ತುಮಕೂರು :
ಕೇಂದ್ರ ಸರಕಾರ 2017ರಲ್ಲಿ ಏಕರೂಪ ಸರಕು ಸೇವಾ ತೆರಿಗೆ ಕಾಯ್ದೆಯನ್ನು(ಜಿಎಸ್‍ಟಿ) ರಾಷ್ಟ್ರವ್ಯಾಪಿ ಜಾರಿಗೆ ತಂದಾಗ ಮುಕ್ತಕಂಠದಿಂದ ಸ್ವಾಗತಿಸಿದ್ದ ಬಹುಪಾಲು ತೆರಿಗೆದಾರರು, ತೆರಿಗೆ ಸಲಹೆಗಾರರೇ ಇಂದು ಈ ಜಿಎಸ್‍ಟಿ ಏಕಾದರೂ ಬಂತಪ್ಪ. ಜಿಎಸ್‍ಟಿ ಅಡಿ ತರುತ್ತಿರುವ ದಿನಕ್ಕೊಂದು ನಿಯಮಗಳು ತೆರಿಗೆದಾರರನ್ನು ಬಿಡಿ, ತೆರಿಗೆ ಸಲಹೆಗಾರರಿಗೆ ತಿಳಿಯದಾಗಿ, ಅರ್ಥವಾಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುವಂತಾಗಿದೆ.
ಇದೇ ಕಾರಣಕ್ಕೆ ಪಶ್ಚಿಮ ಮಹಾರಾಷ್ಟ್ರ ತೆರಿಗೆ ಸಮಾಲೋಚಕರ ಸಂಘ ಇಂದು ಅಖಿಲ ಭಾರತ ಮಟ್ಟದ ಪ್ರತಿಭಟನೆಗೆ ಕರೆ ನೀಡಿದ್ದು, ಕರ್ನಾಟಕ ರಾಜ್ಯ ಸೇರಿದಂತೆ ದೇಶದ ವಿವಿಧೆಡೆಯ 130ಕ್ಕೂ ಅಧಿಕ ತೆರಿಗೆ ಸಮಾಲೋಚಕರು, ತೆರಿಗೆದಾರ ಸಂಘಟನೆಗಳು ಬೆಂಬಲ ನೀಡಿ ಸಿಜಿಎಸ್‍ಟಿ ಕಚೇರಿ ಎದುರು ಪ್ರತಿಭಟನೆಗೆ ಮುಂದಾಗಿ ಹಣಕಾಸು ಸಚಿವರಿಗೆ ಮನವಿ ಸಲ್ಲಿಸಲು ನಿರ್ಧರಿಸಿವೆ. ತುಮಕೂರು ಜಿಲ್ಲಾ ತೆರಿಗೆ ಸಲಹೆಗಾರರ ಸಂಘದವರು ನಗರದ ರಿಂಗ್ ರಸ್ತೆಯಲ್ಲಿರುವ ಕೇಂದ್ರದ ಜಿಎಸ್‍ಟಿ ಕಚೇರಿ ಎದುರು ಇಂದು ಬೆಳಿಗ್ಗೆ 10.30ಕ್ಕೆ ಪ್ರತಿಭಟನೆ ನಡೆಸಲಿದ್ದು, ಜಿಎಸ್‍ಟಿ ತೆರಿಗೆಯನ್ನು ಸರಳೀಕರಿಸಿ ಅವೈಜ್ಞಾನಿಕ ತೆರಿಗೆ ನಿಯಮಗಳನ್ನು ರದ್ದುಗೊಳಿಸಬೇಕೆಂದು ಸಂಘಟನೆಯ ಅಧ್ಯಕ್ಷರಾದ ಟಿ.ಎಲ್.ಸುರೇಶ್‍ರಾವ್, ಪ್ರಧಾನ ಕಾರ್ಯದರ್ಶಿ ಕೆ.ಜಿ.ಸುರೇಶ್, ಹಿರಿಯ ತೆರಿಗೆ ಸಲಹೆಗಾರರಾದ ಎಸ್.ಪ್ರಕಾಶ್ ಹಾಗೂ ಎನ್.ಫಣೀಂದ್ರ ಒತ್ತಾಯಿಸಿದ್ದಾರೆ.
ಸಮಸ್ಯೆ ಏನಾಗಿದೆ :
ರಾಜ್ಯ ಸರಕಾರಗಳಿಗಿದ್ದ ಪರೋಕ್ಷ ತೆರಿಗೆ ಅವಕಾಶವನ್ನು ಕೇಂದ್ರ ಸರಕಾರ ಹಿಂಪಡೆದು ಏಕರೂಪ ಜಿಎಸ್‍ಟಿ ಕಾನೂನನ್ನು ರಾಷ್ಟ್ರವ್ಯಾಪ್ತಿ ಜಾರಿಗೆ ಬಂದಾಗ ತೆರಿಗೆ ವಿಧಾನ ಸರಾಗವಾಗಿ ತೆರಿಗೆ ಹೊರೆ ಇಳಿಯುತ್ತದೆಂದು ಭಾವಿಸಿದ್ದ ತೆರಿಗೆ ಸಲಹೆಗಾರರು, ತೆರಿಗೆದಾರರು ಸದ್ಯ ಅವೈಜ್ಞಾನಿಕವಾಗಿ ಅನುಷ್ಟಾನಗೊಳ್ಳಲ್ಪಟ್ಟಿರುವ ಜಿಎಸ್‍ಟಿ ಸುಳಿಯಲ್ಲಿ ಸಿಲುಕಿ ಹೊರಬರಲಾಗದೆ ತ್ರಿಶಂಕು ಸ್ಥಿತಿ ಎದುರಿಸುತ್ತಿದ್ದಾರೆ. ಇದರಿಂದ ಮಾನಸಿಕವಾಗಿ, ಆರ್ಥಿಕವಾಗಿ ಹೊಡೆತ ಅನುಭವಿಸುವಂತಾಗಿದ್ದು, ವ್ಯಾಪಾರ ಹಾಗೂ ವೃತ್ತಿ ನಿರತರು ಮೇಲೆ ಪ್ರತಿಕೂಲ ಪರಿಣಾಮಬೀರಿದೆ. ರಾಷ್ಟ್ರದ ಪ್ರಗತಿ ಸೂಚ್ಯಂಕ (ಜಿಡಿಪಿ) ಮೈನಸ್ ಪ್ರತಿಶತಕ್ಕೆ ಇಳಿದಿರುವುದೇ ಜಿಎಸ್‍ಟಿಯ ಹೊಡೆತಕ್ಕೆ ಜ್ವಲಂತ ನಿದರ್ಶನವೆಂದು ವಿಶ್ಲೇಷಿಸುತ್ತಿದ್ದಾರೆ.
ಎಲ್ಲವೂ ಆನ್‍ಲೈನ್ ಅಂಥಾರೆ, ವೆಬ್‍ಸೈಟ್ ಸಮರ್ಪಕವಾಗಿ ತೆರೆಯೋಲ್ಲ :
ಪ್ರಜಾಪ್ರಗತಿಯೊಂದಿಗೆ ಪ್ರತಿಕ್ರಿಯಿಸಿದ ಹಿರಿಯ ತೆರಿಗೆ ಸಮಾಲೋಚಕರಾದ ಎಸ್.ಪ್ರಕಾಶ್ ಅವರು ಹಾಲಿ ಜಿಎಸ್‍ಟಿಯಲ್ಲಿ ತೆರಿಗೆ ಪಾವತಿ, ದಾಖಲೆ ಸಲ್ಲಿಕೆ ಎಲ್ಲವನ್ನು ಆನ್‍ಲೈನ್ ಮಾಡಲಾಗಿದ್ದು, ವೆಬ್‍ಸೈಟ್ ಪೋರ್ಟಲ್ ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡದಿರುವುದು ದೊಡ್ಡ ತೊಡಕಾಗಿದೆ. ತೆರಿಗೆ ಪಾವತಿ ವಿಧಾನದಲ್ಲಿ ಕಣ್ತಪ್ಪಿ ಆಗುವ ಸಣ್ಣ ತಪ್ಪನ್ನು ಸರಿಪಡಿಸಿಕೊಳ್ಳಲಾಗದ ಅವಕಾಶವೇ ಇಲ್ಲದಂತಾಗಿದ್ದು, ವೆಬ್ ಪೋರ್ಟಲ್‍ನಲ್ಲಿ ತಾಂತ್ರಿಕ ತೊಂದರೆಯಾಗಿ ಪಾವತಿ ವಿಳಂಬವಾದರೂ ಅದಕ್ಕೆ ದಂಡ ಹಾಕಿ ತೆರಿಗೆದಾರರು ಸಲಹೆಗಾರರನ್ನು ಇಬ್ಬರನ್ನು ಹೊಣೆ ಮಾಡಿ ಅಧಿಕ ದಂಡವನ್ನು ಹಾಕುತ್ತಿರುವುದು ತೀವ್ರ ಸಂಕಷ್ಟಕ್ಕೆ ನೂಕಿದೆ. ಕೋವಿಡ್ ಸಂದರ್ಭದಲ್ಲೂ ಬಿಡದೇ ತೆರಿಗೆದಾರರನ್ನು ನೋಟಿಸ್ ನೀಡಿ ಶೋಷಿಸಲಾಗಿದೆ. ತುಮಕೂರು ಜಿಲ್ಲೆಯೊಂದರಲ್ಲೇ ಜಿಎಸ್‍ಟಿ ತೆರಿಗೆ ಹೊರೆಯ ಮಾನಸಿಕ ಒತ್ತಡಕ್ಕೆ ಸಿಲುಕಿ ಐವರು ತೆರಿಗೆ ಸಮಾಲೋಚಕರು ಸಾವಿನ ಹಾದಿ ಹಿಡಿದಿರುವುದು ಜಿಎಸ್‍ಟಿಯ ಕರಾಳತೆಗೆ ಸಾಕ್ಷಿಯಾಗಿದೆ ಎಂದು ಬೇಸರಿಸುತ್ತಾರೆ.
ಹೆಸರಿಗಷ್ಟೇ ಹೆಲ್ಪ್‍ಡೆಸ್ಕ್ ಸ್ಪಂದನೆಯೇ ಇಲ್ಲ :
ಜಿಎಸ್‍ಟಿ ಘೋಷಿಸಿದ ಆರಂಭದಲ್ಲಿ ಒಂದು ವರ್ಷ ಪ್ರಯೋಗಾತ್ಮಕ ಅವಧಿ, ಈ ಸಂದರ್ಭದಲ್ಲಿ ಏನೇ ತಪ್ಪುಗಳಾದರೂ ಸರಿಪಡಿಸಿಕೊಳ್ಳಲು ಅವಕಾಶ ನೀಡುತ್ತೇವೆ ಎಂದಿದ್ದವರೇ ಸದ್ಯ ಪ್ರಾರಂಭಿಕ ವರ್ಷದ ತಪ್ಪುಗಳಿಗೂ ನೋಟಿಸ್ ನೀಡಿ ತೆರಿಗೆದಾರರನ್ನು ಹೈರಾಣಾಗಿಸುತ್ತಿದ್ದಾರೆ. ಜಿಎಸ್‍ಟಿಯಿಂದ ಹೆಸರಿಗಷ್ಟೇ ಹೆಲ್ಪ್ ಡೆಸ್ಕ್ ಸಹಾಯವಾಣಿಯನ್ನು ತೆರೆಯಲಾಗಿದೆ. ಆದರೆ ಅಲ್ಲಿಂದ ಸೂಕ್ತ ಸ್ಪಂದನೆಯೇ ಇಲ್ಲ. ಕರೆಯನ್ನು ಸ್ವೀಕರಿಸುವುದಿಲ್ಲ. ಒಂದೇ ವೇಳೆ ಕರೆ ಸ್ವೀಕರಿಸಿದರೂ ಅವರಿಗೆ ಸರಿಯಾಗಿ ಮಾಹಿತಿ ಇರುವುದಿಲ್ಲ ಎಂದು ತೆರಿಗೆ ಸಮಾಲೋಚಕರಾದ ಫಣೀಂದ್ರ ಹಾಗೂ ಸುರೇಶ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ದಿಢೀರನೇ ಹೊಸ ನಿಯಮಗಳು :
ವ್ಯಾಟ್ ಇದ್ದಾಗಲೇ ಚೆನ್ನಾಗಿತ್ತು. ಜಿಎಸ್‍ಟಿ ಬಂದು ಉದ್ದಿಮೆ, ವ್ಯಾಪಾರ ಹಳ್ಳಹಿಡಿಯುವಂತಾಯಿತು ಎನ್ನುತ್ತಿರುವ ತೆರಿಗೆ ಸಮಾಲೋಚಕರುಗಳು ಜಿಎಸ್‍ಟಿ ಕಾಯ್ದೆಗಿಂತ ರಾತ್ರೋರಾತ್ರಿ ದಿಢೀರನೇ ಹೊರಡಿಸುವ ಅಧಿಸೂಚನೆಗಳೇ ನಮಗೆ ದೊಡ್ಡ ತಲೆನೋವಾಗಿದೆ. ಏನು ಬದಲಾವಣೆ ಆಗಿದೆ ಎಂದು ತಿಳಿಯುವಷ್ಟರಲ್ಲಿ ಮತ್ತೊಂದು ಹೊಸ ನಿಯಮ ಜಾರಿಯಾಗಿರುತ್ತದೆ. ಕಳೆದ ಮೂರು ವರ್ಷಗಳಿಂದ ಹೊಸದಾಗಿ 1000ದಷ್ಟು ನಿಯಮ, ತಿದ್ದುಪುಡಿಗಳು ಜಾರಿಗೊಂಡಿವೆ. ಕಾಯ್ದೆಯ ಅವೈಜ್ಞಾನಿಕ ನಿಯಮಗಳಿಂದ ತೆರಿಗೆದಾರರಿಗೆ ಯಾವ ರೀತಿ ಹೊರೆಯಾಗುತ್ತದೆ ಎಂಬುದಕ್ಕೆ ಮಾರಾಟಗಾರ ತಾನು ಮಾರಿದ ವಸ್ತುವಿಗೆ ನೀಡಿದ ರಶೀತಿಯನ್ನು ನಿಗದಿತ ದಿನಾಂಕದಂದು ಜಿಎಸ್‍ಟಿ ಪೋರ್ಟಲ್‍ಗೆ ಅಪ್ಲೋಡ್ ಮಾಡದಿದ್ದರೆ ಸಾಮಗ್ರಿ ಖರೀದಿಸಿದವರೇ ಮತ್ತೊಮ್ಮೆ ತೆರಿಗೆ ಪಾವತಿಸಬೇಕಾಗುತ್ತದೆ. ಅದನ್ನು ಹಿಂಪಡೆಯಲು ಮತ್ತೊಂದು ತಿಂಗಳು ಕಾಯಬೇಕು. ಇದರಿಂದ ಮಾರಾಟಗಾರರು ಹಾಗೂ ಖರೀದಿದಾರರು ರೋಸಿಹೋಗಿದ್ದಾರೆಂದು ಪ್ರಕಾಶ್ ಮಾಹಿತಿ ನೀಡಿದರು.
ಜಿಎಸ್‍ಟಿಯಲ್ಲಿ ಗೊಂದಲಗಳು ಪರಿಹಾರವಾಗದೆ ದೇಶದ ಬೊಕ್ಕಸಕ್ಕೊ ಹೊಡೆತ ಮಾತ್ರವಲ್ಲದೆ, ತೆರಿಗೆದಾರರ ಹಿತಕ್ಕೂ ಧಕ್ಕೆಯಾಗುತ್ತದೆ. ನೋಂದಾಯಿತ ಜಿಎಸ್‍ಟಿ ತೆರಿಗೆದಾರರ ಮೇಲಿನ ಗದಾಪ್ರಹಾರ ನಿಲ್ಲಬೇಕು. ಜಿಎಸ್‍ಟಿ ನೋಂದಾವಣಿಗೆ ಅರ್ಜಿ ಹಾಕಿದವರನ್ನೇ ಅನರ್ಹರೆಂದು ಕಾಣುವ ಅಧಿಕಾರಿಗಳ ಮನೋಭಾವಕ್ಕೆ ಕಡಿವಾಣ ಬೀಳಬೇಕು. ದೇಶ ಆತ್ಮನಿರ್ಭರತೆಯತ್ತ ಸಾಗಬೇಕಾದರೆ ಇರುವ ತೆರಿಗೆ ಕಾನೂನು ತೊಡಕುಗಳನ್ನು ಮೊದಲು ಸರಿಪಡಿಸಬೇಕು ಎಂದು ತೆರಿಗೆ ಸಲಹೆಗಾರರ ಸಂಘದ ಪ್ರಮುಖರು ಆಗ್ರಹಿಸಿದ್ದಾರೆ.
ದೇಶದ ಪ್ರತೀ ಪ್ರಜೆಯೂ ಆತ್ಮನಿರ್ಭರರಾಗಿ ಸ್ವಾವಲಂಬಿಯಾಗಿ ಬದುಕಬೇಕು ಎನ್ನುವ ಕೇಂದ್ರ ಸರಕಾರ ಜಿಎಸ್‍ಟಿ ನೋಂದಾಯಿತ ವರ್ತಕರು-ಉದ್ದಿಮೆದಾರರು ಸ್ವಾವಲಂಬಿ ಬದುಕು ಸಾಗಿಸಲು ಕಾಯ್ದೆಯಡಿ ಇರುವ ಅಡ್ಡಿ ಆತಂಕವನ್ನು ಮೊದಲು ನಿವಾರಿಸಬೇಕು. ತೆರಿಗೆ ಪಾವತಿಯಲ್ಲಿನ ತಪ್ಪುಗಳನ್ನೇ ಮುಂದು ಮಾಡಿ 1,63,000ದಷ್ಟು ಜಿಎಸ್‍ಟಿ ನೋಂದಣಿಯನ್ನೇ ರದ್ದು ಮಾಡಿದರೆ ಉದ್ಯಮಿ, ವ್ಯಾಪಾರಸ್ಥರು ಮುಂದುವರಿಯಾವುದಾದರೂ ಹೇಗೆ? ಇನ್ನಾದರೂ ಕೇಂದ್ರ ಹಣಕಾಸು ಸಚಿವರು ಕಣ್ತೆರೆಯಬೇಕು.
-ಪ್ರಕಾಶ್, ಹಿರಿಯ ತೆರಿಗೆ ಸಲಹೆಗಾರರು, ತುಮಕೂರು.