ತುಮಕೂರು : ಅನುದಾನ ಸ್ಥಗಿತದ ರಾಜಕೀಯದಲ್ಲೂ ಗ್ರಾಮಾಂತರ ಅಭಿವೃದ್ಧಿ!

 ತುಮಕೂರು :

      ಆಡಳಿತಾರೂಢ ಬಿಜೆಪಿ ಸರಕಾರದಲ್ಲಿ ವಿಪಕ್ಷ ಶಾಸಕರ ಕ್ಷೇತ್ರಗಳಿಗೆ ಅನುದಾನವೇ ಬಿಡುಗಡೆ ಮಾಡುತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ನೀಡಿದರೂ ಅನುದಾನ ಬಿಡುಗಡೆಯಲ್ಲಿ ರಾಜಕಾರಣ ಮಾಡಲಾಗುುತ್ತಿದೆ. ಬಿಡುಗಡೆಯಾಗಿರುವ ಅನುದಾನಗಳಿಗೆ ಕೊಕ್ಕೆ ಹಾಕಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹೋರಾಟ ಮಾಡಿ, ಪಟ್ಟು ಹಿಡಿದು ಗಾಮಾಂತರ ಕ್ಷೇತ್ರÀದ ಅಭಿವೃದ್ಧಿಗೆ ಅನುದಾನ ತಂದು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.

      ಪ್ರಜಾಪ್ರಗತಿ ಹಾಗೂ ಪ್ರಗತಿ ವಾಹಿನಿಯಿಂದ ಸೋಮವಾರ ಏರ್ಪಡಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕ್ಷೇತ್ರದ ಮತದಾರರ ಸಮಸ್ಯೆ ಆಲಿಸಿದ ಅವರು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಾನು ಶಾಸಕನಾದ ಬಳಿಕ ಕ್ಷೇತ್ರದ ಹಲವು ಸಮಸ್ಯೆಗಳು ಜ್ವಲಂತವಾಗಿರುವುದನ್ನು ಕಂಡೆ. ಮಣ್ಣಿನ ರಸ್ತೆಯನ್ನೇ ಕಾಣದ ಹಲವು ಹಳ್ಳಿಗಳಿಗೆ ಸಿ.ಸಿ.ರಸ್ತೆ ಮಾಡಿಸಲಾಗಿದ್ದು, ನೀರಾವರಿ ಸೌಲಭ್ಯದಿಂದ ವಂಚಿತವಾದ ಹೆಬ್ಬೂರು ಗೂಳೂರು ಹೋಬಳಿ, ಕೈಗಾರಿಕಾ ಪ್ರದೇಶಕ್ಕೆ ಮೂಲ ಸೌಕರ್ಯ, ನಾಮದಚಿಲುಮೆ, ದೇವರಾಯನದುರ್ಗ ಸೇರಿದಂತೆ ಕ್ಷೇತ್ರದ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳು, ಶಾಲೆ, ಆಸ್ಪತ್ರೆಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿರುವುದಾಗಿ ತಿಳಿಸಿದರು.

      ಕ್ಷೇತ್ರದ ವಿವಿಧೆಡೆಯಿಂದ ಮುಂಬಾರಕ್, ಅಬ್ಬಾಸ್, ಪಾಲನೇತ್ರಯ್ಯ, ಶಾಂತಕುಮಾರಿ, ಪ್ರಸಾದ್, ರಾಮಕೃಷ್ಣಯ್ಯ, ಮಾಜಿ ಉಪಮೇಯರ್ ಟಿ.ಆರ್.ನಾಗರಾಜು ಸೇರಿದಂತೆ ಕರೆ ಮಾಡಿದ ಹಲವರು ಕೋವಿಡ್ ಸಂದರ್ಭದ ಶಾಸಕರ ಸೇವೆಯನ್ನು ಶ್ಲಾಘಿಸಿದರು. ಇದಕ್ಕೆ ಭಾವನಾತ್ಮಕವಾಗಿಯೇ ಪ್ರತಿಕ್ರಿಯಿಸಿದ ಗೌರಿಶಂಕರ್ ಅವರು ಕ್ಷೇತ್ರದ ಮತದಾರರ ಕಷ್ಟ,ಕಣ್ಣೀರಿಗೆ ಸದಾ ಸ್ಪಂದಿಸುತ್ತಾ ಬಂದಿದ್ದೇನೆ. ಕೋವಿಡ್ ಎರಡು ಅಲೆಗಳಲ್ಲೂ ಸಹಸ್ರಾರು ದಿನಸಿ, ಮೆಡಿಕಲ್ ಕಿಟ್, ಆಂಬುಲೆನ್ಸ್ ಸೇವೆ, ಆಕ್ಸಿಜನ್ ನೆರವು ಹೀಗೆ ಎಲ್ಲಾ ತರಹದ ಸೇವೆಯನ್ನು ನಮ್ಮ ಯುವಕರ ಸ್ವಯಂ ಸೇವಕರ ಪಡೆಯನ್ನು ಕಟ್ಟಿಕೊಂಡು ನೆರವೇರಿಸಿದ್ದು, ಕೋವಿಡ್ ಸಂದರ್ಭದ ಸೇವೆ ಹೆಚ್ಚು ಆತ್ಮತೃಪ್ತಿ ತಂದಿದೆ. ಮೂರನೇ ಅಲೆಗೂ ಗ್ರಾಮಾಂತರ ಕ್ಷೇತ್ರದ ಜನರು ಹೆದರಬೇಕಿಲ್ಲ. ತಾವೂ ನಿರ್ಮಿಸುತ್ತಿರುವ ಬಳ್ಳಗೆರೆ ಮನೆಯಲ್ಲಿ ಕೋವಿಡ್ ಮಕ್ಕಳ ಆರೈಕೆ ಕೇಂದ್ರವನ್ನು ತೆರೆದು ಐಸಿಯು, ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ವಿಶ್ವಾಸದ ಮಾತುಗಳನ್ನಾಡಿದರು.

ಕಚೇರಿಗೆ ಒಂದು ಪ್ರತಿ ಸಲ್ಲಿಸಿ:

      ಕ್ಷೇತ್ರದ ವಿವಿಧೆಡೆಯಿಂದ ಕರೆ ಮಾಡಿ ಸಮಸ್ಯೆಯನ್ನು ಹೇಳಿಕೊಂಡ ಸಾರ್ವಜನಿಕರಿಗೆ ಸ್ಥಳದಲ್ಲೇ ಪರಿಹಾರ ಕ್ರಮದ ಬಗ್ಗೆಯೂ ತಿಳಿಸಿದ ಶಾಸಕರು ಸರಕಾರಿ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಇಲಾಖೆಗಳಿಗೆ ನೀಡಿದ ಅರ್ಜಿ ವಿಲೆವಾರಿ ಆಗದಿದ್ದಲ್ಲಿ ತಮ್ಮ ಕಚೇರಿಗೆ ಒಂದು ಪ್ರತಿನೀಡಿ ಗಮನಕ್ಕೆ ತಂದರೆ ಸಮಸ್ಯೆ ಇತ್ಯರ್ಥಕ್ಕೆ ಕ್ರಮವಹಿಸಲಾಗುವುದು. ಇದೇ ಗುರುವಾರ ತಾಪಂ ಆವರಣದ ಶಾಸಕರ ಕಚೇರಿಯಲ್ಲಿ ಲಭ್ಯವಿರಲಿದ್ದು, ಫೋನ್ ಇನ್‍ಗೆ ಕರೆ ಮಾಡಿದವರು ನೇರ ತಮ್ಮ ಬಳಿ ಬಂದು ಸಮಸ್ಯೆ ಬಗ್ಗೆ ಚರ್ಚಿಸಬಹುದು ಎಂದು ಭರವಸೆ ನೀಡಿದರು.
ಗೂಳೂರು-ಗೂಳೆಹರಿವೆ ರಸ್ತೆ ಸಮಸ್ಯೆ: ನಾಗವಲ್ಲಿಯಿಂದ ಕರೆ ಮಾಡಿದ ಜಬೀವುಲ್ಲಾ, ನಾಗೇಶ್ ಅವರು ತ್ಯಾಜ್ಯದ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದರೆ, ಕೊಟ್ಟಿಗೆಗೊಲ್ಲಹಳ್ಳಿ ರಾಜು ಎಂಬುವರು ದೊಡ್ಡ ಬಸವಣ್ಣನ ಗುಡಿ ರಸ್ತೆ ಅಭಿವೃದ್ಧಿ ಕುರಿತು, ಗೂಳೆಹರವಿ ರಂಗಸ್ವಾಮಿ ಅವರು ಗೂಳೂರು-ಗೂಳೆಹರವಿ ರಸ್ತೆ ಡಾಂಬರೀಕರಣ ಹಲವು ವರ್ಷಗಳಿಂದ ಆಗದಿರುವ ಬಗ್ಗೆ ಶಾಸಕರ ಗಮನ ಸೆಳೆದರು. ಪ್ರತಿಕ್ರಿಯಿಸಿದ ಶಾಸಕರು ನಾಗವಲ್ಲಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಆಗುತ್ತಿದ್ದು, ಸಮಸ್ಯೆ ಬಗೆಹರಿಯಲಿದೆ. ಬಸವಣ್ಣ ಸರ್ಕಲ್ ರಸ್ತೆ ಅಭಿವೃದ್ಧಿಗೆ ಸಮ್ಮಿಶ್ರ ಸರಕಾರದಲ್ಲಿ ಬಿಡುಗಡೆ ಮಾಡಿಸಿದ್ದ 11.50 ಕೋಟಿ ಅನುದಾನ ಸ್ಥಗಿತಗೊಳಿಸಲಾಗಿತ್ತು.ಮತ್ತೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ ಬಿಡುಗಡೆ ಮಾಡಿಸಿದ್ದು, ಇನ್ನೂ 15 ದಿನದಲ್ಲಿ ಚಾಲನೆ ಕೊಡಿಸಲಾಗುವುದು. ಗೂಳೆಹರಿವೆ-ಗೂಳೂರು ರಸ್ತೆ ಅಭಿವೃದ್ಧಿಗೆ ಎರಡೂವರೆ ಕೋಟಿ ಬಿಡುಗಡೆ ಮಾಡಿಸಲಾಗಿದೆ. ಶೀಘ್ರ ಕ್ರಮ ವಹಿಸಲಾಗುವುದು ಎಂದರು.

ಕರೆಯಲ್ಲೇ ಮನೆ ಮಂಜೂರಾತಿ ಭರವಸೆ:

      ಬೆಳಗುಂಬದ ಭಾರತಿ ಎಂಬುವರು ಸಂಕಷ್ಟ ಹೇಳಿಕೊಂಡು ತಮಗೆ ವಸತಿ ಯೋಜನೆಯಲ್ಲಿ ಮನೆ ಮಂಜೂರು ಮಾಡುವಂತೆ ಕೋರಿದಕ್ಕೆ ನನ್ನ ಕಚೇರಿಗೆ ಅರ್ಜಿ ಕೊಡಿ. ಡಿಐಸಿ, ಮೀನುಗಾರಿಕೆ ಇಲಾಖೆ ಯೋಜನೆಯಡಿ ಮನೆ ಹಾಕಿಸಿಕೊಡುವ ಭರವಸೆ ನೀಡಿದರು. ಅಜ್ಜಗೊಂಡನಹಳ್ಳಿ ಶಿವರಾಂ ಎಂಬುವರು ವಡ್ಡರಗಟ್ಟೆ ರಸ್ತೆ ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸಿದರೆ ಪಂಡಿತನಹಳ್ಳಿ ನರಸಿಂಹಮೂರ್ತಿ ಎಂಬ ವಿಶೇಷಚೇತನರು ಕರೆ ಮಾಡಿ ತಮಗೆ ನಾಲ್ಕುಚಕ್ರದ ವಾಹನ ಕೊಡಿಸುವಂತೆ ಬೇಡಿಕೆ ಇಟ್ಟರು. ಜಿಲ್ಲಾಧಿಕಾರಿಗಳ ಸಮಿತಿ ವಾಹನ ಮಂಜೂರಾತಿ ನೀಡಬೇಕಿದ್ದು,ಅರ್ಜಿ ಕೊಡಿ ಮಂಜೂರು ಮಾಡಿಸುವೆ. ವಡ್ಡರಗಟ್ಟೆ ರಸ್ತೆ ಅಭಿವೃದ್ಧಿಗೆ 2.50 ಕೋಟಿ ಮಂಜೂರಮಾಡಿಸಲಾಗಿದೆ. ಕೋವಿಡ್‍ನಿಂದ ನಿಧಾನವಾಗಿದೆ ಎಂದರು.

ಮಲ್ಲಸಂದ್ರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: 

      ಹೆಗ್ಗೆರೆಯ ಶಾಂತಕುಮಾರಿ ಎಂಬುವರು 15ಸಾವಿರ ಜನರಿರುವ ಈ ಪ್ರದೇಶಕ್ಕೆ ಪಿಎಚ್‍ಸಿ ಬೇಕೆಂದು ಬೇಡಿಕೆ ಇಟ್ಟು, ಎಲ್ಲಾರಸ್ತೆಗಳನ್ನು ಸಿ.ಸಿ.ರಸ್ತೆ ಮಾಡಿರುವುದಕ್ಕೆ ಅಭಿನಂದಿಸಿದರು.ಪ್ರತಿಕ್ರಿಯಿಸಿದ ಶಾಸಕರು ತುಮಕೂರು ತಾಲೂಕಿಗೆ ಸಂಬಂಧಿಸಿದಂತೆಯೇ ಮಲ್ಲಸಂದ್ರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಿಸಲಾಗಿದೆ ಎಂದರು.

    ಬಸ್ ವಿಸ್ತರಣೆಗೆ ಮನವಿ:

      ಹರಳೂರು ಮಂಜುನಾಥ್ ಎಂಬುವರು ಕರೆ ಮಾಡಿ ಹರಳೂರಿಗೆ ಬರುವ ಬಸ್ ಅನ್ನು ರೈತರಪಾಳ್ಯದವರೆಗೆ ವಿಸ್ತರಿಸಬೇಕೆಂದು ಕೋರಿದರು. ಗುರುವಾರವೇ ಈ ಬಗ್ಗೆ ಚಾಲನೆಗೆ ಕ್ರಮ ವಹಿಸುವುದಾಗಿ ತಿಳಿಸಿದ ಶಾಸಕರು ಹಿರೇಹಳ್ಳಿ-ಬೈಚಾಪುರ ರಸ್ತೆ ಅಭಿವೃದ್ಧಿ ಮಾಡಿಕೊಡುವುದಾಗಿ ತಿಳಿಸಿದರು.

ಮುಂದಿನ ವರ್ಷ ಮೈದಾಳಕ್ಕೆ ಹೇಮೆ ನೀರು:

      ರಮೇಶ್ ಮಂಚಕಲ್‍ಕುಪ್ಪೆ ಅವರು ಕರೆ ಮಾಡಿ ಮೈದಾಳ ಕೆರೆಗೆ ಹೇಮೆ ನೀರು ಹರಿಸುವಂತೆ ಕೋರಿದರು.2004ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ 6 ಕೋಟಿ ಯೋಜನೆಗೆ ಕೊಟ್ಟಿದ್ದರು. ನಾನು ಶಾಸಕನಾದ ಮೇಲೆ ಹೊನ್ನೆನಹಳ್ಳಿಯಿಂದ- ಮೈದಾಳಕೆರೆಗೆ ನೀರು ಹರಿಸುವ ಯೋಜನೆಗೆ 8 ಕೋಟಿ ಬಂದಿದ್ದು, ಮುಂದಿನ ವರ್ಷ ಹೇಮಾವತಿ ನೀರು ಹರಿಯಲಿದೆ ಎಂದರು. ಬಸವಾಪಟ್ಟಣದ ನರಸಿಂಹಮೂರ್ತಿ ಅವರು ರಾಜಕೀಯ ಬದಿಗೊತ್ತಿ ಗ್ರಾಮದ ರಸ್ತೆ, ಯುಜಿಡಿ ಸಂಪರ್ಕ ಮಾಡಿಸುವಂತೆ ಕೋರಿದ್ದಕ್ಕೆ,ಶಾಸಕರು ಸ್ಥಳಪರಿಶೀಲನೆ ಮಾಡುವ ಭರವಸೆ ನೀಡಿದರು. ಪ್ರವೀಣ್ ಎಂಬುವರು ಕರೆ ಮಾಡಿ ಕುಪ್ಪೂರು –ತುಮಕೂರು ರಸ್ತೆ ಒತ್ತುವರಿ ತೆರವು ಮಾಡಿ ಅಭಿವೃದ್ಧಿಪಡಿಸುವಂತೆ ಕೋರಿದಾಗ ಊರಿನ ಜನರು ಜಾಗ ಬಿಟ್ಟುಕೊಡುವುದಾಗಿ ಒಗ್ಗಟ್ಟಾಗಿ ಬಂದು ಪತ್ರ ನೀಡಿ 6 ತಿಂಗಳಲ್ಲಿ ರಸ್ತೆ ನಿರ್ಮಿಸಿಕೊಡುವೆ ಎಂದರು.

      ಮುದಿಗೆರೆ ಗ್ರಾಪಂ ಸದಸ್ಯ ಪ್ರದೀಪ್ ಕರೆ ಮಾಡಿ 13 ಕೋಟಿ ಅಭಿವೃದ್ಧಿ ಕಾಮಗಾರಿ ತಾವೂ ಶಾಸಕರಾದ ಮೇಲೆ ಮಂಜೂರು ಮಾಡಿಸಿದ್ದು ಮುದಿಗೆರೆಯಿಂದ ಕೆಸ್ತೂರುವರೆಗಿನ 3 ಕಿಮೀ ರಸ್ತೆ ಅಭಿವೃದ್ಧಿ ಮಾಡಿಸುವಂತೆ ಕೋರಿದರು.

ದೇವಾಲಯದ 50 ಲಕ್ಷ ಅನುದಾನಕ್ಕೂ ಕೊಕ್ಕೆ:

      ಎತ್ತೇನಹಳ್ಳಿ ಮಾರುತಿ ಅವರು ಕರೆ ಮಾಡಿ ದೇವಸ್ಥಾನ ಅಭಿವೃದ್ಧಿ ಬಗ್ಗೆ ಪ್ರಶ್ನಿಸಿದರು. ದೇವಾಲಯಕ್ಕೆ ಬಿಡುಗಡೆಯಾಗಿದ್ದ 50 ಲಕ್ಷ ಅನುದಾನವನ್ನು ಹಾಲಿ ಸರಕಾರ ತಡೆಹಿಡಿದಿತ್ತು. ಈಗ 25 ಲಕ್ಷ ಮತ್ತೆ ಬಿಡುಗಡೆಯಾಗಿದು. ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದರು.
ಕೊಟ್ಟಿಗೆಗೊಲ್ಲಹಳ್ಳಿ ನಾರಾಯಣ್ ಚರಂಡಿ ಅವ್ಯವಸ್ಥೆ ಕುರಿತು, ಚಂದ್ರಶೇಖರ್ ಊರ್ಡಿಗೆರೆ ಅವರು 120 ನಿವೇಶನ ಬೇಗ ಹಂಚಿಕೆ ಮಾಡಬೇಕೆಂದು ಸಿರಿವಾರದ ಶ್ರೀನಿವಾಸ್ ಅವರು ರಾಯಪುರದ ಕೆಳಗಡೆ ರಸ್ತೆ ಅಭಿವೃದ್ಧಿ, ಕುಂಕುಮ್ಮನಹಳ್ಳಿ ಗಿರೀಶ್ ಅವರು ಬಾಕಿ ರಸ್ತೆ ಅಭಿವೃದ್ಧಿಗೆ ಮನವಿ ಮಾಡಿದರು. ಶಾಸಕರು ಆದ್ಯತೆ ಮೇರೆಗೆ ಪರಿಹರಿಸುವ ಭರವಸೆ ನೀಡಿದರು. ಇದೇ ವೇಳೆ ಜನರ ಸಮಸ್ಯೆಗೆ ಧ್ವನಿಯಾಗಿ ಪ್ರಜಾಪ್ರಗತಿ-ಪ್ರಗತಿ ವಾಹಿನಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಕುಮಾರಸ್ವಾಮಿ, ಸಿದ್ದರಾಮಯ್ಯ ಬೆಸ್ಟ್ ಸಿಎಂ :

      ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರು ಮಾಡಿಸಿದ್ದ ಎಸ್‍ಎಸ್‍ಡಿಯ 40 ಕೋಟಿ, ಒಆರ್‍ಎಫ್ 36 ಕೋಟಿ ಅಭಿವೃದ್ಧಿ ಅನುದಾನವನ್ನು ಬಿಜೆಪಿ ಸರಕಾರ ಬಂದಕೂಡಲೇ ಹಿಂಪಡೆಯಿತು. ಮತ್ತೆ ಅಧಿವೇಶನಗಳಲ್ಲಿ ಪ್ರಸ್ತಾಪಿಸಿ ಕುಮಾರಸ್ವಾಮಿ ಅವರ ಮೂಲಕ ಒತ್ತಡ ಹೇರಿಸಿ ಅನುದಾನ ಮತ್ತೆ ವಾಪಸ್ ತರಿಸಲಾಗಿದೆ. ಸರಕಾರದ ಈ ನಿಲುವಿನಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದ್ದು ಮುಖ್ಯಮಂತ್ರಿಗಳ ಕಚೇರಿಯಲ್ಲಿ ವಿಪಕ್ಷ ಶಾಸಕರ ಮನವಿಯನ್ನು ಪುರಸ್ಕರಿಸಬೇಡಿ ಎಂಬ ಅಘೋಷಿತ ನಿಯಮಗಳನ್ನೇ ಮಾಡಲಾಗಿದೆ. ಆದರೆ ಕುಮಾರಸ್ವಾಮಿ, ಸಿದ್ದರಾಮಯ್ಯ ಸರಕಾರಗಳಲ್ಲಿ ಈ ಸ್ಥಿತಿ ಇರಲಿಲ್ಲ. ಹಾಲಿ-ಮಾಜಿ ಶಾಸಕರು ಯಾರೇ ಅವರ ಬಳಿ ಹೋಗಲಿ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡುತ್ತಿದ್ದರು. ಉತ್ತಮ ಮುಖ್ಯಮಂತ್ರಿಗಳೆನಿಸಿಕೊಂಡರು. ಚುನಾವಣಾ ಬಂದಾಗ ರಾಜಕೀಯ ಮಾಡೋಣ. ಅನುದಾನ ಸ್ಥಗಿತಗೊಳಿಸಿದರೆ ಕ್ಷೇತ್ರದ ಮತದಾರರಿಗೆ ಶಾಸಕರಿಗೆ ಅಭಿವೃದ್ಧಿ ವಿಷಯವಾಗಿ ಏನು ಮಾಡಬೇಕು ಎಂದು ಬಿಜೆಪಿ ಸರಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.

3 ಯೋಜನೆಯಡಿ ಕೈಗಾರಿಕಾ ಪ್ರದೇಶಕ್ಕೆ ನೀರು:

      ವಸಂತಾ ನರಸಾಪುರದ ಕೈಗಾರಿಕಾ ಪ್ರದೇಶಕ್ಕೆ ಭೀಮಸಂದ್ರ ಟ್ರೀಟ್‍ಮೆಂಟ್‍ನಿಂದ ನೀರೊದಗಿಸಲು 120 ಕೋಟಿ ವೆಚ್ಚದ ಯೋಜನೆ ಚಾಲ್ತಿಯಲ್ಲಿದ್ದು, ಈಗಾಗಲೇ ಕುಪ್ಪೂರು ಕೆರೆಯಿಂದಲೂ ನೀರುಕೊಡಲಾಗಿದೆ. ಇದರೊಂದಿಗೆ ಸಂಸದರು, ಉಸ್ತುವಾರಿ ಸಚಿವರು ಆಸಕ್ತಿ ವಹಿಸಿ ಶಾಸಕನಾಗಿ ನಾನು ಒತ್ತಡ ಹೇರಿದ್ದು ಎತ್ತಿನಹೊಳೆಯೋಜನೆಯಡಿ ದೊಡ್ಡಮಟ್ಟದ ಟ್ಯಾಂಕ್ ಮಾಡಿ ನೀರು ಸಂಗ್ರಹಿಸಲು ಪ್ಲ್ಯಾನ್ ಮಾಡಲಾಗಿದೆ ಎಂದು ಶಾಸಕ ಗೌರಿಶಂಕರ್ ತಿಳಿಸಿದರು.

ಸಂಸ್ಕರಿತ ನೀರು, ಸಚಿವರಿಗೆ ಅಭಿನಂದಿಸುವೆ:

      ಹೆಬ್ಬೂರು ಗೂಳೂರು ಏತನೀರಾವರಿ ಯೋಜನೆ ವೈಫಲ್ಯದ ಯೋಜನೆಯಾಗಿದ್ದು, 53 ಕೆರೆಗಳಿಗೆ ಕೇವಲ 303 ಎಂಸಿಎಫ್‍ಟಿ ನೀರು ಮಂಜೂರಾತಿಯಿಂದ ತುಂಬಿಸಲು ಸಾಧ್ಯವೇ. ನಾಗವಲ್ಲಿ ಒಂದು ಕೆರೆಯೇ 250 ಎಂಸಿಎಫ್‍ಟಿಯಷ್ಟಿದೆ. ಈ ಹಿನ್ನೆಲೆಯಲ್ಲಿ ನತದೃಷ್ಟಕ್ಕೊಳಗಾದ ಹೆಬ್ಬೂರು-ಗೂಳೂರು ಭಾಗದ ಜನರಿಗೆ ನೀರಿನ ಸೌಲಭ್ಯ ಒದಗಿಸಲು ಕೆ.ಸಿವ್ಯಾಲಿ ಮಾದರಿಯಲ್ಲಿ ವೃಷಭಾವತಿ ಸಂಸ್ಕರಿತ ನೀರನ್ನು ಹತ್ತು ಕೆರೆಗಳಿಗೆ ಹರಿಸಿ ಅಂತರ್ಜಲ ಮರುಪೂರಣಗೊಳಿಸಲು ಯೋಜನೆ ರೂಪಿಸಲಾಗಿದೆ. ಈ ಸಂಬಂಧ ಹೆಚ್ಚಿನ ಸಹಕಾರ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರಿಗೆ ಅಭಿನಂದಿಸುವೆ ಎಂದರು.

ದೇವರಾಯನದುರ್ಗಕ್ಕೆ ರೋಪ್‍ವೇ!

      ಮಧುಗಿರಿ ಶಾಸಕನಾಗಿದ್ದಾಗ ನಾನು ಮನವಿ ಮಾಡಿದ್ದಾಗ ಏಕಶಿಲಾ ಬೆಟ್ಟಕ್ಕೆ ರೋಪ್‍ವೇ ಮನವಿ ಈಗ ಸಾಕಾರದ ಹಂತ ತಲುಪಿದೆ. ಇದೇ ಮಾದರಿಯಲ್ಲಿ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ದೇವರಾಯನದುರ್ಗ, ನಾಮದಚಿಲುಮೆ ಸಮಗ್ರ ಅಭಿವೃದ್ಧಿಗೆ 16 ಕೋಟಿ ಕಾಮಗಾರಿಯ ಜೊತೆಗೆ ರೋಪ್‍ವೇ ಸಹ ಆಗಬೇಕೆಂದು ಮನವಿ ಮಾಡಿರುವೆ. ಕೇಂದ್ರ ಸರಕಾರದ ಅನುಮತಿ ಅಗತ್ಯವಿದ್ದು, ಸರಕಾರ ಎಷ್ಟರ ಮಟ್ಟಿಗೆ ಸ್ಪಂದಿಸುವುದೋ ಕಾದು ನೋಡಬೇಕಿದೆ.

-ಡಿ.ಸಿ.ಗೌರಿಶಂಕರ್, ಗ್ರಾಮಾಂತರ ಶಾಸಕರು.

ಪೊಲೀಸ್ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ

      ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ಆರೋಪಿಸಿದ ಶಾಸಕ ಡಿ.ಸಿ.ಗೌರಿಶಂಕರ್ ಅವರು ರಕ್ಷಣೆ ಕೋರಿ, ನ್ಯಾಯ ಕೋರಿ ಠಾಣೆಗೆ ಬರುವ ಜನಸಾಮಾನ್ಯರ ಜೊತೆ ದರ್ಪ, ರಾಕ್ಷಸ ಪ್ರವೃತ್ತಿಯನ್ನು ಪೊಲೀಸ್ ಅಧಿಕಾರಿಗಳು ತೋರುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಧ್ವನಿಎತ್ತಿದರೂ ಎಚ್ಚೆತ್ತುಕೊಂಡಿಲ್ಲ. ಇದು ತುಮಕೂರು ಗ್ರಾಮಾಂತರಕ್ಕೆ ಮಾತ್ರ ಸೀಮಿತವಾಗಿಲ್ಲ. ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆ ಜನಸ್ನೇಹಿಯಾಗಿಲ್ಲ. ಲಂಚಗುಳಿತನ ಹೆಚ್ಚಾಗಿದೆ ಎಂದು ಆಪಾದಿಸಿದರು.

Recent Articles

spot_img

Related Stories

Share via
Copy link