ಹುಳಿಯಾರು :
ಹುಳಿಯಾರು ಎಪಿಎಂಸಿಯಲ್ಲಿನ ರಾಗಿ ಖರೀದಿ ಕೇಂದ್ರಕ್ಕೆ ಗುರುವಾರ ಸಂಜೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರೈತರು ರಾಗಿ ಖರೀದಿ ಕೇಂದ್ರದ ಅಧಿಕಾರಿಗಳ ಗುಣಗಾನ ಮಾಡಿದರು. ಇದಕ್ಕೆ ಜಿಲ್ಲಾಧಿಕಾರಿಗಳೂ ಸಹ ಸಮಸ್ಯೆ ಇದ್ದರೆ ಪರಿಹರಿಸೋಣವೆಂದು ಬಂದಿದ್ದರೆ ಯಾವುದೇ ಸಮಸ್ಯೆ ಹೇಳದೆ ಅಧಿಕಾರಿಗಳನ್ನೇ ಹೊಗಳುತ್ತಿದ್ದೀರಲ್ಲ ಅಚ್ಚರಿ ವ್ಯಕ್ತಪಡಿಸಿದರು.
ಜಿಲ್ಲೆಯ ಅನೇಕ ಕಡೆ ರಾಗಿ ಖರೀದಿ ವಿಳಂಬ ನೀತಿಯಿಂದ ಎಪಿಎಂಸಿ ಬಳಿ ಮಳೆ, ಚಳಿ ಲೆಕ್ಕಿಸದೆ ರೈತರು ಮೂರ್ನಲ್ಕು ದಿನಗಳು ಕಾಯುವಂತ್ತಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಕಷ್ಟಪಟ್ಟು ಬೆಳೆದ ರಾಗಿಯನ್ನು ಮಾರಲು ರೈತರು ಮೂರ್ನಲ್ಕು ಕಿ.ಮೀ. ಸರತಿ ಸಾಲಿನಲ್ಲಿ ನಿಂತು, ನಾಲ್ಕೈದು ದಿನ ಕಾದು ಮಾರಾಟ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳೇ ಜವಾಬ್ದಾರಿ ತೆಗೆದುಕೊಂಡು ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಿದರು.
ಪರಿಣಾಮ ಜಿಲ್ಲಾಧಿಕಾರಿಗಳು ಹುಳಿಯಾರು ಎಪಿಎಂಸಿ ಭೇಟಿ ನೀಡಿ ಖುದ್ದು ರೈತರನ್ನೇ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಹುಳಿಯಾರು ರಾಗಿ ಖರೀದಿ ಕೇಂದ್ರದ ಅಧಿಕಾರಿಗಳು ನಿಗದಿ ಸಮಯಕ್ಕಿಂತ ಹೆಚ್ಚಿನ ಹೊತ್ತು ಕೆಲಸ ಮಾಡುತ್ತಿದ್ದು ರೈತರನ್ನು ಕಾಯಿಸದೆ ರಾಗಿ ಖರೀದಿಸುತ್ತಿದ್ದಾರೆ. ಅಲ್ಲದೆ ರೈತರಿಗೆ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿದ್ದು ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದಾರೆ ಎಂದು ರೈತರು ಗುಣಗಾನ ಮಾಡಿದರು.
ಇಲ್ಲಿಯವರೆವಿಗೂ ಎರಡು ಕೌಂಟರ್‍ಗಳಲ್ಲಿ ರಾಗಿ ಖರೀಧಿಸಿದ್ದು ಬುಧವಾರ ತಹಸೀಲ್ದಾರ್ ಭೇಟಿ ನೀಡಿದ ಸಂದರ್ಭದಲ್ಲಿ ಭರವಸೆ ನೀಡಿದಂತೆ ಮತ್ತೊಂದು ಕೌಂಟರ್ ತೆರೆದು ತೆರೆದಿದ್ದಾರೆ. ಹಾಗಾಗಿ ವಿಳಂಬವಿಲ್ಲದೆ ರೈತರ ರಾಗಿ ಖರೀಧಿ ನಡೆಯುತ್ತಿದೆ. ಭಾನುವಾರ ಖರೀದಿ ಇಲ್ಲದಿದ್ದರಿಂದ ರೈತರು ಕಾಯುವಂತ್ತಾಗಿದ್ದು ಭಾನುವಾರವೂ ಖರೀದಿಸಿದರೆ ಮೈಲುದ್ದ ಕ್ಯೂ ನಿಲ್ಲುವ ಪ್ರಮೇಯವೇ ಇರುವುದಿಲ್ಲ. ಎಂದಾಗ ಬರುವ ಭಾನುವಾರವೂ ಖರೀದಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸ್ಥಳದಲ್ಲೇ ಆದೇಶಿಸಿದರು.
ಈ ಸಂದರ್ಭದಲ್ಲಿ ಕೆಲ ರೈತರು ಟೋಕನ್ ಸಿಸ್ಟಮ್ ಜಾರಿ ಮಾಡಿದರೆ ಒಳ್ಳೆಯದಿತ್ತು ಎಂದರಾದರೂ ಕೆಲ ರೈತರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಒಂದೊಂದು ಊರಿನಿಂದ ಮೂರ್ನಲ್ಕು ರೈತರು ಒಂದೇ ಟ್ರ್ಯಾಕ್ಟರ್‍ನಲ್ಲಿ ರಾಗಿ ತರುತ್ತಿದ್ದೇವೆ. ಇದರಿಂದ ಟ್ರಾನ್ರ್ಸೋಟ್ ಚಾರ್ಜ್ ಉಳಿಯುತ್ತಿದೆ. ಟೋಕನ್ ಕೊಟ್ಟರೆ ಒಬ್ಬೊಬ್ಬರು ಒಂದೊಂದು ದಿನ ನೊಂದಣಿ ಮಾಡಿಸಿದ್ದು ಒಬ್ಬೊಬ್ಬರು ಒಂದೊಂದು ದಿನ ಬಂದು ರಾಗಿ ಮಾರಬೇಕಾಗುತ್ತದೆ. ಆಗ ಟ್ರಾನ್ರ್ಸೋಟ್ ಚಾರ್ಜ್ ರೈತನಿಗೆ ಹೊರೆಯಾಗುತ್ತದೆ ಎಂದರು.
ಇದಕ್ಕೆ ಜಿಲ್ಲಾಧಿಕಾರಿಗಳು ಸಹ ಈಗಾಗಲೇ ಶೇ.65 ರೈತರಿಂದ ರಾಗಿ ಖರೀದಿಸಲಾಗಿದೆ. ಈಗ ಖರೀದಿಸುತ್ತಿರುವ ವೇಗ ಗಮನಿಸಿದರೆ ಉಳಿದ ಶೇ.35 ರೈತರಿಂದ ಹತ್ತನ್ನೆರಡು ದಿನದೊಳಗೆ ರಾಗಿ ಖರೀದಿ ಮಾಡಬಹುದಾಗಿದೆ. ಹಾಗಾಗಿ ಇರುವ ವ್ಯವಸ್ಥೆ ಬದಲಾಯಿಸುವುದು ಬೇಡ ಎಂದರು. ಖರೀದಿ ಅಧಿಕಾರಿಗಳು ಸರ್ವರ್ ಸಮಸ್ಯೆ, ವಿದ್ಯುತ್ ಸಮಸ್ಯೆಯಿಂದ ಖರೀದಿಗೆ ಸ್ವಲ್ಪ ಹಿನ್ನೆಡೆಯಾಗುತ್ತಿದೆ ಎಂದರು. ಇದಕ್ಕೆ ಜಿಲ್ಲಾಧಿಕಾರಿಗಳು ಎಪಿಎಂಸಿ ಕಾರ್ಯದರ್ಶಿಗೆ ತಕ್ಷಣ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಬಿ.ತೇಜಸ್ವಿನಿ, ಉಪ ಕೃಷಿ ನಿರ್ದೇಶಕರು ಬಿ.ಉಮೇಶ್ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಎಚ್.ಹನುಮಂತರಾಜು, ಸಹಾಯಕ ಕೃಷಿ ಅಧಿಕಾರಿ ಕೆ.ಟಿ.ತಿಪ್ಪೇಸ್ವಾಮಿ, ಕರ್ನಾಟಕ ಆಹಾರ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಚ್.ಎಂ.ಚನ್ನನಾಯಕ, ಖರೀದಿ ಅಧಿಕಾರಿ ಶಿವಶಂಕರ್, ಎಪಿಎಂಸಿ ಕಾರ್ಯದರ್ಶಿ ಬಿ.ಮಹೇಶ್, ಪಪಂ ಮುಖ್ಯಾಧಿಕಾರಿ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ