ತುಮಕೂರು : ಹೆಚ್ಚಿನ ದರ ವಸೂಲಿ ಮಾಡದಂತೆ ಖಾಸಗಿಯವರಿಗೆ ತಾಕೀತು

 ತುಮಕೂರು : 

      ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ವಿಭಾಗದ ಜಂಟಿ ಸಾರಿಗೆ ಆಯುಕ್ತೆ ಓಂಕಾರೇಶ್ವರಿ ನಗರದಲ್ಲಿ ಪರಿಶೀಲನೆ ನಡೆಸಿದರು.

      ನಗರದ ಆರ್‍ಟಿಒ ಕಚೇರಿ ಮುಂಭಾಗ ಸಂಚರಿಸುತ್ತಿದ್ದ ಖಾಸಗಿ ಬಸ್‍ಗಳನ್ನು ತಡೆದು ಪರಿಶೀಲನೆ ನಡೆಸಿದ ಅವರು, ಪ್ರಯಾಣಿಕರಿಂದ ದುಬಾರಿ ಟಿಕೆಟ್ ದರ ಪಡೆಯಬಾರದು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಬಸ್ ಚಾಲಕರು, ನಿರ್ವಾಹಕರಿಗೆ ಸೂಚಿಸಿದರು.

      ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ವಿಭಾಗ ವ್ಯಾಪ್ತಿಗೆ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪ್ರಾದೇಶಿಕ ಸಾರಿಗೆ ವಿಭಾಗಗಳು ಬರಲಿದ್ದು, ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಸಾರ್ವಜನಿಕ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಸರಕಾರದ ಸೂಚನೆಯಂತೆ ಪರ್ಯಾಯ ಖಾಸಗಿ ಬಸ್, ಮ್ಯಾಕ್ಸಿಕ್ಯಾಬ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಪರ್ಯಾಯ ವ್ಯವಸ್ಥೆಯ ಪ್ರತಿ ಎರಡು ಗಂಟೆಗೊಮ್ಮೆ ಮಾಹಿತಿ ಕಲೆ ಹಾಕಿ ಅವಲೋಕಿಸುತ್ತಿದ್ದು, ತುಮಕೂರು ನಗರದಲ್ಲಿ ಮ್ಯಾಕ್ಸಿ ಕ್ಯಾಬ್, ಸೇರಿದಂತೆ ಬಸ್ ಕಾರ್ಯಾಚರಣೆ ಉತ್ತಮವಾಗಿ ನಡೆಯುತ್ತಿದ್ದು, ಪ್ರಯಾಣಿಕರ ಸಂಚಾರಕ್ಕೆ ತೊಂದರೆಯಾಗಿಲ್ಲ ಎಂದು ಹೇಳಿದರು.

ತೀವ್ರ ಸಮಸ್ಯೆಯಾದರೆ ಖಾಸಗಿ ಶಾಲಾ ವಾಹನಗಳ ಬಳಕೆ :

      ವಿಮೆ, ಫಿಟ್ನೆಸ್ ಸರ್ಟಿಫಿಕೆಟ್ ಹೊಂದಿರುವ ಖಾಸಗಿ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, 1 ತಿಂಗಳ ಟ್ಯಾಕ್ಸ್ ವಿನಾಯಿತಿ ನೀಡಿ ಪರ್ಮಿಟ್ ನೀಡಲಾಗಿದೆ. ನಿತ್ಯ ಕೆಎಸ್‍ಆರ್‍ಟಿಸಿ ಬಸ್‍ಗಳು ತುಮಕೂರು ವಿಭಾಗದಲ್ಲಿ 356 ಸಂಖ್ಯೆಯಲ್ಲಿ ಸಂಚರಿಸುುತ್ತಿದ್ದವು. ಜಿಲ್ಲೆಯಲ್ಲಿ 485 ಖಾಸಗಿ ಬಸ್‍ಗಳು ಇದ್ದು, ಸದ್ಯ 245 ಖಾಸಗಿ ಬಸ್, ಮ್ಯಾಕ್ಸಿಕ್ಯಾಬ್ ಗಳು ಸಂಚರಿಸುತ್ತಿವೆ, ಮುಷ್ಕರ ಮುಂದುವರೆದರೆ 300ಕ್ಕೂ ಹೆಚ್ಚು ಬಸ್‍ಗಳು ಕಾರ್ಯಾಚರಣೆ ಮಾಡಲಿವೆ. ತೀರಾ ತೊಂದರೆಯಾಗಿ ಖಾಸಗಿ ಶಾಲಾ ಬಸ್‍ಗಳಿಗೆ ಸಂಚಾರಕ್ಕೆ ಅವಕಾಶ ಕೊಡಲಾಗುವುದು. ಮುಖ್ಯಮಂತ್ರಿಗಳು, ಸಾರಿಗೆ ಸಚಿವರು ಸಮಾಲೋಚಿಸಿ ಸಮಸ್ಯೆ ಇತ್ಯರ್ಥಗೊಂಡರೆ ಸಾರ್ವಜನಿಕ ಸಾರಿಗೆ ಸಂಚಾರ ಎಂದಿನಂತೆ ಮುಂದುವರಿಯಲಿದೆ ಎಂದರು. ಈ ವೇಳೆ ಮೋಟಾರು ನಿರೀಕ್ಷಕ ಸದ್ರುಲ್ಲಾ ಷರೀಪ್, ವ್ಯವಸ್ಥಾಪಕ ದೇವರಾಜು ಇತರರಿದ್ದರು.

       ತುಮಕೂರು ಜಿಲ್ಲೆಯಲ್ಲಿ 1500 ಬಸ್‍ಗಳನ್ನು ಪರ್ಯಾಯ ವ್ಯವಸ್ಥೆಗೆ ಮೀಸಲಿರಿಸಿದ್ದು, ಮುಷ್ಕರ ಆರಂಭವಾದ ನಂತರ 500ಕ್ಕೂ ಹೆಚ್ಚು ಬಸ್‍ಗಳು ಸಂಚಾರ ಮಾಡುತ್ತಿದ್ದು, ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಿಲ್ಲ, ಸಾರ್ವಜನಿಕರು ಸಣ್ಣಪುಟ್ಟ ತೊಂದರೆಗಳಾದರೆ ಕೆಎಸ್‍ಆರ್‍ಟಿಸಿ ಸಹಾಯವಾಣಿ ಸಂಪರ್ಕಿಸಬಹುದಾಗಿದೆ. ವಾಹನದ ವಿಮೆ ಪತ್ರ ಮತ್ತು ಫಿಟ್‍ನೆಸ್ ಪತ್ರವನ್ನು ಇಟ್ಟುಕೊಂಡು ಸಂಚಾರ ಮಾಡಬಹುದಾಗಿದ್ದು, ಕೋವಿಡ್ ನಿಯಮಾನುಸಾರ ಹೆಚ್ಚು ಪ್ರಯಾಣಿಕರನ್ನು ಹತ್ತಿಸಿಕೊಳ್ಳದೇ, ನಿಗದಿತ ಸೀಟ್‍ಗಳನ್ನು ಮಾತ್ರ ಹಾಕಿಕೊಂಡು, ಸರ್ಕಾರದ ಶುಲ್ಕ ಪಡೆದು ಸಂಚಾರ ಮಾಡಬಹುದಾಗಿದೆ.

– ಎಸ್.ರಾಜು, ಪ್ರಾದೇಶಿಕ ಸಾರಿಗೆ ಅಧಿಕಾರಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link