ಸಮಾರಂಭಗಳಲ್ಲಿ ಕಳವಳಕಾರಿ ಮಾತುಗಳನ್ನಾಡುತ್ತೇವೆ. ಆದರೆ ಅದಕ್ಕೆ ಪರಿಹಾರವೇನು ಎಂಬುದನ್ನು ಅರಿಯಬೇಕಿದೆ. ಇದಕ್ಕಾಗಿಯೇ ನಮ್ಮ ಹಿರಿಯರು ಪರಂಪರೆ ಉಳಿವಿಗೆ ಹಬ್ಬ ಹರಿದಿನವನ್ನು ಪರಿಚಯಿಸಿದ್ದು, ಪ್ರತಿಯೊಬ್ಬರು ತಮ್ಮ ತಮ್ಮ ಸಂಪ್ರದಾಯವನ್ನು ವೈಭವಪೂರ್ಣವಾಗಿ ಆಚರಿಸುವ ಮೂಲಕ ನಮ್ಮ ಆಚರಣೆ, ಸಂಪ್ರದಾಯ ಉಳಿಸುವ ಕಾರ್ಯ ಮಾಡಬೇಕಿದೆ. ತಮ್ಮ ಆಚರಣೆಗಳ ಬಗ್ಗೆ ಹೆಮ್ಮೆಯಿಂದ ಬೀಗಬೇಕಿದೆ. ಆಗ ಧರ್ಮ, ಪರಂಪರೆ ಉಳಿವಿಗೆ ಯಾವುದೇ ತೊಡಕಾಗದು ಎಂದರು.

      ಮೈಸೂರಿನಂತೆ ಪ್ರಖ್ಯಾತಿ:

      ತುಮಕೂರು ದಸರಾ, ಮೈಸೂರು ದಸರಾದಷ್ಟೇ ಪ್ರಖ್ಯಾತಿ ಹೊಂದುತ್ತಿರುವುದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ ಎಂದ ಶ್ರೀಗಳು, ದೇವಾಲಯಗಳ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮೂಲಕ ಒಟ್ಟಾಗಿ ಕರೆತಂದು ದಸರಾ ಉತ್ಸವದಲ್ಲಿ ಸರ್ವರ ದರ್ಶನಕ್ಕೆ ಅನುವು ಮಾಡಿಕೊಡುತ್ತಿರುವುದು ಪುಣ್ಯ ಕಾರ್ಯ. ಈ ದಿಸೆಯಲ್ಲಿ ಕಳೆದ 31 ವರ್ಷಗಳಿಂದ ದಸರಾ ಆಚರಣೆಯನ್ನು ಮಾಡಿಕೊಂಡು ಬರುತ್ತಿರುವ ಸಮಿತಿಯವರನ್ನು ಅಭಿನಂದಿಸುತ್ತೇನೆ. ಸರ್ವರಿಗೂ ಒಳಿತಾಗಲಿ ಎಂದು ಆಶಿಸಿದರು.

      ಹಿರಿಯ ಪತ್ರಕರ್ತ ಅಜಿತ್ ಹನುಮಕ್ಕನವರ್ ಮಾತನಾಡಿ ಪರಂಪರೆಯಿಲ್ಲದ ದೇಶವಿಲ್ಲ, ದೇಶವಿಲ್ಲದೆ ಪರಂಪರೆಇಲ್ಲ. ಭಾರತೀಯ ಪರಂಪರೆಗೆ 17000 ವರ್ಷಗಳ ಪುರಾತನ ಇತಿಹಾಸವಿದ್ದು, ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಹೊಂದುವುದು ಅವಶ್ಯವಾಗಿದೆ ಎಂದರು.
ಸಂಸದ ಜಿ.ಎಸ್.ಬಸವರಾಜ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ರಂಗೋಲಿ ವಿಜೇತರಿಗೆ ಬಹುಮಾನ ವಿತರಿಸಿದರು. ಶಾಸಕ ಜಿ.ಬಿ. ಜ್ಯೋತಿಗಣೇಶ್, ಮೇಯರ್ ಬಿ.ಜಿ.ಕೃಷ್ಣಪ್ಪ ಸಮಿತಿಯ ಸೇವಾಕರ್ತೃಗಳನ್ನು ಅಭಿನಂದಿಸಿದರು. ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್ ಅವರು ದಸರಾ ಸಮಿತಿ, ಉತ್ಸವದ ಕುರಿತು ಮಾಹಿತಿ ನೀಡಿದರು. ದಸರಾ ಸಮಿತಿಯ ಪದಾಧಿಕಾರಿಗಳಾದ ಆರ್.ಎಲ್.ರಮೇಶ್‍ಬಾಬು, ಜಿ.ಕೆ.ಶ್ರೀನಿವಾಸ್, ಜಿ.ಎಸ್.ಬಸವರಾಜ್, ಕೆ.ಎನ್.ಗೋವಿಂದರಾವ್, ಬಿ.ಎಸ್.ಮಂಜುನಾಥ್ ನಂಜುಂಡೇಶ್ವರ, ಮಧುಗಿರಿಯ ಗಾಯತ್ರಿ ಮತ್ತಿತರರು ಹಾಜರಿದ್ದರು. ನಗರದ ವಿವಿಧೆಡೆಯಿಂದ 81 ದೇವತಾ ಮೂರ್ತಿಗಳನ್ನು ಹೈಸ್ಕೂಲ್ ಮೈದಾನಕ್ಕೆ ಮೆರವಣಿಗೆ ಮೂಲಕ ಕರೆತರಲಾಗಿತ್ತು. ಬನ್ನಿಛೇದನದ ಬಳಿಕ ಬನ್ನಿ ಪಡೆಯಲು ನಾಗರಿಕರು ಮುಗಿಬಿದ್ದಿರು. ಮಹಿಳಾ ಸಮನ್ವಯ ಸಮಿತಿಯಿಂದ ವಂದೇಮಾತರಂ, ದೇವಿಸ್ತಿತಿಯ ಪಠಣ ಮಾಡಲಾಯಿತು.

ನಾಡಿನಲ್ಲಿ ಸಮೃದ್ಧಿ ಮೂಡಲಿ :

      ಶಮೀಛೇದನ ನೆರವೇರಿಸಿದ ತಹಸೀಲ್ದಾರ್ ಮೋಹನ್‍ಕುಮಾರ್ ಮಾತನಾಡಿ ರಾಜ್ಯದ ಹೆಬ್ಬಾಗಿಲಾಗಿರುವ ತುಮಕೂರು ಡಾ.ಶ್ರೀ.ಶಿವಕುಮಾರಸ್ವಾಮೀಜಿ ಅವರು ನೆಲೆಯಾದಂತಹ ಪುಣ್ಯ ಭೂಮಿ. ಈ ತಪೋನೆಲದಲ್ಲಿ 3 ದಶಕಗಳಿಂದ ದಸರಾ ಸರ್ವ ಸಮುದಾಯವರನ್ನು ಒಳಗೊಂಡು ಸಾಮೂಹಿಕವಾಗಿ ನಡೆಯುತ್ತಿರುವುದು ಮಾದರಿ ಸಂಗತಿ. ದಸರಾ, ವಿಜಯದಶಮಿಗೆ ಪುರಾಣ, ಚರಿತ್ರೆಯಲ್ಲಿ ಹಲವು ಐತಿಹ್ಯಗಳಿವೆ. ದುಷ್ಟತನವನ್ನು ತೊಡೆದುಹಾಕುವ ಪ್ರತೀಕವಾಗಿ ಶಮೀ ವೃಕ್ಷ ಅರ್ಥಾತ್ ಬನ್ನಿಯನ್ನು ಛೇದಿಸಲಾಗುತ್ತದೆ. ಅತ್ಯಂತ ವ್ಯವಸ್ಥಿತವಾಗಿ ದಸರಾ ಉತ್ಸವ ನಡೆಸಿಕೊಂಡು ಬರುತ್ತಿದ್ದು, ಕೋವಿಡ್ ಆತಂಕ ಕಳೆದು ಇಡೀ ನಾಡಿನಲ್ಲಿ ಸಮೃದ್ಧಿ ಮೂಡಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

ಮಕ್ಕಳಿಗೆ ಮೌಲ್ಯ, ಸಂಸ್ಕೃತಿ ಪರಿಚಯಿಸಿ :

     ದಸರಾ ಸಮಿತಿ ಕಾರ್ಯಾಧ್ಯಕ್ಷ ಎಸ್.ಪಿ.ಚಿದಾನಂದ್ ಮಾತನಾಡಿ ನಮ್ಮ ಮುಂದಿನ ಪರಂಪರೆಗೆ ಸಂಸ್ಕøತಿ ಮೌಲ್ಯಗಳ ಪರಿಚಯವೇ ಇಲ್ಲದಂತಾಗಿದ್ದು, ಶಾಲೆ, ಕಾಲೇಜು, ಲ್ಯಾಬ್, ಮೊಬೈಲ್‍ನಲ್ಲೇ ಕಾಲಕಳೆಯುತ್ತಿದ್ದಾರೆ. ದಸರಾ ಉತ್ಸವ, ಗಣೇಶೋತ್ಸವದಂತಹ ಸಾಂಸ್ಕøತಿಕ ಆಚರಣೆ, ಕಾರ್ಯಕ್ರಮಗಳಿಗೆ ಮಕ್ಕಳು, ಯುವಜನರ ಸಂಖ್ಯೆ ಕಡಿಮೆಯಾಗುತ್ತಿದ್ದು, ಅವರನ್ನು ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಕರೆತರುವ ಅವಶ್ಯಕತೆಇದೆ. ಕೋವಿಡ್‍ನಿಂದ ಕುಂಠಿತವಾಗಿರುವ ಮಕ್ಕಳ ಶಿಕ್ಷಣಕ್ಕೆ ಎಲ್ಲರೂ ಕೈಜೋಡಿಸಬೇಕಿದ್ದು, ತುಮಕೂರು ದಸರಾ ಸಮಿತಿ ಹಿರಿಯರ ಮಾರ್ಗದರ್ಶನ, ಯುವಜನರ ಉತ್ಸಾಹದಿಂದ ಯಶಸ್ವಿಯಾಗಿ ಉತ್ಸವ ಮಾಡಿಕೊಂಡು ಬರುತ್ತಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap