ಆಡಳಿತವೇ ರಾಜ್ಯದಲ್ಲಿಲ್ಲ, ವಿಧಾನಸಭೆ ವಿಸರ್ಜಿಸುವುದೇ ಒಳ್ಳೆಯದು

 ತುಮಕೂರು : 

      ರಾಜ್ಯದಲ್ಲಿ ಮುಖ್ಯಮಂತ್ರಿ-ಮಂತ್ರಿಗಳ ನಡುವೆ ಸಮನ್ವಯವೇ ಇಲ್ಲದೇ ಆಡಳಿತ ಕುಸಿದಿದ್ದು, ಸ್ವಜನಪಕ್ಷಪಾತ, ಅನುದಾನ ಸ್ಥಗಿತದಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಈ ಸರಕಾರ ತೀವ್ರ ಹಣಕಾಸು ಮುಗ್ಗಟ್ಟು ಎದುರಿಸುತ್ತಿದ್ದು, ಸುಸ್ಥಿರ ಆಡಳಿತಕ್ಕಾಗಿ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವುದೇ ಒಳ್ಳೆಯದು ಎಂದು ಮಾಜಿ ಉಪಮುಖ್ಯಮಂತ್ರಿ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ಅಭಿಪ್ರಾಯಪಟ್ಟರು.

      ಪ್ರಜಾಪ್ರಗತಿಯೊಂದಿಗೆ ಮಾತನಾಡಿದ ಅವರು ರಾಜ್ಯ ಕಠಿಣ ಪರಿಸ್ಥಿತಿ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಸುಸ್ಥಿರ ಆಡಳಿತ ನೀಡುವ ಸರಕಾರದ ಅವಶ್ಯಕತೆ ಇದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವ, ಪುತ್ರನ ಹಸ್ತಕ್ಷೇಪದ ವಿರುದ್ಧ ಆಡಳಿತ ಪಕ್ಷದ ಸಚಿವರು, ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಆಡಳಿತಾರೂಢ ಶಾಸಕರ ವಿಶ್ವಾಸವನ್ನೇ ಕಳೆದುಕೊಂಡಿರುವ ಮುಖ್ಯಮಂತ್ರಿ ಒಂದು ನಿಮಿಷವೂ ತಮ್ಮ ಹುದ್ದೆಯಲ್ಲಿ ಮುಂದುವರಿಯಬಾರದು. ರಾಜೀನಾಮೆ ನೀಡಿ ಚುನಾವಣೆ ಎದುರಿಸಬೇಕು ಎಂದು ಒತ್ತಾಯಿಸಿದರು.

ಉಪಚುನಾವಣೆಗಳಲ್ಲಿ ಬಿಜೆಪಿಗೆ ತಕ್ಕ ಪಾಠ: ಕೇಂದ್ರದ ಜನವಿರೋಧಿ, ರೈತವಿರೋಧಿ ಆಡಳಿತದಿಂದ ಬೇಸತ್ತಿರುವ ದೇಶದ ಜನತೆ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಪ್ರಾದೇಶಿಕ, ವಿಪಕ್ಷ ಕಾಂಗ್ರೆಸ್ ಮೇಲುಗೈ ಸಾಧಿಸುವ ವಿಶ್ವಾಸವಿದ್ದು, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳದಲ್ಲಿ ಅಸ್ಥಿತ್ವ ಪಡೆಯಲು ಯತ್ನಿಸುತ್ತಿರುವ ಬಿಜೆಪಿಗೆ ಭ್ರಮ ನಿರಸನವಾಗಲಿದೆ. ರಾಜ್ಯದಲ್ಲಿ ಸಹ 2 ವಿಧಾನಸಭೆ ಕ್ಷೇತ್ರದ ಉಪಚುನಾವಣೆ., 1 ಲೋಕಸಭೆ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿದ್ದು, ಕೋವಿಡ್ ಸಂದರ್ಭದಲ್ಲಿ ಕೆಲಸವಿಲ್ಲದೆ, ಆದಾಯವಿಲ್ಲದೆ ಕಂಗಾಲಾಗಿರುವ ಜನತೆ ತಮ್ಮ ಕಷ್ಟಕ್ಕೆ ಸ್ಪಂದಿಸದ ಸರಕಾರದ ವಿರುದ್ಧ ನಿಲ್ಲಲಿದ್ದಾರೆ ಎಂದು ಹೇಳಿದರು.

ಸ್ಮಾರ್ಟ್‍ಸಿಟಿಯಲ್ಲ, ಡಸ್ಟ್ ಸಿಟಿಯಾಗುತ್ತಿದೆ :

      ಈ ಬಾರಿ ಬಜೆಟ್‍ನಲ್ಲಿ ತುಮಕೂರು ಜಿಲ್ಲೆಯ ಪಾಲಿಗೆ ನಯಾಪೈಸೆ ಹೆಚ್ಚಿನ ಅನುದಾನ ಕೊಟ್ಟಿಲ್ಲ. ನಾನು ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ತುಮಕೂರು ನಗರದ ಅಭಿವೃದ್ಧಿಗೆ 125 ಕೋಟಿ ವಿಶೇಷ ಅನುದಾನ ಕೊಡಿಸಿದ್ದೆ. ಪ್ರಮುಖವಾದ ಎತ್ತಿನಹೊಳೆ ಯೋಜನೆಗೆ 500 ಕೋಟಿ ಅನುದಾನ ಘೋಷಿಸಿದ್ದಾರೆ. ಇದು ಹಳೆಯ ಬಿಲ್ ಪಾವತಿಗೂ ಸಾಲುವುದಿಲ್ಲ. ಸ್ಮಾರ್ಟ್‍ಸಿಟಿಯಡಿ ಸಾವಿರ ಕೋಟಿಗೂ ಅಧಿಕ ಮೊತ್ತದ ಕಾಮಗಾರಿ ತುಮಕೂರಿನಲ್ಲಿ ನಡೆಯುತ್ತಿದ್ದು, ಅಸಮರ್ಪಕ ಕಾಮಗಾರಿಯಿಂದಾಗಿ ಇಡೀ ತುಮಕೂರು ನಗರ ಹಾಳಾಗುತ್ತಿದೆ. ಎಲ್ಲೆಂದರಲ್ಲಿ ರಸ್ತೆ ಅಗೆದು ಸಾರ್ವಜನಿಕರ ಓಡಾಟಕ್ಕೆ ತೊಂದರೆ, ಡಸ್ಟ್ ಸಿಟಿಯಾಗಿ ಪರಿವರ್ತನೆಯಾಗಿದೆ ಎಂದು ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.

ಶಾಲೆ ವಿಷಯದಲ್ಲಿ ಮಕ್ಕಳು, ಪೋಷಕರಲ್ಲಿ ಧ್ವಂಧ್ವ

      ರಾಜ್ಯ ಸರಕಾರದ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ನಡುವೆ ಸಮನ್ವಯ ಸಾಧಿಸದೆ ಕೋವಿಡ್‍ವ ಸಂದರ್ಭದಲ್ಲಿ ಶಾಲಾ ತರಗತಿಗಳ ಆರಂಭದಿಂದಲೂ ಧ್ವಂಧ್ವತೆ ಕಂಡುಬಂದಿದ್ದು, ಶಿಕ್ಷಣ ಸಚಿವರು ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ. ಇದರ ಪರಿಣಾಮ ಮಕ್ಕಳು, ಪೋಷಕರು, ಶಿಕ್ಷಣ ಸಂಸ್ಥೆಗಳು ಎದುರಿಸುವಂತಾಗಿದ್ದು, ಸರಕಾರ ಮೊದಲು ತರಗತಿ ಆರಂಭ, ಸ್ಥಗಿತ ವಿಷಯದಲ್ಲಿ ಸಮಾಲೋಚಿಸಿ ಸ್ಪಷ್ಟ ತೀರ್ಮಾನಕ್ಕೆ ಬರಬೇಕು ಎಂದು ಪರಮೇಶ್ವರ್ ಹೇಳಿದರು.

      ನಾನೂ ಮುಖ್ಯಮಂತ್ರಿ ಸ್ಥಾನಕ್ಕೇರಬೇಕೆಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಬಯಸಿದ್ದಾರೆ. ಅದು ಅವರ ಅನಿಸಿಕೆ. ಈ ವಿಷಯವಾಗಿ ಈಗ ಏನೂ ಹೇಳಲಾರೆ. ಮುಂದೆ ಚುನಾವಣೆ ನಡೆದು ಮೊದಲು ಕಾಂಗ್ರೆಸ್ ಅಧಿಕಾರ ಹಿಡಿಯಬೇಕು. ಆಗ ರಾಜಣ್ಣ ಅವರು ಅವರ ನೆಚ್ಚಿನ ಸಹಕಾರ ಕ್ಷೇತ್ರದ ಸಚಿವರಾಗಲಿ.

-ಡಾ.ಜಿ.ಪರಮೇಶ್ವರ ಮಾಜಿ ಉಪಮುಖ್ಯಮಂತ್ರಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap