ತುಮಕೂರು :
ಈ ತಿಂಗಳ 1 5ರಿಂದ ದೇಶಾದ್ಯಂತ ವಾಹನಗಳಿಗೆ ಫಾಸ್ಟ್‍ಟ್ಯಾಗ್ ಅಳವಡಿಕೆಯನ್ನು ಕೇಂದ್ರ ಸಾರಿಗೆ ಇಲಾಖೆ ಕಡ್ಡಾಯಗೊಳಿಸಿ ಜಾರಿ ಮಾಡಿದೆ. ಫಾಸ್ಟ್‍ಟ್ಯಾಗ್ ಹೊಂದಿಲ್ಲದ ವಾಹನಗಳಿಗೆ ದುಪ್ಪಟ್ಟು ಶುಲ್ಕ ವಿಧಿಸುವ ಕಾರ್ಯ ಆರಂಭವಾಗಿದೆ. ನಗರದ ಹೊರವಲಯದ ಕ್ಯಾತ್ಸಂದ್ರ ಟೋಲ್ ಗೇಟ್‍ನಲ್ಲಿ ಫಾಸ್ಟ್‍ಟ್ಯಾಗ್ ಹೊಂದಿಲ್ಲದ ವಾಹನಗಳಿಗೆ ಎರಡರಷ್ಟು ಶುಲ್ಕ ವಿಧಿಸಲಾಗುತ್ತಿದೆ.
ದುಪ್ಪಟ್ಟು ಶುಲ್ಕ ನೀಡಲು ವಾಹನ ಮಾಲೀಕರು ಹಿಂದೇಟು ಹಾಕುತ್ತಿದ್ದು, ಇದರಿಂದಾಗಿ ಟೋಲ್ ಫ್ಲಾಜಾ ಬಳಿ ಚಾಲಕರು ವಾಹನ ನಿಲ್ಲಿಸಿ ಸಿಬ್ಬಂದಿಯೊಂದಿಗೆ ವಾದಕ್ಕಿಳಿಯುವುದು. ಪರಸ್ಪರ ಮಾತಿನ ಚಕಮಕಿ, ಕೈಕೈ ಮಿಲಾಯಿಸುವ ಮಟ್ಟಕ್ಕೂ ಹೋಯಿತು. ದಿನವಿಡೀ ಇಂತಹ ಪ್ರಕರಣಗಳು ನಡೆದೇ ಇದ್ದವು. ವಾಹನ ಚಾಲಕರು ಟೋಲ್ ಫ್ಲಾಜಾದಲ್ಲಿ ವಾಹನ ನಿಲ್ಲಿಸಿ ವಾದಕ್ಕಿಳಿದು, ಸಂಚಾರ ಸ್ಥಗಿತಗೊಳ್ಳುತ್ತಿತ್ತು. ವಾಹನ ಚಾಲಕರ ಆಕ್ರೋಶ ನಿಭಾಯಿಸಲು ಟೋಲ್ ಸಿಬ್ಬಂದಿ ಹೆಣಗಾಡುತ್ತಿದ್ದರು. ಆದರೆ, ಫಾಸ್ಟ್ ಟ್ಯಾಗ್ ಇಲ್ಲದವರು ದುಪ್ಪಟ್ಟು ಶುಲ್ಕ ಕಟ್ಟುವುದು ಮಾತ್ರ ಕಡ್ಡಾಯವಾಗಿತ್ತು. ಹಣ ತಂದಿಲ್ಲ, ಮತ್ತಿತರ ಕಾರಣ ಹೇಳಿ ಯಾವುದೇ ಶುಲ್ಕ ಪಾವತಿದೇ ಕೆಲವರು ಹೋದವರು. ಮುಂದಿನ ಬಾರಿ ಬರುವ ವೇಳೆಗೆ ಫಾಸ್ಟ್‍ಟ್ಯಾಗ್ ಅಳವಡಿಸಬೇಕು ಇಲ್ಲವೇ, ಡಬಲ್ ಶುಲ್ಕ ಕಟ್ಟಬೇಕು ಎಂದು ಟೋಲ್ ಸಿಬ್ಬಂದಿ ಎಚ್ಚರಿಕೆ ನೀಡಿದರು.
ಈಗಾಗಲೇ ಪೆಟ್ರೋಲ್ ದರ ದುಬಾರಿಯಾಗಿ ಕಂಗೆಟಿರುವ ಜನ, ಫಾಸ್ಟ್‍ಟ್ಯಾಗ್ ವ್ಯವಸ್ಥೆಯಿಂದ ಗೊಂದಲಕ್ಕೀಡಾಗಿ, ಕೆರಳಿ ಟೋಲ್ ಸಿಬ್ಬಂದಿ ಮೇಲೆ ಹರಿಹಾಯುತ್ತಿದ್ದರು.
ವಾಹನ ಮಾಲೀಕರು ಕೂಡಲೇ ಫಾಸ್ಟ್‍ಟ್ಯಾಗ್ ಸೌಲಭ್ಯ ಅಳವಡಿಸಿಕೊಳ್ಳಬೇಕು. ಖಾಸಗಿಯಾಗಲಿ, ವಾಣಿಜ್ಯ ಬಳಕೆಯ ವಾಹನವಾಗಲಿ ನಾಲ್ಕು ಚಕ್ರದ ಎಲ್ಲಾ ವಾಹನಗಳಿಗೂ ಫಾಸ್ಟ್‍ಟ್ಯಾಗ್ ಅಳವಡಿಕೆ ಕಡ್ಡಾಯವಾಗಿದೆ. ಫಾಸ್ಟ್‍ಟ್ಯಾಗ್ ಖರೀದಿಸಲು ಟೋಲ್ ಫ್ಲಾಜಾ ಬಳಿ ಕೌಂಟರ್ ತೆರೆಯಲಾಗಿದೆ. ವಾಹನಗಳ ಆರ್‍ಸಿ ದಾಖಲೆಗಳನ್ನು ನೀಡಿ, ಫಾಸ್ಟ್‍ಟ್ಯಾಗ್ ಖರೀದಿಸಬಹುದು. ಫಾಸ್ಟ್‍ಟ್ಯಾಗ್‍ಯ ಸ್ಟಿಕ್ಕರ್ ಅನ್ನು ವಾಹನದ ವಿಂಡ್ ಸ್ಕ್ರೀನ್ ಮೇಲೆ ಅಂಟಿಸಲಾಗುತ್ತದೆ. ಫಾಸ್ಟ್‍ಟ್ಯಾಗ್ ಖಾತೆಗೆ ನಿಮ್ಮ ಬ್ಯಾಂಕ್ ಅಕೌಂಟ್ ಅಥವಾ ಯುಪಿಐ ಐಡಿಯನ್ನು ಲಿಂಕ್ ಮಾಡಬೇಕಾಗುತ್ತದೆ. ಫಾಸ್ಟ್‍ಟ್ಯಾಗ್ ಅಳವಡಿಸಿಕೊಂಡರೆ ಟೋಲ್ ಫ್ಲಾಜಾ ಬಳಿ ನಿಮ್ಮ ವಾಹನವನ್ನು ನಿಲ್ಲಿಸುವ ಅಗತ್ಯವಿರುವುದಿಲ್ಲ. ಸ್ವಯಂಚಾಲಿತವಾಗಿ ಫಾಸ್ಟ್‍ಟ್ಯಾಗ್ ಶುಲ್ಕ ಕಡಿತವಾಗುತ್ತದೆ. ಆರ್‍ಎಫ್‍ಐಡಿ ತಂತ್ರಜ್ಞಾನದ ಮೂಲಕ ಫಾಸ್ಟ್‍ಟ್ಯಾಗ್ ಕಾರ್ಯನಿರ್ವಹಿಸುತ್ತದೆ. ಆಯ್ದ 25 ಬ್ಯಾಂಕ್‍ಗಳಲ್ಲಿ ಫಾಸ್ಟ್‍ಟ್ಯಾಗ್ ಖರೀದಿಸಲೂ ಅವಕಾಶ ನೀಡಲಾಗಿದೆ.
ಈ ಮೊದಲು ಸ್ಥಳೀಯ ವಾಹನ ಮಾಲೀಕರಿಗೆ ವಾಹನ ಪಾಸ್‍ಗಳನ್ನು ನೀಡಲಾಗಿತ್ತು. ಫಾಸ್ಟ್‍ಟ್ಯಾಗ್ ಕಡ್ಡಾಯವಾದ ಮೇಲೆ ಪಾಸ್‍ಗಳಿಗೆ ಮಾನ್ಯತೆ ಇದೆಯೇ, ಇಲ್ಲವೇ ಎಂಬ ಗೊಂದಲವಿದೆ.
ಈ ಹಿಂದೆ ಪಾಸ್ ಪಡೆದಿದ್ದ ಸ್ಥಳೀಯ ವಾಹನಗಳಿಗೂ ಫಾಸ್ಟ್‍ಟ್ಯಾಗ್ ಅಳವಡಿಸುವುದು ಕಡ್ಡಾಯವಾಗಿದೆ. ಆದರೆ, ಆ ವಾಹನ ಮಾಲೀಕರು ಸ್ಥಳೀಯರಾಗಿದ್ದು, ನಿಯಮಿತವಾಗಿ ಟೋಲ್ ಫ್ಲಾಜಾ ಮೂಲಕ ಸಂಚಾರ ಮಾಡುತ್ತಾರೆ ಎಂಬುದು ಖಚಿತವಾದರೆ, ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತದೆ. ಉದಾಹರಣೆಗೆ ಕ್ಯಾಂತ್ಸಂದ್ರ ಟೋಲ್‍ನಿಂದ ದಾಬಸ್‍ಪೇಟೆ ಕಡೆಗೆ ಸುಮಾರು 5 ಕಿಲೋಮೀಟರ್ ಸುತ್ತಮುತ್ತಲಿನ ವಿಳಾಸದ ವಾಹನ ಮಾಲಿಕರು ಫಾಸ್ಟ್‍ಟ್ಯಾಗ್ ಶುಲ್ಕದಿಂದ ವಿನಾಯಿತಿ ಪಡೆಯಬಹುದು. ತಮ್ಮ ವಾಹನದ ಆರ್‍ಸಿ ದಾಖಲಾತಿ, ಮಾಲೀಕರ ಆಧಾರ್ ಸಂಖ್ಯೆ, ವಿಳಾಸ ಮತ್ತಿತರ ಅಗತ್ಯ ದಾಖಲೆ ಒದಗಿಸಿದರೆ, ಅವರ ವಾಹನಕ್ಕೆ ಫಾಸ್ಟ್‍ಟ್ಯಾಗ್ ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತದೆ. ಇಂತಹ ವಾಹನಗಳು ಟೋಲ್ ಹಾದುಹೋದರೂ ಶುಲ್ಕ ಕಡಿತವಾಗುವುದಿಲ್ಲ ಎಂದು ಕ್ಯಾತ್ಸಂದ್ರ ಟೋಲ್‍ನ ಉಸ್ತುವಾರಿ ದಕ್ಷಣಮೂರ್ತಿ ಹೇಳಿದರು.
ಕಾಲೇಜು, ಕಾರ್ಖಾನೆ, ನಿತ್ಯ ವ್ಯವಹಾರಕ್ಕಾಗಿ ಹತ್ತಿರದ ಪ್ರದೇಶಗಳಿಗೆ ಹೋಗಿಬರುವ ವಾಹನಗಳಿಗೂ ಫಾಸ್ಟ್‍ಟ್ಯಾಗ್ ಕಡ್ಡಾಯವಾಗಿ ಅಳಬಡಿಸಬೇಕು. ಇಂತಹ ವಾಹನಗಳ ಮಾಲೀಕರಿಗೆ ಫಾಸ್ಟ್‍ಟ್ಯಾಗ್ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುತ್ತದೆ ಎಂದು ಹೇಳಿದರು.
ಫಾಸ್ಟ್‍ಟ್ಯಾಗ್ ಹಿಂಪಡೆಯುವ ಅಥವಾ ಜಾರಿಗೆ ಮತ್ತೊಂದು ಕಾಲಾವಕಾಶ ನೀಡುವ ಅವಕಾಶವೇ ಇಲ್ಲ, ಈ 15ರಿಂದ ಕಡ್ಡಾಯವಾಗಿ ಜಾರಿಯಲ್ಲಿರುತ್ತದೆ. ಎಲ್ಲಾ ವಾಹನ ಮಾಲೀಕರು ಫಾಸ್ಟ್‍ಟ್ಯಾಗ್ ಖರೀದಿ ಮಾಡಬೇಕು ಎಂದು ಕೇಂದ್ರ ಸಾರಿಗೆ ಇಲಾಖೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ