ಲಾಕ್ ಡೌನ್ : ಬಡವರೂ ಅಲ್ಲ-ಸಿರಿವಂತರೂ ಅಲ್ಲದವರ ಯಾತನಾಮಯ ಬದುಕು!

ತುಮಕೂರು :

      ಲಾಕ್ ಡೌನ್ ಸಂದರ್ಭದ ಆರ್ಥಿಕ ದುಸ್ಥಿತಿ ಬಹುಪಾಲು ಜನರ ದೈನಂದಿನ ಬದುಕನ್ನೇ ಬುಡಮೇಲು ಮಾಡಿದೆ. ತಮ್ಮ ಸಂಕಷ್ಟಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲಾಗದೆ ಸಾಕಷ್ಟು ಮಂದಿ ಪರಿತಪಿಸುತ್ತಿದ್ದಾರೆ. ಕಡು ಬಡವರು, ಕೂಲಿ ಕಾರ್ಮಿಕರು, ಅಶಕ್ತರು ಸರ್ಕಾರದ, ಸಂಘ-ಸಂಸ್ಥೆಗಳ ಸಹಾಯ ಪಡೆಯುತ್ತಿದ್ದಾರೆ. ಆದರೆ ನಾವು ಯಾರ ಬಳಿ ಹೇಳಿಕೊಳ್ಳಲಿ ಎನ್ನುತ್ತಿದ್ದಾರೆ ಮಧ್ಯಮವರ್ಗದ ಹಾಗು ಬಡತನದ ರೇಖೆಯಲ್ಲಿರುವ ಜನ.

      ಇತ್ತ ಬಡತನದಲ್ಲಿರುವ ಗುಂಪಿಗೆ ಸೇರದ, ಅತ್ತ ಸುಸ್ಥಿತಿಯಲ್ಲಿರುವ ವರ್ಗಕ್ಕೂ ಅನ್ವಯಿಸದ ಸಾಮಾನ್ಯ ವರ್ಗದಲ್ಲಿ ಬದುಕುತ್ತಿರುವವರ ಪಾಡು ಹೇಳ ತೀರದು. ಇವರೆಲ್ಲ ನೋಡಲು ಹೊರಜಗತ್ತಿಗೆ ಸ್ಥಿತಿವಂತರಾಗಿಯೇ ಕಾಣುತ್ತಾರೆ. ಒಳ್ಳೊಳ್ಳೇ ಬಟ್ಟೆಗಳನ್ನು ಧರಿಸುತ್ತಾರೆ. ತಿಂಗಳ ಬದುಕಿನ ವರಮಾನಕ್ಕೆ ಒಂದು ನೆಲೆ ಹುಡುಕಿಕೊಂಡಿರುತ್ತಾರೆ. ಆದರೆ ಅವರ ಮಾಸಿಕ ಆದಾಯಕ್ಕೆ ಈಗ ಕತ್ತರಿ ಬಿದ್ದಿರುವುದರಿಂದ ಬದುಕಿನ ಶೈಲಿಯೇ ಬದಲಾಗತೊಡಗಿದೆ. ಮಾಸಿಕ ಬಾಡಿಗೆ ನೀಡಿ ಅಂಗಡಿ ಹಾಕಿಕೊಂಡಿರುವವರು, ಖಾಸಗಿಯಾಗಿ ತಮ್ಮ ವೃತ್ತಿ ಜೀವನ ರೂಪಿಸಿಕೊಂಡಿರುವವರು.. ಇನ್ನೂ ಮುಂತಾದ ಜನತೆ ಆದಾಯದ ಯಾವ ಮಾರ್ಗಗಳೂ ಇಲ್ಲದೆ ಚಡಪಡಿಸುತ್ತಿದ್ದಾರೆ.

      ಸರ್ಕಾರಿ ನೌಕರಿಗಿಂತ ಖಾಸಗಿಯಾಗಿ ವಿವಿಧ ಕ್ಷೇತ್ರಗಳನ್ನು ಅವಲಂಬಿಸಿ ಬದುಕುತ್ತಿರುವವರೇ ನಮ್ಮ ಸಮಾಜದಲ್ಲಿ ಹೆಚ್ಚಿದ್ದಾರೆ. ಓದು ಮುಗಿಸಿ ಕೆಲಸ ಸಿಗದೆ ಇದ್ದಾಗ ಬ್ಯಂಕುಗಳಿಂದ ಸಾಲ ಮಾಡಿ ಅಂಗಡಿ, ವ್ಯಾಪಾರ ವಹಿವಾಟು ಆರಂಭಿಸಿದ್ದಾರೆ. ಈ ವಹಿವಾಟು ಆಧರಿಸಿಯೇ ಬದುಕು ಸಾಗುತ್ತಿದೆ. ಬ್ಯಾಂಕುಗಳ ಮಾಸಿಕ ಕಂತು ಸಾಲ ತೀರುವಳಿ, ಅಂಗಡಿ ಬಾಡಿಗೆ, ವಿದ್ಯುತ್ ಬಿಲ್.. ಹೀಗೆ ಖರ್ಚುಗಳ ಸರಮಾಲೆಯೇ ಇದೆ. ಒಂದು ತಿಂಗಳು ನಷ್ಟ ಆದರೂ ಮತ್ತೊಂದು ತಿಂಗಳು ಸರಿದೂಗಿಸಿಕೊಂಡು ಹೋಗುವ ಮನಸ್ಥಿತಿಗೆ ಇಂತಹವರೆಲ್ಲ ಒಗ್ಗಿಕೊಂಡು ಬಿಟ್ಟಿದ್ದಾರೆ.

      ಆದರೆ ಲಾಕ್ ಡೌನ್ ಆದಾಗಿನಿಂದ ಅಂಗಡಿಗಳ ಬಾಗಿಲು ತೆರೆಯಲಾಗಿಲ್ಲ. ಯಾವುದೇ ವ್ಯಾಪಾರಕ್ಕೆ ಅವಕಾಶವಿಲ್ಲ. ಆರಂಭದ ಒಂದು ತಿಂಗಳು ಹೇಗೋ ಮುಗಿದು ಹೋಯಿತು ಎನ್ನುವಷ್ಟರಲ್ಲಿ ಮತ್ತೊಂದು ತಿಂಗಳು ಎದುರಾಗಿದೆ. ಅಂಗಡಿಯ ಮಾಸಿಕ ಬಾಡಿಗೆ ಕಟ್ಟಲೇ ಬೇಕು. ಮನೆಯ ಖರ್ಚು ವೆಚ್ಚಗಳ ನಡುವೆ ಇದನ್ನೆಲ್ಲ ನಿಭಾಯಿಸುವುದು ತುಂಬಾ ಕಷ್ಟವಾಗುತ್ತಿದೆ, ನಮ್ಮ ಕಷ್ಟ ಯಾರಿಗೆ ಹೇಳಿಕೊಳ್ಳಲಿ ಎನ್ನುತ್ತಾರೆ ಸೋಮೇಶ್ವರಪುರಂನ ನಿವಾಸಿಯೊಬ್ಬರು.

      ಇದು ಹಲವರು ಎದುರಿಸುತ್ತಿರುವ ವಾಸ್ತವ. ಕಷ್ಟಪಟ್ಟು ಒಂದು ಸ್ವ ಉದ್ಯೋಗ ಹುಡುಕಿಕೊಂಡಿರುತ್ತಾರೆ. ಬಂಡವಾಳ ಹಾಕುವಾಗಲೇ ಸುಸ್ತಾಗಿ ಹೋಗುವ ಇವರಿಗೆ ನಿರುದ್ಯೋಗಿ ಪಟ್ಟ ಹೋಯಿತಲ್ಲ ಎಂಬುದೇ ಖುಷಿ. ಹೇಗಾದರೂ ಸರಿ ಕಷ್ಟಪಟ್ಟು ಬ್ಯಾಂಕ್ ಸಾಲ ತೀರಿಸುತ್ತೇವೆ ಎಂಬ ಭರವ¸ಯೊಂದಿಗೆ ಉದ್ಯೋಗ ಕ್ಷೇತ್ರಕ್ಕೆ ಇಳಿದಿರುವವರೇ ಹೆಚ್ಚು. ಇತ್ತೀಚಿನ ಆರ್ಥಿಕ ಹಿಂಜರಿತದ ಹೊಡೆತದ ಹಿಂದೆಯೇ ಈಗ ಕೊರೋನಾ ಸಂಕಷ್ಟ ಎದುರಾಗಿದ್ದು ಮಾನಸಿಕವಾಗಿ ಕುಗ್ಗಿ ಹೋಗುವಂತೆ ಮಾಡಿದೆ.

      ಪಿ.ಜಿ. ನಡೆಸುತ್ತಿದ್ದವರು, ಜೆರಾಕ್ಸ ಮತ್ತು ಡಿಟಿಪಿ ಅಂಗಡಿ ಇಟ್ಟುಕೊಂಡವರು, ಬಟ್ಟೆ ಅಂಗಡಿ ನಡೆಸುತ್ತಿದ್ದವರು, ಹೋಟೆಲ್ ಕಾಯಕ ನಂಬಿ ಜೀವನ ನಡೆಸುತ್ತಿದ್ದವರು, ಮದ್ರಣದಿಂದ ಬದುಕುತ್ತಿದ್ದವರು.. ಹೀಗೆ ಪಟ್ಟಿ ದೊಡ್ಡದಾಗುತ್ತದೆ. ಇವರಲ್ಲಿ ಸ್ವಂತ ಜಾಗ ಹೊಂದಿದ್ದರೆ ಬಚಾವ್. ಬಾಡಿಗೆ ಪಡೆದು ಅಂಗಡಿ ನಡೆಸುತ್ತಿದ್ದರೆ ಅಂಗಡಿ ತೆರೆಯಲಿ ಬಿಡಲಿ ಬಾಡಿಗೆ ಪಾವತಿಸಲೇಬೇಕು. ಅಂಗಡಿ ಬಂದ್ ಆಗಿದ್ದರೂ ವಿದ್ಯುತ್ ಬಿಲ್ ಪಾವತಿಸಬೇಕು. ಅದೂ ದುಬಾರಿ ದರ. ಕೆಲವು ಅಂಗಡಿಗಳು ಈಗಷ್ಟೇ ತೆರೆದಿವೆ. ಆದರೆ ವಹಿವಾಟು ನಡೆಯುತ್ತಿಲ್ಲ. ಸೀಜನ್ ಬೇರೆ ಮುಗಿದು ಹೋಗುತ್ತಿದೆ. ಕೆಲವು ವ್ಯಾಪಾರಗಳಿಗೆ ಇದು ಹೇಳಿ ಮಾಡಿಸಿದ ಕಾಲ. ಆದರೆ ಯಾವುದೂ ಕೈ ಹಿಡಿಯದ ಪರಿಸ್ಥಿತಿ.

      ಸರ್ಕಾರವೇನೋ ಕಾಲಾವಕಾಶ ಕೊಡಿ, ಒತ್ತಾಯ ಮಾಡಬೇಡಿ ಎಂದು ಹೇsÀಳಿದೆ. ಆದರೆ ಯಾವ ಮಾಲೀಕರು ಸರ್ಕಾರದ ಮಾತನ್ನು ಪಾಲಿಸಲು ಸಿದ್ದರಿದ್ದಾರೆ. ಇದಕ್ಕೂ ಮಿಗಿಲಾಗಿ ಎಷ್ಟೋ ಮಾಲೀಕರು ಈ ಬಾಡಿಗೆಯನ್ನ ನಂಬಿಯೇ ಜೀವನ ನಡೆಸುತ್ತಿದ್ದಾರೆ, ಅಂತಹವರ ಪರಿಸ್ಥಿತಿಯೂ ನಮ್ಮಂತೆಯೇ ಇದೆ. ಮಾನವೀಯತೆ ದೃಷ್ಠಿಯಿಂದ ಕೆಲವರು ಪರವಾಗಿಲ್ಲ ನಿಧಾನಕ್ಕೆ ಕೊಡಿ ಎಂದು ಹೇಳುತ್ತಿದ್ದಾರೆ. ಆದರೆ ಅಷ್ಟೂ ಸೇರಿಸಿ ಕೊಡಬೇಕಲ್ಲ, ಅದು ಮತ್ತಷ್ಟು ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಕೆಲವರು.

      ಇನ್ನು ಮನೆ ಬಾಡಿಗೆ ವಿಚಾರಕ್ಕೆ ಬಂದರೆ ಸರ್ಕಾರದ ಮಾತು ಕೇಳಿಕೊಂಡು ಬಾಡಿಗೆ ಕಟ್ಟುವುದನ್ನು ಮುಂದೂಡಿದರೆ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವೆರ ವೈಮನಸ್ಯ ಆರಂಭವಾಗುತ್ತದೆ. ಎಷ್ಟೋ ಮಂದಿ ಮನೆ ಮಾಲೀಕರು ಮಾಸಿಕ ಬಾಡಿಗೆಯನ್ನೇ ನಂಬಿ ಬದುಕುತ್ತಿದ್ದಾರೆ. ಬಹಳಷ್ಟು ಕಡೆ ವೃದ್ದರು ಮನೆ ಮಾಲೀಕರಾಗಿದ್ದಾರೆ. ಜೀವನದ ಕೊನೆ ಕಾಲದಲ್ಲಿ ಬದುಕಿಗೆ ಆಸರೆಯಾಗಿರಲೆಂದು ಮನೆ ಕಟ್ಟಿಸಿ ಬಾಡಿಗೆ ನೀಡಿ ಅದರಿಂದಲೇ ಜೀವನ ನಿರ್ವಹಣೆ ಮಾಡುವವರೂ ಇದ್ದಾರೆ. ಬಾಡಿಗೆಗೆ ಒತ್ತಾಯ ಮಾಡುವಂತಿಲ್ಲ, ಅವರು ಕೊಡುವಂತಿಲ್ಲ. ಸಂದಿಗ್ಧ ಪರಿಸ್ಥಿತಿ ಇವರದ್ದು.

      ಲಾಕ್ ಡೌನ್ ಸಂದರ್ಭದಲ್ಲಿ ಪಿ.ಜಿ. ಗಳಲ್ಲಿ ಯಾರೂ ಇರಬಾರದು ಖಾಲಿ ಮಾಡಿಸಬೇಕು ಎಂದು ಆದೇಶವಾಯಿತು. ಮಾಸಿಕ 40.000 ರೂ. ಬಾಡಿಗೆ ನೀಡುತ್ತಿದ್ದೇನೆ. ಈಗ ವಿದ್ಯಾರ್ಥಿನಿಯರಿಲ್ಲ, ಆದರೂ ಬಾಡಿಗೆ ಕಟ್ಟಲೇಬೇಕು, ಈ ನಡುವೆ ಮೂರು ಪಟ್ಟು ಹೆಚ್ಚಿಗೆ ಕರೆಂಟ್ ಬಿಲ್ ಬಂದಿದೆ. ಒಂದು ತಿಂಗಳಾಗಿದ್ದರೆ ಹೇಗೋ ನಿಭಾಯಿಸಬಹುದಿತ್ತು. ಈ ತಿಂಗಳೂ ಮುಂದುವರಿದಿದೆ .ಹೀಗೆಯೇ ಮುಂದುವgರಿದರೆ ನಮ್ಮ ಸ್ಥಿತಿ ಅಧೋಗತಿ ಎನ್ನುತ್ತಾರೆ ಪಿಜಿ ನಡೆಸುತ್ತಿರುವ ಮಹಿಳೆಯೊಬ್ಬರು. ಅಲಂಕಾರಿಕಾ ವಸ್ತುಗಳನ್ನು ಇಟ್ಟು ವ್ಯಾಪಾರ ಮಾಡುತ್ತಿರುವ ಮಹಿಳೆಯೊಬ್ಬರ ಕಥೆಯೂ ಇದೇ ಆಗಿದೆ. ತಿಂಗಳಿಗೆ ಅಂಗಡಿ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಏನಾದರೋಂದು ಪರಿಹಾರ ಹುಡುಕಿ ಎಂದು ಜಿಲ್ಲಾಡಳಿತಕ್ಕೂ ಮನವಿ ಮಾಡಿದ್ದೇನೆ. ಎನ್ನುತ್ತಾರೆ ಅವರು.

      ತೀರಾ ಬಡವರಾದರೆ ಸರ್ಕಾರ ಅಥವಾ ಸಂಘ ಸಂಸ್ಥೆಗಳ ಬಳಿ ಮನವಿ ಮಾಡೆಬಹುದು. ಅಂತಹವರಿಗೆಲ್ಲ ಊಟ ಉಪಹಾರದ, ಅಗತ್ಯ ವಸ್ತುಗಳ ಕಿಟ್ ತಲುಪುತ್ತದೆ. ಆದರೆ ಎಲ್ಲ ಇದೆ ಎಂದು ಬಿಂಬಿಸಿಕೊಂಡಿರುವ ನಮಗೆ ಯಾವುದೂ ಸಿಗದಂತಾಗಿದೆ ಎನ್ನುತ್ತಾರೆ ಜೆರಾಕ್ಸ್ ಅಂಗಡಿ ನಡೆಸುತ್ತಿರುವ ವ್ಯಕಿಯೊಬ್ಬರು.  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap