ತುಮಕೂರು : ನಾಳೆ ಜಿಲ್ಲೆಗೆ ಕುರುಬರ ಎಸ್‍ಟಿ ಹೋರಾಟ ಪಾದಯಾತ್ರೆ

 ತುಮಕೂರು :

      ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾಪುರಿ ಸ್ವಾಮೀಜೀಗಳ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರಿಗೆ ಹೊರಟಿರುವ ಪಾದಯಾತ್ರೆ ಈ ತಿಂಗಳ 28ರ ಗುರುವಾರ ತುಮಕೂರು ಜಿಲ್ಲೆ ಪ್ರವೇಶಿಸಲಿದೆ. ಪಾದಯಾತ್ರೆಯನ್ನು ಗೌರವದಿಂದ ಸ್ವಾಗತಿಸಿ, ಬೆಂಬಲಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಆರ್.ಸುರೇಶ್ ತಿಳಿಸಿದರು.

     ಮಂಗಳವಾರ ನಗರದ ಕುರುಬರ ಸಂಘದ ಕಚೇರಿಯಲ್ಲಿ ಸ್ವಾತಂತ್ರ್ಯ ಸೇನಾನಿ ಸಂಗೋಳ್ಳಿ ರಾಯಣ್ಣ ಅವರ 219ನೇ ಬಲಿದಾನ ದಿವಸ ಕಾರ್ಯಕ್ರಮದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಗಿನೆಲೆಯ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾಪುರಿ ಸ್ವಾಮೀಜಿ ಹಾಗು ಸಮಾಜದ ಮೂವರು ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟದಲ್ಲಿ ಸಮಾಜದ ಎಲ್ಲ ಮುಖಂಡರು ಭಾಗವಹಿಸಿ, ಹೋರಾಟಕ್ಕೆ ಬೆಂಬಲ ನೀಡಿದ್ದಾರೆ ಎಂದರು.

      ಜನವರಿ 28ರಂದು ತುಮಕೂರು ಜಿಲ್ಲೆಗೆ ಪ್ರವೇಶಿಸುವ ಕುರುಬರ ಜಾಗೃತಿ ಪಾದಯಾತ್ರೆಯನ್ನು ಜಿಲ್ಲಾ ಕುರುಬರ ಸಂಘದ ವತಿಯಿಂದ ಪೂರ್ಣಕುಂಭದೊಂದಿಗೆ ಸ್ವಾಗತ ಮಾಡಲಾಗುವುದು. ಹಿರಿಯೂರು ತಾಲ್ಲೂಕು ಜವಗೊಂಡನಹಳ್ಳಿಯಂದ ಶಿರಾ ತಾಲ್ಲೂಕು ತಾವರೆಕೆರೆಗೆ ಪಾದಯತ್ರೆ ಆಗಮಿಸಲಿದೆ. ಅಲ್ಲಿ ಸಮಾವೇಶದ ನಂತರ ಶಿರಾ ನಗರದ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

      ಜನವರಿ 29ರ ಬೆಳಗ್ಗೆ ಹೊರಟ ಪಾದಯಾತ್ರೆ 11 ಗಂಟೆಗೆ ದೊಡ್ಡಾಲದಮರ ಬಳಿ ಸಾರ್ವಜನಿಕ ಸಮಾವೇಶ ಅದಾದ ನಂತರ ಸೀಬಿ ನರಸಿಂಹ ಸ್ವಾಮಿ ದೇವಾಲಯದಲ್ಲಿ ವಾಸ್ತವ್ಯ ಹೂಡಲಿದೆ. ಅದಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗಿದೆ. ಜನವರಿ 30ರಂದು ಅಲ್ಲಿಂದ ಹೊರಟು ಕೋರದಲ್ಲಿ ಜಾಗೃತಿ ಕಾರ್ಯಕ್ರಮವಿದೆ. ಮಧ್ಯಾಹ್ನ ಹೊರಟು ಸಂಜೆ ತುಮಕೂರು ನಗರ ಪ್ರವೇಶ ಮಾಡಿ, ಶಿರಾಗೇಟ್‍ನ ಕಾಳಿದಾಸ ಪದವಿಪೂರ್ವ ಕಾಲೇಜಿನಲ್ಲಿ ವಾಸ್ತವ್ಯ ಮಾಡಲಿದೆ. ಇದಕ್ಕೆ ಎಲ್ಲಾ ಸಿದ್ಧತೆ ಮಾಡಲಾಗಿದೆ ಎಂದು ಟಿ.ಆರ್.ಸುರೇಶ್ ಹೇಳಿದರು.

      ಜನವರಿ 31ರ ಬೆಳಗ್ಗೆ ತುಮಕೂರಿನಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯತ್ತ ಪ್ರಯಾಣ ಬೆಳೆಸುವ ಪಾದಯಾತ್ರೆ, ಮಂಚಕಲ್ಲುಕುಪ್ಪೆ ಗ್ರಾಮದ ಹೆಚ್‍ಎಂಎಸ್ ಇಂಜಿನಿಯರ್ ಕಾಲೇಜಿನಲ್ಲಿ ಮಧ್ಯಾಹ್ನದ ಊಟ ಮುಗಿಸಿ, ನಂದಿಹಳ್ಳಿ ಮೂಲಕ ದಾಬಸ್‍ಪೇಟೆಗೆ ತೆರಳಿ ಅಲ್ಲಿ ರಾತ್ರಿ ವಾಸ್ತವ್ಯ ಮಾಡಲಿದೆ.

       ಪಾದಯಾತ್ರೆ ಜಿಲ್ಲೆಯಲ್ಲಿ ಸಂಚರಿಸುವ ನಾಲ್ಕು ದಿನಗಳ ಕಾಲ ಪಾದಯಾತ್ರೆಯಲ್ಲಿ ಭಾಗವಹಿಸುವ ಸಮುದಾಯದ ಜನರಿಗೆ ಊಟ, ವಸತಿ ವ್ಯವಸ್ಥೆಯನ್ನು ಜಿಲ್ಲಾ ಕುರುಬರ ಸಂಘ, ಕಾಳಿದಾಸ ವಿದ್ಯಾವರ್ಧಕ ಸಂಘ, ಕುರುಬರ ಎಸ್ಟಿ ಹೋರಾಟ ಸಮಿತಿ ವ್ಯವಸ್ಥೆ ಮಾಡುತ್ತಿದೆ. ಅಲ್ಲದೆ, ಶ್ರೀ ದೇವಿ ವೈದ್ಯಕೀಯ ಮಹಾವಿದ್ಯಾಲಯದ ಸಹಕಾರದಲ್ಲಿ ಪಾದಯಾತ್ರಿಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಕ್ರಮವಹಿಸಲಾಗಿದೆ. ಒಂದೊಂದು ದಿನದ ಕಾರ್ಯಕ್ರಮವನ್ನು ಜಿಲ್ಲೆಯ ತಲಾ ಎರಡು ತಾಲೂಕುಗಳನ್ನು ಒಳಗೊಂಡ ಸಂಯೋಜಕ ಸಮಿತಿ ನೇಮಕ ಮಾಡಲಾಗಿದೆ. ಪಾದಯಾತ್ರೆಯಲ್ಲಿ ಸುಮಾರು ಐದು ಸಾವಿರ ಜನರು ಭಾಗವಹಿಸುತ್ತಿದ್ದು, ಎಲ್ಲರನ್ನು ಅತ್ಯಂತ ಎಚ್ಚರಿಕೆಯಿಂದ ಗಮನಿಸಲಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತದೆ ಎಂದು ಸುರೇಶ್ ತಿಳಿಸಿದರು
ಕೊಡಗು ಮತ್ತು ಮೈಸೂರು ಜಿಲ್ಲೆಯಲ್ಲಿ ಕಾಡು ಕುರುಬ ಮತ್ತು ಜೇನು ಕುರುಬ ಜನಾಂಗವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲಾಗಿದೆ.

      ಇದೇ ರೀತಿ ಇಡೀ ಕುರುಬ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ. ಇದಕ್ಕಾಗಿ ಫೆಬ್ರವರಿ 07ರಂದು ಬೆಂಗಳೂರಿನಲ್ಲಿ ಸುಮಾರು 10 ಲಕ್ಷ ಜನರು ಒಳಗೊಂಡ ಬೃಹತ್ ಸಮಾವೇಶ ನಡೆಯಲಿದ್ದು, ಇದಕ್ಕಾಗಿ ತುಮಕೂರು ಜಿಲ್ಲೆಯಿಂದ ಒಂದು ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

      ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕುರುಬರ ಸಂಘದ ಕಾರ್ಯಾಧ್ಯಕ್ಷ ಆರ್‍ಎಂಸಿ ರಾಜು, ಹಿರಿಯ ಉಪಾಧ್ಯಕ್ಷ ಮಲ್ಲಿಕಾರ್ಜುನಯ್ಯ, ಉಪಾಧ್ಯಕ್ಷ ಎಂ.ಪಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಾಲೂರಪ್ಪ, ಪ್ರದೇಶ ಕುರುಬರ ಸಂಘದ ನಿರ್ದೇಶಕ ಟಿ.ಇ.ರಘುರಾಮ್, ಮುಖಂಡರಾದ ಅನಿಲ್, ನರಸಿಂಹಮೂರ್ತಿ, ಪಟ್ಟಣ್ಣ, ಚಂದ್ರು ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap