ತುಮಕೂರು : ಲಾಡ್ಜ್ ನಲ್ಲಿ ಸುರಂಗ : ಬೆಚ್ಚಿಬಿದ್ದ ಅಧಿಕಾರಿಗಳು!!

 ತುಮಕೂರು: 

     ಕ್ಯಾತ್ಸಂದ್ರ ರಿಂಗ್ ರಸ್ತೆ ಬಳಿ ಇರುವ ಲಾಡ್ಜ್‍ವೊಂದರ ಮೇಲೆ ಸೋಮವಾರ ಮೈಸೂರಿನ ಒಡನಾಡಿ ಸಂಸ್ಥೆಯವರು ಇಲ್ಲಿನ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ನಡೆಸಿದ ದಾಳಿ ಹಲವು ಆಶ್ಚರ್ಯಗಳನ್ನು ಹುಟ್ಟುಹಾಕಿದೆ. ಅಲ್ಲದೆ, ಸದರಿ ಲಾಡ್ಜ್‍ನಲ್ಲಿ ಅಳವಡಿಸಲಾಗಿದ್ದ ಕಳ್ಳಗುಹೆ ಕಿಂಡಿ ಈಗ ಎಲ್ಲರ ಗಮನ ಸೆಳೆದಿದೆ.

      ಒಡನಾಡಿ ಸಂಸ್ಥೆಯವರು ಕೋರಿಕೆಯ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್ ಅವರು ಒಂದು ತಂಡವನ್ನು ಕಳುಹಿಸಿಕೊಟ್ಟಿದ್ದರು. ಜಂಟಿ ಕಾರ್ಯಾಚರಣೆಯಲ್ಲಿ ಲಾಡ್ಜ್ ಒಳಗೆ ಇದ್ದ ಕಳ್ಳಗುಹೆಯನ್ನು ಒಡನಾಡಿ ಸಂಸ್ಥೆಯವರು ಚಾಣಾಕ್ಷತನದಿಂದ ಭೇದಿಸಿದ್ದಾರೆ. ಇದು ಪೊಲೀಸರಿಗೂ ಆಶ್ಚರ್ಯ ಉಂಟು ಮಾಡಿರುವ ಸಂಗತಿ. ಯಾರಿಗೂ ಗೊತ್ತಾಗದ ಹಾಗೆ ಗೋಡೆಗೆ ಹೊಂದಿಕೊಂಡಂತೆ ಸಣ್ಣ ಕಿಂಡಿ ಮಾಡಿ ಅದರ ಮುಂಭಾಗ ಒಂದು ಟೇಬಲ್ ಇಟ್ಟಿರುವುದು ಯಾರಿಗೂ ಯಾವುದೇ ಕಾರಣಕ್ಕೂ ಅನುಮಾನ ಬರಲಿಕ್ಕಿಲ್ಲ. ಆದರೆ ಈಗಾಗಲೇ ಇಂತಹ ವಿಷಯಗಳಲ್ಲಿ ಸಾಕಷ್ಟು ಪರಿಣಿತಿ ಮತ್ತು ಮಾಹಿತಿ ಹೊಂದಿರುವ ಒಡನಾಡಿ ಸಂಸ್ಥೆಯ ಸಿಬ್ಬಂದಿ ಈ ಕಳ್ಳಗುಹೆಯನ್ನು ಪತ್ತೆ ಹೆಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

      ಈ ಹಿಂದೆಯೂ ತುಮಕೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಯುತ್ತಾ ಬಂದಿತ್ತು. ಆಗಾಗ್ಗೆ ಕೆಲವೊಮ್ಮೆ ಬಹಿರಂಗವಾಗಿ ಸದ್ದಿಲ್ಲದೆ ನಡೆದು ಹೋಗುತ್ತಿದೆ. ನಿನ್ನೆ ಪತ್ತೆಯಾಗಿರುವುದು ಇತ್ತೀಚಿನ ಒಂದು ಉದಾಹರಣೆ. ರಾಜ್ಯದ ಹಲವು ಕಡೆ ಇಂತಹ ಹೈಟೆಕ್ ದಂಧೆಗಳು ನಡೆಯುತ್ತಿದ್ದು, ಈ ಜಾಲ ಹುಡುಕಿ ಹೊರಟರೆ ದಂಧೆಕೋರರ ಪಡೆಯೇ ಸಿಕ್ಕಿಬೀಳಲಿದೆ.

      ಇಂತಹ ಜಾಲದಲ್ಲಿ ಹೊರರಾಜ್ಯದವರನ್ನು, ಹೊರರಾಷ್ಟ್ರದವರನ್ನು ಬಳಸಿಕೊಳ್ಳುತ್ತಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸುವ ಜಾಲವೂ ಇದರೊಳಗೆ ಸೇರಿಕೊಂಡಿದೆ. ತುಮಕೂರಿನಲ್ಲಿ ಪತ್ತೆಯಾಗಿರುವ ಮೂವರ ಪೈಕಿ ಇಬ್ಬರು ಸಿಕ್ಕಿಬಿದ್ದಿದ್ದು ಇವರು ಮೂಲತಃ ಬಾಂಗ್ಲಾದವರು. ಆದರೆ ಕೋಲ್ಕತ್ತಾದ ದಾಖಲೆಗಳನ್ನು ಹೊಂದಿದ್ದಾರೆ. ಹೀಗೆ ನಕಲಿ ದಾಖಲೆಗಳು ಹೇಗೆ ಸೃಷ್ಟಿಯಾದವು ಎಂಬುದೇ ಒಂದು ವಿಸ್ಮಯ. ಬೆಂಗಳೂರು ಮತ್ತು ಕರಾವಳಿ ಭಾಗದಲ್ಲಿ ಇರುವ ವೇಶ್ಯಾವಾಟಿಕೆ ಹೈಟೆಕ್ ಜಾಲ ಇತರೆ ಕಡೆಗಳಿಗೂ ಹರಡದಂತೆ ಎಚ್ಚರಿಕೆ ವಹಿಸಬೇಕಿದೆ.

ವೇಶ್ಯಾವಾಟಿಕೆ ದಾಳಿ ಸ್ಥಳಕ್ಕೆ ಎಸ್.ಪಿ. ಭೇಟಿ 

      ಸೋಮವಾರ ರಾತ್ರಿ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆದ ಕ್ಯಾತ್ಸಂದ್ರ ಮೇಲ್ಸೆತುವೆ ಬಳಿಯ ವಸತಿಗೃಹಕ್ಕೆ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

     ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿಯ ಅಧಿಕಾರಿಗಳು ಈ ವಿಷಯವನ್ನು ಮೊದಲು ಗಮನಕ್ಕೆ ತಂದಿದ್ದು, ಒಡನಾಡಿ ಸಂಸ್ಥೆಯವರು ಮತ್ತಷ್ಟು ಮಾಹಿತಿ ಕಲೆಹಾಕಿ ವಿವರ ನೀಡಿದರು. ಈ ಸಂಬಂಧ ಸೈಬರ್ ಠಾಣೆ ಪೊಲೀಸರನ್ನು ನಿಯೋಜಿಸಿ ಜಾಲವನ್ನು ಭೇದಿಸಿದ್ದು, ಬಂಗಾಳ ಮೂಲದ ಇಬ್ಬರು ಯುವತಿಯರನ್ನು ರಕ್ಷಿಸಿ, ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಇತರೆಡೆ ವೇಶ್ಯಾವಾಟಿಕೆ ಜಾಲ ಸಕ್ರಿಯವಾಗಿರುವ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದರು.

      ಪೊಲೀಸರಿಂದ ತಪ್ಪಿಸಿಕೊಳ್ಳಲು ವೇಶ್ಯಾವಾಟಿಕೆ ದಂಧೆಕೋರರು ಲಾಡ್ಜ್‍ನಲ್ಲಿ ಸುರಂಗ ಮಾಡಿದ್ದು, ಸಾರ್ವಜನಿಕರ ಗಮನಕ್ಕೆ ಬರಬಾರದೆಂದು ಪಾಳುಬಿದ್ದ ಕಟ್ಟಡವನ್ನೇ ಈ ದುಷ್ಕೃತ್ಯಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಕ್ಯಾತ್ಸಂದ್ರ ಪೊಲೀಸರಿಗಿಂತ ಮೊದಲೇ ಬೇರೆ ಬೇರೆ ಸಂಸ್ಥೆ ಮಾಹಿತಿ ದೊರೆತ್ತಿದ್ದು, ಈ ಸಂಬಂಧ ಸ್ಥಳೀಯ ಪೊಲೀಸರಿಂದ ವಿವರ ಕೇಳಲಾಗುವುದು. ನಗರದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಎಸ್.ಪಿ. ರಾಹುಲ್ ಕುಮಾರ್ ಶಹಾಪುರವಾಡ್ ತಿಳಿಸಿದರು.

     ಚಿಕ್ಕಹಳ್ಳಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 30ಕ್ಕೂ ಅಧಿಕ ಮಂದಿಯನ್ನು ಸಂಶಯಾಸ್ಪದದ ಮೇರೆಗೆ ವಿಚಾರಣೆ ನಡೆಸಿದ್ದು, ಇನ್ನೇನು ಆರೋಪಿಗಳು ಸಿಕ್ಕರು ಎನ್ನುವಷ್ಟರಲ್ಲಿ, ಸೂಕ್ತಸಾಕ್ಷ್ಯಾಧಾರಗಳ ಕೊರತೆ ಉಂಟಾಯಿತು. ಆರೋಪಿಗಳನ್ನು ಪತ್ತೆ ಹಚ್ಚಲು ತನಿಖಾ ತಂಡ ಸಕ್ರಿಯವಾಗಿದ್ದು, ವಿಚಾರಣೆ ಮುಂದುವರಿದಿದೆ.

-ರಾಹುಲ್‍ಕುಮಾರ್ ಶಹಾಪುರವಾಡ್, ಎಸ್ಪಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap