ತುಮಕೂರು : ಎಸ್‍ಟಿ ಮೀಸಲು ಹೋರಾಟಕ್ಕೆ ಅಭೂತಪೂರ್ವ ಬೆಂಬಲ

 ತುಮಕೂರು :

      ಕಾಗಿನೆಲೆ ಕನಕ ಗುರುಪೀಠದ ಶ್ರೀಗಳ ನೇತೃತ್ವದಲ್ಲಿ ಕುರುಬರ ಎಸ್‍ಟಿ ಮೀಸಲು ಹೋರಾಟದ ಪಾದಯಾತ್ರೆಗೆ ಜಿಲ್ಲೆಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುವುದರೊಂದಿಗೆ ರಾಜಧಾನಿಯತ್ತ ಭಾನುವಾರ ಸಂಜೆ ಪಯಣ ಬೆಳೆಸಿತು.

     ಗುರುವಾರ ಚಿತ್ರದುರ್ಗದಿಂದ ಜಿಲ್ಲೆಯ ಗಡಿ ಶಿರಾಕ್ಕೆ ಆಗಮಿಸಿದ್ದ ಪಾದಯಾತ್ರಿಗಳು ಕಳ್ಳಂಬೆಳ್ಳ, ಸೀಬಿ, ಕೋರಾದಲ್ಲಿ ಜನಜಾಗೃತಿ ಸಮಾವೇಶ ನಡೆಸಿದ ತುಮಕೂರು ನಗರಕ್ಕೆ ಶನಿವಾರ ಸಂಜೆ ಆಗಮಿಸಿದರು. ಶಿರಾ ಗೇಟ್ ಕಾಳಿದಾಸ ಕಾಲೇಜಿನಲ್ಲಿ ಬಿಡಾರ ಹೂಡಿ ಭಾನುವಾರ ಬೆಳಿಗ್ಗೆಯೇ ನಗರದಲ್ಲಿ ಪಾದಯಾತ್ರೆ ಆರಂಭಿಸಿದರು.

      ಗುರುಪೀಠದ ಶ್ರೀನಿರಂಜನಾನಂದಪುರಿಸ್ವಾಮೀಜಿ, ಶ್ರೀ ಈಶ್ವರಾನಂದಪುರಿ ಸೇರಿ ವಿವಿಧ ಸ್ವಾಮೀಜಿಗಳು, ಹೋರಾಟ ಸಮಿತಿ ಮುಖಂಡ ಎಚ್.ಎಂ.ರೇವಣ್ಣ ಮತ್ತಿತರರ ನೇತೃತ್ವದಲ್ಲಿ ಕಾಳಿದಾಸ ಕಾಲೇಜಿನಿಂದ ಹೊರಟ ಮೆರವಣಿಗೆ ಕನಕ ವೃತ್ತ ಮಾರ್ಗವಾಗಿ ಅಶೋಕರಸ್ತೆ, ಟೌನ್‍ಹಾಲ್ (ಬಿಜಿಎಸ್) ವೃತ್ತ, ಬಿ.ಎಚ್.ರಸ್ತೆ ಮೂಲಕ ಸಾಗಿ ಜಾಸ್‍ಟಾಲ್‍ಗೇಟ್ ಬಳಿಯ ಎಚ್‍ಎಂಎಸ್ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಸಮಾವೇಶಗೊಂಡಿತು. ಅಲ್ಲಿ ಧಾರ್ಮಿಕ ಸಭೆ ನಡೆಸಿ ಮಂಚಕಲಕುಪ್ಪೆ ಮೂಲಕ ಡಾಬಸ್‍ಪೇಟೆ ತಲುಪಿತು.

ರಸ್ತೆಯುದ್ದಕ್ಕೂ ಪುಷ್ಪವೃಷ್ಟಿ, ಜೈಕುರುಬ ಘೋಷಣೆ:

      ತುಮಕೂರು ನಗರಕ್ಕೆ ಆಗಮಿಸಿದ್ದ ಪಾದಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ವಿವಿಧ ಜಾತಿ ಸಮುದಾಯದ ನಾಯಕರು, ಪಕ್ಷಾತೀತವಾಗಿ ರಾಜಕೀಯ ಮುಖಂಡರು ಹಾರ ತುರಾಯಿ ಹಾಕಿ ಪಾದಚಾರಿ ಮೇಲ್ಸುತೆವೆ ಮೇಲೆ ನಿಂತು ಪುಷ್ಪವೃಷ್ಟಿಗೈದು ಸಂಭ್ರಮ ವ್ಯಕ್ತಪಡಿಸಿದರು. ಪಾದಯಾತ್ರೆ ಮೆರವಣಿಗೆಯಲ್ಲಿ ತಿಪಟೂರಿನ ಟಗರು ಗಾಡಿ ಮೆರವಣಿಗೆ ವಿಶೇಷವಾಗಿ ಗಮನ ಸೆಳೆಯಿತು. ಕೆಲವರು ಪಾದಯಾತ್ರಿಗಳಿಗೆ ನೀರು, ಮಜ್ಜಿಗೆ ವಿತರಿಸಿ ಸೌಹಾರ್ದತೆ ಮೆರೆದರು.

      ಪೂರ್ಣಕುಂಭ ಸ್ವಾಗತ:

     ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ಸದಾಶಿವನಗರದಲ್ಲಿರುವ ತುಮಕೂರು ಜಿಲ್ಲಾ ಕುರುಬರ ಸಂಘ, ಸದಾಶಿವನಗರ, ಮೆಳೇಕೋಟೆ, ವೀರಸಾಗರ, ಮರಳೂರು, ಮರಳೂರು ದಿಣ್ಣೆ ಹಾಗೂ ಉಪ್ಪಾರಹಳ್ಳಿ, ಹೆಬ್ಬೂರು, ಹೊಸೂರು, ಸಿರವರ ಆ ಭಾಗದ ಕುರುಬ ಸಮುದಾಯದವರ ಪೂರ್ಣಗುಂಭದೊಂದಿಗೆ ಸ್ವಾಗತಿಸಿದರು.

     ಕೆಎನ್‍ಆರ್‍ರಿಂದ ಗೌರವ ಸಮರ್ಪಣೆ:

   ಎಚ್‍ಎಂಎಸ್ ಕಾಲೇಜಿನಲ್ಲಿ ಸಮಾವೇಶಗೊಂಡ ಪಾದಯಾತ್ರೆ ನೇತೃತ್ವ ವಹಿಸಿದ್ದ ಶ್ರೀಗಳನ್ನು ಮಾಜಿ ಶಾಸಕ ಕೆ.ಎನ್.ರಾಜಣ್ಣ ಭೇಟಿ ಯಾಗಿ ಶಾಲು, ಹಾರ ಹಾಕಿ ಫಲ ತಾಂಬುಲ ನೀಡಿ ಗೌರವ ಸಮರ್ಪಣೆ ಮಾಡಿದರು. ಮಾಜಿ ಶಾಸಕ ಎಸ್.ಷಫಿ ಅಹಮದ್ ಅವರು ಗೌರವ ಸಮರ್ಪಿಸಿದರು.

ಮೀಸಲು ಕೂಗನ್ನು ಶಕ್ತಿ ಕೇಂದ್ರಕ್ಕೆ ಮುಟ್ಟಿಸಿ

     ಧಾರ್ಮಿಕ ಸಭೆಯಲ್ಲಿ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ ಇಂದು ಗುರುಗಳ ಮಠ ಬಿಟ್ಟು ಬೀದಿಗೆ ಬಂದಿದ್ದಾರೆ. ಸಮಾಜದ ಬಂಧುಗಳು ಮನೆಬಿಟ್ಟು ಹೋರಾಟಕ್ಕೆ ಧುಮುಕಬೇಕಿರುವುದು ಅನಿವಾರ್ಯವಾಗಿದ್ದು, ಬೆಂಗಳೂರಿನಲ್ಲಿ ಫೆ.7ರಂದು ನಡೆಯಲಿರುವ ಬೃಹತ್ ಹಕ್ಕೋತ್ತಾಯ ಸಮಾವೇಶಕ್ಕೆ ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ಸಮಾಜ ಬಾಂಧವರು ಆಗಮಿಸಿ ನಮ್ಮ ಮೀಸಲು ಕೂಗನ್ನು ಶಕ್ತಿಕೇಂದ್ರಕ್ಕೆ ಮುಟ್ಟಿಸಬೇಕೆಂದು ಕರೆಕೊಟ್ಟರು.

      ಈ ಹೋರಾಟದ ಉದ್ದೇಶ ರಾಜ್ಯದ ಬೀದರ್, ಗುಲ್ಬರ್ಗ, ಯಾದಗಿರಿ, ಕೊಡಗು ಈ ನಾಲ್ಕು ಜಿಲ್ಲೆಗಳಲ್ಲಿ ಗೊಂಡ ಹೆಸರಿನಲ್ಲಿ ಸಮುದಾಯದವರಿಗೆ ಎಸ್‍ಟಿ ಮೀಸಲು ಕಲ್ಪಿಸಲಾಗಿದ್ದು, ಉಳಿದ ಜಿಲ್ಲೆಗಳಲ್ಲಿ ಈ ಸೌಲಭ್ಯದಿಂದ ಸಮುದಾಯದವರು ವಂಚಿತರಾಗಿದ್ದಾರೆ. ಕುರುಬ, ಹಾಲಮತ, ಕಾಡುಕುರುಬ, ಗೊಂಡ ಹೀಗೆ ವಿವಿಧ ಹೆಸರಿನಿಂದ ಕರೆಯಲ್ಪಡುವ ಸಮುದಾಯದ ಹೆಸರಿನ ಎಲ್ಲರಿಗೂ ಮೀಸಲು ಕಲ್ಪಿಸುವಂತೆ ಒತ್ತಾಯಿಸಿದರು.

      ಇಡೀ ರಾಜ್ಯದಲ್ಲಿ 60 ಲಕ್ಷ ಜನಸಂಖ್ಯೆಯಲ್ಲಿ ಕುರುಬ ಸಮುದಾಯದವರಿದ್ದು, ಸಾಮಾಜಿಕ ನ್ಯಾಯದಡಿ ಸಮುದಾಯದ ಎಲ್ಲರಿಗೂ ಎಸ್ಟಿ ಸ್ಥಾನಮಾನ ಕಲ್ಪಿಸಬೇಕೆಂದರು. ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ, ಬಿಂದು ಶೇಖರ್ ಒಡೆಯರ್ ಸ್ವಾಮೀಜಿ, ಕಾಳಿದಾಸ ವಿದ್ಯಾವರ್ದಕ ಸಂಘದ ಅಧ್ಯಕ್ಷ ಬಿ.ಕೆ.ಮಂಜುನಾಥ್, ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣ, ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಶಿವಮೂರ್ತಿ, ಎಸ್ಟಿ ಹೋರಾಟ ಸಮಿತಿ ಸಂಚಾಲಕ ಇಂದ್ರಕುಮಾರ್, ಜಿಪಂ ಮಾಜಿ ಸದಸ್ಯ ಚಿಕ್ಕವೆಂಕಟಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಉದ್ಯಮಿ ಟಿ.ಸೋಮಶೇಖರ್, ಚಿಕ್ಕವೆಂಕಟಯ್ಯ, ಕೇಂದ್ರ ಸಂಘ ಹಾಗೂ ಜಿಲ್ಲಾ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಮಹಿಳಾ ಸಂಘದವರು, ಹೋರಾಟ ಸಮಿತಿ ಮುಖಂಡರು ಹಾಜರಿದ್ದರು.

 ಅದ್ಬುತ ವ್ಯವಸ್ಥೆಗೆ ಶ್ರೀಗಳ ಅಭಿನಂದನೆ :

      ತುಮಕೂರು ಜಿಲ್ಲೆಯಲ್ಲಿ ಆಗಮಿಸಿ ಎಸ್‍ಟಿ ಮೀಸಲು ಹೋರಾಟ ಪಾದಯಾತ್ರೆಗೆ ಸಮಾಜದ ಬಂಧುಗಳು ಅಭೂತಪೂರ್ವ ಸ್ವಾಗತ ಕೋರಿ, ಬೆಂಬಲ ವ್ಯಕ್ತಪಡಿಸಿದರಲ್ಲದೇ ಅದ್ಬುತವಾಗಿ ವ್ಯವಸ್ಥೆ ಮಾಡಿ ಪಾದಯಾತ್ರೆ ಜಿಲ್ಲೆಯಲ್ಲಿ ಯಶಸ್ವಿಯಾಗುವಂತೆ ಮಾಡಿದ್ದಾರೆ. ಇದಕ್ಕೆ ಶ್ರಮಿಸಿದ ಎಲ್ಲರನ್ನು ಹಾಗೂ ಸಮುದಾಯ ಬಾಂಧವರನ್ನು ಅಭಿನಂದಿಸುವುದಾಗಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿಸ್ವಾಮೀಜಿ ಹಾಗೂ ಶ್ರೀ ಈಶ್ವರಾನಂದಪುರಿಸ್ವಾಮೀಜಿ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap