ತುಮಕೂರು :  ಇಂದು ಗ್ರಾಪಂ ಮೊದಲ ಹಂತದ ಚುನಾವಣೆ!

 ತುಮಕೂರು : 

      ಗ್ರಾಮ ಪಂಚಾಯತ್ ಮೊದಲ ಹಂತದ ಚುನಾವಣೆ ಇಂದು ನಡೆಯಲಿದ್ದು,ಜಿಲ್ಲೆಯ ಐದು ತಾಲೂಕುಗಳ 168 ಪಂಚಾಯಿತಿಯ 2594 ಸ್ಥಾನಗಳಿಗೆ ಮತದಾನ ನಡೆಸಲು ಜಿಲ್ಲಾಡಳಿತ ಸರ್ವ ಸಿದ್ಧತೆ ಮಾಡಿಕೊಂಡಿದೆ.

      ಆಯಾ ತಾಲೂಕು ಮಸ್ಟರಿಂಗ್ ಕೇಂದ್ರಗಳ ಮೂಲಕ ಬ್ಯಾಲೆಟ್‍ಪೇಪರ್, ಮತಪೆಟ್ಟಿಗೆ, ಶಾಹಿ ಸೇರಿದಂತೆ 93 ಅಗತ್ಯ ಪರಿಕರಗಳನ್ನು ಪಡೆದು ಸೋಮವಾರದ ಮತಗಟ್ಟೆಗಳಿಗೆ ತೆರಳಿದ ಸಿಬ್ಬಂದಿ ಹಾಗೂ ಪೊಲೀಸರು ಶಾಂತಿಯುತ ಮತದಾನಕ್ಕೆ ಅಗತ್ಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು, ಎಡಗೈ ಹೆಬ್ಬೆರಳಿಗೆ ಅಳಿಸಲಾಗದ ಶಾಹಿ ಹಾಕಲಾಗುತ್ತಿದೆ.

      ಮೊದಲ ಹಂತದ ಚುನಾವಣೆ ನಡೆಯುವ ಐದುತಾಲೂಕುಗಳ 168 ಗ್ರಾಮ ಪಂಚಾಯ್ತಿಗಳ 156 ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆ ನಡೆದಿದ್ದು, ಗೆ ಚುನಾವಣೆ ನಡೆಯಲಿದ್ದು, 2594 ಸ್ಥಾನಗಳಿಗೆ 7142 ಅಭ್ಯರ್ಥಿಗಳು ಸ್ಪರ್ಧೆಯೊಡ್ಡಿದ್ದಾರೆ. ಗುಬ್ಬಿಯಲ್ಲಿ ಎರಡು ಪಂಚಾಯ್ತಿಗಳವರು ಚುನಾವಣೆ ಬಹಿಷ್ಕರಿಸಿರುವ ಕಾರಣಕ್ಕೆ 36 ಸ್ಥಾನಗಳಿಗೆ ನಾಮಪತ್ರವೇ ಸಲ್ಲಿಕೆಯಾಗಿಲ್ಲ. ಉಳಿದಂತೆ ತುಮಕೂರು ತಾಲೂಕಿನ 41 ಪಂಚಾಯ್ತಿಗಳ 746 ಸ್ಥಾನಗಳ ಪೈಕಿ 13 ಅವಿರೋಧ ಆಯ್ಕೆ ಹೊರತುಪಡಿಸಿ 733 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 2185 ಉಮೇದುವಾರಿಕೆ ಸಲ್ಲಿಕೆಯಾಗಿದೆ. ಕುಣಿಗಲ್‍ನ 36 ಪಂಚಾಯಿತಿಗಳ 496 ಸ್ಥಾನಗಳ ಪೈಕಿ 37 ಅವಿರೋಧ ಆಯ್ಕೆ ಹೊರತುಪಡಿಸಿ 459 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 1208 ಉಮೇದುವಾರಿಕೆ ಸಲ್ಲಿಕೆಯಾಗಿದೆ. ಗುಬ್ಬಿ ತಾಲೂಕಿನ 34 ಪಂಚಾಯಿತಿಗಳ 626 ಸ್ಥಾನಗಳ ಪೈಕಿ 65 ಅವಿರೋಧ ಆಯ್ಕೆ ಹೊರತುಪಡಿಸಿ 525 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 1388 ಉಮೇದುವಾರಿಕೆ ಸಲ್ಲಿಕೆಯಾಗಿದೆ. ಕೊರಟಗೆರೆಯ 24 ಪಂಚಾಯಿತಿಗಳ ಪೈಕಿ 25 ಸ್ಥಾನಗಳಿಗೆ ಅವಿರೋಧ ಆಯ್ಕೆ ಹೊರತುಪಡಿಸಿ 367 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 1112 ಉಮೇದುವಾರಿಕೆ ಸಲ್ಲಿಕೆಯಾಗಿದೆ. ಕಡೆಯದಾಗಿ ಪಾವಗಡ ತಾಲೂಕಿನ 33ಪಂಚಾಯಿತಿಗಳ ಪೈಕಿ ಅವಿರೋಧ ಆಯ್ಕೆಯಾದ 16ಸ್ಥಾನಗಳನ್ನು ಹೊರತುಡಪಿಸಿ 510 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಡಿ.30ರಂದು ಮತ ಎಣಿಕೆ:

      ಡಿ.27ರಂದು ಎರಡನೇ ಹಂತದ ಶಿರಾ , ಮಧುಗಿರಿ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿಯ 161 ಗ್ರಾಪಂಗಳಿಗೆ ಮತದಾನ ನಡೆಯಲಿದ್ದು, ಎರಡು ಹಂತದ ಮತ ಎಣಿಕೆ ಆಯಾ ತಾಲೂಕು ಕೇಂದ್ರಗಳಲ್ಲಿ ಡಿ.30ರಂದು ಮತ ಎಣಿಕೆ ನಡೆಯಲಿದೆ.

      ಸರಕಾರಿ ಶಾಲೆಗಳನ್ನು ಮತದಾನ ಕೇಂದ್ರಗಳಾಗಿ ಪರಿವರ್ತಿಸಿದ್ದು, ಕೋವಿಡ್ ಕಾರಣಕ್ಕೆ ಹಲವು ತಿಂಗಳುಗಳಿಂದ ಮುಚ್ಚಿರುವ ಶಾಲೆಗಳು ಧೂಳು ಹಿಡಿದಿದ್ದು,ಅವುಗಳನ್ನು ತೊಳೆದು ಸ್ಯಾನಿಟೈಜರ್ ಹಾಕಿ ಶುಚಿಗೊಳಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

      ಕೊರೊನಾ ಕಾರಣಕ್ಕೆ ಸಾಮಾಜಿಕ ಅಂತರ ಕಾಪಾಡಿಕೊಂಡು ಚುನಾವಣೆ ನಡೆಸಬೇಕೆಂಬ ದೃಷ್ಟಿಯಿಂದ ಪ್ರತೀ ಸಾವಿರ ಮತದಾರರಿಗೊಂಡು ಮತಗಟ್ಟೆಸ್ಥಾಪಿಸಿದ್ದು, ಸಾವಿರಕ್ಕಿಂತಲೂ ಹೆಚ್ಚು ಮತದಾರರಿರುವೆಡೆ ಹೆಚ್ಚುವರಿಯಾಗಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತೀ ಮತಗಟ್ಟೆಗೆ ಮತಗಟ್ಟೆ ಅಧ್ಯಕ್ಷಾಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಸಹಾಯಕಸಿಬ್ಬಂದಿ ಸೇರಿ ಐವರನ್ನು ನಿಯೋಜಿಸಲಾಗಿದ್ದು, ಜಿಲ್ಲಾ ಕೇಂದ್ರವಾದ ತುಮಕೂರು ತಾಲೂಕಿನ 41 ಗ್ರಾಪಂಗಳಿಗೆ 315 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಕೈಗೆ ಸ್ಯಾನಿಟೈಜರ್ ಹಾಕಿ, ಉಷ್ಣಾಂಶ ತಪಾಸಣೆ ನಡೆಸಿ ಮತಗಟ್ಟೆ ಕೇಂದ್ರಕ್ಕೆ ಮತದಾರರನ್ನು ಒಳಬಿಡಲಾಗುವುದು. ಬ್ಯಾಲೆಟ್ ಪೇಪರ್‍ನಲ್ಲಿ ಮತ ಚಲಾವಣೆಯ ಕಾರಣ ನೋಟಾ ಮತದಾನಕ್ಕೆ ಅವಕಾಶವಿಲ್ಲ ಎಂದು ಚುನಾವಣೆ ಕಾರ್ಯಕ್ಕೆ ಬಳ್ಳಾರಿಯಿಂದ ನಿಯೋಜಿತರಾಗಿರುವ ತಹಸೀಲ್ದಾರ್ ರಾಘವೇಂದ್ರರಾವ್ ಪ್ರಜಾಪ್ರಗತಿಗೆ ತಿಳಿಸಿದ್ದಾರೆ.

      ಬಿಗಿಪೊಲೀಸ್ ಬಂದೋಬಸ್ತ್:

      ಮೊದಲ ಹಂತದ ಗ್ರಾಪಂ ಚುನಾವಣೆ ನಡೆಯುವ 5 ತಾಲೂಕುಗಳಿಗೆ 1925 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಎಸ್ಪಿ, ಎಎಸ್ಪಿ ನೇತೃತ್ವದಲ್ಲಿ 5 ಡಿವೈಎಸ್ಪಿ, 18 ಸಿಪಿಐ, 59 ಪಿಎಸ್‍ಐ, 92 ಎಎಸ್‍ಐ, 146 ಮುಖ್ಯಪೇದೆ, 944 ಕಾನ್ಸ್‍ಟೇಬಲ್, 500ಹೋಂಗಾಡ್ರ್ಸ್, 10 ಡಿಎಆರ್‍ತಯ ಕುಡಿ ಹಾಗೂ 5 ಕೆಎಸ್‍ಆರ್‍ಪಿ ತುಕುಡಿಯನ್ನು ಶಾಂತಿಯುತ ಚುನಾವಣೆಗಾಗಿ ನಿಯೋಜಿಸಲಾಗಿದೆ ಎಂದು ಎಸ್ಪಿ ಡಾ.ಕೆ.ವಂಶಿಕೃಷ್ಣ ತಿಳಿಸಿದ್ದಾರೆ.

ಹೀಗೆ ಮಾಡಿದರೆ ಮತಪತ್ರ ತಿರಸ್ಕೃತವಾಗಲಿದೆ…!

      ಗ್ರಾಪಂಗಳ ವಾರ್ಡ್‍ವಾರು ನಿದಗಿಯಾಗಿರುವ ಮೀಸಲು ಸದಸ್ಯರ ಸಂಖ್ಯೆಗನುಗುಣವಾಗಿ ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಹಾಗೆಂದು ಮೂವರು ಸ್ಥಾನಗಳಿದ್ದರೆ ಕಡ್ಡಾಯ ಮೂವರಿಗೆ ಮತಹಾಕಬೇಕೆಂದಿಲ್ಲ, ಒಬ್ಬರಿಗೂ, ಇಬ್ಬರಿಗೂ, ಮೂವರಿಗೂ ಮತ ಹಾಕಬಹುದು ಆದರೆ ನಿಗದಿತ ಸ್ಥಾನಗಳ ಸಂಖ್ಯೆಗಿಂತ ಹೆಚ್ಚುವರಿ ಅಭ್ಯರ್ಥಿಗಳಿಗೆ ಮತ ಹಾಕಿದರೆ, ಮತ ಮುದ್ರೆಯನ್ನು ಅಭ್ಯರ್ಥಿ ಹೆಸರು, ಚಿಹ್ನೆಯ ಮುಂದಿನ ಕಲಂ ಒಳಗೆ ಒತ್ತದೆ ಬಾಕ್ಸ್ ಗೆರೆಗಳ ಮೇಲೆ ಅಡ್ಡಾದಿಡ್ಡಿಯಾಗಿ ಒತ್ತಿದರೆ ನಿಮ್ಮ ಮತ ತಿರ ತವಾಗಲಿದೆ. ಹಾಗೆಯೇ ಅದನ್ನು ಮಡಿಚಿ ಪೆಟ್ಟಿಗೆಗೆ ಹಾಕುವಾಗಲೂ ನಿಯಮ ಪಾಲಿಸಬೇಕು ಎಂದು ಚುನಾವಣಾಧಿಕಾರಿಗಳು ಹೇಳುತ್ತಾರೆ.

 ಗ್ರಾಪಂ ಚುನಾವಣೆ ಪ್ರಮುಖಾಂಶಗಳು :

  • ಮೊದಲ ಹಂತದಲ್ಲಿ 5 ತಾಲೂಕುಗಳ 168 ಗ್ರಾಪಂಗಳಿಗೆ ಚುನಾವಣೆ
  • ಎಡಗೈ ಹೆಬ್ಬೆರಳಿಗೆ ಅಳಿಸಲಾಗದ ಶಾಹಿ
  • ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ನಡೆಯುವ ಸಮಯ
  • ನೋಟಾ ಮತ ಚಲಾವಣೆಗೆ ಅವಕಾಶವಿಲ್ಲ
  • ಡಿ.30ರಂದು ಮತ ಎಣಿಕೆ, ಚುನಾವಣಾ ಫಲಿತಾಂಶ
  • ಕೋವಿಡ್ ಸೋಂಕಿತರು, ಶಂಕಿತರಿದ್ದರೆ ಕೊನೆಯ 1 ಗಂಟೆಯ ಅವಧಿಯಲ್ಲಿ ಮತದಾನಕ್ಕೆ ಅವಕಾಶ.

 

Recent Articles

spot_img

Related Stories

Share via
Copy link
Powered by Social Snap