ಪಕ್ಷ ತ್ಯಜಿಸುವಂತೆ ಗುಬ್ಬಿ ಶಾಸಕರಿಗೆ ದಳಪತಿ ಸಂದೇಶ!!

   ತುಮಕೂರು :

      ಜೆಡಿಎಸ್ ಭದ್ರಕೋಟೆಯಾಗಿದ್ದ ತುಮಕೂರು ಜಿಲ್ಲೆಯಲ್ಲಿ ಪಕ್ಷದ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು ಪಕ್ಷ ತೊರೆಯುವ ಹಾದಿಯಲ್ಲಿದ್ದರೆ, ದಳಪತಿಗಳನ್ನು ಅಂತಹವರನ್ನು ಕೈ ಬಿಟ್ಟು, ಹೊಸಬರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಪರ್ಯಾಯ ನಾಯಕತ್ವವನ್ನು ಸೃಷ್ಟಿಸುವ ಕಸರತ್ತಿಗೆ ಮುಂದಾಗಿದ್ದಾರೆ. ಇದಕ್ಕೆ ಬುನಾದಿಯೇ ಗುಬ್ಬಿಯಲ್ಲಿ ಸೋಮವಾರ ಹಾಲಿಶಾಸಕ ಶ್ರೀನಿವಾಸ್ ಅವರನ್ನು ಟಾರ್ಗೆಟ್ ಮಾಡಿ ನಡೆದ ಪಕ್ಷ ಸೇರ್ಪಡೆ ಸಮಾವೇಶ.

ಗುಬ್ಬಿಯ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸೋಮವಾರ ನಡೆದ ಜೆಡಿಎಸ್ ಸಮಾವೇಶ ಯುವ ಮುಖಂಡ ನಾಗರಾಜು ಪಕ್ಷ ಸೇರ್ಪಡೆ ನೆಪದಲ್ಲಿ ಸಂಘಟಿತವಾಗಿದ್ದರೂ, ವರಿಷ್ಠರ ವಿರುದ್ಧ ರೆಬೆಲ್ ಆಗಿರುವ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಎಂಎಲ್ಸಿ ಕಾಂತರಾಜು ಅವರಿಗೆ ಸಂದೇಶ ನೀಡಲೇ ಆಯೋಜಿಸಿದಂತಿತ್ತು.

ಶಾಸಕರ ಫೋಟ್ ಔಟ್:

     ಸಮಾವೇಶದ ವೇದಿಕೆಯಲ್ಲಿ ಅಳವಡಿಸಿದ್ದ ಫ್ಲೆಕ್ಸ್, ಸ್ವಾಗತ ಫ್ಲೆಕ್ಸ್‍ಗಳಲ್ಲಿ ಎಲ್ಲೂ ಬಂಡಾಯ ಸಾರಿರುವ ಶಾಸಕ ಎಸ್.ಆರ್. ಶ್ರೀನಿವಾಸ್, ಎಂಎಲ್ಸಿ ಕಾಂತರಾಜು ಅವರ ಭಾವಚಿತ್ರಗಳು ಕಂಡುಬರಲಿಲ್ಲ. ಇನ್ನೂ ಸಮಾವೇಶದ ವೇದಿಕೆಯನ್ನು ರೆಬೆಲ್‍ಗಳಿಗೆ ಟಾಂಗ್ ಕೊಡಲು ಪ್ರಮುಖ ಅಸ್ತ್ರವಾಗಿಸಿಕೊಂಡ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಶಾಸಕ ಶ್ರೀನಿವಾಸ್ ಪಕ್ಷ ತ್ಯಜಿಸುವಂತೆ ನೇರ ಸಂದೇಶ ರವಾನಿಸಿದರು. ದಳಪತಿಗಳ ಈ ಸಂದೇಶ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳಬೇಕೆಂದಿರುವ ಶಾಸಕರ ಹಾದಿಯನ್ನು ಸುಗಮಗೊಳಿಸಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ.

ಶುಭಹಾರೈಸುತ್ತಲೇ ಕುಟುಕಿದ ಎಚ್ಡಿಕೆ:

     ಹಾನಗಲ್, ಸಿಂದಗಿ ಉಪಚುನಾವಣೆ ಪ್ರಚಾರವನ್ನು ಬದಿಗಿರಿಸಿ ಶ್ರೀನಿವಾಸ್ ವಿರುದ್ಧ ಹರಿಹಾಯಲೆಂಬಂತೆ ಸಮಾವೇಶಕ್ಕೆ ಆಗಮಿಸಿದ್ದ ಕುಮಾರಸ್ವಾಮಿ ಅವರು ತಮ್ಮ ಮನದಲ್ಲಿ ಕುದಿಯುತ್ತಿದ್ದ ಅಸಮಾಧಾನವನ್ನೆಲ್ಲ ಬಹಿರಂಗವಾಗಿ ಹೊರಹಾಕಿದರು. ನನ್ನ ಸ್ನೇಹಿತರಾದ ಶಾಸಕ ಶ್ರೀನಿವಾಸ್ ಅವರಿಗೆ ನಮ್ಮೊಂದಿಗೆ ಇರಲು ಇಚ್ಚೆಯಿಲ್ಲ. ಪಕ್ಷದಲ್ಲಿದ್ದು ಕತ್ತುಕೊಯ್ಯುವುದು ಬೇಡ. ಅವರು ಎಲ್ಲಿಗಾದರೂ ಹೋಗಲಿ ಶುಭ ಹಾರೈಸುತ್ತೇನೆ ಎನ್ನುವ ಮೂಲಕ ಪಕ್ಷ ಬಿಡುವಂತೆ ನೇರವಾಗಿಯೇ ಸೂಚಿಸಿ, ವೈಮನ್ಯಸದ ಗುಟ್ಟನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಪಕ್ಷೇತರರಾಗಿ ನಿಂತಾಗ ನಾನೇ ಬೆಂಬಲಿಸಿದ್ದೆ:

      ಮಾಜಿ ಶಾಸಕರಾಗಿದ್ದ ಜಿ.ಎಸ್.ಶಿವನಂಜಪ್ಪ ಅವರಿಗೆ 2004ರಲ್ಲಿ ದೇವೇಗೌಡರು ಜೆಡಿಎಸ್ ಟಿಕೆಟ್ ಕೊಟ್ಟ ಸಂದರ್ಭದಲ್ಲಿ ಜಿಪಂ ಸದಸ್ಯರಾಗಿದ್ದ ಎಸ್.ಆರ್.ಶ್ರೀನಿವಾಸ್ ಪಕ್ಷೇತರರಾಗಿ ನಿಲ್ಲಲ್ಲು ನಾನೇ ಬೆಂಬಲಿಸಿದ್ದೆ. ನಂತರ 2009ರ ಚುನಾವಣೆಯಲ್ಲೂ ನಮ್ಮೊಂದಿಗೆ ಅನ್ಯೂನ್ಯವಾಗಿದ್ದರು. 2013ರ ಚುನಾವಣೆ ಬಳಿಕ ನಮ್ಮ ನಡುವಿನ ಒಡನಾಟಗಳು ಕಡಿಮೆಯಾಗುತ್ತಾ ಬಂದವು.ಆದರೂ 2018ರಚುನಾವಣೆ ಹೊತ್ತಿಗೆ ಹೋಟೆಲೊಂದರಲ್ಲಿ ರಾಜಿ-ಪಂಚಾಯ್ತಿ ನಡೆಸಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಮಂತ್ರಿಸ್ಥಾನವನ್ನು ಕಲ್ಪಿಸಿದೆ. ಇದೇ ನನ್ನ ತಪ್ಪಾಯಿತು. 2019ರ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಲು ಯಾರು ಯಾರ ಮನೆ ಬಾಗಲಿಗೆ ಬೇಟಿಕೊಟ್ಟು ಏನೆಲ್ಲ ಮಾಡಿದರು ಎಂಬುದು ಗೊತ್ತಿದೆ. ತುರುವೇಕೆರೆ ಕೃಷ್ಣಪ್ಪ ಸೋಲಿಗೆ ಕಾರಣರಾದವರ್ಯಾರು, ಸಿ.ಎಸ್.ಪುರದಲ್ಲಿ ಏನೆಲ್ಲ ಮಾಡಿದರು ತಿಳಿದಿದೆ. ಏತನ್ಮಧ್ಯೆ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಸರಕಾರ ಪತನಗೊಂಡ ಬಳಿಕ ನಮ್ಮ ವಿರುದ್ಧದ ಟೀಕೆಗಳು ಹೆಚ್ಚಾದವು.

     ಕಳೆದೆರೆಡು ವರ್ಷಗಳಿಂದ ನಿರಂತರ ಟೀಕೆ ಮಾಡುತ್ತಿದ್ದು, ಇತ್ತೀಚೆಗಷ್ಟೇ 123 ಜೆಡಿಎಸ್ ಗುರಿಯೇ ಇಲ್ಲ. 23 ಅಷ್ಟೇ ಕುಮಾರಸ್ವಾಮಿ ಟಾರ್ಗೆಟ್ ಎಂದೆಲ್ಲ ಹೇಳಿಕೆ ನೀಡಿದರು. ಆದರೂ ಸಮಾವೇಶಕ್ಕೆ ಶ್ರೀನಿವಾಸ್ ಅವರನ್ನು ಆಹ್ವಾನಿಸಲು ನಾಗರಾಜ್‍ಗೆ ಹೇಳಿದ್ದೆ. ನಿಮ್ಮೊಂದಿಗೆ ಪಕ್ಷ ಸಂಘಟನೆ ಮಾಡುವುದಾಗಿಯೂ ತಿಳಿಸಿ ಎಂತಲೂ ಹೇಳಿದ್ದೆ. ಆದರೆ ಅವರು ಸಮಾವೇಶಕ್ಕೆ ಬರುವುದಿಲ್ಲ ಎಂದು ಹೇಳಿದರು. ಸಮಾವೇಶಕ್ಕೆ ಅಡ್ಡಿಪಡಿಸುವ ಪ್ರಯತ್ನದ ನಡುವೆತಯ ಸಮಾವೇಶವನ್ನು ಯಶಸ್ವಿಗೊಳಿಸಿದ್ದೀರಾ ಕಾರ್ಯಕರ್ತರಿಗೆ ಕೈ ಮುಗಿದರು. ಪಕ್ಷ ಸಂಘಟನೆ ಬಗ್ಗೆ ಮಾತಾಡುವಾಗ ಭಾವುಕರಾದರು.

ಜೆಡಿಎಸ್‍ನಲ್ಲಿ ಉಳಿಯುವುದರಲ್ಲಿ ಅರ್ಥವಿಲ್ಲ:   

    ಸಮಾವೇಶದಲ್ಲಿ ದಳಪತಿ ಮಾಜಿ ಸಿಎಂ ಕುಮಾರಸ್ವಾಮಿ ಆಡಿದ ಮಾತುಗಳಿಗೆ ಪ್ರತಿಕ್ರಿಯಿಸಿರುವ ಶಾಸಕ ಎಸ್.ಆರ್.ಶ್ರೀನಿವಾಸ್ ಸಾರ್ವಜನಿಕವಾಗಿ ಕಣ್ಣೀರು ಹಾಕಿ, ಸುಳ್ಳು ಹೇಳಿ ಜನರನ್ನು ದಿಕ್ಕುತಪ್ಪಿಸುವ ಪ್ರಯತ್ನ ಬೇಡ. ಸಿ.ಎಸ್.ಪುರ ವ್ಯಾಪ್ತಿಯಲ್ಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಮೋಸವೆಸಗಿದ್ದರೆ ನನ್ನ ಮನೆ ಹಾಳಾಗಲೀ, ಇಲ್ಲ ಅವರ ಮನೆ ಹಾಳಾಗಲಿ. ಸುಳಿ ಒಣಗಿದ ತೆಂಗಿನಮರಕ್ಕೆ ಪರಿಹಾರ ಕೊಡಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆಂದು ಹೇಳಿಕೆ ನೀಡಿರುವ ಕುಮಾರಸ್ವಾಮಿ ಅವರಲ್ಲಿ ಅಪ್ರಬುದ್ಧತೆ ಎದ್ದುಕಾಣುತ್ತಿದೆ. ಹೇಮಾವತಿ ನೀರಾವರಿ ಪ್ರದೇಶವಾಗಿರುವ ಗುಬ್ಬಿಯಲ್ಲಿ ಅರಸೀಕೆರೆಯ ಪರಿಸ್ಥಿತಿಯಿಲ್ಲ. ಭೌಗೋಳಿಕ ಪರಿಸ್ಥಿತಿ ಅರಿತು ಮಾತಾಡಲಿ ಎಂದು ತಿರುಗೇಟು ನೀಡಿದರು.

ಪಕ್ಷಾಂತರ ಪರ್ವಕ್ಕೆ ಮುನ್ನುಡಿ :

 

     ಗುಬ್ಬಿ ಜೆಡಿಎಸ್ ಸೇರ್ಪಡೆ ಸಮಾವೇಶ ಶಾಸಕ ವರ್ಸಸ್ ದಳಪತಿಯ ವಾಕ್ಸಮರಕ್ಕೆ ಅಸ್ತ್ರವಾಗಿದ್ದು ಮಾತ್ರವಲ್ಲದೆ ಮುಂದಿನ ಪಕ್ಷಾಂತರ ಪರ್ವಕ್ಕೂ ಮುನ್ನುಡಿ ಬರೆದಿದೆ. ಜೆಡಿಎಸ್ ಶಾಸಕರಾದ ಎಸ್.ಆರ್.ಶ್ರೀನಿವಾಸ್, ಕಾಂತರಾಜು ಅವರಂತೆಯೇ ಮತ್ತಷ್ಟು ಜೆಡಿಎಸ್ ಹಾಲಿ, ಮಾಜಿ ಶಾಸಕರು ಇವರ ಹಾದಿ ತುಳಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಸಹೋದರರು ಕಾಂಗ್ರೆಸ್ ಸೇರ್ಪಡೆಗೊಳ್ಳುವುದಾಗಿ ಹೇಳಿಕೆ ನೀಡಿರುವುದು, ಬಿಜೆಪಿಯ ಮಾಜಿ ಶಾಸಕರು, ಹಾಲಿ ಶಾಸಕರು ಸಹ ಕಾಂಗ್ರೆಸ್‍ನತ್ತ ಒಲವು ತೋರುತ್ತಿರುವ ಸಂಗತಿಗಳು, ಜಿಲ್ಲೆಯಲ್ಲಿ ರಾಜಕೀಯ ಹಂಗಾಮವೇ ಮುಂದಿನ ದಿನಗಳಲ್ಲಿ ಸಂಭವಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

     ನಾನು ಪಕ್ಷ ಬಿಡ್ತಿನಿ ಅಂಥಾ ಹೇಳಿಲ್ಲ. ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ, ಡಾ.ಜಿ.ಪರಮೇಶ್ವರ ಅವರನ್ನು ಭೇಟಿಯಾಗಿದ್ದು ಸಾರ್ವಜನಿಕ ಕೆಲಸ ಕಾರ್ಯಗಳಿಗಾಗಿ. ಇಷ್ಟೆಲ್ಲ ಆದ ಮೇಲೂ ಜೆಡಿಎಸ್‍ನಲ್ಲಿ ಉಳಿಯುವುದರಲ್ಲಿ ಅರ್ಥವಿಲ್ಲ. ಕಾರ್ಯಕರ್ತರು, ಬೆಂಬಲಿಗರ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳುವೆ.

-ಎಸ್.ಆರ್.ಶ್ರೀನಿವಾಸ್, ಗುಬ್ಬಿ ಶಾಸಕ.

ವಾಸು, ಕಾಂತರಾಜು ಕಾಂಗ್ರೆಸ್ ಸೇರ್ಪಡೆ ಖಚಿತ

     ಜೆಡಿಎಸ್ ವರಿಷ್ಠರ ನಡೆಯಿಂದ ಅಸಮಾಧಾನಗೊಂಡಿರುವ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಎಂಎಲ್ಸಿ ಕಾಂತರಾಜು ಕಾಂಗ್ರೆಸ್ ಸೇರ್ಪಡೆಗೊಳ್ಳುವುದು ಖಚಿತವಾಗಿದ್ದು. ಮುಂದಿನ ದಿನಗಳಲ್ಲಿ ಈ ಪಟ್ಟಿ ಮತ್ತಷ್ಟು ಹೆಚ್ಚಲಿದೆ. ಈ ಸಂಬಂಧ ರಾಜ್ಯ ಮಟ್ಟದಲ್ಲಿ ಎರಡು ಹಂತದ ಚರ್ಚೆ ನಡೆದಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷನಾಯಕ, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್ ಅವರು ಸ್ಥಳೀಯವಾಗಿ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಸೇರ್ಪಡೆಯನ್ನು ಅಂತಿಮಗೊಳಿಸಲಿದ್ದಾರೆ. ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನು ಕಾಂಗ್ರೆಸ್ ಗೌರವಯುತವಾಗಿಯೇ ನಡೆಸಿಕೊಳ್ಳಲಿದ್ದು, ಟಿಕೆಟ್ ಮತ್ತಿತರ ಸಂಗತಿಗಳು ಈಗಾಗಲೇ ಚರ್ಚೆಗೊಳಪಟ್ಟಿವೆ.

-ಕೆ.ಎನ್.ರಾಜಣ್ಣ, ಮಾಜಿ ಶಾಸಕರು, ಡಿಸಿಸಿ ಬ್ಯಾಂಕ್ ಅಧ್ಯಕ್ಷರು.
 

ಎಸ್.ಹರೀಶ್ ಆಚಾರ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap