ತುಮಕೂರು : ಗ್ರಾಪಂ ಚುನಾವಣೆ ಸಿದ್ದತೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ

  ತುಮಕೂರು:

      ಡಿ.22 ಹಾಗೂ 27ರಂದು ಎರಡು ಹಂತದಲ್ಲಿ ನಡೆಯುತ್ತಿರುವ ಜಿಲ್ಲೆಯ ಗ್ರಾಮ ಪಂಚಾಯತ್ ಚುನಾವಣೆ ಪಕ್ಷಾತೀತವಾದರೂ ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು, ಸ್ಥಳೀಯ ಮುಖಂಡರಿಗೆ ಜನಪ್ರತಿನಿಧಿಯಾಗಲು ಅವಕಾಶಕಲ್ಪಿಸಿಕೊಡುವ ಪ್ರಮುಖ ವೇದಿಕೆಯಾಗಿದೆ. ಈ ಅವಕಾಶ ಬಳಸಿಕೊಂಡು ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿರುವ ಆಡಳಿತಾರೂಢ ಬಿಜೆಪಿ, ಗ್ರಾಮ ಸ್ವರಾಜ್ ಸಮಾವೇಶ ಆಯೋಜನೆ ಮೂಲಕ ಪಂಚಾಯತ್ ಚುನಾವಣಾ ಸಿದ್ದತೆಯಲ್ಲಿ ವಿಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದೆಯಿರಿಸಿ ಗೆಲುವು ದಾಖಲಿಸಿಲು ಕಾರ್ಯತಂತ್ರ ಎಣೆದಿದೆ. ಕಾಂಗ್ರೆಸ್ –ಜೆಡಿಎಸ್ ಪಕ್ಷಗಳು ಇನ್ನೂ ಸಮಾವೇಶ, ಜಿಲ್ಲಾ ಮಟ್ಟದ ಸಭೆಗಳನ್ನು ಆಯೋಜಿಸಿದಿದ್ದರೂ, ಕ್ಷೇತ್ರ ವ್ಯಾಪ್ತಿಯ ಶಾಸಕರು, ಮಾಜಿ ಶಾಸಕರು, ಮುಖಂಡರ ಮಟ್ಟದಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಮಾಲೋಚನಾ ಸಭೆಗಳನ್ನು ನಡೆಸುತ್ತಿದ್ದಾರೆ.

 ಬಿಜೆಪಿ ಕಾರ್ಯತಂತ್ರ:

Modi 2.0 first anniversary: BJP to hold 750 virtual rallies, conferences; distribute masks, sanitizers | India News | Zee News

      ವಿಧಾನಸಭೆ ಉಪಚುನಾವಣೆ, ವಿಧಾನಪರಿಷತ್ ಚುನಾವಣೆಯನ್ನು ಗೆದ್ದ ಹುಮ್ಮಸ್ಸಿನಲ್ಲೇ ಗ್ರಾಮಪಂಚಾಯಿತಿ ಅಖಾಡದಲ್ಲೂ ಬಿಜೆಪಿ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಳ್ಳಲು ಕಾರ್ಯತಂತ್ರ ಎಣೆದಿರುವ ಕಮಲ ನಾಯಕರು, ನ.27ರಿಂದಲೇ ಆರಂಭಗೊಂಡು ಡಿ.3ರವರೆಗೆ ಪ್ರತೀ ಜಿಲ್ಲೆಯಲ್ಲಿ ಗ್ರಾಮಸ್ವರಾಜ್ ಸಮಾವೇಶಗಳನ್ನು ಆಯೋಜಿಸುತ್ತಾ ಬಂದಿದೆ. ತುಮಕೂರು ಜಿಲ್ಲೆಯಲ್ಲೂ ಇಂದು ಕೆ.ಬಿ.ಕ್ರಾಸ್ ಹಾಗೂ ಮಧುಗಿರಿಯಲ್ಲಿ ಗ್ರಾಮಸ್ವರಾಜ್ ಸಮಾವೇಶವನ್ನು, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಸಂಸದರು, ಶಾಸಕರು, ಮಾಜಿ ಶಾಸಕರು ಹಾಗೂ ಇತರೆ ಬಿಜೆಪಿ ನಾಯಕರ ದಂಡನ್ನು ಕರೆಸಿ ಆಯೋಜಿಸುತ್ತಿದೆ.

      ವಾರ್‍ರಾಮ್‍ಗಳ ರಚನೆ, ಪ್ರತೀ ಬೂತ್‍ನಲ್ಲಿ 5 ಜನರ ಕಾರ್ಯಕರ್ತರ ಪಂಚರತ್ನ ತಂಡ ರಚನೆ.., ಕಾಲ್‍ಸೆಂಟರ್‍ಗಳ ಕಾರ್ಯಾರಂಭ ಹೀಗೆ 5 ಪಂಚ ಸೂತ್ರಗಳನ್ನು ಮುಂದಿಟ್ಟು ಪಂಚಾಯತ್ ಚುನಾವಣೆ ಎದುರಿಸಲು ಹೊರಟಿರುವ ಬಿಜೆಪಿ ನಗರ ಮಟ್ಟದಲ್ಲಿ ಕಮಲದ ಕಮಾಲ್ ಮಾಡಿರುವಂತೆ ಗ್ರಾಮೀಣ ಮಟ್ಟಕ್ಕೆ ವಿಸ್ತರಿಸಲು ಮುಂದಾಗಿರುವುದು ಗ್ರಾಮೀಣ ಮಟ್ಟದಲ್ಲಿ ಗಟ್ಟಿನೆಲೆಯನ್ನು ಹೊಂದಿರುವ ಕಾಂಗ್ರೆಸ್-ಜೆಡಿಎಸ್‍ಗೆ ಪ್ರಮುಖ ಸವಾಲನ್ನು ಹೊಡ್ಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

   ಕಾಂಗ್ರೆಸ್ ತಂತ್ರಗಾರಿಕೆ:

      ಗ್ರಾಮ ಮಟ್ಟದಲ್ಲಿ ಬಲಿಷ್ಠ ಸಂಘಟನೆಯನ್ನು ಹೊಂದಿದ್ದರೂ ಈ ಬಾರಿ ಕಾಂಗ್ರೆಸ್‍ಗೆ ಜೆಡಿಎಸ್ ಜತೆ ಬಿಜೆಪಿ ಒಡ್ಡುತ್ತಿರುವ ಪೈಪೋಟಿ ಸವಾಲಿನ ಸಂಗತಿಯಾಗಿದೆ. ಇತ್ತೀಚಿನ ಉಪಚುನಾವಣೆ, ಪರಿಷತ್ ಚುನಾವಣೆ ಸೋಲನ್ನು ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಬೆಂಬಲಿತರ ಆಧಿಪತ್ಯ ಸ್ಥಾಪಿಸುವ ಮೂಲಕ ತೀರಿಸಿಕೊಳ್ಳಬೇಕೆಂದು ಕೈ ನಾಯಕರು ರಣತಂತ್ರ ಎಳೆಯಲು ಮುಂದಾಗಿದ್ದು, ಡಿ.7ರಂದು ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಿ, ಒಗ್ಗಟ್ಟಿನೊಂದಿಗೆ ಸ್ಥಳೀಯ ಸಮರವನ್ನು ಎದುರಿಸಲು ನಿರ್ಣಯಿಸಿದ್ದಾರೆ. ಪ್ರತೀ ಬೂತ್‍ಮಟ್ಟದಲ್ಲಿ 10 ರಿಂದ 15 ಕಾರ್ಯಕರ್ತರ ಪಟ್ಟಿಯನ್ನು ತಯಾರಿಸಲಾಗಿದ್ದು, ಕ್ಷೇತ್ರವಾರು ಚುನಾವಣೆ ತಯಾರಿ ಸಭೆಗಳನ್ನು ನಡೆಸುವಂತೆ ಕೆಪಿಸಿಸಿ ಅಧ್ಯಕ್ಷರಿಂದ ಆದೇಶ ಹೊರಡಿಸಲಾಗಿದೆ. ರಾಜ್ಯಮಟ್ಟದ 7 ತಂಡಗಳನ್ನು ಚುನಾವಣಾ ವೀಕ್ಷಕರಾಗಿ ಕಳುಹಿಸಲು ಚಿಂತನೆ ನಡೆಸಿದ್ದು, ತುಮಕೂರು-ಚಿಕ್ಕಬಳ್ಳಾಪುರ-ಬೆಂಗಳೂರು ಗ್ರಾಮಾಂತರಕ್ಕೆ ಒಂದು ತಂಡ ಭೇಟಿ ನೀಡಿ ಚುನಾವಣಾ ತಯಾರಿ ಪರಾಮರ್ಶೆ ನಡೆಸಲಿದೆ.

ಜೆಡಿಎಸ್ ತಯಾರಿ:

      ಗ್ರಾಮೀಣ ಪ್ರಾದೇಶಿಕ ಪಕ್ಷವೆಂದೇ ಕರೆಸಿಕೊಳ್ಳುವ ಜೆಡಿಎಸ್‍ಗೂ ಈ ಗ್ರಾಮ ಪಂಚಾಯತ್ ಚುನಾವಣೆ ಮುಂದಿನ ಜಿಪಂ ತಾಪಂ ಹಾಗೂ ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ ಅಸ್ಥಿತ್ವ ಉಳಿಸಿಕೊಳ್ಳುವ ದಿಸೆಯಲ್ಲಿ ಮಹತ್ವದ್ದೆನಿಸಿದ್ದು, ಇನ್ನೆರೆಡು ದಿನದಲ್ಲಿ ಪಕ್ಷದಿಂದ ಜಿಲ್ಲೆ, ತಾಲೂಕುವಾರು ವೀಕ್ಷಕರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗುತ್ತಿದೆ. ಪಕ್ಷ ರಹಿತ ಚುನಾವಣೆ ಇದಾದ್ದರಿಂದ ಯಾರನ್ನು ಬೆಂಬಲಿಸಬೇಕು ಎನ್ನುವ ಬಗ್ಗೆ ಆಯಾ ಜಿಲ್ಲಾ, ತಾಲೂಕು ಅಧ್ಯಕ್ಷರು, ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳಿಗೆ ಜವಾಬ್ದಾರಿ ವಹಿಸಲಾಗುತ್ತಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ವ್ಯಕ್ತಿಗತ ಪ್ರತಿಷ್ಠೆ, ಜಾತಿ, ಬಣ, ಕುಟುಂಬ ರಾಜಕೀಯ ಜೋರು!

      ಗ್ರಾಮಪಂಚಾಯಿತಿ ಚುನಾವಣೆ ಪಕ್ಷರಹಿತವಾದರೂ ಕಣಕ್ಕಿಳಿಯುವ ಅಭ್ಯರ್ಥಿಗಳು ಯಾವುದಾದರೊಂದು ಪಕ್ಷದಲ್ಲಿ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವುದು ಸಾಮಾನ್ಯವೆನಿಸಿದೆ. ಆದರೂ ಹಳ್ಳಿಮಟ್ಟದಲ್ಲಿ ನಡೆಯುವ ಚುನಾವಣೆ ಇದಾದ್ದರಿಂದ ಸ್ಪರ್ಧಾ ಕಣದಲ್ಲಿ ವ್ಯಕ್ತಿಗತ ಪ್ರತಿಷ್ಠೆ, ಜಾತಿ, ಬಣ, ಗುಂಪುಗಾರಿಕೆ ಜೋರಾಗಿ ವಿಜೃಂಭಿಸಲಿದೆ. ಒಂದೇ ಕುಟುಂಬದ ಸಹೋದರ, ಸಹೋದರಿಯರು, ಸಂಬಂಧಿಗಳು ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸುವ ಸಂದರ್ಭಗಳು ಹೆಚ್ಚಾಗಿದ್ದು, ಜಿದ್ದಾಜಿದ್ದಿಗೆ ವೇದಿಕೆಯಾಗಲಿದೆ. ಇನ್ನೂ ಶೇ.50ರಷ್ಟು ಮಹಿಳಾ ಮೀಸಲು ಇರುವುದರಿಂದ ನಾರಿಯರ ಫೈಟ್ ಸಹ ಜೋರಾಗಿ ನಡೆಯಲಿದೆ.

      ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದ ಜೆಡಿಎಸ್ ಗ್ರಾಮೀಣ ರೈತರ ಒಲವನ್ನು ಗಳಿಸಿರುವ ಪಕ್ಷ. ಕುಮಾರಸ್ವಾಮಿ ಅವರ ರೈತರ ಸಾಲಮನ್ನಾ, ಕೃಷಿ ಸಂಬಂಧಿತ ಯೋಜನೆಗಳು ಈಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಕೈ ಹಿಡಿಯುವ ವಿಶ್ವಾಸವಿದೆ. ಯಾರನ್ನು ಬೆಂಬಲಿಸಬೇಕೆನ್ನುವ ಬಗ್ಗೆ ಆಯಾ ಜಿಲ್ಲಾ, ತಾಲೂಕು ಮುಖಂಡರಿಗೆ ಬಿಡಲಾಗಿದೆ. ಶೀಘ್ರದಲ್ಲೇ ವೀಕ್ಷಕರ ನೇಮಕವಾಗಲಿದೆ.

-ಕೆ.ಎ.ತಿಪ್ಪೇಸ್ವಾಮಿ ಜೆಡಿಎಸ್ ವಿಧಾನಪರಿಷತ್ ಸದಸ್ಯರು.

      ಗ್ರಾಮ ಮಟ್ಟದಲ್ಲಿ ಬಿಜೆಪಿ ಸಂಘಟನೆಯಿಲ್ಲ. ಹೀಗಾಗಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಂದೂಡಲು ನಾಮನಿರ್ದೇಶಿತರನ್ನು ನೇಮಕ ಮಾಡಲು ಸರಕಾರ ಮುಂದಾಗಿತ್ತು. ಕಾಂಗ್ರೆಸ್ ಕೋರ್ಟ್‍ನಲ್ಲಿ ಪ್ರಶ್ನಿಸಿ ರಾಜೀವ್‍ಗಾಂಧಿಯವರು ಗ್ರಾಮಸ್ವರಾಜ್ ಅವರ ಆಶಯಕ್ಕೆ ಪೂರಕವ¨ವಾಗಿ ಪ್ರಜಾಸತ್ತಾತ್ಮಕವಾಗಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿಸಿದೆ. ಕಾಂಗ್ರೆಸ್ ಪ್ರತಿಜ್ಞಾವಿಧಿ, ಆರೋಗ್ಯ ಹಸ್ತ, ಸರಕಾರದ ಭ್ರಷ್ಟಾಚಾರ, ಇಲಾಖೆಯಲ್ಲಿನ ಲೋಪಗಳನ್ನು ಬಯಲು ಮಾಡಿರುವುದು ಪಕ್ಷದ ಬೆಂಬಲಿತರ ಆಯ್ಕೆಗೆ ಪೂರಕವಾಗಲಿದ್ದು, ಜಿಲ್ಲೆಯ 329 ಗ್ರಾಪಂಗಳ ಪೈಕಿ ಕಳೆದ ಬಾರಿ 208 ಪಂಚಾಯಿತಿಯಲ್ಲಿ ಅಧಿಕಾರ ಹಿಡಿದಿದ್ದ ಕಾಂಗ್ರೆಸ್ ಬೆಂಬಲಿತರು ಈ ಬಾರಿ ಇನ್ನೂ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ.

-ಮುರುಳೀಧರ ಹಾಲಪ್ಪ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕರು.

      ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳ ಜನಪರ ಕಾರ್ಯಕ್ರಮಗಳನ್ನು ರಾಜ್ಯದ ಜನತೆ ಮೆಚ್ಚಿದ್ದಾರೆ ಎನ್ನುವುದಕ್ಕೆ ಇತ್ತೀಚಿನ ಉಪಚುನಾವಣೆ ಫಲಿತಾಂಶಗಳೇ ಸಾಕ್ಷಿ. ಬಿಜೆಪಿ ಬೆಂಬಲಿಗರು ಗ್ರಾಪಂ ಚುನಾವಣೆ ಅಖಾಡದಲ್ಲೂ ಜಯಭೇರಿ ಬಾರಿಸಲಿದ್ದು, 125 ವರ್ಷಗಳ ಇತಿಹಾಸದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಮೂಲೆಗುಂಪಾಗುವುದು ನಿಶ್ಚಿತ. ಗ್ರಾಮ ಸ್ವರಾಜ್ ಸಮಾವೇಶ ಈ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ಸ್ಫೂರ್ತಿ ತುಂಬಲಿದೆ.

– ಬಿ.ಸುರೇಶ್‍ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷರು.

ಎಸ್.ಹರೀಶ್ ಆಚಾರ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap