ತುಮಕೂರು : ಗ್ರಾಪಂ ಮೊದಲ ಹಂತ ; ಬಿರುಸಿನ ಮತದಾನ

 ತುಮಕೂರು :

      ಗ್ರಾಮ ಪಂಚಾಯತ್ ಮೊದಲ ಹಂತದ ಚುನಾವಣೆ ಮಂಗಳವಾರ ಜಿಲ್ಲೆಯ ಐದು ತಾಲೂಕುಗಳ 168 ಪಂಚಾಯಿತಿಗಳ 2594 ಸ್ಥಾನಗಳಿಗೆ(156 ಅವಿರೋಧ ಆಯ್ಕೆ ಹೊರತುಪಡಿಸಿ) ನಡೆದಿದ್ದು, ಪಾವಗಡ ತಾಲೂಕಿನ ಮತಗಟ್ಟೆ ಬಳಿ ಕಡಿಮೆ ರಕ್ತದೊತ್ತಡದಿಂದ ಯುವಕ ಸಾವು, ಕುಣಿಗಲ್ ತಾಲೂಕು ಹೊಸಕೆರೆಉಲ್ಲಿ ಪರಸ್ಪರ ಎದುರಾಳಿ ಅಭ್ಯರ್ಥಿಗಳ ಬೆಂಬಲಿಗರ ನಡುವೆ ಘರ್ಷಣೆ ಹೊರತುಪಡಿಸಿ, ಉಳಿದ ಕಡೆ ಶಾಂತಿಯುತವಾಗಿ ಬಿರುಸಾಗಿ ನಡೆದಿದೆ.

      ಮತದಾನ ಮುಕ್ತಾಯಗೊಂಡ ಸಂಜೆ 5ರ ವೇಳೆಗೆ ಶೇ ರಷ್ಟು ಮತಪ್ರಮಾಣ ದಾಖಲಾಗಿದ್ದು, ಕೊರೊನಾ ಭೀತಿಯ ನಡುವೆಯೂ ಮತದಾನ ಮಾಡುವ ಉತ್ಸಾಹ ಗ್ರಾಮೀಣ ಮತದಾರರಲ್ಲಿ ಕುಂದಿರಲಿಲ್ಲ. ಮಹಿಳೆಯರು, ವೃದ್ಧರೆನ್ನದೆ ಮತದಾನದ ಹಕ್ಕು ಹೊಂದಿರುವ ಮನೆ ಮಂದಿಯೆಲ್ಲ ಗುಂಪಾಗಿ ಬಂದು, ಸರತಿ ಸಾಲಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದರು. ಅಭ್ಯರ್ಥಿಗಳು ಅವರ ಬೆಂಬಲಿಗರು ಕೆಲವು ಹಿರಿಯ ಮತದಾರರನ್ನು ಕೈ ಹಿಡಿದುಕೊಂಡು, ಗಾಲಿಕುರ್ಚಿಯಲ್ಲಿ ಕರೆತಂದು ಮತಗಟ್ಟೆ ಬಳಿಗೆ ಬಿಡುತ್ತಿದ್ದ ದೃಶ್ಯ ಕಂಡುಬಂತು. ಚುನಾವಣೆಯಲ್ಲಿ ಈ ಬಾರಿ ಯುವಕರು ಅಧಿಕಸಂಖ್ಯೆಯಲ್ಲಿ ಸ್ಪರ್ಧಿಸಿರುವುದರಿಂದ ಮತಗಟ್ಟೆ ಬಳಿ ಯುವಜನರು ಅಧಿಕ ಸಂಖ್ಯೆಯಲ್ಲಿ ನೆರೆದಿದ್ದರು.

      ಬಿಜೆಪಿ-ಜೆಡಿಎಸ್ ಬೆಂಬಲಿಗರ ನಡುವೆಯ ಪ್ರತಿಷ್ಠೆಯ ಕಣವಾಗಿರುವ ತುಮಕೂರು ಗ್ರಾಮಾಂತರದಲ್ಲಿ ಪಂಚಾಯಿತಿ ಮತದಾನದ ಜೋಶ್ ಹೆಚ್ಚಾಗಿತ್ತು. ಗ್ರಾಮಾಂತರ ವ್ಯಾಪ್ತಿಯ ಸಿರಿವರ, ಹೆಬ್ಬೂರು, ಬೆಳಗುಂಬ, ಬೆಳ್ಳಾವಿ, ಹೆಗ್ಗೆರೆ, ಹಾಲನೂರು, ಅರಿಯೂರು ಮತ್ತಿತರ ಮತಗಟ್ಟೆ ಬಳಿ ಮತಚಲಾಯಿಸಲು ಅಧಿಕ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಕಳೆದ ಉಪಚುನಾವಣೆಯಿಲ್ಲದ ಸಾಮಾಜಿಕ ಅಂತರದ ಪಾಲನೆ ಅಷ್ಟಾಗಿ ಮತಗಟ್ಟೆ ಬಳಿ ಕಂಡುಬರಲಿಲ್ಲ. ಕೈಗೆ ಸ್ಯಾನಿಟೈಜರ್ ಹಾಕಿ ಉಷ್ಣಾಂಶ ತಪಾಸಣೆ ನಡೆಸಿ ಮತಗಟ್ಟೆಗೆ ಮತದಾರರನ್ನು ಬಿಡಲಾಗುತ್ತಿತ್ತು ಬಿಟ್ಟರೆ ಉಪಚುನಾವಣೆಯಲ್ಲಿದ್ದಂತೆ ಹ್ಯಾಂಡ್‍ಗ್ಲ್ಯಾಸ್ ಮಾಸ್ಕ್ ವಿತರಣೆಯನ್ನು ಚುನಾವಣಾ ಆಯೋಗ ಮಾಡಿರಲಿಲ್ಲ. ಹಾಲನೂರಲ್ಲಿ ಅಭ್ಯರ್ಥಿಗಳ ಬೆಂಬಲಿಗರೇ ಮತದಾರರೇ ಮಾಸ್ಕ್ ಹಂಚುತ್ತಿದ್ದ ದೃಶ್ಯವೂ ಗಮನಸೆಳೆಯಿತು. ಹೊರ ಊರಿನಲ್ಲಿ ನೆಲೆಸಿದ್ದವರನ್ನು ಬಿಡದೆ ಕರೆಸಿ ಮತಹಾಕಿಸುತ್ತಿದ್ದುದು ಕಂಡುಬಂತು. ಹೆಬ್ಬೂರು ಜಿಪಂ ಮಾಜಿ ಸದಸ್ಯ ಚಿಕ್ಕವೆಂಕಟಯ್ಯ ಅವರ ಪುತ್ರ ಐಪಿಎಸ್ ಅಧಿಕಾರಿ ಹರೀಶ್ ಅವರು ದೂರದ ನಾಗಪುರ್‍ದಿಂದ ಬಂದು ಮತ ಚಲಾಯಿಸಿದರು.

ಬೆಳಿಗ್ಗೆ ನೀರಸ, ಮಧ್ಯಾಹ್ನದ ವೇಳೆ ಬಿರುಸು :

      ಬೆಳಿಗ್ಗೆ 7ರಿಂದ ಆರಂಭವಾದ ಮತದಾನ ಮೊದಲ ಎರಡು ತಾಸಿನ ಅವಧಿಯವರೆಗೆ ಶೇ.10ರಷ್ಟು ದಾಟಿರಲಿಲ್ಲ. 7 ರಿಂದ 9ರವರೆಗೆ ಶೇ.8.31ರಷ್ಟು ಪ್ರಮಾಣ ದಾಖಲಾದರೆ, ಬೆಳಿಗ್ಗೆ 11ರ ವೇಳೆಗೆ 23.28ರಷ್ಟು ಮತ ಪ್ರಮಾಣ ದಆಖಲಾಗಿತ್ತು. ಮಧ್ಯಾಹ್ನ 1ರ ವೇಳೆಗೆ ಈ ಮತದಾನದ ಪ್ರಮಾಣ 48.04 ಪ್ರತಿಶತಕ್ಕೆ ಏರಿಕೆಯಾದರೆ ಮಧ್ಯಾಹ್ನ 3ರ ವೇಳೆಗೆ ಶೇ.65.47ರಷ್ಟು ಮತ ಪ್ರಮಾಣ ದಾಖಲಾಗಿತ್ತು. ಮತದಾನ ಕೊನೆಗೊಂಡ ಸಂಜೆ 5ರವೇಳೆಗೆ ಐದು ತಾಲೂಕುಗಳಿಂದ ಒಟ್ಟು ಶೇ ರಷ್ಟು ಮತ ಪ್ರಮಾಣ ದಾಖಲಾಗಿದೆ. ಮತದಾನದ ಬಳಿಕ ಆಯಾ ತಾಲೂಕಿನ ಡಿ-ಮಸ್ಟರಿಂಗ್ ಕೇಂದ್ರಗಳಿಗೆ ಸುರಕ್ಷಿತವಾಗಿ ಮತಪೆಟ್ಟಿಗೆಗಳನ್ನು ಸಾಗಿಸಲಾಯಿತು. 2ನೇ ಹಂತದ ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಮಧುಗಿರಿ, ಚಿಕ್ಕನಾಯಕನಹಳ್ಳಿ, ಶಿರಾ ತಾಲೂಕಿನಲ್ಲಿ ಮತದಾನ ಡಿ.27ರಂದು ನಡೆಯಲಿದ್ದು, ಎರಡು ಹಂತದ ಮತ ಎಣಿಕೆ ಡಿ.30ರಂದು ನಡೆಯಲಿದೆ.

ಚಾಪೆ ಹಾಸಿ ಮತಚೀಟಿ ವಿತರಣೆ :

      ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಕಾಣುವಂತೆ ಮತಗಟ್ಟೆ ಹೊರಭಾಗ ಕುರ್ಚಿ ಟೇಬಲ್ ಹಾಕಿ ಮತದಾರರಿಗೆ ಮತಚೀಟಿ ವಿತರಿಸುತ್ತಿದ್ದಂತೆ ಪಂಚಾಯತ್ ಚುನಾವಣೆಯಲ್ಲಿ ಕಂಡುಬರಲಿಲ್ಲ. ರಸ್ತೆ ಬದಿಯಲ್ಲೇ ಚಾಪೆ ಹಾಕಿ ಮತದಾರರ ಹೆಸರನ್ನು ಹುಡುಕಿ ಚೀಟಿಯನ್ನು ಬರೆದುಕೊಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕಣದಲ್ಲಿರುವ ಅಭ್ಯರ್ಥಿಗಳು ಎಲ್ಲರೂ ಸ್ಥಳೀಯರೇ ಆಗಿ ಮತದಾರರಿಗೆ ಚಿರಪರಿಚಿತರೇ ಆಗಿರುವುದರಿಂದ, ಕೌಟುಂಬಿಕ ಸಂಬಂಧ, ಸ್ನೇಹಗಳು ಬೆಸೆದುಕೊಂಡಿರುವ ಕಾರಣ ಯಾರಿಗೆ ಮತಹಾಕಬೇಕು, ಯಾರಿಗೆ ಬಿಡಬೇಕು, ಎಲ್ಲರೂ ಬಂದು ಮತ ಕೇಳವ್ರೇ ಎಂಬ ಚಿಂತೆ ಮತದಾರರಲ್ಲಿ ಮನೆ ಮಾಡಿದ್ದವು.

ಬಾಡೂಟ, ಎಣ್ಣೆಯ ಕಿಕ್:

      ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಮತಗಳಿಕೆಗಾಗಿ ಕಳೆದ ಕೆಲವು ದಿನಗಳಿಂದ ಬಾಡೂಟ, ಎಣ್ಣೆ ಹಂಚಿಕೆ ಯಥೇಚ್ಛವಾಗಿ ನಡೆದಿದ್ದು, ಅದರ ಕಿಕ್‍ನಲ್ಲೇ ಮತಗಟ್ಟೆ ಬಳಿಕೆಲವು ಬೆಂಬಲಿಗರು ಸುಳಿದಾಡುತ್ತಿದ್ದ ದೃಶ್ಯವೂ ಕಂಡುಬಂತು. ಉಳಿದಂತೆ ಅವರು ಇಷ್ಟು ದುಡ್ಡು ಕೊಟ್ಟವ್ರೆ, ಇವರಿಷ್ಟು ಕೊಟ್ಟವ್ರೇ ಎಂಬ ಚರ್ಚೆಗಳು ಮತಗಟ್ಟೆ ಬಳಿ ಸಾಗಿದ್ದವು.


ಗಣ್ಯರ ಮತದಾನ, ಅಭ್ಯರ್ಥಿಗಳಿಂದ ದೇವರಿಗೆ ಮೊರೆ :

      ಮೈದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಿದ್ಧಗಂಗಾ ಮಠದ ಸನಿವಾಸ ಶಾಲೆ ಮತಗಟ್ಟೆಯಲ್ಲಿ ಸಿದ್ಧಗಂಗೆಯ ಶ್ರೀ ಸಿದ್ಧಲಿಂಗಸ್ವಾಮೀಜಿ ಮತದಾನ ಮಾಡಿದರೆ ಹೆಗ್ಗೆರೆ ಪಂಚಾಯಿತಿ ವ್ಯಾಪ್ತಿಗೆ ಬರುವ ಗೊಲ್ಲಹಳ್ಳಿ ಮತಗಟ್ಟೆಯಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಕುಣಿಗಲ್ ತಾಲೂಕು ಬಾಗೇನಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಬರುವ ಸೊಬಗಾನಹಳ್ಳಿ ಮತಗಟ್ಟೆಯಲ್ಲಿ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರು ಪತ್ನಿ ಕಲ್ಪನಾ ಅವರ ಜತೆಗೂಡಿ ಬಂದು ಮತಚಲಾವಣೆ ಮಾಡಿದರು. ಶಾಸಕರುಗಳಾದ ಡಿ.ಸಿ.ಗೌರಿಶಂಕರ್, ಎಸ್.ಆರ್.ಶ್ರೀನಿವಾಸ್ ಡಾ.ಜಿ.ಪರಮೇಶ್ವರ, ವೆಂಕಟರಮಣಪ್ಪ, ಡಾ.ರಂಗನಾಥ್, ಮಾಜಿ ಶಾಸಕರಾದ ಬಿ.ಸುರೇಶ್‍ಗೌಡ, ಕೆ.ಎಂ.ತಿಮ್ಮರಾಯಪ್ಪ, ಪಿ.ಆರ್ ಸುಧಾಕರಲಾಲ್, ಡಿ.ನಾಗರಾಜಯ್ಯ, ಮುಖಂಡರಾದ ಡಿ.ಕೃಷ್ಣಕುಮಾರ್, ರಾಯಸಂದ್ರ ರವಿಕುಮಾರ್, ಕೆ.ಬಿ.ಬೋರೇಗೌಡ ಸೇರಿ ನಾನಾ ಪಕ್ಷಗಳ ಮುಖಂಡರು ಮತಗಟ್ಟೆಗಳನ್ನು ವೀಕ್ಷಣೆ ಮಾಡುವ ಜೊತೆಗೆ ತಾವಿರುವ ಸ್ಥಳದಲ್ಲೇ ಗ್ರಾಮ ಪಂಚಾಯಿತಿ ಮತದಾನದ ವಿವರಗಳನ್ನು ಕಲೆಹಾಕಲು ಮುಂದಾಗಿದ್ದರು. ಸ್ಥಳೀಯ ಅಭ್ಯರ್ಥಿಗಳು ಊರಿನ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ಮತಚಲಾಯಿಸಿ ಹೊರಬಂದು ಮತದಾರರಿಗೆ ಕೈ ಮುಗಿಯುತ್ತಿದ್ದ ದೃಶ್ಯವೂ ಸಾಮಾನ್ಯವಾಗಿತ್ತು.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link