ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಯೋಜನೆ, ವೇಗ ಹೆಚ್ಚಿಸಲು ಹೊಸ ಕ್ರಮ

ಚಿತ್ರದುರ್ಗ: 

   ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ನಡುವಿನ ಪ್ರಯಾಣದ ಅವಧಿ ಕಡಿಮೆ ಮಾಡುವ ಮಹತ್ವದ ರೈಲು ಯೋಜನೆಗೆ ಭೂ ಸ್ವಾಧೀನದ ವಿಚಾರವೇ ತೊಡಕಾಗುತ್ತಿದೆ. ಮೂರು ಜಿಲ್ಲೆಗಳನ್ನು ಸಂಪರ್ಕಿಸುವ ಹೊಸ ನೇರ ರೈಲು ಮಾರ್ಗ ಯೋಜನೆ ಕುರಿತು ಸಭೆಗಳು ಆಗುತ್ತಿವೆ. ಆದರೆ ಅಂದುಕೊಂಡ ವೇಗದಲ್ಲಿ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಯೋಜನೆ ಸಾಗುತ್ತಿಲ್ಲ. ಆದ್ದರಿಂದ ಭೂ ಸ್ವಾಧೀನ ಸಮಸ್ಯೆ ಇತ್ಯರ್ಥಕ್ಕೆ ಹೊಸ ಕ್ರಮ ಕೈಗೊಳ್ಳಲಾಗುತ್ತದೆ.

   ಗುರುವಾರ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಯೋಜನೆ ಕುರಿತು ಸಭೆಯನ್ನು ನಡೆಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ. ಟಿ. ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ. ಕಾರ್ತಿಕ್, ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಮಾರ್ಗದ ವಿಭಾಗೀಯ ಅಭಿಯಂತರ ರಜತ್ ತೆನಿಯಾ, ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯ್ಕ್ ಮುಂತಾದವರು ಪಾಲ್ಗೊಂಡಿದ್ದರು.

   ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, “ರೈಲ್ವೆ ಕಾಮಗಾರಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಲೋಕ್ ಅದಾಲತ್‍ನಲ್ಲಿ ಇತ್ಯರ್ಥ ಪಡಿಸುವ ಪ್ರಕರಣಗಳನ್ನು ನಿಯಾಮಾನುಸಾರ ಇತ್ಯರ್ಥಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು

    ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಬಾಕಿ ಇರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ, ಕಾಮಗಾರಿ ಪ್ರಾರಂಭಿಸಬೇಕಿದೆ. ಆದ್ದರಿಂದ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮುಂದಿನ ಲೋಕ್ ಅದಾಲತ್‍ನಲ್ಲಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಬೇಕು” ಎಂದು ಜಿಲ್ಲಾಧಿಕಾರಿಗಳು ಹೇಳಿದರು.

    ಸುಮಾರು 150 ಕೋಟಿ ರೂ. ಯೋಜನೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೆಚ್ಚ ಹಂಚಿಕೆಯ ಒಪ್ಪಂದದಲ್ಲಿ ತುಮಕೂರು-ಚಿತ್ರದುರ್ಗ-ದಾವಣಗೆರೆ ನಡುವಿನ ನೇರ ರೈಲ್ವೆ ಮಾರ್ಗದ ಸುಮಾರು 191 ಕಿ. ಮೀ. ಯೋಜನೆಯನ್ನು ಕೈಗೊಂಡಿವೆ. ಸುಮಾರು 150 ಕೋಟಿ ರೂ.ಗಳ ಯೋಜನೆ ಇದಾಗಿದೆ.

   ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಈ ಕುರಿತು ಲೋಕಸಭೆ ಕಲಾಪದಲ್ಲಿ ಪ್ರಶ್ನೆ ಮಾಡಿದ್ದರು. ಆಗ ಉತ್ತರ ನೀಡಿದ್ದ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್, “ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲು ಮಾರ್ಗಕ್ಕೆ 150 ಕೋಟಿ ರೂ. ಅನುದಾನ ನೀಡಿದೆ. ಕರ್ನಾಟಕ ಸರ್ಕಾರ ಯೋಜನೆಗೆ ಉಚಿತವಾಗಿ ಭೂಮಿ ನೀಡುತ್ತಿದೆ. ಶೇ 50ರಷ್ಟು ನಿರ್ಮಾಣ ವೆಚ್ಚ ಸಹ ಭರಿಸುತ್ತಿದೆ” ಎಂದು ಹೇಳಿದ್ದರು.

    ಈ ಯೋಜನೆಯ ಒಟ್ಟಾರೆ ವೆಚ್ಚ 2142 ಕೋಟಿ ರೂ.ಗಳು. ಮಾರ್ಚ್ 2024ರ ತನಕ 359 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈಗ ತುಮಕೂರು ಸಂಸದ ವಿ. ಸೋಮಣ್ಣ ಅವರು ರೈಲ್ವೆ ಖಾತೆ ರಾಜ್ಯ ಸಚಿವರಾಗಿರುವ ಕಾರಣ ಯೋಜನೆಗೆ ಮತ್ತಷ್ಟು ವೇಗ ನೀಡಲಾಗುತ್ತಿದೆ

   ಅಕ್ಟೋಬರ್‌ನಲ್ಲಿ ವಿ. ಸೋಮಣ್ಣ ದಾವಣಗೆರೆಯಲ್ಲಿ ಯೋಜನೆ ಕುರಿತು ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ್ದರು. ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಯೋಜನೆ ಇದೇ ಆರ್ಥಿಕ ವರ್ಷದಲ್ಲಿ ಕಾಮಗಾರಿ ಪ್ರಾರಂಭಗೊಂಡು 2027ರ ಜನವರಿಯೊಳಗೆ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದರು.

   ಸಚಿವ ವಿ. ಸೋಮಣ್ಣ, “ನೇರ ರೈಲು ಮಾರ್ಗ ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿದ್ದು ಕಳೆದ ಎರಡೂವರೆಗೆ ತಿಂಗಳಿಂದ ಇದರ ವೇಗ ಹೆಚ್ಚಿಸಲಾಗಿದೆ. ಒಟ್ಟು ಈ ಯೋಜನೆಗೆ 2406.73 ಎಕರೆ ಭೂಮಿ ಬೇಕಾಗಿದ್ದು ಈಗಾಗಲೇ 2119.16 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. 287.54 ಎಕರೆ ಸ್ವಾಧೀನ ಮಾಡಿಕೊಳ್ಳಬೇಕಾಗಿದ್ದು ದಾವಣಗೆರೆ ಜಿಲ್ಲೆಯಲ್ಲಿ ಹಾದುಹೋಗುವ 263.78 ಎಕರೆ ಜಮೀನಿನಲ್ಲಿ 246.20 ಎಕರೆ ಸ್ವಾಧೀನ ಪಡಿಸಿಕೊಂಡಿದ್ದು 17.58 ಎಕರೆಯ ಸ್ವಾಧೀನ ಪ್ರಕ್ರಿಯೆ ವಿವಿಧ ಹಂತದಲ್ಲಿದ್ದು ಕೆಲವೇ ದಿನಗಳಲ್ಲಿ ಪೂರ್ಣವಾಗಲಿದೆ” ಎಂದು ಹೇಳಿದ್ದರು.

Recent Articles

spot_img

Related Stories

Share via
Copy link