ತುಮಕೂರು : ಮಂಡಿಪೇಟೆ ರಸ್ತೆಯಲ್ಲಿ ಧೂಳಿನ ಗೋಳು ; ಸಂಚಾರ ಸಮಸ್ಯೆ

 ತುಮಕೂರು : 

     ನಗರದ ಮಂಡಿಪೇಟೆ ರಸ್ತೆಯಲ್ಲಿ ಉಸಿರುಕಟ್ಟುವ ಧೂಳು, ಟ್ರಾಫಿಕ್ ಕಿರಿಕಿರಿ, ಮುಗಿಯದೆ, ನಿರಂತರ ಎನ್ನುವ ರಸ್ತೆ ಕಾಮಗಾರಿಯಿಂದ ಅಲ್ಲಿನ ವ್ಯಾಪಾರಿಗಳು, ಸಾರ್ವಜನಿಕರು ಫಜೀತಿಪಡುವಂತಾಗಿದೆ.

      ಒಳಚರಂಡಿ ಸಮಸ್ಯೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ 3-4 ಬಾರಿ ಮಂಡಿಪೇಟೆ ಮುಖ್ಯ ರಸ್ತೆಯಲ್ಲಿ ಹಳ್ಳ ತೆಗೆದು ತಿಂಗಳಗಟ್ಟಲೆ ಕಾಮಗಾರಿಗಾಗಿ ರಸ್ತೆ ಬಂದ್ ಮಾಡಲಾಗಿತ್ತು. ಅದು ಮುಗಿಯಿತು ಎಂದು ನಿರಾಳವಾಗುವ ವೇಳೆಗೆ ಸ್ಮಾರ್ಟ್ ಸಿಟಿ ಲಿಮಿಟೆಡ್‍ನವರು ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸಿದ್ದಾರೆ. ಸದ್ಯ ಚರಂಡಿ ನಿರ್ಮಾಣ ಕೆಲಸ ನಡೆದಿದೆ. ಕಾಮಗಾರಿ ವೇಗವಾಗಿ ನಡೆಯದೆ ಆಮೆ ವೇಗದಲ್ಲಿ ಸಾಗಿದೆ. ಇದರಿಂದ ಅಲ್ಲಿ ಧೂಳು, ಸಂಚಾರಿ ಸಮಸ್ಯೆಯಾಗಿದೆ. ಒಮ್ಮೊಮ್ಮೆ ರಸ್ತೆಯಲ್ಲಿ ವಾಹನಗಳು ಎದುರುಬದುರಾದಾಗ ಸಂಚಾರ ಸ್ಥಗಿತಗೊಂಡು ವಾಹನ ಸವಾರರು ಕಿರಿಕಿರಿ ಅನುಭವಿಸಬೇಕಾಗುತ್ತದೆ. ಇದು ಮಂಡಿಪೇಟೆ ರಸ್ತೆಯಲ್ಲಿ ನಿತ್ಯ ಕಾಣುವ ದೃಶ್ಯ. ಸಾಲದಕ್ಕೆ ಲೋಡು ತುಂಬಿ ಬರುವ ಲಾರಿಗಳು ಕುಸಿಯುವ ಪ್ರಕರಣಗಳೂ ಹೆಚ್ಚಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ 15-20 ಬಾರಿ ಇಲ್ಲಿ ಲಾರಿಗಳು ಕುಸಿದು, ಟ್ರಾಫಿಕ್ ಬಂದ್ ಆಗಿ ಸಮಸ್ಯೆಗಳಾದವು. ಸೋಮವಾರವೂ ಒಂದು ಲಾರಿ ಕುಸಿದು ನಿಂತು ಸಮಸ್ಯೆಯಾಯಿತು.

      ಕಾಮಗಾರಿ ನಡೆಯುವ ಜಾಗದಲ್ಲಿ ಹೀಗಾಗುತ್ತಿದೆ. ಕಳಪೆ ಕೆಲಸ ಇದಕ್ಕೆ ಕಾರಣ. ಇಲ್ಲಿ ನಡೆಯುವ ಕಾಮಗಾರಿಗಳನ್ನು ಪರಿಶೀಲನೆ ಮಾಡುವವರೇ ಇಲ್ಲ. ಸಮರ್ಪಕ ಕೆಲಸ ಆಗತ್ತಿಲ್ಲ. ಇದರಿಂದ ಆಗುವ ಟ್ರಾಫಿಕ್ ಸಮಸ್ಯೆ ನಿಯಂತ್ರಣವೂ ಆಗುತ್ತಿಲ್ಲ ಎಂದು ಇಲ್ಲಿನ ಛಾಯಾ ಟ್ರೇಡರ್ಸ್‍ನ ಎನ್.ಎಸ್.ರಾಮನಾಥ್ ಹೇಳುತ್ತಾರೆ.

      ಅದರಲ್ಲೂ ಮಂಡಿಪೇಟೆ ವೃತ್ತದಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುತ್ತದೆ. ಜೆ.ಸಿ.ರಸ್ತೆ, ಚಿಕ್ಕಪೇಟೆ ರಸ್ತೆ ಇಲ್ಲಿ ಕೂಡುವ ಕಾರಣ ಎರಡೂ ಕಡೆ ಹೋಗಿಬರುವ ವಾಹನಗಳಿಗೆ ಇಲ್ಲಿ ತಡೆಯಾಗುತ್ತದೆ. ಮೊದಲೇ ಇಕ್ಕಟ್ಟಾದ ಈ ವೃತ್ತದಲ್ಲಿ ವಾಹನ ಸಂಚಾರ ಸುಗಮವಾಗಿರುವುದಿಲ್ಲ. ಈ ವೃತ್ತವನ್ನು ಸಂಚಾರ ಸುಗಮಗೊಳಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

      ಮಂಡಿಪೇಟೆ ರಸ್ತೆಯಲ್ಲಿ ಯಾವುದೂ ಶಿಸ್ತುಬದ್ದವಾಗಿಲ್ಲ. ಚರ್ಚ್ ವೃತ್ತದಿಂದ ಮಂಡಿಪೇಟೆ ವೃತ್ತದವರೆಗೆ ರಸ್ತೆ ಕಿರಿದಾಗಿರುವ ಕಾರಣ ಈ ಭಾಗದಲ್ಲಿ ಏಕಮುಖ ಸಂಚಾರ ಜಾರಿಮಾಡಲಾಗಿದೆ. ಆದರೆ, ಇಲ್ಲಿ ಏಕ ಮುಖ ಸಂಚಾರದ ನಿಯಮ ಪಾಲನೆಯಾಗುತ್ತಿಲ್ಲ. ಎರಡೂ ಕಡೆಯಿಂದ ವಾಹನ ಸಂಚಾರವಿರುತ್ತದೆ. ಸಾಲದಕ್ಕೆ ಈ ಕಿರಿದಾದ ರಸ್ತೆಯ ಎರಡೂ ಬದಿ ಕಾರು, ದ್ವಿಚಕ್ರ ವಾಹನಗಳ ಸದಾ ನಿಂತಿರುತ್ತವೆ. ಜೊತೆಗೆ ಅಂಗಡಿಗಳಿಗೆ ಸರಕು ತರುವ ಲಾರಿ, ಇತರೆ ವಾಹನಗಳು ಆಯಾ ಅಂಗಡಿಗಳ ಮುಂದೆ ಅನ್‍ಲೋಡ್‍ಗೆ ನಿಂತಾಗಲೂ ಇಲ್ಲಿ ಸಂಚಾರ ಸಮಸ್ಯೆಯಾಗುತ್ತದೆ. ಇಂತದ್ದಕ್ಕೆಲ್ಲಾ ಕಡಿವಾಣ ಬೀಳಬೇಕು ಎಂಬುದು ಇಲ್ಲಿನ ವರ್ತಕರ ಒತ್ತಾಯ. ಟ್ರಾಫಿಕ್ ಪೊಲೀಸರು, ನಗರಪಾಲಿಕೆ ಅಧಿಕಾರಿಗಳು ನಿತ್ಯಾ ಇಲ್ಲಿನ ಪರಿಸ್ಥಿತಿ ಪರಿಶೀಲಿಸುತ್ತಾ ಸಮಸ್ಯೆ ನಿವಾರಣೆಗೆ ಗಮನ ನೀಡಬೇಕು ಎಂಬುದು ಅವರ ಆಗ್ರಹ.

ಪಾರ್ಕಿಂಗ್‍ಗೆ ಸ್ಥಳಾವಕಾಶವಿಲ್ಲ :

      ಮಂಡಿಪೇಟೆ ರಸೆಯುದ್ದಕ್ಕೂ ವಾಹನ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್ ಸ್ಥಳಾವಕಾಶವಿಲ್ಲ. ಸಣ್ಣದಾಗಲಿ, ಭಾರಿ ವಾಹನವಾಗಲೀ ರಸ್ತೆಯಲ್ಲೇ ನಿಲ್ಲಬೇಕಾಗಿದೆ. ಇರುವ ಸ್ಥಿತಿಯಲ್ಲಿ ಇಂತಹ ಸಮಸ್ಯೆಗಳ ನಿವಾರಣೆಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಆದ್ಯತೆ ನೀಡಬೇಕು. ವಾಹನ ನಿಲುಗಡೆಯನ್ನು ರಸ್ತೆ ಬದಿ ದಿನಬಿಟ್ಟು ದಿನ ಒಂದೊಂದು ಬದಿ ನಿಲುಗಡೆ ಮಾಡುವ ನಿಯಮ ಜಾರಿಗೆ ತಂದು ಕಟ್ಟುನಿಟ್ಟಾಗಿ ಅದರ ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಇಲ್ಲಿನ ಕರಿಬಸವಯ್ಯ ಕ್ಲಾತ್ ಸೆಂಟರ್‍ನ ಸುರೇಶ್‍ಕುಮಾರ್ ಸಲಹೆ ಮಾಡುತ್ತಾರೆ.

      ಟ್ರಾಫಿಕ್ ದಟ್ಟಣೆ ಜಾಸ್ತಿ ಇರುವ ಕಾರಣ, ಈ ರಸ್ತೆಗೆ ಲಾರಿಗಳ ಪ್ರವೇಶಕ್ಕೆ ಸಮಯ ನಿಗದಿ ಮಾಡಬೇಕು. ಬೆಳಿಗ್ಗೆ 10 ಗಂಟೆವರೆಗೆ, ಸಂಜೆ 6 ಗಂಟೆ ನಂತರ ಲಾರಿಗಳು ಮಂಡಿಪೇಟೆ ರಸ್ತೆ ಪ್ರವೇಶ ಮಾಡಲು ನಿಯಮ ಮಾಡಬೇಕು. ಪ್ರಸ್ತುತ ನಡೆದಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯ ವೇಗ ಹೆಚ್ಚಿಸಿ, ಪೂರ್ಣಗೊಳಿಸಿ, ರಸ್ತೆಯನ್ನು ಧೂಳು ಮುಕ್ತಗೊಳಿಸಬೇಕು. ಸಂಚಾರಿ ಪೊಲೀಸರನ್ನು ನಿಯೋಜಿಸಿ ಟ್ರಾಫಿಕ್ ನಿಯಂತ್ರಣ ಮಾಡಬೇಕು ಎಂದು ಹೇಳಿದರು.

      ಮಂಡಿಪೇಟೆ ರಸ್ತೆಯಲ್ಲಿ ಟ್ರಾಫಿಕ್ ಅವ್ಯವಸ್ಥೆಯೇ ದೊಡ್ಡ ಸಮಸ್ಯೆ. ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಮೂರು ಸಾಲುಗಳಲ್ಲಿ ವಾಹನ ನಿಲ್ಲಿಸಲಾಗುತ್ತದೆ. ಸೋಮವಾರ, ಗುರುವಾರ ಈ ರಸ್ತೆಯಲ್ಲಿ ಓಡಾಡಲಾಗುವುದಿಲ್ಲ. ಕೆಲ ಅಂಗಡಿಯವರು ರಸ್ತೆವರೆಗೂ ಸಾಮಗ್ರಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಾರೆ. ಫುಟ್‍ಪಾತ್ ಇಲ್ಲದೆ ಜನ ರಸ್ತೆಗಿಳಿದು ಓಡಾಡುವಂತಾಗಿ ವಾಹನ ಸಂಚಾರಕ್ಕೆ ಮತ್ತಷ್ಟು ಸಮಸ್ಯೆಯಾಗಿದೆ. ಇಲ್ಲಿಗೆ ಪೊಲೀಸರನ್ನು ನಿಯೋಜಿಸಿ ಪರಿಸ್ಥಿತಿ ನಿಯಂತ್ರಿಸಬೇಕು ಎಂದು ಈ ಭಾಗದ ನಗರಪಾಲಿಕೆ ಸದಸ್ಯೆ ದೀಪಶ್ರೀ ಮಹೇಶ್‍ಬಾಬು ಹೇಳಿದರು.

      ಈಗ ನಡೆಯುತ್ತಿರುವ ಕಾಮಗಾರಿ ಮುಗಿದ ನಂತರ ಶಿಸ್ತುಬದ್ದವಾಗಿ ರಸ್ತೆ ಬದಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಟ್ಟು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ರಸ್ತೆ ಅಗಲೀಕರಣ ನೆನೆಗುದಿಗೆ :

      ಚರ್ಚ್ ವೃತ್ತದಿಂದ ಮಂಡಿಪೇಟೆ ವೃತ್ತದವರೆಗೆ ರಸ್ತೆ ಕಿರಿದಾಗಿದೆ. ಈ ಭಾಗದ ರಸ್ತೆಯನ್ನು ಅಗಲೀಕರಣಗೊಳಿಸಿ, ಅಭಿವೃದ್ಧಿ ಮಾಡುವ ಕಾರ್ಯ ಸ್ಥಗಿತಗೊಂಡಿದೆ. ಡಾ.ರಫಿಕ್ ಅಹಮದ್ ಶಾಸಕರಾಗಿದ್ದ ಅವಧಿಯಲ್ಲಿ ಈ ಭಾಗದ ರಸ್ತೆ ಅಗಲೀಕರಣಕ್ಕೆ ಪ್ರಯತ್ನ ಮಾಡಿದ್ದರು. ಅಗಲಗೊಳಿಸಿ, ಸಂಚಾರ ಒತ್ತಡ ನಿಯಂತ್ರಿಸಿ, ಈ ರಸ್ತೆ ಮಾರ್ಗವಾಗಿ ನಗರ ಸಾರಿಗೆ ಬಸ್ ಸಂಚಾರ ಸೇವೆ ಕಲ್ಪಿಸುವ ಉದ್ದೇಶ ಹೊಂದಿದ್ದರು. ಇದಕ್ಕಾಗಿ ಹಲವು ಬಾರಿ ಇಲ್ಲಿನ ಕಟ್ಟಡ ಮಾಲೀಕರ ಸಭೆ ಕರೆದು ಚರ್ಚೆ ನಡೆಸಿ, ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ. ಕೆಲವರು ಕಟ್ಟಡ ತೆರವಿನ ವಿರುದ್ಧ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಹಾಗಾಗಿ ಆ ಪ್ರಯತ್ನ ನೆನೆಗುದಿಗೆ ಬಿದ್ದಿದೆ.
 
      ಮಂಡಿಪೇಟೆ ರಸ್ತೆಯಲ್ಲಿ ವಾಹನ ನಿಲುಗಡೆಯನ್ನು ರಸ್ತೆ ಬದಿ ದಿನಬಿಟ್ಟು ದಿನ ಒಂದೊಂದು ಬದಿ ನಿಲುಗಡೆ ಮಾಡುವ ನಿಯಮ ಜಾರಿಗೆ ತಂದು ಕಟ್ಟುನಿಟ್ಟಾಗಿ ಅದರ ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಟ್ರಾಫಿಕ್ ದಟ್ಟಣೆ ಜಾಸ್ತಿ ಇರುವ ಕಾರಣ, ಈ ರಸ್ತೆಗೆ ಲಾರಿಗಳ ಪ್ರವೇಶಕ್ಕೆ ಸಮಯ ನಿಗದಿ ಮಾಡಬೇಕು. ಬೆಳಿಗ್ಗೆ 10 ಗಂಟೆವರೆಗೆ, ಸಂಜೆ 6 ಗಂಟೆ ನಂತರ ಲಾರಿಗಳು ಮಂಡಿಪೇಟೆ ರಸ್ತೆ ಪ್ರವೇಶ ಮಾಡಲು ನಿಯಮ ಮಾಡಬೇಕು.

-ಸುರೇಶ್‍ಕುಮಾರ್, ಕರಿಬಸವಯ್ಯ ಕ್ಲಾತ್ ಸೆಂಟರ್

ಮಂಡಿಪೇಟೆ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಮೂರು ಸಾಲುಗಳಲ್ಲಿ ವಾಹನ ನಿಲ್ಲಿಸಲಾಗುತ್ತದೆ. ಸೋಮವಾರ, ಗುರುವಾರ ಈ ರಸ್ತೆಯಲ್ಲಿ ಓಡಾಡಲಾಗುವುದಿಲ್ಲ. ಕೆಲ ಅಂಗಡಿಯವರು ರಸ್ತೆವರೆಗೂ ಸಾಮಗ್ರಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಾರೆ. ಫುಟ್‍ಪಾತ್ ಇಲ್ಲದೆ ಜನ ರಸ್ತೆಗಿಳಿದು ಓಡಾಡುವಂತಾಗಿ ವಾಹನ ಸಂಚಾರಕ್ಕೆ ಮತ್ತಷ್ಟು ಸಮಸ್ಯೆಯಾಗಿದೆ. ಇಲ್ಲಿಗೆ ಪೊಲೀಸರನ್ನು ನಿಯೋಜಿಸಿ ಪರಿಸ್ಥಿತಿ ನಿಯಂತ್ರಿಸಬೇಕು.

-ದೀಪಶ್ರೀ ಮಹೇಶ್‍ಬಾಬು, ನಗರಪಾಲಿಕೆ ಸದಸ್ಯೆ.

       ಮಂಡಿಪೇಟೆ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವ ಭಾಗದಲ್ಲಿ ಲಾರಿಗಳು ಕುಸಿಯುವ ಪ್ರಕರಣ ಹೆಚ್ಚಾಗಿದೆ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ. ಇಲ್ಲಿನ ಕಾಮಗಾರಿಗಳನ್ನು ಪರಿಶೀಲನೆ ಮಾಡುವವರೇ ಇಲ್ಲ. ಸಮರ್ಪಕ ಕೆಲಸ ಆಗತ್ತಿಲ್ಲ. ಇದರಿಂದ ಆಗುವ ಟ್ರಾಫಿಕ್ ಸಮಸ್ಯೆ ನಿಯಂತ್ರಣವೂ ಆಗುತ್ತಿಲ್ಲ. ಪೊಲೀಸರು ಟ್ರಾಫಿಕ್ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು.

-ಎನ್.ಎಸ್.ರಾಮನಾಥ್, ಛಾಯಾ ಟ್ರೇಡರ್ಸ್‍ನ.