ತುಮಕೂರು :

ಕೋವಿಡ್ ನೆಪದಲ್ಲಿ ಪರೀಕ್ಷೆಗಳನ್ನೇ ನಡೆಸದೆ ಮುಂದಿನ ತರಗತಿಗಳಿಗೆ ಎಲ್ಲರನ್ನು ಹಾಗೆಯೇ ಪಾಸ್ ಮಾಡಿ ಪ್ರವೇಶ ಕೊಡುವ ಪ್ರಕ್ರಿಯೆ ಶೈಕ್ಷಣಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಹದ್ದು. ಇನ್ನೂ ವರ್ಷಾನುಗಟ್ಟಲೇ ತರಗತಿ ಚಟುವಟಿಕೆಗಳ ನಿರ್ಬಂಧವೂ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನದ ಮೇಲೂ ಪರಿಣಾಮ ಬೀರುತ್ತದೆ…, ಇದು ಶಿಕ್ಷಣ ಕ್ಷೇತ್ರದ ತಜ್ಞರು, ವಿದ್ಯಾಸಂಸ್ಥೆ ಮುಖ್ಯಸ್ಥರು ಹಾಗೂ ಮಾನಸಿಕ ತಜ್ಞ ವೈದ್ಯರ ಒಕ್ಕೊರಲ ಅಭಿಮತ.
ಪ್ರಜಾಪ್ರಗತಿ ದಿನಪತ್ರಿಕೆ ಹಾಗೂ ಪ್ರಗತಿ ವಾಹಿನಿಂದ ಕೋವಿಡ್ ಸಂದರ್ಭದಲ್ಲಿ ಪರೀಕ್ಷೆ ಬೇಕೋ? ಬೇಡವೋ ಎಂಬ ಕುರಿತಂತೆ ಏರ್ಪಡಿಸಿದ್ಧ ವಿಶೇಷ ಸಂವಾದದಲ್ಲಿ ಭಾಗವಹಿಸಿದ್ದ ಶಿಕ್ಷಣ ಕ್ಷೇತ್ರದ ತಜ್ಞರಾದ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಸಿ.ಎನ್.ಜಯರಾಂರಾವ್, ತುಮಕೂರು ವಿವಿ ಸಮಾಜಕಾರ್ಯ ವಿಭಾಗ ಮುಖ್ಯಸ್ಥ ಪ್ರೊ.ಕೆ.ಜೆ.ಪರಶುರಾಮ್, ವಿದ್ಯಾವಾಹಿನಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಹಾಗೂ ಮಾನಸಿಕ ತಜ್ಞರಾದ ಸ್ನೇಹ ಮನೋವಿಕಾಸ ಕೇಂದ್ರದ ಮುಖ್ಯಸ್ಥ ಡಾ.ಲೋಕೇಶ್ಬಾಬು ಅವರು ಪರೀಕ್ಷೆ ರದ್ದಿನಿಂದ ಆಗುವ ಸಾಧಕ-ಬಾಧಕಗಳು, ಆನ್ಲೈನ್ ಶಿಕ್ಷಣದಿಂದ ಎದುರಿಸುತ್ತಿರುವ ಪರಿಣಾಮಗಳ ಕುರಿತು ವಸ್ತುನಿಷ್ಟ ಚರ್ಚೆ ನಡೆಸಿದರು.
ಮೌಲ್ಯಮಾಪನವಿಲ್ಲದೆಯೇ ತೇರ್ಗಡೆ ಸರಿಯದ ಕ್ರಮವಲ್ಲ : ಡಾ.ಸಿ.ಎನ್.ಜಯರಾಮ್ರಾವ್

ಪರೀಕ್ಷೆ ಎಂದರೇನು ಎನ್ನುವ ಮಾತಿನಿಂದಲೇ ಚರ್ಚೆ ಆರಂಭಿಸಿದ ಡಾ.ಸಿ.ಎನ್.ಜಯರಾಂರಾವ್ ಅವರು ಪರೀಕ್ಷೆ ಅಂದರೆ ಮೌಲ್ಯಮಾಪನ ವರ್ಷದಿಂದ ಕಲಿತ ವಿದ್ಯಾರ್ಥಿ ಏನು ಕಲಿತಿದ್ದಾನೆ. ಕಲಿತಿದ್ದನ್ನು ಎಷ್ಟರ ಮಟ್ಟಿಗೆ ಮನನ ಮಾಡಿಕೊಂಡಿದ್ದಾನೆಂದು ಪ್ರಶ್ನೋತ್ತರದ ಆಧಾರದಲ್ಲಿ ಮಾಪನ ಮಾಡುವ ವಸ್ತುನಿಷ್ಟವಾದ ಪ್ರಕ್ರಿಯೆ. ಒಂದು ತರಗತಿಯಿಂದ ಮತ್ತೊಂದು ತರಗತಿಗೆ ತೇರ್ಗಡೆ ಹೊಂದಲು ಪರೀಕ್ಷೆಯೇ ಆಧಾರ. ಈಗಾಗಲೇ ಕಳೆದ ವರ್ಷ ದಿಢೀರನೇ ವಕ್ಕರಿಸಿದ ಕೋವಿಡ್ನಿಂದ ಹತ್ತನೇ ತರಗತಿ, ದ್ವಿತೀಯ ಪಿಯು, ಅಂತಿಮ ಪದವಿ ಪರೀಕ್ಷೆ ಹೊರತುಪಡಿಸಿ ಉಳಿದ ತರಗತಿಗಳ ವಿದ್ಯಾರ್ಥಿಗಳನ್ನು ಹಾಗೆಯೇ ಮುಂದಿನ ತರಗತಿ, ಸೆಮಿಸ್ಟರ್ಗೆ ಪಾಸ್ ಮಾಡಲಾಗಿದೆ.
ಮತ್ತೆ ಈ ಬಾರಿಯೂ ಅಂತಹುದೇ ಸ್ಥಿತಿ ಉಂಟಾಗಿದ್ದು, ಶಿಕ್ಷಣ ವ್ಯವಸ್ಥೆಯ ಮೂಲ ಆಶಯಕ್ಕೆ ಧಕ್ಕೆ ಒದಗಿದೆ. ಒಂದನೇ ತರಗತಿಯ ಪರೀಕ್ಷೆಯನ್ನು ಕಳೆದ ಬಾರಿ ಬರೆಯದ ವಿದ್ಯಾರ್ಥಿ, 2ನೇ ತರಗತಿಯಲ್ಲೂ ಪರೀಕ್ಷೆ ಬರೆಯದೆ 3ನೇ ತರಗತಿಯಲ್ಲಿ ಕುಳಿತು ಏನು ಕಲಿಯಬೇಕು. ಶ್ರದ್ಧೆಯಿಂದ ಕಲಿತ ವಿದ್ಯಾರ್ಥಿಗಳು ಪರೀಕ್ಷೆ ಬಯಸುತ್ತಾರೆ. ಕ್ಲಾಸಿಗೆ ಗೈರಾದ ವಿದ್ಯಾರ್ಥಿಯೂ ಪರೀಕ್ಷೆಯಿಲ್ಲದೇ ಹಾಗೆಯೇ ತೇರ್ಗಡೆ ಮಾಡುವುದು ಸರಿಯಲ್ಲ. ಒಂದು ಬ್ಯಾಚ್ನ ವಿದ್ಯಾರ್ಥಿಗಳನ್ನು ಮೂರು ಬ್ಯಾಚ್ಗಳಾಗಿಸಿ ಕೋವಿಡ್ ನಿಯಮಾನುಸಾರವೇ ಪರೀಕ್ಷೆ ಬರೆಸಬಹುದಾಗಿದೆ. ಕೋವಿಡ್ ಕಾರಣದಿಂದ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಗತಿ ಮಾಡಿ ಅವರನ್ನು ಪರೀಕ್ಷೆಗೆ ಅಣಿಗೊಳಿಸಬೇಕು ಎಂದು ಸಲಹೆ ನೀಡಿದರು.
ಕೆಲವು ತಿಂಗಳುಗಳ ಹಿಂದೆ ಕೋವಿಡ್ ಕಡಿಮೆಯಾದ ಸಂದರ್ಭದಲ್ಲಿ ಶಾಲೆಗಳು ಪುನರಾರಂಭವಾದಾಗ ಮಕ್ಕಳು ತುಂಬಾ ಸಂತಸಪಟ್ಟಿದ್ದರು. ಇತ್ತೀಚೆಗೆ ಕೆಎಸ್ಆರ್ಟಿಸಿ ಮುಷ್ಕರದ ಸಂದರ್ಭದಲ್ಲಿ ಬಸ್ ಇಲ್ಲದಾಗಲೂ ಶೇ.95ರಷ್ಟು ಹಾಜರಾತಿ ಇರುತ್ತಿತ್ತು. ಮಕ್ಕಳು ಪೋಷಕರು ಶಾಲೆ, ಕಾಲೇಜು ಆರಂಭವನ್ನು ಬಯಸುತ್ತಿದ್ದಾರೆ. ವಿದ್ಯಾರ್ಥಿಯ ಜೀವನ ಗುರಿಸಾಧನೆಗೆ ಶಿಕ್ಷಣ, ಪರೀಕ್ಷೆ ಪ್ರಮುಖ ಮಾನದಂಡಗಳು. ಕೋವಿಡ್ ಎರಡು, ಮೂರು ಹೀಗೆ ಎಷ್ಟು ಅಲೆ ಬರುತ್ತದೆಂಬುದನ್ನು ತಿಳಿಯಲು ಸಾಧ್ಯವಿಲ್ಲ. ಪರೀಕ್ಷೆಯನ್ನು ರದ್ದು ಮಾಡುವ ಕ್ರಮದ ಹೊರತಾಗಿ ವಿದ್ಯಾರ್ಥಿಯ ಪ್ರತಿಭೆಯನ್ನು ಅಳೆಯುವ ಮಾನದಂಡವಾದ ಪರೀಕ್ಷೆ ನಡೆಸುವುದು ಸೂಕ್ತ. ಪಠ್ಯ ಕಡಿತದ ವಿಷಯವಾಗಿ ಗಣಿತ, ವಿಜ್ಞಾನದ ಸೂತ್ರಗಳನ್ನು ಯಾವ ರೀತಿ ಕಡಿಮೆ ಮಾಡಿ ವಿದ್ಯಾರ್ಥಿಗಳಿಗೆ ಹೇಳಿಕೊಡಲು ಸಾಧ್ಯ. ಸರಕಾರ ಪರೀಕ್ಷೆ ವಿಷಯವಾಗಿ ಆಗಲೀ, ಶಾಲಾ ಕಾಲೇಜು ಆರಂಭ, ತರಗತಿ ನಡೆಸುವ ವಿಷಯವಾಗಲೀ ಸಮರ್ಪಕ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪರೀಕ್ಷೆ ಬರೆದು ಉನ್ನತ ಸ್ಥಾನಕ್ಕೇರಬೇಕೆಂದು ವಿದ್ಯಾರ್ಥಿಗಳು ಬಯಸಿದ್ದಾರೆ : ಪ್ರೊ.ಪರಶುರಾಮ್

ತುಮಕೂರು ವಿವಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಜೆ.ಪರಶುರಾಮ್ ಮಾತನಾಡಿ ತುಮಕೂರು ವಿವಿ ವಿದ್ಯಾರ್ಥಿಗಳ್ಯಾರು ಪರೀಕ್ಷೆ ರದ್ದು ಮಾಡಿ ಎಂದು ಮನವಿ ಸಲ್ಲಿಸಿಲ್ಲ. ಗ್ರಾಮೀಣ ಭಾಗದ ಶೇ.80ರಷ್ಟು ವಿದ್ಯಾರ್ಥಿಗಳು ವಿವಿ ಸ್ನಾತಕ, ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಪರೀಕ್ಷೆ ಪಾಸು ಮಾಡಿ ಉನ್ನತಸ್ಥಾನಕ್ಕೇರಬೇಕೆಂದು ಆಶಧಯ ಇಟ್ಟುಕೊಂಡವರೇ ಆಗಿದ್ದಾರೆ. ನಮ್ಮ ಶಿಕ್ಷಣ ವ್ಯವಸ್ಥೆ ತರಗತಿ ಬೋಧನೆ, ಪರೀಕ್ಷಾ ಆಧಾರಿತವಾಗಿ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ.
ಆಫ್ಲೈನ್ ಪರಿಣಾಮಕಾರಿ:
ಪ್ರಸಕ್ತ ಕೋವಿಡ್ ಸಂದರ್ಭದಲ್ಲಿ, ಸರಕಾರಿ, ಖಾಸಗಿ ಎರಡು ಕಡೆ ಆನ್ಲೈನ್-ಆಫ್ಲೈನ್ ಅನುಗುಣವಾಗಿ ಮಕ್ಕಳಿಗೆ ಬೋಧಿಸುತ್ತಾ ಬರಲಾಗಿದೆ. ಆನ್ಲೈನ್ಗಿಂತ ಆಫ್ಲೈನ್ ಹೆಚ್ಚು ಪರಿಣಾಮಕಾರಿ. ಎಸ್ಸೆಸ್ಸೆಲ್ಸಿ ಓದುತ್ತಿರುವ 8.75 ಲಕ್ಷ ಮಕ್ಕಳು ರಾಜ್ಯದಲ್ಲಿದ್ದು, ಪರೀಕ್ಷೆಯಿಲ್ಲದೆ ಹೋದರೆ ಅವರು ಬಾಲಕಾರ್ಮಿಕರಾಗುವ ಅಪಾಯವಿದೆ. ಮುಂದಿನ ಶೈಕ್ಷಣಿಕ ಪ್ರವೇಶಾತಿಯ ಬಗ್ಗೆಯೂ ನಿರಾಸಕ್ತಿ ತಾಳಲಿದ್ದಾರೆ. ಇದರಿಂದ ಅವರ ಶಿಕ್ಷಣವೇ ಅರ್ಧಕ್ಕೆ ಮೊಟಕಾಗಲಿದೆ. ಪರೀಕ್ಷೆ ರದ್ದುಮಾಡಿದ ಸಂದರ್ಭದಲ್ಲಿ ಅವರಿಗೆ ಪರ್ಯಾಯವಾಗಿ ಕಲಿಕೆಯಲ್ಲಿ ತೊಡಗಿಸಲು ಏನು ಮಾಡಬೇಕು ಎಂಬುದರ ಬಗ್ಗೆ ಸುದೀರ್ಘ ಪರ್ಯಾವಲೋಚನೆಯ ಅಗತ್ಯವಿದೆ. ಪರೀಕ್ಷೆಯಿಲ್ಲದೇ ಹಾಗೇ ಪಾಸುಮಾಡುವ ಕ್ರಮ ಸರಿಯಲ್ಲ. ಉದಾಹರಣೆಗೆ ಕಠಿಣವಾದ ಇಂಗ್ಲೀಷ್ಭಾಷೆಯಲ್ಲಿ ಕೋವಿಡ್ ಇಲ್ಲದ ಸಂದರ್ಭದಲ್ಲಿ ಶೇ.35ರಷ್ಟು ಮಂದಿ ಉತ್ತೀರ್ಣರಾಗುತ್ತಿದ್ದರೆ, ಕೊರೊನಾ ಹೆಸರಲ್ಲಿ ಒಟ್ಟಿಗೆ 100ರಷ್ಟು ಫಲಿತಾಂಶ ಬರುತ್ತದೆಂಬುದನ್ನು ಹೇಗೆ ಒಪ್ಪಲು ಸಾಧ್ಯ. ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪರೀಕ್ಷೆ ನಡೆಯುವುದುಸೂಕ್ತ ಎಂದು ಅಭಿಪ್ರಾಯಿಸಿದರು.
ಬೇಡದ ವಿಷಯಗಳತ್ತ ಮಕ್ಕಳ ಚಿತ್ತ:
ಕಳೆದ ವರ್ಷ ಸರಕಾರ ಕಡಿತಗೊಳಿಸಿದ ಶೇ.30ರಷ್ಟು ಕಲಿಯದೆ ಉಳಿದ ಶೇ.20ರಷ್ಟು ಸೇರಿ ಶೇ.50ರಷ್ಟು ಪಠ್ಯದ ಮಾಹಿತಿ ವಿದ್ಯಾರ್ಥಿಗಳಿಗೆ ತಲುಪಲೇ ಇಲ್ಲ. ಆನ್ಲೈನ್ ಶಿಕ್ಷಣದ ಹೆಸರಲ್ಲಿ ರಾತ್ರಿ 1ರವರೆಗೆ ಮೊಬೈಲ್ ನೋಡುತ್ತಾ ತಮದಲ್ಲದ ವಿಷಯಗಳಿಗೆ ಹೆಚ್ಚು ಅಟ್ರಾಕ್ಟ್ ಆಗುತ್ತಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣಕ್ಕೆ ಬೇಕಾದ ಸರಿಯಾದ ವ್ಯವಸ್ಥೆಯೂ ಇಲ್ಲವಾಗಿದೆ. ಕಳೆದ ವರ್ಷ ಕೋವಿಡ್ 2ನೇ ಅಲೆ ಸಂಭವಿಸಬಹುದೆಂದು ತಿಳಿದಿದ್ದರೂ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಮುಂಜಾಗ್ರತಾ ವ್ಯವಸ್ಥೆಗಳು ಸಾಲದಾಗಿವೆ. ಆಕ್ಸಿಜನ್, ಆಂಬ್ಯುಲೆನ್ಸ್ ಅನ್ನೇ ಪೂರೈಸಲಾಗದ ಸ್ಥಿತಿಯಲ್ಲಿದ್ದೇವೆ. ಕೋವಿಡ್ ಹೆಸರಲ್ಲಿ ತಾತ್ಕಾಲಿಕ ವ್ಯವಸ್ಥೆಗಳಿಗೆ ಜೋತು ಬೀಳದೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕಿದೆ. ಖಾಸಗಿ ಶಾಲೆ ಶಿಕ್ಷಕರಂತೂ ಕೋವಿಡ್ನಿಂದ ದೊಡ್ಡ ಹೊಡೆತ ಅನುಭವಿಸಿದ್ದು, ಸೂಕ್ತ ರಕ್ಷಣೆಯಿಲ್ಲದೆ ಅತಂತ್ರರಾಗುತ್ತಿದ್ದಾರೆ. ಈ ವಿಷಯಗಳ ಬಗ್ಗೆ ವಸ್ತುನಿಷ್ಟ ಚರ್ಚೆಗೆ ವೇದಿಕೆ ಕಲ್ಪಿಸಿದ ಪ್ರಜಾಪ್ರಗತಿ-ಪ್ರಗತಿ ವಾಹಿನಿ ಕಾರ್ಯ ಶ್ಲಾಘನೀಯವೆಂದರು.
ಅಂತರದಿಂದಲೇ ಪರೀಕ್ಷಾ ಬರೆಯುವಾಗ ಪರೀಕ್ಷೆಗಳಿಗೇಕೇ ನಿರ್ಬಂಧ? : ಪ್ರದೀಪ್ಕುಮಾರ್

ತುಮಕೂರು ವಿವಿಸಿಂಡಿಕೇಟ್ ಮಾಜಿ ಸದಸ್ಯ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್.ಬಿ.ಪ್ರದೀಪ್ಕುಮಾರ್ ಸಂವಾದದಲ್ಲಿ ಮಾತನಾಡಿ ಪರೀಕ್ಷೆಯನ್ನು ಸಾಮಾನ್ಯವಾಗಿ ಒಂದು ಡೆಸ್ಕ್ಗೆ ಇಬ್ಬರನ್ನೇ ಕೂರಿಸಿ ಹಿಂದಿನಿಂದಲೂ ಬರೆಸಿಕೊಂಡು ಬರಲಾಗಿದೆ. ಕೋವಿಡ್ ನಿಯಮಗಳು ಅಂತರವನ್ನು ಕಾಪಾಡಿ ಎಂದೇ ಹೇಳುವುದು. ವಾಸ್ತವವಾಗಿ ಅಂತರ ಕಾಪಾಡುವಾಗ ಪರೀಕ್ಷೆಗಳನ್ನು ನಡೆಸಲು ಸರಕಾರಗಳು ಅನುವು ಮಾಡಿಕೊಡಬೇಕೆ ಹೊರತು ನಿರ್ಬಂಧಗಳನ್ನು ಹೇರಬಾರದು. ಕೋವಿಡ್ ಹೆಚ್ಚು ಬರೆ ಶಿಕ್ಷಣ ಕ್ಷೇತ್ರ ಅನುಭವಿಸಿದೆ. ಒಂದು ವರ್ಷ ಪರೀಕ್ಷೆ ಇಲ್ಲದಿದ್ದರೆ ಏನಾಗುತ್ತೇ ಎಂದು ಜನರು ಸಾಮಾನ್ಯ ಅರ್ಥದಲ್ಲಿ ಮಾತನಾಡಿದ್ದಾರೆ. ಆದರೆ ಅದರ ದೂರಗಾಮಿ ಪರಿಣಾಮಗಳ ಬಗ್ಗೆ ಸರಕಾರವಾಗಲೀ, ತಜ್ಞ ವಲಯದವರಾಗಲೀ ಗಂಭೀರ ಚಿಂತನೆ ಮಾಡುತ್ತಿಲ್ಲ. ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳೇ ಆಸಕ್ತಿ ಹೊಂದಿರುವಾಗ ರದ್ದು ಮಾಡುವುದರಲ್ಲಿ ಅರ್ಥವಿಲ್ಲ.
ಕೌಶಲ್ಯಪೂರ್ಣ ಮಕ್ಕಳ ಕೊರತೆಗೆ ನಾಂದಿ:
ಬೆಂಗಳೂರು ವಿವಿ ಸೇರಿದಂತೆ ಅನೇಕ ವಿವಿಗಳು ಪದವಿ ಪರೀಕ್ಷೆಗಳನ್ನು ರದ್ದು ಮಾಡಿದರೂ ತುಮಕೂರು ವಿವಿ ದೃಢ ನಿರ್ಧಾರ ಕೈಗೊಂಡು ಪರೀಕ್ಷೆ ಆಯೋಜಿಸಿತು. ಸಾರಿಗೆ ಮುಷ್ಕರದ ನಡುವೆಯೂ ಶೇ.98ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಪರೀಕ್ಷೆ ಮುಂದೂಡುವುದಾದರೆ ಎಷ್ಟು ತಿಂಗಳು ಮುಂದೂಡ್ತಿರಾ, ಇದು ವರ್ಷವೇ ತೆಗೆದುಕೊಳ್ಳುತ್ತದೆಯೇ ಎಂಬ ಗೊಂದಲಗೊಳಿವೆ. ಕೋವಿಡ್ ಕಾರಣಕ್ಕೆ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳಿಗೆ ಫೇಲ್ ಎಂದು ಕರೆಯದೇ ಅವರಿಗೆ ಸಾಂದರ್ಭಿಕ ತುರ್ತು ಎಂದು ಗುರುತಿಸಿ ಕಾಲಾವಾಕಶ ಕಲ್ಪಿಸಿ ಮತ್ತೆ ಪರೀಕ್ಷೆಗೆ ಅವಕಾಶ ಕಲ್ಪಿಸಿ. ಪ್ರತಿಭಾನ್ವಿತರನ್ನು, ಶೈಕ್ಷಣಿಕವಾಗಿ ಹಿಂದುಳಿದವರನ್ನು ಎಲ್ಲರನ್ನೂ ಒಂದೇ ತಕ್ಕಡಿಗೆ ಹಾಕಿ ತೇರ್ಗಡೆ ಮಾಡುವುದು ಸರಿಯಾದ ಪ್ರಕ್ರಿಯೆಯಲ್ಲ. ಇದರಿಂದ ದೇಶಕ್ಕೆ ಕೌಶಲ್ಯಭರಿತ ಮಕ್ಕಳ ಕೊರತೆ ಉಂಟಾಗುತ್ತದೆ. ಇನ್ನೂ ಆನ್ಲೈನ್ ತರಗತಿಗಳು ಯಶಸ್ವಿಯಾಗಬೇಕಾದರೆ ಶಿಕ್ಷಣ ಸಂಸ್ಥೆ, ವಿದ್ಯಾರ್ಥಿಗಳು ಇವರಿಬ್ಬರ ಬಳಿಯೂ ಆಧುನಿಕ ಉಪಕರಣಗಳ ವ್ಯವಸ್ಥೆಯಿರಬೇಕು. ಆಗ ಮಾತ್ರ ವ್ಯವಸ್ಥೆಯಶಸ್ವಿಯಾಗಲು ಸಾಧ್ಯ.
ಭಾರತದ ಶೇ.70ರಷ್ಟು ಮಂದಿಗೆ ಕೋವಿಡ್ ವ್ಯಾಕ್ಸಿನ್ ಹಾಕಲು ಡಿಸೆಂಬರ್ವರೆಗೆ ಬೇಕು ಎಂದು ವರದಿ ಹೇಳುತ್ತಿದೆ. ಅಲ್ಲಿಯವರೆಗೆ ಶೈಕ್ಷಣಿಕ ಚಟುವಟಿಕೆ ಬಂದ್ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕೋವಿಡ್ ಕಾರಣಕ್ಕೆ ಪರೀಕ್ಷೆ ರದ್ದು, ಮುಂದೂಡಿಕೆ ಸಮಂಜಸ ನಿರ್ಧಾರವಲ್ಲ : ಡಾ.ಲೋಕೇಶ್ಬಾಬು

ಸ್ನೇಹಮನೋವಿಕಾಸ ಕೇಂದ್ರ ಮಾನಸಿಕ ತಜ್ಞರಾದ ಡಾ.ಲೋಕೇಶ್ಬಾಬು ಮಾತನಾಡಿ, ಕೋವಿಡ್ ಕಾರಣಕ್ಕೆ ಪರೀಕ್ಷೆ ನಡೆಸುವುದಿಲ್ಲ ಎನ್ನುವ ಲಾಜಿಕ್ ಸರಿಯಲ್ಲ. ಪರೀಕ್ಷೆ ನಡೆಸದೆ ಒಂದು ತರಗತಿಯಿಂದ ಮತ್ತೊಂದು ತರಗತಿಗೆ ಹಾಗೆಯೇ ತೇರ್ಗಡೆ ಮಾಡಿದರೆ ಮಕ್ಕಳ ಚಿಂತನೆಯ ಮೇಲೆ ಪರಿಣಾಮಬೀರುತ್ತದೆ. ಅನೇಕ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು, ಶಹಬ್ಬಾಶ್ಗಿರಿ ಪಡೆಯಬೇಕೆಂಬ ಆಸೆ ಹೊಂದಿ ತಯಾರಿ ನಡೆಸಿರುತ್ತಾರೆ. ಯಾವುದೇ ತಯಾರಿಯಿಲ್ಲದೆ, ಅಲ್ಪ ತಯಾರಿ ನಡೆಸಿದವರುು ನನ್ನಂತೆಯೇ ಉತ್ತೀರ್ಣನಾಗಿ ಮುಂದಿನ ತರಗತಿಗೆ ಜೊತೆಯಾಗಿದ್ದಾನೆ ಎಂದರೆ ನಾವೇಕೆ ತಯಾರಿ ನಡೆಸಬೇಕು ಎಂಬ ಮನೋಭಾವ ಮಕ್ಕಳಲ್ಲಿ ಬೆಳೆಯಬಹುದು. ಅಲ್ಲದೇ ತರಗತಿಯಲ್ಲಿ ಮುಂದುವರಿಯಲು ಇಚ್ಚೆಯಿಲ್ಲದಿದ್ದವರನ್ನು ತೇರ್ಗಡೆ ಮಾಡಿ ಮುಂದಿನ ತರಗತಿಗೆ ಸುಲಭವಾಗಿ ನೂಕಿದರೆ ಪ್ರಯೋಜನವಾದರೂ. ಇದು ವಿದ್ಯಾರ್ಥಿಯ ಆಯ್ಕೆಯ ಕ್ಷೇತ್ರಗಳಿಂದ ವಿಮುಖರನ್ನಾಗಿಯೂ ಮಾಡುತ್ತದೆ. ಹಾಗಾಗಿ ಪರೀಕ್ಷೆ ಮುಂದೂಡಿಕೆ, ರದ್ದು ಇವೆಲ್ಲ ಅವೈಜ್ಞಾನಿಕ ನಿರ್ಧಾರಗಳಾಗುತ್ತವೆ. ಮಕ್ಕಳ ಪ್ರತಿಭೆ, ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಚುನಾವಣೆ ರ್ಯಾಲಿ, ಸಿನಿಮಾ, ಮಾಲ್ಗಳಲ್ಲಿ ಜನಸೇರಬಹುದು ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗಬಾರದೇ, ಸರಿಯಾದ ಪ್ರಿಕಾಶನರಿ ಕ್ರಮ ಕೈಗೊಂಡು ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.
ಮಕ್ಕಳು ಶಾಲೆ ಕಾಲೇಜಿಗೆ ವಿದ್ಯಾಭ್ಯಾಸಕ್ಕೆ ಮಾತ್ರವಲ್ಲ, ಸಹಪಾಠಿಗಳೊಂದಿಗೆ ಓಡನಾಟ, ಕ್ರೀಡೆ ಸಾಂಸ್ಕøತಿಕ ಚಟುವಟಿಕೆ ಇವೆಲ್ಲದಲ್ಲಿ ಆಸಕ್ತಿಯಿಂದ ಭಾಗವಹಿಸಲು ಹೋಗುತ್ತಾರೆ. ವಿದ್ಯಾರ್ಥಿಗೋಳ ಸಮಗ್ರ ವಿಕಸನಕ್ಕೂ ಇದೆಲ್ಲ ಅಗತ್ಯ, ಕೋವಿಡ್ ನಿಯಂತ್ರಣದ ಪರ್ಯಾಯ ಕ್ರಮ ಕೈಗೊಂಡು ಶಾಲಾ ಕಾಲೇಜು ಆರಂಭಿಸುವುದು ಸೂಕ್ತ. ಪರೀಕ್ಷೆ, ಶಾಲಾ ಕಾಲೇಜು ಬೇಡ ಅಂಥ ಯಾವ ಪೋಷಕರು ಹೇಳ್ತಿಲ್ಲ. ಸರಕಾರವೇ ಇಂತಹ ನಿರ್ಧಾರ ಮಾಡುತ್ತಿದೆ. ಕಳೆದ ವರ್ಷ ಶೈಕ್ಷಣಿಕ ವರ್ಷಕ್ಕೆ ಹೊಡೆತ ಬಿದ್ದಾಗಲೇ ಸರಕಾರ ಮುಂದಿನ ವರ್ಷ ಹೀಗಾಗದಂತೆ ಎಚ್ಚರಿಕೆಯ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಒಂದು ವರ್ಷ ಸರಕಾರಕ್ಕೆ ಸಮಯವಕಾಶವಿತ್ತು. ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ಸರಕಾರ ವಿಫಲವಾಗಿದೆ ಎಂದರು.
ಆನ್ಲೈನ್ ಕಲಿಕಾ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಏಕಾಗ್ರತೆ ಇಲ್ಲದಾಗಿದೆ. ಕೆಲವು ಮಕ್ಕಳು ಸರಿಯಾಗಿ ಕಲಿಯಲಾಗುತ್ತಿಲ್ಲ ಎಂದು ಆತ್ಮಹತ್ಯೆ ಹಾದಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಒಟ್ಟಾರೆ ವಿದ್ಯಾರ್ಥಿಗಳು ಸೂಕ್ತ ಶೈಕ್ಷಣಿಕ ಚಟುವಟಿಕೆಯಲ್ಲಿ ಭಾಗಿಯಾಗಲು ಸಾಧ್ಯವಾಗದೆ ಮಂಕಾಗಿದ್ದಾರೆ ಎಂದು ಲೋಕೇಶ್ ಬಾಬು ಅಭಿಪ್ರಾಯಿಸಿದರು.
(ಸಂದರ್ಶನ: ಸಾ.ಚಿ.ರಾಜ್ಕುಮಾರ್, ಎಸ್.ಹರೀಶ್ ಆಚಾರ್ಯ.)








