ತುಮಕೂರು :
ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯತಿಗಳಿಗೆ ಚುನಾವಣಾ ದಿನಾಂಕ ಪ್ರಕಟಿಸಿದ್ದು, ಡಿಸೆಂಬರ್ 22 ಹಾಗೂ 27 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಜಿಲ್ಲೆಯ 10 ತಾಲ್ಲೂಕುಗಳಲ್ಲಿ ಯಾವ ದಿನಾಂಕಗಳಂದು ಮತದಾನ ನಡೆಯಲಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ.
ಮೊದಲ ಹಂತದ ಚುನಾವಣೆಯು ತುಮಕೂರು ತಾಲ್ಲೂಕು, ಕುಣಿಗಲ್, ಗುಬ್ಬಿ, ಕೊರಟಗೆರೆ ಮತ್ತು ಪಾವಗಡ ತಾಲ್ಲೂಕಿನಲ್ಲಿ ನಡೆಯಲಿದ್ದು, ಎರಡನೇ ಹಂತದ ಚುನಾವಣೆಯು ಮಧುಗಿರಿ, ಸಿರಾ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಲ್ಲಿ ನಡೆಯಲಿದೆ. 10 ತಾಲ್ಲೂಕುಗಳಿಂದ 329 ಗ್ರಾಮ ಪಂಚಾಯತಿಗಳಿಗೆ ಈ ಎರಡು ಹಂತಗಳಲ್ಲಿ ಮತದಾನ ನಡೆಯಲಿರುವುದಾಗಿ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ.
ತಾಲ್ಲೂಕುವಾರು ಪಂಚಾಯತಿಗಳು:
ಪ್ರತಿ ತಾಲ್ಲೂಕು ವಾರು ಗ್ರಾಮ ಪಂಚಾಯತಿಗಳ ವಿವರ ಹೀಗಿದೆ:
ತುಮಕೂರು ತಾಲ್ಲೂಕಿನಲ್ಲಿ 41 ಗ್ರಾಮ ಪಂಚಾಯತಿಗಳು, ಕುಣಿಗಲ್‍ನಲ್ಲಿ 36, ಗುಬ್ಬಿ ತಾಲ್ಲೂಕಿನಲ್ಲಿ 34, ಕೊರಟಗೆರೆ 24, ಪಾವಗಡ 33, ಮಧುಗಿರಿಯಲ್ಲಿ 39, ಶಿರಾ ತಾಲ್ಲೂಕಿನಲ್ಲಿ 42 ಪಂಚಾಯತಿಗಳು, ತಿಪಟೂರು 26, ತುರುವೇಕೆರೆ ತಾಲ್ಲೂಕಿನಲ್ಲಿ 27, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 27 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ.
ತುಮಕೂರು ಜಿಲ್ಲೆಯ ಹತ್ತು ತಾಲ್ಲೂಕುಗಳ 329 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದ್ದು, ಇದಕ್ಕಾಗಿ ಒಟ್ಟು 2431 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. 249 ಆಗ್ಸಲರಿ ಮತಗಟ್ಟೆಗಳೂ ಸೇರಿ ಒಟ್ಟು 2680 ಮತಗಟ್ಟೆಗಳಾಗಲಿವೆ. 17,26070 ಒಟ್ಟು ಮತದಾರರು ಇದ್ದು, ಇವರಲ್ಲಿ 87250 ಪುರುಷರು, 853731 ಮಹಿಳೆಯರು ಹಾಗೂ ಇತರೆ 89 ಮತದಾರರು ಸೇರಿದ್ದಾರೆ.
ಚುನಾವಣಾ ನೀತಿ ಸಂಹಿತೆಯು ನ.30ರಿಂದಲೇ ಜಾರಿಯಾಗಿದ್ದು, ಚುನಾವಣೆ ನಡೆಯುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇದು ಜಾರಿ ಇರುತ್ತದೆ. ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ನಗರ ಪಾಲಿಕೆಗಳಿಗೆ ಈ ನೀತಿ ಸಂಹಿತೆ ಅನ್ವಯಿಸುವುದಿಲ್ಲ.
ಪಕ್ಷದ ಚಿನ್ಹೆ ರಹಿತ ಚುನಾವಣೆ ಇದಾಗಿದ್ದರೂ ಸಹ ಪಕ್ಷಗಳ ಹಂತದಲ್ಲಿ ಈಗಾಗಲೇ ಪ್ರಕ್ರಿಯೆಗಳು ಆರಂಭವಾಗಿವೆ. ಪಕ್ಷದ ಬೆಂಬಲದೊಂದಿಗೆ ಟಿಕೆಟ್ ಗಿಟ್ಟಿಸಲು ಸ್ಪರ್ಧಾಳುಗಳು ಶಾಸಕರ ಮನೆಯ ಬಾಗಿಲು ತುಳಿಯುತ್ತಿದ್ದಾರೆ. ಕಳೆದ ಒಂದೆರಡು ತಿಂಗಳಿನಿಂದಲೂ ಇದೇ ಪ್ರಕ್ರಿಯೆ ಮುಂದುವರೆದಿದ್ದು, ಇನ್ನು ರಾಜಕೀಯ ಚಟುವಟಿಕೆ ಬಿರುಸಾಗಲಿದೆ. ಪ್ರತಿ ಗ್ರಾಮಗಳಿಂದಲೂ ಟಿಕೆಟ್ ಬಯಸಿ ರಾಜಕಾರಣಿಗಳನ್ನು ಹಿಂಬಾಲಿಸುವವರ ಸಂಖ್ಯೆ ಹೆಚ್ಚಲಿದ್ದು, ಇನ್ನು ಮುಂದೆ ಶಾಸಕರ ಮನೆಗಳು ಗಿಜಿಗುಟ್ಟಲಿವೆ.
ತುಮಕೂರು ಜಿಲ್ಲೆಯಲ್ಲಿ ಮೊದಲ ಹಂತಕ್ಕೆ ಚುನಾವಣೆ ನಡೆಯುವ ಗ್ರಾಮ ಪಂಚಾಯತಿಗಳಲ್ಲಿ ಡಿ.7 ರಿಂದ ಅಧಿಚೂಚನೆ ಪ್ರಾರಂಭವಾಗಲಿದ್ದು, ನಾಮ ಪತ್ರ ಸಲ್ಲಿಸಲು ಕೊನೆಯ ದಿನಾಂಕ: ಡಿ.11. ಉಮೇದುವಾರಿಗೆ ಹಿಂತೆಗೆದುಕೊಳ್ಳಲು ಕಡೆಯ ದಿನ ಡಿ.14. 22 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅವಶ್ಯಕ ಇದ್ದಲ್ಲಿ 24 ರಂದು ನಡೆಯಲಿದ್ದು, ಡಿ.30 ರಂದು ಮತಗಳ ಎಣಿಕೆ ನಡೆಯುವುದು.
2ನೇ ಹಂತಕ್ಕೆ ನಾಮ ಪತ್ರ ಸಲ್ಲಿಕೆ ಪ್ರಕ್ರಿಯೆ ಡಿ.11 ರಿಂದ ಆರಂಭವಾಗಲಿದ್ದು, ನಾಮಪತ್ರ ಸಲ್ಲಿಸಲು ಕೊನೆಯ ದಿನ ಡಿ.16. ಉಮೇದುವಾರಿಕೆ ವಾಪಸ್ ಪಡೆಯಲು ಡಿ.19 ಕೊನೆಯ ದಿನ. 27 ರಂದು ಮತದಾನ ನಡೆಯಲಿದ್ದು, ಡಿ.30 ರಂದು ಮತ ಎಣಿಕೆ ನಡೆಯಲಿದೆ.
ಪ್ರತಿ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆಯನ್ನು ಗರಿಷ್ಠ 1000 ಕ್ಕೆ ಮಿತಿಗೊಳಿಸಲಾಗಿದೆ. ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಅಂತರ ಕಾಪಾಡಿಕೊಳ್ಳಲು ಸೂಚಿಸಲಾಗಿದೆ. ಚುನಾವಣೆ ನಡೆಸಲು 329 ಚುನಾವಣಾಧಿಕಾರಿಗಳು, 331 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ