ತುಮಕೂರು : ಎಂಜಿನಿಯರ್ ಗೆ ‘ಬ್ಲಡಿಫೆಲೋ’ ಎಂದು ತರಾಟೆಗೆ ತೆಗೆದುಕೊಂಡ ಸಚಿವರು!!

ತುಮಕೂರು : 

     2018-19ನೇ ಸಾಲಿನ ಶಾಲಾ ಕೊಠಡಿ ಕಾಮಗಾರಿ ಇನ್ನೂ ಕೈಗೆತ್ತಿಕೊಳ್ಳದಿರುವ ಬಗ್ಗೆ ಮಂಗಳವಾರ ನಡೆದ ಜಿಲ್ಲಾ ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ತೀವ್ರ ಗರಂ ಆದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಪಿಆರ್‍ಇಡಿ ಎಂಜಿನಿಯರ್‍ಗಳಿಗೆ ಸಭೆಯಲ್ಲೆ ಛೀಮಾರಿ ಹಾಕಿ, ಬ್ಲಡಿ ಫೆಲೋಸ್, 3 ವರ್ಷದ ಹಿಂದೆ ಮಂಜಾರಾದ ಕಾಮಗಾರಿಯನ್ನು ಎಷ್ಟು ಸಲ ಬದಲಾವಣೆ ಮಾಡ್ತಿರಾ?, ಒಂದು ಕೊಠಡಿ ನಿರ್ಮಾಣಕ್ಕೆ ವರ್ಷಾನುಗಟ್ಟಲೆ ಬೇಕೆಂದರೆ ಏನರ್ಥ? ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ ಅನುಷ್ಠಾನ ಕಾರ್ಯದಲ್ಲಿ ವಿಳಂಬ ಮಾಡುವ ಅಧಿಕಾರಿಗಳನ್ನು ಅಮಾನತ್ತು ಮಾಡಿ ಎಂದು ಜಿಪಂ ಸಿಇಒಗೆ ನಿರ್ದೇಶಿಸಿದರು.

     ಶಾಲಾ ಕೊಠಡಿಗಳ ದುರಸ್ತಿ ಕಾರ್ಯದಲ್ಲಿಯೂ ವಿಳಂಬ ಧೋರಣೆಯಿದೆ ಎಂದು ಶಿಕ್ಷಣ ಇಲಾಖೆ ವಿರುದ್ಧ ಬೇಸರ ವ್ಯಕ್ತಪಡಿಸಿದ ಸಚಿವರು, ಶಾಲಾ ಕೊಠಡಿಗಳ ದುರಸ್ಥಿ ಕಾರ್ಯವನ್ನು ಕೂಡಲೇ ಮುಗಿಸಬೇಕು. ಇನ್ನೆರಡು ತಿಂಗಳಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಿ ಶೀಘ್ರ ಶಾಲಾ ಕೊಠಡಿಗಳ ಕಟ್ಟಡಗಳ ನಿರ್ಮಾಣವನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಪಿಡಬ್ಲ್ಯೂಡಿ ಎಂಜಿನಿಯರ್ ಹಾಗೂ ಡಿಡಿಪಿಐಗಳಿಗೆ ಸೂಚಿಸಿದರು.

ಶೇಂಗಾ, ರಾಗಿ ಬೆಳೆ ಹಾನಿಗೆ ನಷ್ಟ ಪರಿಹಾರಕ್ಕೆ ಸೂಚನೆ:

     ಜಿಲ್ಲೆಯಲ್ಲಿ ರೋಗ ಹಾಗೂ ಮಳೆ ಕೊರತೆ ಪರಿಣಾಮ ಶೇಂಗಾ ಬೆಳೆ ನಷ್ಟದಿಂದ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ಕಲ್ಪಿಸಬೇಕು. ಜಿಲ್ಲೆಯ ಶಿರಾ ತಾಲೂಕಿನಲ್ಲಿ ಬಿತ್ತನೆಯಾಗಿರುವ 37 ಸಾವಿರ ಹೆಕ್ಟೇರ್ ಶೇಂಗಾ ಬೆಳೆಯಲ್ಲಿ, ಶೇ.80 ರಷ್ಟು ಹಾಳಾಗಿದೆ. ಈ ಬಗ್ಗೆ ವರದಿ ಪಡೆದು ರೈತರಿಗೆ ಪರಿಹಾರ ಕಲ್ಪಿಸಲು ಕ್ರಮ ವಹಿಸಬೇಕು ಅಂತೆಯೇ ಮಳೆಯಿಂದ ಹಾಳಾದ ರಾಗಿ ಬೆಳೆಗೂ ಪರಿಹಾರಕ್ಕೂ ಕ್ರಮ ವಹಿಸಿ. ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ರೈತರಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ ಅವರಿಗೆ ಸಚಿವರು ನಿರ್ದೇಶಿಸಿದರು.

ಜಾನುವಾರು ಲಸಿಕೆ ವಿಫಲ, ಅಸಮಾಧಾನ:

     ಜಿಲ್ಲೆಯಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯ ಸಮರ್ಪಕವಾಗಿ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಜಾನುವಾರುಗಳಿಗೆ ರೋಗ ತಗುಲುವುದಕ್ಕೂ ಮುನ್ನವೇ ಮುನ್ನೆಚ್ಚರಿಕೆ ಕ್ರಮವಾಗಿ ಸಮರ್ಪಕವಾಗಿ ಲಸಿಕೆ ಹಾಕಬೇಕು. ಈ ದಿಸೆಯಲ್ಲಿ ಹಾಲು ಒಕ್ಕೂಟದ ಸಹಕಾರ ಕೊಡಬೇಕು. ಬರೀ ಹಾಲು ಸಂಗ್ರಹ, ಮಾರಾಟವಷ್ಟೆ ಡೈರಿ ಜವಾಬ್ದಾರಿಯಲ್ಲ ಎಂದು ಸಚಿವರು ತುಮುಲ್ ಅಧಿಕಾರಿಗೆ ತಿಳಿಹೇಳಿದರು.

ಜಿಲ್ಲಾಸ್ಪತ್ರೆಯಲ್ಲಿನ ಶಿರುಮರಣ ಪ್ರಮಾಣ ತಗ್ಗಿಸಿ:

      ಜಿಲ್ಲೆಯಲ್ಲಿ ಕಳೆದ ಎಂಟು ತಿಂಗಳಲ್ಲಿ 22 ತಾಯಿ ಮರಣ, 154 ಶಿಶು ಮರಣ ಪ್ರಕರಣದ ವರದಿಯಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಅಧಿಕವಿದೆ. ಇದರ ಪ್ರಮಾಣ ಕಡಿಮೆಗೊಳಿಸಬೇಕು. ಈ ದಿಸೆಯಲ್ಲಿ ಕಾರ್ಯಕ್ಷಮತೆಗಿಂತ ಹೆಚ್ಚಿನ ಹೆರಿಗೆಗಳನ್ನು ಮಾಡಬೇಕು. ಆಯುಷ್ಮಾನ್, ಆರೋಗ್ಯ ಭಾರತ್ ಆರೋಗ್ಯ ಕಾರ್ಡ್ ಯೋಜನೆಯೂ ಯಶಸ್ವಿಯಾಗಿಲ್ಲ. ಪ್ರತಿ ತಾಲೂಕಿನಲ್ಲಿಯೂ ಹೆಚ್ಚು ಹೆಚ್ಚು ಆರೋಗ್ಯ ಕಾರ್ಡ್ ಮುದ್ರಿಸಿಲು ಕ್ರಮವಹಿಸುವಂತೆ ಡಿಎಚ್‍ಓಗೆ ಸೂಚಿಸಿದರು. ಜಿಲ್ಲಾಸ್ಪತ್ರೆ ಪ್ರಾಂಗಣ ಸೈಕಲ್ ಸ್ಟ್ಯಾಂಡ್‍ನಂತಾಗಿದ್ದು, ಶಿಸ್ತು ಮಾಯವಾಗಿದೆ. ಕ್ರಮವಹಿಸಿ ಎಂದು ಜಿಲ್ಲಾಸರ್ಜನ್‍ಗೆ ಸೂಚಿಸಿದರು. ಕುಣಿಗಲ್ ಶಾಸಕರು ಮೊದಲು ಆಸ್ಪತ್ರೆಯಲ್ಲಿ ಶಿಸ್ತು, ಸ್ವಚ್ಚತೆ ಮೂಡಬೇಕೆಂದರು.

ನರೇಗಾ ಅನುಷ್ಠಾನದ ಕರಪತ್ರ ಹೊರಡಿಸಿ:

      ನರೇಗಾ ಯೋಜನೆ ಅನುಷ್ಟಾನವನ್ನು ಕೇವಲ ವೈಯಕ್ತಿಕ ಕಾಮಗಾರಿಗೆ ಸೀಮಿತಗೊಳಿಸದೆ ಸಾರ್ವಜನಿಕ ಕಾಮಗಾರಿಗಳ ಅನುಷ್ಟಾನಕ್ಕೂ ಆದ್ಯತೆ ಕೊಡಬೇಕು ಎಂದು ಸಚಿವರು ಸೂಚಿಸಿದರು. ಈ ವೇಳೆ ಶಾಸಕ ಮಸಾಲೆ ಜಯರಾಮ್ ಮಾತನಾಡಿ, ನರೇಗಾ ಯೋಜನೆಯಡಿ ತಾಲೂಕಿನಲ್ಲಿ ಬಹಳಷ್ಟು ಅವ್ಯವಹಾರ ನಡೆಯುತ್ತಿದೆ. ಪಿಡಿಒಗಳು ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲು ಉದಾಸೀನ ತೋರುತ್ತಿದ್ದಾರೆ. ಜನಪ್ರತಿನಿಧಿಗಳಿಗೂ ದಾರಿ ತಪ್ಪಿಸುತ್ತಿದ್ದಾರೆ ಎಂದು ಸಚಿವರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನರೇಗಾ ಯೋಜನಾ ಅನುಷ್ಟಾನದ ಸಂಪೂರ್ಣ ಮಾಹಿತಿಯನ್ನು ಕರಪತ್ರದಲ್ಲಿ ಮುದ್ರಿಸಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ಹಂಚಬೇಕು ಎಂದು ನಿರ್ದೇಶಿಸಿದರು.

      ಸಮಾಜ ಕಲ್ಯಾಣ ಇಲಾಖೆಯಡಿ ನಿರ್ಮಾಣಕ್ಕಾಗಿ ಮಂಜೂರಾಗಿರುವ ವಿವಿಧ ಸಮುದಾಯ ಭವನಗಳ ನಿರ್ಮಾಣ ಪ್ರಗತಿ ಕುಂಠಿತ, ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿ ಬ್ಯಾಂಕ್ ಸಾಲಸೌಲಭ್ಯ ಯೋಜನೆ ಮಂಜೂರಾತಿಯಲ್ಲಿ ಆಗಿರುವ ವಿಳಂಬದ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿ, ಕಾಲಮಿತಿಯಲ್ಲಿ ಕಾಮಗಾರಿ ಅನುಷ್ಠಾನಗೊಳ್ಳಬೇಕು. ಬ್ಯಾಂಕ್ ಪ್ರಸ್ತಾವನೆಗಳ ಪಟ್ಟಿ ಮಾಡಿ ಬುಧವಾರದ ಸಭೆಗೆ ಒದಗಿಸಿ ಎಂದು ಅಂಬೇಡ್ಕರ್ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು.

      ಪ್ರವಾಸೋದ್ಯಮ ಇಲಾಖೆಯಲ್ಲಿ ವಾಹನ ವಿತರಣೆ ಸೌಲಭ್ಯದಲ್ಲಿ ಅವ್ಯವಹಾರ ನಡೆದ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿ ಎತ್ತಂಗಡಿ ಮಾಡಿಸಲಾಗಿತ್ತು. ಆ ವಾಹನ ಸೌಲಭ್ಯ ವಿತರಣೆಯನ್ನು ರದ್ದುಪಡಿಸಿ ಹೊಸದಾಗಿ ಅರ್ಜಿ ಕರೆದು ವಾಹನ ವಿತರಣೆಗೆ ಕ್ರಮವಹಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಮಂಗಳಗೌರಿ ಅವರಿಗೆ ಸಚಿವರು ಸೂಚಿಸಿದರು. ಸಭೆಯಲ್ಲಿ ಸಂಸದ ಜಿ.ಎಸ್. ಬಸವರಾಜ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್‍ಸಿಂಗ್, ಶಾಸಕ ಸಿ.ಎಂ.ರಾಜೇಶ್‍ಗೌಡ, ಡಿಸಿ ವೈ.ಎಸ್. ಪಾಟೀಲ, ಸಿಇಓ ಡಾ.ವಿದ್ಯಾಕುಮಾರಿ ಎಸ್ಪಿ ರಾಹುಲ್ ಕುಮಾರ್ ಶಹಪುರವಾಡ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.

ಕೈಗಾರಿಕಾ ತ್ಯಾಜ್ಯದಿಂದ ವಿಷಯುಕ್ತವಾದ ಗೊಟ್ಟಿಕೆರೆ ಕೆರೆ:

      ಶಾಸಕ ಡಾ.ರಂಗನಾಥ್ ಮಾತನಾಡಿ, ಕುಣಿಗಲ್ ನಗರಕ್ಕೆ ಹೊಂದಿಕೊಂಡಂತಿರುವ ಕೆಐಎಡಿಬಿ ಕೈಗಾರಿಕಾ ಪ್ರದೇಶದ
ತ್ಯಾಜ್ಯವನ್ನು ನೇರವಾಗಿ ಹರಿಬಿಟ್ಟಿರುವುದರಿಂದ ಗೊಟ್ಟಿಕೆರೆ ಕೆರೆ ಸಂಪೂರ್ಣ ವಿಷಯುಕ್ತವಾಗಿದ್ದು, ಒಂದು ಜಲಚರವೂ ಇಲ್ಲದಂತಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು, ಅಧಿಕಾರಿಗಳಗಮನಕ್ಕೆ ತಂದರೂ ಕ್ರಮವಹಿಸಿಲ್ಲ. ಅಧಿಕಾರಿಗಳೇ ಶಾಮೀಲಾಗಿರುವ ಶಂಕೆಯಿದೆ ಎಂದು ಸಚಿವರಲ್ಲಿ ದೂರಿದರು. ಸಚಿವ ಮಾಧುಸ್ವಾಮಿ ಪ್ರತಿಕ್ರಿಯಿಸಿ ಈ ಬಗ್ಗೆ ಎಸಿಎಸ್ ರಾಕೇಶ್‍ಸಿಂಗ್ ನೇತೃತ್ವದಲ್ಲಿ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದೆಂದರು.

      ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಭಾರಿ ಮಳೆಯಾಗಿದ್ದು, ಇನ್ನೂ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಹಾಗಾಗಿ ಜಿಲ್ಲೆಯಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಆರೋಗ್ಯ ಕಾರ್ಡ್ ಅನ್ನು ಅಭಿಯಾನ ರೂಪದಲ್ಲಿ ಅರ್ಹರಿಗೆ ವಿತರಿಸಲು ಕ್ರಮವಹಿಸಬೇಕು.

-ಕೆ.ಎ.ತಿಪ್ಪೇಸ್ವಾಮಿ, ವಿಧಾನಪರಿಷತ್ ಸದಸ್ಯರು.

ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಕಡ್ಡಾಯಕ್ಕೆ ಕ್ರಮ

ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳದೆ ಇರುವವರ ಸಂಖ್ಯೆ 5 ಲಕ್ಷಕ್ಕೆ ಹೆಚ್ಚಿದ್ದು, ಲಸಿಕೆ ಹಾಕಿಸಿಕೊಳ್ಳದಿರುವ ಬಗ್ಗೆಯಾವುದೇ ದಾಕ್ಷಿಣ್ಯ ಬೇಡ. ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಈ ಸಂಬಂಧ ಶಾಸಕರ ಸಮ್ಮುಖದಲ್ಲಿ ಬುಧವಾರ ಚರ್ಚಿಸಿ ಮಹತ್ವದ ತೀರ್ಮಾನಕೈಗೊಂಡು ಸರಕಾರಕ್ಕೆ ನಮ್ಮ ಜಿಲ್ಲೆಯಿಂದಲೇ ಮೊದಲು ಪ್ರಸ್ತಾವನೆ ಕಳುಹಿಸೋಣ ಎಂದು ಸಚಿವರು ತಿಳಿಸಿದರು. ಶಾಸಕರಾದ ಡಾ.ರಂಗನಾಥ್, ಕೆ.ಎ.ತಿಪ್ಪೇಸ್ವಾಮಿ ಸಹ ದನಿಗೂಡಿಸಿ ಲಸಿಕೆ ಪೂರ್ಣಗೊಳ್ಳುವವರೆಗೂ ಜಿಲ್ಲೆ ಸುರಕ್ಷಿತವಲ್ಲ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap