ಚೇಳೂರು:
ರಾಜ್ಯದಲ್ಲಿಯೇ ಮಾವು ಮತ್ತು ಹಲಸಿಗೆ ಹೆಸರುವಾಸಿಯಾದ ಮಾರುಕಟ್ಟೆ ಗುಬ್ಬಿ ತಾಲ್ಲೂಕಿನ ಚೇಳೂರು. ಈ ವರ್ಷ ಕಡಿಮೆ ಮಾವಿನ ಹಣ್ಣುಗಳು ಈ ಮಾರುಕಟ್ಟೆಗೆ ಬಂದರು ಅದಕ್ಕೆ ಸರಿಯಾದ ಬೆಲೆ ಸಿಗುತ್ತಿಲ್ಲ. ಚೇಳೂರಿನ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ 21 ಮಾವಿನ ಮಂಡಿಗಳು ಜೊತೆಗೆ ಗ್ರಾಮದ ಸುತ್ತ ಮುತ್ತ ಹಲವು ಮಾವಿನ ಮಂಡಿಗಳಿವೆ. ಆದರೇ ಬೆಲೆ ಮಾತ್ರ ತೀರಾ ಕಡಿಮೆ ಇದ್ದು ಮಾವು ಬೆಳೆಗಾರರನ್ನು ಆತಂಕಕ್ಕಿಡು ಮಾಡಿದೆ.
ಮಾವು ಬೆಳೆದ ರೈತ ಮಾರುಕಟ್ಟೆಗೆ ಮಾವು ತರಬೇಕಾದರೆ ಗಿಡದಲ್ಲಿಯೇ ಮಾವು ಕಟಾವು ಮಾಡಿಕೊಂಡು ತಂದರೆ ಮಾತ್ರ ಅದಕ್ಕೆ ಸೂಕ್ತವಾದ ಬೆಲೆ ಸಿಗುತ್ತದೆ. ಇಲ್ಲಾವಾದರೆ ಅದಕ್ಕೆ ಸರಿಯಾದ ಬೆಲೆ ಸಿಗದೆ ಅದರ ಕೂಲಿಯು ಸಹ ಸಿಗುತ್ತಿಲ್ಲ. ರೈತರಿಗೆ ಒಂದು ಕಡೆ ಕೊರೊನಾದ ಭಯ ಮತ್ತೊಂದು ಕಡೆ ಬೆಲೆ ಸಿಗುತ್ತಿಲ್ಲ, ಇದರ ಜೊತೆಗೆ ಸರ್ಕಾರದ ಮಾರ್ಗ ಸೂಚಿಯಂತೆ ಮಾರುಕಟ್ಟೆ ಪ್ರವೇಶ ಮಾಡಬೇಕಾಗಿದೆ.
ಇಳಿದ ಮಾವಿನ ದರ:
ಬಾದಾಮಿ 20-23 ರೂ., ರಸಪೂರಿ 8-10 ರೂ., ಮಲಗೊಬ 15-20 ರೂ., ತೋತಾಪುರಿ 6-8 ರೂ. ಸೆಂದೂರ 6-8 ರೂಗಳು, ಬಾನೀಷ್ 10-12 ನಾಟಿಮಾವು 8 ರೂ. ದರ ದಂತೆ ಪ್ರತಿ ಕೆ.ಜಿ ಗೆ ಮಾರಾಟವಾಗುತ್ತಿವೆ. ಇದರ ಜೊತೆ ಮಂಡಿ ವರ್ತಕರಿಗೆ ಕಮಿಷನ್ ಸಹ ನೀಡ ಬೇಕಾಗಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಜ್ಯೂಸ್ ಕರ್ಖಾನೆಗಳತ್ತ ಮಾವು:
ವರ್ತಕರು ಮೊದಲು ರೈತರಿಂದ ಮಾವು ಖರೀದಿಮಾಡಿ ಬಿಜಾಪುರ, ದೆಹಲಿ, ಪೂನಾ ಹಾಗೂ ರಾಜ್ಯದ ಹಲವು ಭಾಗಗಳಿಗೆ, ಹೊರ ರಾಜ್ಯಗಳಿಗೆ ಪ್ರತಿದಿನ ಲೋಡ್‍ಗಟ್ಟಲೇ ಮಾವು ಕಳುಹಿಸುತ್ತಿದ್ದರು. ಈಗ ಮಾರುಕಟ್ಟೆಗೆ ಮಾವು ಖರೀದಿ ಮಾಡಲು ವರ್ತಕರು ಬರುತ್ತಿಲ್ಲ. ಬೆಂಗಳೂರು, ಕೃಷ್ಣಗಿರಿ, ಧಾರವಾಡ, ಬೆಳಗಾವಿ, ಪೂನಾ, ಮುಂತಾದ ಜ್ಯೂಸ್ ಮಾಡುವ ಫ್ಯಾಕ್ಟರಿಗಳನ್ನು ಹೊಂದಿರುವ ಪಟ್ಟಣಗಳಿಗೆ ಅವರ ಬೇಡಿಕೆಯಂತೆ ಮಾವು ಕಳುಹಿಸುತ್ತಿದ್ದೇವೆ ಎಂದು ವರ್ತಕರು ಹೇಳುತ್ತಿದ್ದಾರೆ. ಇಲ್ಲಿ ಬಂದು ವಹಿವಾಟು ಮಾಡುವುದರಿಂದ ಯಾವುದೇ ರೀತಿಯ ಸೊಂಕು ತಗುಲ ಬಾರದು ಎಂದು ಮಾರುಕಟ್ಟೆಯ ಸುತ್ತ ಹಾಗು ಮಂಡಿಗಳ ಸುತ್ತ ವರ್ತಕರೇ ಪರದೆಯನ್ನು ಹಾಕಿಕೊಂಡು ಮಂಡಿಯಲ್ಲಿ ಸ್ಯಾನಿಟೈರ್ಸ್ ಇಟ್ಟುಕೊಂಡು ವ್ಯವಾಹರವನ್ನು ಮಾಡುತ್ತಿದ್ದಾರೆ.
ಸ್ವಚ್ಚತೆ ಇಲ್ಲದ ಮಾರುಕಟ್ಟೆ:
ಚೇಳೂರಿನ ಉಪ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರು ಸ್ವಚ್ಚತೆ ಕಾಣುತ್ತಿಲ್ಲ. ಚರಂಡಿಗಳಲ್ಲಿ ನೀರು ಹೋಗದೆ ಕೊಚ್ಚೆ ಗುಂಡಿಯಾಗಿದೆ. ಕುಡಿಯುವ ನೀರಿಗೆ ಹಾಕಿರುವ ನಲ್ಲಿಗಳಿಂದ ನೀರು ಹೊರ ಹೋಗದೆ ಅಲ್ಲಿಯೇ ಕೊಳೆತು ನಿಂತಿದೆ. ಈ ಮಾರುಕಟ್ಟೆಯಲ್ಲಿ 2016-17 ನೇ ಸಾಲಿನಲ್ಲಿ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಅಂದಾಜು 5 ಲಕ್ಷ ರೂ. ವೆಚ್ಚದಲ್ಲಿ ಶುದ್ದಕುಡಿಯುವ ನೀರಿನ ಘಟಕ ನಿರ್ಮಾಣಗೊಂಡಿದೆ ಆದರೇ ಇದುವರೆಗೂ ಇದರ ಸೌಲಭ್ಯ ರೈತರಿಗಾಲಿ, ವರ್ತಕರಿಗಾಲಿ ಸಿಕ್ಕಿಲ್ಲ. ಸರಿಯಾದ ನಿರ್ವಹಣೆ ಇಲ್ಲದೇ ಕೊಳಕು ಉಪ ಮಾರುಕಟ್ಟೆಯಾಗಿದೆ.
ಈ ಉಪಮಾರುಕಟ್ಟೆಗೆ ಸರ್ಕಾರದಿಂದ ಬಂದತಂಹ ಹಲವು ಸೌಲಭ್ಯಗಳ ಕಾಮಗಾರಿಗಳು, ಸಂಬಂಧಪಟ್ಟವರಿಗೆ ಅವರ ಹೆಚ್ಚಿನ ಲಾಭಕ್ಕೆ ತಕ್ಕಂತೆ ನಿರ್ಮಾಣವಾಗಿದೆಯೇ ಹೊರತು ಕಾಮಗಾರಿಗಳು ಆದ ಮೇಲೆ ಅದನ್ನು ಪರಿಶೀಲನೆ ಮಾಡಿ ಮಾರುಕಟ್ಟೆಯ ಅನುಕೂಲವಾಗುತ್ತಿದೆಯೇ ಇಲ್ಲವೇ ಎಂಬ ಗೋಜಿಗೆ ಹೋಗದೇ ಹಣ ಬಿಡುಗಡೆ ಮಾಡಿರುವುದರಿಂದ ಇಲ್ಲಿನ ಸೌಲಭ್ಯಗಳು ಇದ್ದು ಇಲ್ಲದಂತಾಗಿವೆ.
-ಸಿ.ಟಿ.ಮೋಹನ್‍ರಾವ್
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ