ತುಮಕೂರು:
ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆಯೇ? ಈ ಮಾತುಗಳು ರಾಜಕೀಯ ವಲಯದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿವೆ. ಮೊನ್ನೆ ಅವರ ಪ್ರಮುಖ ಖಾತೆಯನ್ನು ಬದಲಾಯಿಸಲಾಯಿತು. ಅದರ ಹಿಂದೆಯೇ ಮಾರನೆಯ ದಿನ ಮತ್ತೊಮ್ಮೆ ಖಾತೆ ಬದಲಾಯಿತು. ನನ್ನ ನೀರಾವರಿ ಖಾತೆ ಬದಲಾಯಿಸಬೇಡಿ ಎಂದು ಯಡಿಯೂರಪ್ಪ ಬಳಿ ಹೇಳಿಕೊಂಡಿದ್ದೆ. ಆದರೂ ಬದಲಾಯಿಸಿಬಿಟ್ಟಿದ್ದಾರೆ ಎಂಬ ಜೆ.ಸಿ.ಎಂ. ಅವರ ಅಸಮಾಧಾನದ ಹಿಂದೆ ಯಡಿಯೂರಪ್ಪ ಸಂಪುಟದಲ್ಲಿ ಜೆಸಿಎಂ ನಿರ್ಲಕ್ಷ್ಯಕ್ಕೊಳಗಾಗುತ್ತಿರುವ ಮಾತುಗಳು ಸಹಜವಾಗಿ ಕೇಳಿಬರತೊಡಗಿವೆ.
ಸಣ್ಣ ನೀರಾವರಿ ಇಲಾಖೆ ಅವರೇ ಇಷ್ಟಪಟ್ಟಿದ್ದ ಖಾತೆ. ಈ ಖಾತೆಯೇ ಕೈತಪ್ಪಿ ಹೋಗಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಸಮಾಧಾನವನ್ನು ಬಹಿರಂಗವಾಗಿ ಹೊರ ಹಾಕಲೂ ಆಗುತ್ತಿಲ್ಲ. ಯಡಿಯೂರಪ್ಪ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ಜೆಸಿಎಂ ಕ್ರಮೇಣ ಮೂಲೆಗುಂಪಾಗುತ್ತಿರುವುದಾದರೂ ಏಕೆ ಎಂಬ ಚರ್ಚೆಗಳು ಈಗ ರಾಜಕೀಯ ವಲಯದಲ್ಲಿ ಅಷ್ಟೇ ಏಕೆ ಬಿಜೆಪಿ ಆಪ್ತ ವಲಯದಲ್ಲಿಯೂ ಕೇಳಿಬರುತ್ತಿದೆ.
ಜನವರಿ 21 ರಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಹಾಗೂ ಸಣ್ಣ ನೀರಾವರಿ ಇಲಾಖೆಯನ್ನು ಬೇರೆಯವರಿಗೆ ವಹಿಸಲಾಯಿತು. ಜೆಸಿಎಂಗೆ ವೈದ್ಯಕೀಯ ಖಾತೆ ನೀಡಲಾಯಿತು. ಮಾರನೆಯ ದಿನ ಹಜ್ ಮತ್ತು ವಕ್ಫ್ ಇಲಾಖೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಇದು ಒಂದು ರೀತಿಯಲ್ಲಿ ಸಮಾಧಾನಪಡಿಸುವ ಪ್ರಯತ್ನ ಎಂದು ಹೇಳಲಾಗುತ್ತಿದ್ದರೂ ಮುಂದಿನ ದಿನಗಳಲ್ಲಿ ಈ ಬೆಳವಣಿಗೆಗಳು ಯಾವ ಸ್ವರೂಪ ಪಡೆಯುವುದೋ ಕಾದುನೋಡಬೇಕು.
ಸಚಿವ ಸಂಪುಟದಲ್ಲೇ ಆಗಲಿ, ಬಿಜೆಪಿ ವಲಯದಲ್ಲೇ ಆಗಲಿ ತುಮಕೂರು ಜಿಲ್ಲಾ ಮಟ್ಟದಲ್ಲೇ ಆಗಲಿ ಜೆ.ಸಿ.ಮಾಧುಸ್ವಾಮಿ ಅವರನ್ನು ಸಮರ್ಥಿಸಿ ಅವರ ಪರವಾಗಿ ನಿಲ್ಲುವ ಮುಖಂಡರುಗಳ ಸಂಖ್ಯೆ ತೀರಾ ಕಡಿಮೆ. ಹಾಗೆ ನೋಡಿದರೆ ಇವರು ಒಂಟಿಯಾಗಿಯೇ ಕಾಣಿಸುತ್ತಿದ್ದಾರೆ. ಸ್ವಕ್ಷೇತ್ರ ಚಿಕ್ಕನಾಯಕನಹಳ್ಳಿಯಲ್ಲಂತೂ ಬಿಜೆಪಿ ಎರಡು ಬಣಗಳಾಗಿ ಒಡೆದು ಹೋಗಿವೆ. ಜೆಸಿಎಂ ವಿರುದ್ಧ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಬಹಿರಂಗವಾಗಿಯೇ ಸೆಡ್ಡು ಹೊಡೆಯುತ್ತಿದ್ದಾರೆ. ಇತ್ತೀಚೆಗೆ ನಡೆದ ಗ್ರಾ.ಪಂ. ಚುನಾವಣೆಯೇ ಇದಕ್ಕೆ ಸಾಕ್ಷಿ. ತಾಲ್ಲೂಕಿನ ಬಹುತೇಕ ಕಡೆ ಜೆಸಿಎಂ ಬಣ, ಕಿರಣ್ ಬಣ ಎಂದು ಗುರುತಿಸಿಕೊಂಡಿರುವುದು, ಸ್ವಗ್ರಾಮ ಸೇರಿದಂತೆ ಕೆಲವು ಕಡೆ ಜೆಸಿಎಂ ಬೆಂಬಲಿಗರು ಸೋತಿರುವುದು ಇತ್ತೀಚಿನ ಬೆಳವಣಿಗೆಗಳು.
ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಜೆಸಿಎಂ ವಿರುದ್ಧದ ಅಸಹನೆ ಬಿಜೆಪಿ ವಲಯದಲ್ಲಿ ಇತ್ತೀಚೆಗೆ ಬಹಿರಂಗವಾಗಿಯೇ ಸ್ಫೋಟಗೊಳ್ಳತೊಡಗಿವೆ. ಇದಕ್ಕೆ ಪುಷ್ಠಿ ನೀಡಿದ್ದು ತಾಲ್ಲೂಕಿನ ಕೆರೆಗಳಿಗೆ ನೀರು ಹರಿದ ವಿಚಾರ. ಸಾಸಲು ಕೆರೆಯಿಂದ ಶೆಟ್ಟಿಕೆರೆ ಹಾಗೂ ಇತರೆ ಕೆರೆಗಳಿಗೆ ಅಕ್ಟೋಬರ್ 9 ರಿಂದ ಹೇಮಾವತಿ ನೀರು ಹರಿಯುತ್ತಿದೆ. ಹೀಗೆ ನೀರು ಹರಿಯಲು ಅನೇಕರ ಶ್ರಮವಿದೆ. 2003 ರಿಂದ ಆರಂಭವಾದ ನೀರಾವರಿ ಹೋರಾಟ 17 ವರ್ಷಗಳ ನಿರಂತರ ಪ್ರಯತ್ನದಿಂದಾಗಿ ನೀರು ಹರಿಯಲು ಸಾಧ್ಯವಾಗಿದೆ. ಇದರಲ್ಲಿ ಹಾಲಿ, ಮಾಜಿ ಶಾಸಕರಾದಿಯಾಗಿ ಹಲವು ಹೋರಾಟಗಾರರ ಶ್ರಮವಿದೆ.
ಕಳೆದ ವಾರ ಶೆಟ್ಟಿಕೆರೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಕೆ.ಎಸ್.ಕಿರಣ್ ಕುಮಾರ್ ಮತ್ತಿತರರನ್ನು ನಿರ್ಲಕ್ಷಿಸಲಾಯಿತು ಎಂಬುದು ಬಿಜೆಪಿ ವಲಯದಲ್ಲಿ ಸಹನೆಯ ಕಟ್ಟೆಯೊಡೆದಿದೆ. ಹೇಮಾವತಿ ನೀರು ಹರಿಯಲು ಈಗ ಜೆಸಿಎಂ ಸಚಿವರಾಗಿರುವುದರಿಂದ ಕಾರಣ ಇರಬಹುದು. ಆದರೆ ಇದರ ಹಿಂದೆ ಸಾಕಷ್ಟು ಜನರ ಶ್ರಮವಿದೆ ಎಂದರಿತು ಅದೇ ಸ್ಥಳದಲ್ಲಿ ಐದು ದಿನದ ಬಳಿಕ ಅದ್ಧೂರಿ ಸಮಾರಂಭ ನಡೆಯಿತು. ಕೆ.ಎಸ್.ಕಿರಣ್ ಕುಮಾರ್ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಮಠಾಧೀಶರು, ಹೋರಾಟಗಾರರು, ಸಂಸದ ಜಿ.ಎಸ್.ಬಸವರಾಜು ಮೊದಲಾದವರು ಈ ಅದ್ಧೂರಿ ಸಮಾರಂಭಕ್ಕೆ ಸಾಕ್ಷಿಯಾದರು. ಅಂದಿನ ಸಮಾರಂಭದಲ್ಲಿ ಜೆಸಿಎಂ ವಿರುದ್ಧ ಕೆ.ಎಸ್.ಕೆ. ಪರೋಕ್ಷ ವಾಗ್ದಾಳಿಯನ್ನೂ ನಡೆಸಿದ್ದರು. ಈ ಸಮಾವೇಶದ ಮಾರನೆಯ ದಿನವೇ ಜೆಸಿಎಂ ಖಾತೆ ಬದಲಾಯಿತು. ಕಾಕತಾಳೀಯ ಎಂಬಂತೆ ಸಂಪುಟ ವಿಸ್ತರಣೆಯಾಗಿ ಖಾತೆಗಳು ಬದಲಾದವು.
ಜೆಸಿಎಂ ಜಿಲ್ಲಾ ಉಸ್ತುವಾರಿ ಸಚಿವರು. ಜಿ.ಎಸ್.ಬಸವರಾಜು ಸಂಸದರು. ಈ ಇಬ್ಬರ ಚುನಾವಣೆಯಲ್ಲಿಯೂ ಪರಸ್ಪರ ಒಬ್ಬರಿಗೊಬ್ಬರು ಪ್ರಚಾರದಲ್ಲಿ ಸಹಾಯ ಹಸ್ತ ಚಾಚಿದ್ದವರು. ಆದರೆ ಅಧಿಕಾರಕ್ಕೆ ಬಂದ ನಂತರ ಸಂಬಂಧಗಳು ಹಳಸಿ ಹೋಗಿರುವುದು ಗುಟ್ಟಾಗಿ ಉಳಿದಿಲ್ಲ. ಸಾಕಷ್ಟು ವಿಚಾರದಲ್ಲಿ ಇವರಿಬ್ಬರ ನಡುವೆ ಮನಸ್ಸು ಕೆಟ್ಟಿದೆ ಎಂಬುದನ್ನು ಅವರ ಆತ್ಮೀಯ ವಲಯದವರೇ ಹೇಳುತ್ತಾರೆ. ಹೀಗಾಗಿ ಜೆಸಿಎಂ ಮತ್ತು ಜಿ.ಎಸ್.ಬಸವರಾಜು ನಡುವೆ ಅಂತರವೇ ಹೆಚ್ಚುತ್ತಿದೆ. ಅಷ್ಟೇ ಅಲ್ಲ, ಜಿಲ್ಲಾ ಮಟ್ಟದ ಮುಖಂಡರು, ಶಾಸಕರಾದಿಯಾಗಿ ಬಹುತೇಕ ರಾಜಕಾರಣಿಗಳು ಮಾಧುಸ್ವಾಮಿ ಪರ ಇಲ್ಲ ಎಂಬಂತಹ ಮಾತುಗಳು ಚರ್ಚೆಗೆ ಒಳಗಾಗಿವೆ. ಬಿಜೆಪಿಯ ಕಾರ್ಯಕ್ರಮಗಳಿಗೆ ಹೆಚ್ಚು ಆಸಕ್ತಿ ತೋರದಿರುವುದು, ಮೂಲ ಬಿಜೆಪಿಗರನ್ನು ಕಡೆಗಣಿಸುವುದು, ಅವರೊಂದಿಗೆ ನಿರ್ಲಕ್ಷ್ಯತನದಿಂದ ನಡೆದುಕೊಳ್ಳುವುದು ಇತ್ಯಾದಿ ವಿಷಯಗಳು ಹೆಚ್ಚಾಗಿ ಕೇಳಿಬರುತ್ತಿವೆ. ಶಿರಾ ಉಪ ಚುನಾವಣೆ ಸಂದರ್ಭದಲ್ಲಿಯೂ ಜೆಸಿಎಂ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಚುನಾವಣಾ ಪ್ರಚಾರಕ್ಕೆ ಬನ್ನಿ ಎಂದು ಯಾರೂ ಅವರನ್ನು ಕರೆಯಲಿಲ್ಲ. ಒಂದು ರೀತಿಯಲ್ಲಿ ವ್ಯವಸ್ಥಿತವಾಗಿ ಅವರನ್ನು ನಿರ್ಲಕ್ಷಿಸಲಾಯಿತೆ ಎಂಬಂತಹ ಮಾತುಗಳು ಆಗಿನ ಸಂದರ್ಭದಲ್ಲಿಯೇ ಕೇಳಿ ಬಂದವಾದರೂ ಕೊರೊನಾ ಬಂದಿದ್ದರಿಂದ ಪ್ರಚಾರಕ್ಕೆ ಬರಲಿಲ್ಲ ಎಂದು ಸಮರ್ಥಿಸಿಕೊಳ್ಳುವ ಪ್ರಯತ್ನಗಳು ನಡೆದಿದ್ದವು.
ಹೀಗೆ ಸ್ಥಳೀಯ ವಿಧಾನಸಭಾ ಕ್ಷೇತ್ರ, ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿಯೂ ಅಸಮಾಧಾನಕ್ಕೆ ಒಳಗಾಗಿರುವ ಜೆಸಿ ಮಾಧುಸ್ವಾಮಿ ಅವರಿಂದ ಜಿಲ್ಲಾ ಉಸ್ತುವಾರಿ ಸ್ಥಾನವನ್ನೂ ಕಿತ್ತುಕೊಳ್ಳುವ ಪ್ರಯತ್ನಗಳು ಈ ಹಿಂದೆ ನಡೆದಿದ್ದವು. ಆ ಸ್ಥಾನವನ್ನು ವಿ.ಸೋಮಣ್ಣ ಅವರ ಹೆಗಲಿಗೆ ಹಾಕಲು ಬಿಜೆಪಿಯಲ್ಲಿಯೇ ಒಳ ರಾಜಕೀಯ ನಡೆದಿತ್ತು. ಸಚಿವ ಸಂಪುಟ ಸಭೆ ನಡೆಯುವಾಗ ಒಮ್ಮೆ ಬೆಂಗಳೂರು ಅಭಿವೃದ್ಧಿ ವಿಚಾರ ಬಂದಾಗ ಸೋಮಣ್ಣ ವಿರುದ್ಧ ಜೆ.ಸಿ.ಎಂ. ಗರಂ ಆಗಿದ್ದು, ಬೆಂಗಳೂರೇನು ನಿಮ್ಮಪ್ಪನದಾ ಎಂದು ಬೈಯ್ದಾಡಿದ ವಿಷಯಗಳೆಲ್ಲ ಬೇಗುದಿಗೆ ಸಂಬಂಧಪಟ್ಟದ್ದೆ. ಹೀಗೆ ಪಕ್ಷದ ಆಪ್ತ ವಲಯದಲ್ಲಿಯೂ ಜೆಸಿಎಂ ಅಷ್ಟಕ್ಕಷ್ಟೆ ಎನ್ನುವಂತಾಗಿದೆ.
ಸದನದಲ್ಲಿ ಮಾತನಾಡುತ್ತಾರೆ ಎಂಬ ಕಾರಣಕ್ಕೆ ಅವರ ಧೋರಣೆಗಳನ್ನೆಲ್ಲಾ ಸಹಿಸಿಕೊಳ್ಳಬೇಕೆ ಎಂಬ ಸಂಪುಟದ ಹಲವು ಹಿರಿಯರ ಕೋಪತಾಪಗಳು ಈಗ ಖಾತೆ ಬದಲಾವಣೆಯ ಮಟ್ಟಕ್ಕೆ ತಂದು ನಿಲ್ಲಿಸಿದೆ. ಪಕ್ಷದ ಒಳಗೆ ಮಾತ್ರವಲ್ಲ, ಸಮಾಜದಲ್ಲಿ ಬಹಿರಂಗವಾಗಿಯೂ ಜೆಸಿ ಮಾಧುಸ್ವಾಮಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಬಂದಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹುಳಿಯಾರು ಹೋಬಳಿ ತಮ್ಮಡಿಹಳ್ಳಿ ಗೊಲ್ಲರಹಟ್ಟಿಗೆ ಪ್ರಚಾರಕ್ಕಾಗಿ ಹೋದಾಗ ಪ್ರಶ್ನೆ ಮಾಡಿದ ಯುವಕನ ಮೇಲೆ ಹಲ್ಲೆ ಮಾಡಲು ಮುಂದಾದರೆಂಬ ಆರೋಪ, ಹುಳಿಯಾರಿನ ವೃತ್ತವೊಂದಕ್ಕೆ ಕನಕದಾಸರ ಹೆಸರಿಡುವ ವಿಚಾರದಲ್ಲಿ ಈಶ್ವರಾನಂದಪುರಿ ಸ್ವಾಮೀಜಿಗಳ ಜೊತೆ ಚಕಮಕಿ ಮಾಡಿಕೊಂಡದ್ದು, ಕೋಲಾರದಲ್ಲಿ ಮನವಿ ಕೊಡಲು ಬಂದ ರೈತ ಮಹಿಳೆಯನ್ನು ರ್ಯಾಸ್ಕಲ್ ಎಂದು ನಿಂದಿಸಿದ್ದು, ಬೆಂಗಳೂರು ನಿಮ್ಮಪ್ಪನದಾ ಎಂದು ಸಂಪುಟ ಸಭೆಯಲ್ಲಿಯೇ ಸೋಮಣ್ಣ ಅವರೊಂದಿಗೆ ಜಟಾಪಟಿ, ಹೊಸಪೇಟೆ ಉಪ ಚುನಾವಣೆಯ ವೇಳೆ ವೀರಶೈವ ಲಿಂಗಾಯತ ಸಮಾಜದ ಒಂದು ಮತವೂ ಬಿಜೆಪಿ ಹೊರತುಪಡಿಸಿ ಅನ್ಯ ಪಕ್ಷದ ಅಭ್ಯರ್ಥಿಗೆ ಬೀಳಬಾರದು, ಬೇರೆಯವರಿಗೆ ಮತ ಹಾಕಿದರೆ ಅದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೆನ್ನೆಗೆ ಹೊಡೆದಂತೆ ಎಂದದ್ದು, ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಬಳಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾಗ ಮುಖಂಡರೊಂದಿಗೆ ವಾಗ್ವಾದ ಮಾಡಿಕೊಂಡದ್ದು, ತುಮಕೂರು ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿ ಅಧಿಕಾರಿಯನ್ನು ಜಾಡಿಸಿ ಒದ್ದರೆ… ರ್ಯಾಸ್ಕಲ್ ಎಂಬ ಪದ ಬಳಸಿ ನಿಂದಿಸಿದ್ದು, ಶಿರಾ ತಾಲ್ಲೂಕು ಗೋಪಾಲದೇವರಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ನೀರಿನ ಪ್ರಸ್ತಾವನೆ ಮುಂದಿಡಲು ಹೋದಾಗ ಅದ್ಯಾರಿಂದ ನೀರು ಬಿಡಿಸಿಕೊಳ್ತೀರೋ… ನಾನೂ ನೋಡ್ತೇನೆ ಎಂಬ ವಿವಾದಾತ್ಮಕ ಹೇಳಿಕೆಗಳಿಂದ ವೈರಲ್ ಆದದ್ದು. ಹೀಗೆ ಜೆಸಿಎಂ ಸುತ್ತ ವಿವಾದಗಳೇ ಸುತ್ತಿಕೊಂಡಿವೆ.
ಮೇಲಿನ ವಿವಾದಗಳು, ಆರೋಪಗಳು ಏನೇ ಇರಲಿ ಖಾತೆ ಬದಲಾವಣೆ ಆಗಿರುವುದು ಜಿಲ್ಲೆಯ ಮಟ್ಟಿಗೆ ಹಿನ್ನಡೆ ಎಂದೇ ಭಾವಿಸಲಾಗುತ್ತಿದೆ. ಏಕೆಂದರೆ, ಸಣ್ಣ ನೀರಾವರಿ ಖಾತೆ ಸಿ.ಪಿ.ಯೋಗೀಶ್ವರ್ ಹೆಗಲಿಗೆ ಹೋಗಿರುವುದರಿಂದ ನೀರಿನ ಕ್ಯಾತೆ ಶುರುವಾಗಬಹುದೆ ಎಂಬ ಪ್ರಶ್ನೆಯೂ ಏಳುತ್ತಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ