ತುಮಕೂರು : ಡಿಸಿ ಕಚೇರಿ ಆವರಣದಲ್ಲಿ ಇದ್ದೂ ಇಲ್ಲದಂತಿರುವ ಶೌಚಾಲಯ

ತುಮಕೂರು :

      ಸರ್ಕಾರಿ ಕಚೇರಿ ಎಂದರೆ ಪ್ರತಿನಿತ್ಯ ನೂರಾರು, ಸಾವಿರಾರು ಜನರು ತಮ್ಮ ಕೆಲಸಗಳಿಗಾಗಿ ಭೇಟಿ ನೀಡುತ್ತಾರೆ. ಮುಂಜಾನೆಯೆ ಬಂದವರು ಸಂಜೆವರೆಗೂ ಕಾಯುತ್ತ ಅತ್ತ-ಇತ್ತ ಅಲೆದು ಕೊನೆಗೆ ಹಾಗೋ, ಹೀಗೋ ಕೆಲಸ ಮುಗಿದರೆ ತಮ್ಮ ಮನೆಗೆ ಹೊರಡುತ್ತಾರೆ, ಇಲ್ಲದಿದ್ದರೆ ಪುನಃ ಮಾರನೆ ದಿನ ಅಲೆದಾಟ ತಪ್ಪಿದ್ದಲ್ಲ. ಇದರ ಮಧ್ಯೆ ಹೀಗೆ ಬರುವವರಿಗೆ ಶೌಚಕ್ಕೆ ಹೋಗಬೇಕಾದ ಪರಿಸ್ಥಿತಿ ಬಂದರೆ ಅವರನ್ನು ದೇವರೆ ಕಾಪಾಡಬೇಕು ಎಂಬಂತಾಗಿದೆ.

ಹೌದು,, ನಾವು ಹೇಳ್ತಾ ಇರೋದು ಯಾವುದೋ ಕುಗ್ರಾಮದ ಕಥೆಯಲ್ಲ, ತುಮಕೂರು ಮಹಾನಗರದ ಜಿಲ್ಲಾಧಿಕಾರಿಗಳ ಮತ್ತು ತಾಲ್ಲೂಕು ದಂಡಾಧಿಕಾರಿಗಳ ಕಚೇರಿ ಆವರಣದ ಅವ್ಯವಸ್ಥೆಯ ಬಗ್ಗೆ. ಪ್ರತಿನಿತ್ಯ ಮಕ್ಕಳು, ಮಹಿಳೆಯರು, ಪುರುಷರು ಸೇರಿದಂತೆ ವೃದ್ಧರು ಕೂಡ ಈ ಕಚೇರಿಗಳಿಗೆ ಬರುತ್ತಾರೆ. ಆದರೆ ಇಲ್ಲೊಂದು ಶೌಚಾಲಯದ ವ್ಯವಸ್ಥೆ ಇಲ್ಲದೆ ಜನತೆ ನರಕ ಯಾತನೆ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.

      ಸರ್ಕಾರಗಳೇನೋ ಮನೆಗೊಂದು ಶೌಚಾಲಯ ಇರಬೇಕು ಎಂದು ಲಕ್ಷಾಂತರ ರೂ. ಖರ್ಚು ಮಾಡುತ್ತಿದೆ. ಜಿಲ್ಲಾಡಳಿತವು ಜಾಗೃತಿ ಮೂಡಿಸುತ್ತಿದೆ, ಆದರೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿಯೇ ಇರುವ ಶೌಚಾಲಯವನ್ನೇ ವ್ಯವಸ್ಥಿತವಾಗಿ ಇಟ್ಟುಕೊಳ್ಳದೆ ಇರುವುದು ವಿಪರ್ಯಾಸವಾಗಿದೆ.

      ಇನ್ನೂ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ 2004 ರಲ್ಲಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸುಲಭ್ ಶೌಚಾಲಯ ಇಂದು ಪಾಳುಬಿದ್ದು, ಅತ್ತ ಸಾರ್ವಜನಿಕರು ಮುಖ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪುರುಷರೇನೋ ಶೌಚಾಲಯದ ಹಿಂಭಾಗದಲ್ಲಿ ತಮ್ಮ ಕಾರ್ಯವನ್ನು ಮುಗಿಸಿಕೊಂಡರೆ ಮಹಿಳೆಯರು ಎಲ್ಲಿಗೆ ಹೋಗಬೇಕು ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಪ್ರತಿನಿತ್ಯ ಸಾವಿರಾರು ಜನರು ಭೇಟಿ ನೀಡುವ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿಯೇ ಇಂತಹ ಸ್ಥಿತಿಯಾದರೆ ಇನ್ನು ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳ ಪಾಡೇನು ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.

ಈ ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಇಲ್ಲ, ಬೆಳಕಿನ ವ್ಯವಸ್ಥೆ ಇಲ್ಲ, ಗಾಳಿಯ ವ್ಯವಸ್ಥೆ ಮೊದಲೆ ಇಲ್ಲ, ಶೌಚಾಲಯದ ನೀರು ಸರಾಗವಾಗಿ ಹರಿಯುತ್ತಿಲ್ಲ, ಕಟ್ಟಡದ ಮೇಲ್ಭಾಗದಲ್ಲಿ ಗಿಡ ಬೆಳೆದುಕೊಂಡಿದೆ, ಮಹಿಳಾ ಶೌಚಾಲಯದ ಬಾಗಿಲುಗಳು ಕಿತ್ತು ಹೋಗಿವೆ, ಪುರುಷ ಶೌಚಾಲಯಕ್ಕೆ ಬೀಗ ಹಾಕಿ ಹಲವು ವರ್ಷಗಳೆ ಕಳೆದಿವೆ, ಇಲ್ಲಿನ ಸ್ಥಿತಿ ನೋಡಿದರೆ, ವಿದ್ಯುತ್ತಿನ ಸಂಪರ್ಕ ಬಹುಷಃ ಕಂಡೇ ಇಲ್ಲ ಎನಿಸುತ್ತದೆ.

ರಾತ್ರಿ ಬೇಡ, ಹಗಲು ಹೊತ್ತಿನಲ್ಲೇ ಇಲ್ಲಿ ಸೊಳ್ಳೆಯ ಕಾಟ ಯಥೇಚ್ಛವಾಗಿ ಇರುತ್ತದೆ, ಕೊರೋನಾ ಸಾಂಕ್ರಾಮಿಕ ಸೋಂಕಿನ ನಡುವೆ ಮಲೇರಿಯಾ ಮತ್ತು ಇತ್ತೀಚೆಗೆ ಕೇರಳದಲ್ಲಿ ಕಂಡುಬರುತ್ತಿರುವ ಜಿಕಾ ವೈರಸ್ ಸೋಂಕಿನ ಸಮಸ್ಯೆಗಳು ಇಲ್ಲಿಗೆ ಪ್ರತಿನಿತ್ಯ ಭೇಟಿ ನೀಡುವ ಸಾರ್ವಜನಿಕರಿಗೆ ಭಯ ಹುಟ್ಟಿಸುತ್ತಿವೆ.

ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಶೌಚಾಲಯದ ಬಗ್ಗೆ ಜಿಲ್ಲಾಡಳಿತ ಆದಷ್ಟು ಬೇಗ ಗಮನ ಹರಿಸಿ, ಈ ಶೌಚಾಲಯವನ್ನು ಸುವ್ಯವಸ್ಥೆಗೊಳಿಸಿ, ಸಾರ್ವಜನಿಕರ ಬಳಕೆಗೆ ಅನುಕೂಲ ಮಾಡಿಕೊಡಬೇಕು. ಮಹಿಳೆಯರು ಮತ್ತು ಮಕ್ಕಳ ಗೌರವಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಮುಂಬರುವ ಸಾಂಕ್ರಾಮಿಕ ಸೋಂಕಿನಿಂದ ಸಾರ್ವಜನಿಕರ ಆರೋಗ್ಯವನ್ನು ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap