ತುಮಕೂರು : ಯಾರೇ ಗೆಲ್ಲಲಿ, ಕನ್ನಡ, ಕಸಾಪ ಬೆಳೆಸಲು ಒಟ್ಟಾಗಿ ಶ್ರಮಿಸೋಣ

 ತುಮಕೂರು :

ಪ್ರಜಾಪ್ರಗತಿ-ಪ್ರಗತಿ ವಾಹಿನಿ ವೇದಿಕೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಗಳ ಅಭಿಮತ

      ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮೇ 9ರಂದು ನಡೆಯಲಿರುವ ಚುನಾವಣೆ ಪೂರ್ವಭಾವಿಯಾಗಿ ಸಂವಾದದಲ್ಲಿ ಭಾಗವಹಿಸಿರುವ ನಾವು ನಾಲ್ವರು ಸೇರಿದಂತೆ ಇನ್ನೂ ಕೆಲವರು ಸ್ಪರ್ಧಾಕಾಂಕ್ಷಿಗಳಿದ್ದು, ಯಾರೇ ಗೆಲ್ಲಲಿ ಕನ್ನಡ ಕಸಾಪ ಬೆಳೆಸಲು ಒಟ್ಟಾಗಿ ಶ್ರಮಿಸೋಣ…, ಇದು ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಸ್ಪರ್ಧಾಕಾಂಕ್ಷಿಗಳಾದ ಪ್ರೊ.ಡಿ.ಚಂದ್ರಪ್ಪ, ಕೆ.ಎಸ್.ಸಿದ್ದಲಿಂಗಪ್ಪ, ಶೈಲಾನಾಗರಾಜ್ ಹಾಗೂ ಸಾ.ಶಿ.ದೇವರಾಜ್ ಅವರ ಸಹಮತದ ನುಡಿ.

      ಪ್ರಜಾಪ್ರಗತಿ ಪ್ರಗತಿ ವಾಹಿನಿಯಿಂದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಪೂರ್ವಭಾವಿಯಾಗಿ ಶನಿವಾರ ಏರ್ಪಡಿಸಿದ್ಧ ವಿಶೇಷ ಸಂವಾದದಲ್ಲಿ ಪಾಲ್ಗೊಂಡು ತಮ್ಮ ಸ್ಪರ್ಧೆಯ ಉದ್ದೇಶ, ಚುನಾವಣೆ ಪ್ರಕ್ರಿಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.

 ಕನ್ನಡಭವನ ಆಯಿತು, ತಾಲೂಕು ಹೋಬಳಿಯಲ್ಲಿ ಪರಿಷತ್ ಬಲಪಡಿಸುವ ಗುರಿ : ಪ್ರೊ.ಡಿ.ಚಂದ್ರಪ್ಪ

      ಕಸಾಪ ಮಾಜಿ ಅಧ್ಯಕ್ಷ ಹಾಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಪ್ರೊ.ಡಿ.ಚಂದ್ರಪ್ಪ ಅವರು ಮಾತನಾಡಿ ನಿ.ರಾ.ಸದಾನಂದ ಅವರು ಕನ್ನಡ ಭಾಷೆ, ಸಾಹಿತ್ಯ ಬಗೆಗೆ ವಿದ್ಯಾರ್ಥಿ ದಿಸೆಯಿಂದಲೂ ಅಭಿಮಾನ ಹೊಂದಿರುವೆ. ನಿ.ರಾ.ಸದಾನಂದ್ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕಸಾಪ ಕೋಶಾಧ್ಯಕ್ಷನಾಗಿ ನಂತರ ಅಧ್ಯಕ್ಷಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾದೆ. ನನ್ನ ಅವಧಿಯಲ್ಲಿ ಜಿಲ್ಲಾ ಹಾಗೂ ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಿಸಬೇಕೆಂಬ ಪ್ರಮುಖ ಸವಾಲು ಎದುರಾಯಿತು. ಏಕೇಶ್ ಅವರ ಅವಧಿಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಉಳಿದಿದ್ದ ಅನುದಾನ, ತೆಗೆದಿರಿಸಲಾಗಿದ್ದ ನಿವೇಶನದಲ್ಲಿ ಸುಸಜ್ಜಿತ ಕನ್ನಡ ಭವನವನ್ನು ನಿರ್ಮಿಸಬೇಕೆಂದು ದೃಢ ಸಂಕಲ್ಪ ತೊಟ್ಟು, ಅಂದಿನ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ನೇತೃತ್ವದಲ್ಲಿ ಜನಪ್ರತಿನಿಧಿಗಳು, ಕನ್ನಡಾಭಿಮಾನಿಗಳು, ಊರಿನ ಪ್ರಮುಖರ ಸಹಕಾರದೊಂದಿಗೆ ಚಾಲನೆ ಕೊಡಲಾಯಿತು. ಅಂದು ಭವನಕ್ಕೆ ಹಾಕಿದ ಭದ್ರ ಅಡಿಪಾಯದ ಕಾರಣ ಇಂದು ಭವನ ತಲೆಎತ್ತುವಂತಾಗಿದೆ. ಅಂತೆಯೇ ಜಿಲ್ಲಾ ಕಸಾಪ ಅಧ್ಯಕ್ಷರು, ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದವರ ಕುರಿತು ನುಡಿಸೇವಕರ ಹೆಸರಲ್ಲಿ ಸಂಗ್ರಹ ಕೃತಿಯನ್ನು ಹೊರತಂದಿದ್ದು, ಅಂದು ಕಟ್ಟಿಕೊಂಡಿದ್ದ ಹಲವು ಕನಸುಗಳನ್ನು ನನಸಾಗಿಸಲು ಮತ್ತೆ ಸ್ಪರ್ಧಿಸಿದ್ದೇನೆ. ತಾಲೂಕು, ಹೋಬಳಿ ಮಟ್ಟದಲ್ಲಿ ಪರಿಷತ್ ಸಂಘಟನೆ, ಸಮ್ಮೇಳನದ ಸಾರಥ್ಯವಹಿಸಿದವರನ್ನು ಕುರಿತು ಪುಸ್ತಕ ಪ್ರಕಟಿಸುವುದು. ಹೋಬಳಿ ಘಟಕಗಳನ್ನು ಬಲಪಡಿಸುವ ಗುರಿ ಹೊಂದಿದ್ದು, ನನೆಗುದಿಗೆ ಬಿದ್ದಿರುವ ತಾಲೂಕು ಕನ್ನಡಭವನವನ್ನು ನಿರ್ಮಾಣ ಮಾಡುವ ಸಂಕಲ್ಪ ಹೊಂದಿರುವುದಾಗಿ ತಿಳಿಸಿದರು.

3ವರ್ಷಕ್ಕೆ ಸೀಮಿತಗೊಳಿಸಲು ಒತ್ತಾಯಿಸುವೆ:

      5 ವರ್ಷದ ಅವಧಿಗೆ ಅಧ್ಯಕ್ಷ ಸ್ಥಾನ ವಿಸ್ತರಣೆ ಸರಿಯಿಲ್ಲ. ನಾನು ಅಧ್ಯಕ್ಷನಾದರೆ ಮೂರು ವರ್ಷಕ್ಕೆ ಸೀಮಿತಗೊಳಿಸಲು ಒತ್ತಾಯಿಸುತ್ತೇನೆ ಎಂದ ಚಂದ್ರಪ್ಪ ಅವರು 15, 25 ಪೈಸೆಯ ಅಂಚೆಕಾರ್ಡ್ ಹಾಕಿ ಮತ ಕೇಳುವ ಪದ್ದತಿ ಇಂದು ಕ್ಷೀಣಿಸುತ್ತಿದೆ.ಮೊಬೈಲ್, ಸಾಮಾಜಿಕ ಜಾಲತಾಣಗಳು ಮತಯಾಚನೆಯಲ್ಲಿ ಪ್ರಮುಖಪಾತ್ರ ವಹಿಸಿವೆ. ಇದರ ಹೊರತಾಗಿಯೂ ಮತದಾರರ ಖುದ್ದ ಭೇಟಿ, ಗೆಳೆಯರೊಂದಿಗೆ ಸಂಪರ್ಕ ಮಾಡಲಾಗುತ್ತಿದ್ದು, ಮತ್ತೊಂದು ಅವಕಾಶ ಕಲ್ಪಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಸೇವೆ ಮಾಡಲು ಸದಸ್ಯರು ಅವಕಾಶ ಕಲ್ಪಿಸುವ ವಿಶ್ವಾಸವಿದೆ ಎಂದರು.

ಪರಿಷತ್ ಘನತೆ ಹೆಚ್ಚಿಸಿ, ಮೌಲ್ಯ ಉಳಿಸುವುದಕ್ಕಾಗಿ ಸ್ಪರ್ಧೆ : ಶೈಲಾನಾಗರಾಜ್

      ಲೇಖಕಿ ಹಾಗೂ ತುಮಕೂರು ತಾಲೂಕು ಕಸಾಪ ಅಧ್ಯಕ್ಷೆ ಶೈಲಾನಾಗರಾಜ್ ಮಾತನಾಡಿ ತಾವೂ ಸೋಮವಾರ ನಾಮಪತ್ರ ಸಲ್ಲಿಸುತ್ತಿದ್ದು, ಮೂರ್ನಾಲ್ಕು ದಶಕದಿಂದಲೂ ಕಸಾಪ ಜತೆ ನಿಕಟ ಒಡನಾಟ ಹೊಂದಿ, ತಾಲೂಕು ಅಧ್ಯಕ್ಷೆ ಸೇರಿದಂತೆ ವಿವಿಧ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ಲೇಖಕಿಯಾಗಿ, ಕವಯತ್ರಿಯಾಗಿ ಮಹಿಳಾ ಹೋರಾಟಗಾರ್ತಿಯಾಗಿ, ಅಕಾಡೆಮಿ ಸದಸ್ಯೆಯಾಗಿ ಸೃಜನಶೀಲ ಕನ್ನಡ ಸಾಹಿತ್ಯ ಕಾರ್ಯಕ್ರಮ, ಸಮ್ಮೇಳನ ಆಯೋಜನೆಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ದಿ.ಚಿ.ನಾ.ಏಕೇಶ್ ಅವರ ಕಾರ್ಯಕಾರಿ ಸಮಿತಿಯಲ್ಲಿ ಮಹಿಳಾ ಪ್ರತಿನಿಧಿಯಾಗಿದ್ದು, ಕನ್ನಡ ಭವನಕ್ಕಾಗಿ ನಿವೇಶನ ಮಾಡಿದೆವು. ಬಾ.ಹ.ರಮಾಕುಮಾರಿ ಅವರ ಅವಧಿಯಲ್ಲಿ ಕನ್ನಡ ಭವನ ಮುಕ್ತಾಯ ಕಂಡಿದ್ದು, ಪರಿಷತ್ ಅಧ್ಯಕ್ಷೆಯಾಗಿ ಸಮರ್ಥವಾಗಿ ನಿರ್ವಹಿಸಬಲ್ಲೆನೆಂಬ ವಿಶ್ವಾಸ ವಿದೆ. ಅನೇಕ ಸಾಹಿತ್ಯ, ಸಾಂಸ್ಕøತಿಕ ವಲಯದವರು, ಕಸಾಪ ಸದಸ್ಯರು ನನ್ನ ಸ್ಪರ್ಧೆಯನ್ನು ಬೆಂಬಲಿಸಿದ್ದು, ಮೌಲ್ಯಯುತ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್‍ನ ಗೌರವ ಹೆಚ್ಚಿಸುವಂತೆ ಕಾರ್ಯನಿರ್ವಹಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನ್ಯಮಾರ್ಗಗಳಲ್ಲಿ ಚುನಾವಣೆ:

      ಇಂದು ಕಸಾಪ ಚುನಾವಣೆಗಳು ಬೇರೆ ಬೇರೆ ಮಾರ್ಗಗಳಲ್ಲಿ ಸಾಗುತ್ತಿರುವುದು ಕಾಣುತ್ತಿದ್ದೇವೆ. ಆದರೂ ಹಿಂದೆ ಪತ್ರ ಬರೆದು ಮತಯಾಚಿಸುತ್ತಿದ್ದ ಪದ್ದತಿಗೆ ಈಗಲೂ ಮನ್ನಣೆ ಇದೆ. ಕಡಿಮೆ ವೆಚ್ಚದಲ್ಲಿ ಸಹೃದಯ ಕನ್ನಡಾಭಿಮಾನಿಗಳ ಸಹಕಾರದೊಂದಿಗೆ ಕನ್ನಡ ಸಾಹಿತ್ಯ ಸಮ್ಮೇಳನಗಳು, ಕಾವ್ಯ, ಕಥಾ ಕಮ್ಮಟಗಳು, ಶಾಲಾ ಕಾಲೇಜುಗಳನ್ನು ಕನ್ನಡ ಕಾರ್ಯಕ್ರಮಗಳನ್ನು ನಿರಂತರಾಗಿ ಸಂಘಟಿಸಬಹುದಾಗಿದೆ. ಹಣಕ್ಕಿಂತ ಇಚ್ಚಾಶಕ್ತಿ, ಕಾರ್ಯತತ್ಪರತೆ ಮುಖ್ಯ. ನನ್ನ ಅವಧಿಯಲ್ಲಿ ಆರು ಹೋಬಳಿ ಸಮ್ಮೇಳನಗಳನ್ನು ಯಶಸ್ವಿಯಾಗಿ ಸಂಘಟಿಸಿರುವುದೇ ನಿದರ್ಶನ ಎಂದರು.

ಪೂರ್ಣಪ್ರಮಾಣದಲ್ಲಿ ಸೇವೆ, ಪರಿಷತ್‍ಗೆ ಆಧುನಿಕ ಸ್ಪರ್ಶ ನೀಡುವೆ: ಕೆ.ಎಸ್.ಸಿದ್ದಲಿಂಗಪ್ಪ

      ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕರು ಹಾಗೂ ಜಿಲ್ಲಾಧ್ಯಕ್ಷ ಸ್ಥಾನದ ಸ್ಪರ್ಧಾಕಾಂಕ್ಷಿಯಾದ ಕೆ.ಎಸ್.ಸಿದ್ದಲಿಂಗಪ್ಪ ಅವರು ಸಂವಾದದಲ್ಲಿ ಮಾತನಾಡಿ ಬುಧವಾರ ನಾಮಪತ್ರ ಸಲ್ಲಿಕೆ ಮಾಡಲಿದ್ದು, 1990ರ ದಶಕದಿಂದಲೂ ಕನ್ನಡ ಸಾಹಿತ್ಯ ಪರಿಷತ್ ಜೊತೆಗೆ ಸಕ್ರಿಯ ಒಡನಾಟ ಹೊಂದಿದ್ದಾರೆ. ಗುಬ್ಬಿಯಲ್ಲಿ ಅಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದಾಗ ಬಿ.ವೀರಬದ್ರಪ್ಪ, ಹ.ಬ.ಮಹದೇವಪ್ಪ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್, ಕೆ.ಜಿ.ನಾಗರಾಜಪ್ಪ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಸಾಹಿತ್ಯ ಸಮ್ಮೇಳನಗಳು ಸಂಘಟನೆ ಮಾಡಿದ್ದೇವೆ. ನೌಕರರು, ಶಿಕ್ಷಕರ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಇಡೀ ಜಿಲ್ಲೆಯ ಒಡನಾಟವನ್ನು ಹೊಂದಿದ್ದು, 2004ರಲ್ಲಿ ನಿ.ರಾ.ಸದಾನಂದ ಅವರ ಎದುರಾಳಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದೆ. ನಂತರ 16 ವರ್ಷಗಳ ಕಾಲ ಚುನಾವಣಾ ಕಣದಿಂದ ದೂರ ಉಳಿದು ಉಪನ್ಯಾಸಕ ವೃತ್ತಿ ಬದುಕಿನ ಜೊತೆಗೆ ಕನ್ನಡ ಸಾಹಿತ್ಯ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾಬಂದಿದ್ದು, ನಿವೃತ್ತರಾದ ಬಳಿಕ ಪೂರ್ಣ ಪ್ರಮಾಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ. ಆಜೀವ ಸದಸ್ಯರನ್ನೊಳಗೊಂಡ ತಂಡಗಳೊಟ್ಟಿಗೆ ಸೇರಿ ಇಡೀ ಜಿಲ್ಲೆಯಾದ್ಯಂತ ಪರಿಷತ್ ಹಿರಿಯರು, ಸದಸ್ಯರನ್ನು ಭೇಟಿ ಮಾಡಿ ಮತಯಾಚಿಸುತ್ತಿರುವುದಾಗಿ ತಿಳಿಸಿದರು.

      ಮತ್ತೊಂದು ಅಖಿಲ ಭಾರತ ಸಮ್ಮೇಳನ ಆಯೋಜನೆ: ಚುನಾವಣಾ ಕಣದಲ್ಲಿ ಸಹ ಸ್ಪರ್ಧಿಗಳ್ಯಾರು ವೈಯಕ್ತಿಕ ಟೀಕೆಗಳನ್ನು ಮಾಡಬಾರದೆಂದು ವಿನಂತಿಸಿದ ಸಿದ್ದಲಿಂಗಪ್ಪ ಅವರು ಕನ್ನಡ ಭವನಕ್ಕೆ ಆಧುನಿಕ ಸ್ಪರ್ಶ ನೀಡಿ, ಉತ್ತಮ ಆಸನ ವ್ಯವಸ್ಥೆ, ರಂಗಸಜ್ಜಿಕೆಯನ್ನು ನಿರ್ಮಿಸುವ ಜೊತೆಗೆ 5 ಎಕರೆ ಜಾಗ ಗುರುತಿಸಿ ಕನ್ನಡ ಕಲಾ ಗ್ರಾಮ ಸ್ಥಾಪಿಸುವ ಉದ್ದೇಶ, ಜಿಲ್ಲಾ ತಾಲೂಕು ಸಮ್ಮೇಳನದೊಟ್ಟಿಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಮತ್ತೆ ತುಮಕೂರಿನಲ್ಲಿ ನಡೆಸಬೇಕೆಂಬ ಉದ್ದೇಶ ಹೊಂದಿದ್ದೇನೆ.. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯನ್ನು ಪರಿಷತ್ ಅನ್ನು ನಿಜ ಅರ್ಥದಲ್ಲಿ ಎಲ್ಲಾ ಕನ್ನಡಿಗರು ಒಳಗೊಳ್ಳುವಂತೆ ಮಾಡಲು ಸದಸ್ಯತ್ವ ಅಭಿಯಾನ, ಇತರೆ ಚುನಾವಣೆಗಳ ರೀತಿಯಲ್ಲಿ ಸಾಹಿತ್ಯ ಪರಿಷತ್‍ಗೆ ಆಯ್ಕೆಯಾಗುವ ಪರಿಷತ್ ಅಧ್ಯಕ್ಷರಿಗೆ ಸರಕಾರಿ ಸಭೆ, ಸಮಾರಂಭ, ಸಮಿತಿಗಳಲ್ಲಿ ಶಿಷ್ಟಾಚಾರದ ಸ್ಥಾನಮಾನ ದೊರಕಿಸುವ ನಿಟ್ಟಿನಲ್ಲಿ ಹೋರಾಡಲಾಗುವುದು.ಆ ಮೂಲಕ ಪರಿಷತ್ ಅಸ್ಥಿತ್ವವನ್ನು ಬಲಪಡಿಸುವ ಇರಾದೆ ಹೊಂದಿದ್ದು, ಸದಸ್ಯರು ಬೆಂಬಲಿಸುವಂತೆ ಕೋರಿದರು.

ಗ್ರಾಮೀಣ ಭಾಗಕ್ಕೆ ಪರಿಷತ್, ನಿಷ್ಕ್ರಿಯವಾಗಿರುವ ಹೋಬಳಿ ಘಟಕಗಳ ಪುನಃಶ್ಚೇತನ: ಸಾ.ಶಿ.ದೇವರಾಜು

ತುರುವೇಕೆರೆ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಸಾ.ಶಿ.ದೇವರಾಜು ಅವರು ಮಾತನಾಡಿ ವೃತ್ತಿಯಲ್ಲಿ ಶಿಕ್ಷಕನಾಗಿ, ಪ್ರವೃತ್ತಿಯಲ್ಲಿ ಕನ್ನಡ ಸಾಹಿತ್ಯ, ಸಾಂಸ್ಕøತಿಕ ಕಲಾ ಪ್ರಕಾರಕಗಳ ಸಂಘಟಕನಾಗಿ ಸಾಹಿತ್ಯ ಪರಿಷತ್ ಜೊತೆ 25 ವರ್ಷಗಳಿಂದ ಒಡನಾಟ ಹೊಂದಿದ್ದು, ಜಿಲ್ಲಾ, ನಗರ ಕೇಂದ್ರಿತವಾಗಿರುವ ಪರಿಷತ್ ಅನ್ನು ಗ್ರಾಮೀಣ ಭಾಗಕ್ಕೆ ಕೊಂಡೊಯ್ದು ನಿಷ್ಕ್ರಿಯವಾಗಿರುವ ಹೋಬಳಿ ಘಟಕಗಳನ್ನು ಕ್ರಿಯಾಶೀಲವಾಗಿಸಲು ಸ್ಪರ್ಧಿಸಿದ್ದೇನೆ. ನಾನು ತಾಲೂಕು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ತುರುವೇಕೆರೆಯಲ್ಲಿ ಪ್ರೊ.ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಸಮ್ಮೇಳನ ನಡೆಸಿದೆವು. ಪ್ರತೀ ಶಾಲೆಯಲ್ಲೂ ನಿರಂತರ ಕನ್ನಡ ಜಾಗೃತಿ ಕಾರ್ಯಕ್ರಮಗಳು, ಜಿಲ್ಲಾ, ತಾಲೂಕು ಸಮ್ಮೇಳನ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಪರಿಷತ್ ಅನ್ನು ಯಾವ ರೀತಿಯಲ್ಲಿ ಮುನ್ನೆಡೆಸಬೇಕೆಂಬುದನ್ನು ಸ್ಪಷ್ಟವಾಗಿ ಅರಿತಿದ್ದೇನೆ. ಯುವ ಕ್ರಿಯಾಶೀಲ ಸಂಘಟನೆ ಮಾಡುವ ಶಕ್ತಿ ಇರುವವರಿಗೆ ಪರಿಷತ್ ಅಧ್ಯಕ್ಷರಾಗಿ ಈ ಬಾರಿ ಆಯ್ಕೆ ಮಾಡಬೇಕಿದೆ.

ಹಿರಿಯರನ್ನು ಯುವಕರನ್ನು ಒಟ್ಟಾಗಿ ಕೊಂಡೊಯ್ಯುವೆ:

      ಎಲ್ಲಾ ಸ್ಪರ್ಧಿಗಳಿಗಿಂತಲೂ ಮೊದಲಿಗೆ ಆಜೀವ ಸದಸ್ಯರಿಗೆ ಪತ್ರಬರೆದು ಬೆಂಬಲಕೋರಿದ್ದಾನೆ. ಪರಿಷತ್ ಮೇಲೆ ಹಿರಿಯ ಸದಸ್ಯರನ್ನು, ಹಿಂದೆ ಕೆಲಸ ಮಾಡಿದವರನ್ನು ನಿರ್ಲಕ್ಷಿಸುತ್ತಿರುವ ಆರೋಪ ಹಿಂದಿನಿಂದಲೂ ಇದ್ದು, ಇದನ್ನು ಹೋಗಲಾಡಿಸಲು ಹಿರಿಯರು, ಯುವ ಸದಸ್ಯರನ್ನು ಒಟ್ಟಾಗಿ ಕೊಂಡೊಯ್ಯುವ ಪ್ರಯತ್ನ ಮಾಡುತ್ತೇನೆ. ಜಿಲ್ಲಾ ಕೇಂದ್ರದವರಿಗೆ ಪರಿಷತ್ ಅಧ್ಯಕ್ಷ ಹುದ್ದೆ ಮೀಸಲೆಂಬುದು ತಪ್ಪು. 5 ವರ್ಷಕ್ಕೆ ವಿಸ್ತರಿಸಿರುವ ಪರಿಷತ್ ಅಧ್ಯಕ್ಷರ ಅವಧಿಯನ್ನು ಸ್ವಾಗತಿಸುತ್ತೇನೆ. ಇದರಿಂದ ಪರಿಷತ್‍ನಿಂದ ದೂರಗಾಮಿ ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯನಿರ್ವಹಿಸಲು ಸಹಕಾರಿಯಾಗುತ್ತದೆ ಎಂದರು.

ಸಂದರ್ಶನ: ಸಾ.ಚಿ.ರಾಜ್‍ಕುಮಾರ್, ಎಸ್.ಹರೀಶ್ ಆಚಾರ್ಯ.

ಕನ್ನಡ ಸಾಹಿತ್ಯ ಪರಿಷತ್‍ಗೆ ಬುನಾದಿ ಸಿಕ್ಕಿದೆ, ಸರಿಯಾದ ಮಾರ್ಗದಲ್ಲಿ ವಿಸ್ತರಿಸಬೇಕಿದೆ: ಬಾ.ಹ.ರಮಾಕುಮಾರಿ

      ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸದೆ ಅಧ್ಯಕ್ಷಸ್ಥಾನದಿಂದ ನಿರ್ಗಮಿಸುತ್ತಿರುವ ಹಾಲಿ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅವರ ಎಲ್ಲಾ ಸ್ಪರ್ಧಾಕಾಂಕ್ಷಿಗಳನ್ನುದ್ದೇಶಿಸಿ ಮಾತನಾಡಿ ನೆಲೆಯೇ ಇಲ್ಲದಿದ್ದ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ಗೆ ಜಿಲ್ಲಾ ಕೇಂದ್ರದಲ್ಲಿ ಉತ್ತಮ ಕನ್ನಡ ಭವನದ ಬುನಾದಿ ದೊರೆತಿದೆ. ಏಕೇಶ್ ಅವರ ಕಾಲದಿಂದಲೇ ನನ್ನವರೆಗೆ ಐದು ಅಧ್ಯಕ್ಷರು ಕನ್ನಡ ಭವನ ನಿರ್ಮಾಣಕ್ಕೆ ನಿರಂತರ ಶ್ರಮ ಹಾಕಿದ್ದಾರೆ. ನಾನು ಅಧ್ಯಕ್ಷಳಾದ ಮೊದಲ ಎರಡೂವರೆ ವರ್ಷ ಕನ್ನಡ ಭವನ ಪೂರ್ಣಗೊಳಿಸಲು ಮೀಸಲಿಡಬೇಕಾಯಿತು. ಒಂದೂವರೆ ವರ್ಷವಷ್ಟೇ ಕನ್ನಡ ಸಾಹಿತ್ಯ ಚಟುವಟಿಕೆ, ಸಮ್ಮೇಳನ ಮಾಡಲು ಅವಕಾಶ ದೊರೆಯಿತು. ಜಿಲ್ಲಾ, ತಾಲೂಕು ಘಟಕಗಳ ಸಹಕಾರದಿಂದ ಸಮ್ಮೇಳನಗಳು, ದತ್ತಿ ಪುರಸ್ಕಾರಗಳು, ನಿರಂತರ ಕನ್ನಡ ಚಟುವಟಿಕೆಗಳನ್ನು ನಡೆಸಿದ್ದೇವೆ. ಕೋವಿಡ್ ಕಾರಣಕೆಚಟುವಟಿಕೆಗಳು ಒಂದಷ್ಟು ಕಾಲ ಸ್ತಬ್ದಗೊಂಡಿತು. ಕನ್ನಡ ಭಾಷೆ, ಸಾಹಿತ್ಯ, ಪರಿಷತ್ ಮುಂದೆಯೂ ಅನೇಕ ಸವಾಲುಗಳಿವೆ. ಐದು ವರ್ಷ ಪೂರ್ಣಪರಿಷತ್ ಜಿಲ್ಲಾ, ತಾಲೂಕು ಘಟಕಗಳಿಗೆ ಅವಕಾಶ ದೊರೆತಿರುವುದರಿಂದ ಸಾಹಿತ್ಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬಹುದಾಗಿದೆ. ಹೋಬಳಿ ಸಮ್ಮೇಳನಗಳಿಗೆ ಅನುದಾನ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಮ್ಮೇಳನ ನಡೆಸಲು ಸಾಧ್ಯವಾಗಿಲ್ಲ.

ಪ್ರಜಾಪ್ರಗತಿ-ಪ್ರಗತಿ ವಾಹಿನಿಗೆ ಮೆಚ್ಚುಗೆ:

      ಪರಿಷತ್‍ಗೆ ಸಂಖ್ಯಾ ಬಾಹುಳ್ಯ ಮುಖ್ಯವಲ್ಲ. ಆಸಕ್ತ ಸದಸ್ಯರ ಸಂಖ್ಯೆ ಹೆಚ್ಚಬೇಕು. ಅಂತೆಯೇ ಚುನಾವಣೆಯನ್ನು ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಪರಿಗಣಿಸಬಾರದು. ಪರಿಷತ್ ಸ್ಥಾಪನೆಯ ಆಶಯವೇ ಕನ್ನಡ ಸಾಹಿತ್ಯ, ಭಾಷೆಯ ಬೆಳವಣಿಗೆಯದ್ದಾಗಿದೆ. ಪರಿಷತ್‍ನ ಆಶಯಕ್ಕನುಗುಣವಾಗಿ ಪರಿಷತ್ ವಿಸ್ತರಿಸುವ ಹೊಣೆಗಾರಿಕೆ ನೂತನ ಅಧ್ಯಕ್ಷರುಗಳ ಮೇಲಿದೆ. ಸ್ಪರ್ಧಾಕಾಂಕ್ಷಿಗಳನ್ನು ಒಂದೇ ವೇದಿಕೆಗೆ ಕರೆದು ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ಕಲ್ಪಿಸಿರುವ ಪ್ರಜಾಪ್ರಗತಿ-ಪ್ರಗತಿ ವಾಹಿನಿ ಕಾರ್ಯ ಮೆಚ್ಚುವಂತಹದ್ದು ಎಂದು ರಮಾಕುಮಾರಿ ನುಡಿದರು.

 
ಮೇ 9ರಂದು ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ :

      ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪ್ರೊ.ಡಿ.ಚಂದ್ರಪ್ಪ, ಶೈಲಾನಾಗರಾಜು, ಕೆ.ಎಸ್.ಸಿದ್ದಲಿಂಗಪ್ಪ ಸಾ.ಶಿ.ದೇವರಾಜು ಅವರೊಂದಿಗೆ ಸಿರಾದ ಪುಟ್ಟಕಾಮಣ್ಣ, ಕೆಂ.ಬ.ರೇಣುಕಯ್ಯ, ಮಹದೇವಪ್ಪ ಮತ್ತಿತರರು ಸ್ಪರ್ಧಾಕಾಂಕ್ಷಿಗಳಿದ್ದು, ಡಾ.ಲಕ್ಷ್ಮಣದಾಸ್ ಕಣದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ. 12,500ಕ್ಕೂ ಅಧಿಕ ಮತದಾರರು ಜಿಲ್ಲೆಯಲ್ಲಿದ್ದು ಏ.7ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಮೇ.9ರಂದು ಆಯಾ ತಾಲೂಕು ಕೇಂದ್ರದಲ್ಲೇ ಮತದಾನ ನಡೆಯಲಿದೆ. ಇತರೆ ಚುನಾವಣೆಗಳಂತೆಯೇ ಪರಿಷತ್ ಚುನಾವಣೆಯ ಅಖಾಡವೂ ರಂಗೇರುತ್ತಿದ್ದು, ಜಾತಿ, ಹಣ, ಗುಂಪು ಬಲಗಳ ಪ್ರಭಾವಗಳು ಪರಿಷತ್ ಚುನಾವಣೆಯಲ್ಲಿ ಕಂಡುಬರುತ್ತಿದೆ.

Recent Articles

spot_img

Related Stories

Share via
Copy link