ತುಮಕೂರು : ಮ್ಯಾರಥಾನ್ ಸ್ಪರ್ಧೆಗೆ ಮಿಡಿದ ಹೃದಯಗಳು..!

 ತುಮಕೂರು :

      ವಿಶ್ವ ಹೃದಯ ದಿನದ ಅಂಗವಾಗಿ ಸಿದ್ಧಗಂಗಾ ಆಸ್ಪತ್ರೆ, ಪ್ರಜಾಪ್ರಗತಿ ದಿನಪತ್ರಿಕೆ -ಪ್ರಗತಿ ಟಿವಿ ಸಹಯೋಗದಲ್ಲಿ ಮ್ಯಾರಥಾನ್ ಸ್ಪರ್ಧೆ ಸೋಮವಾರ ಬೆಳಗ್ಗೆ ನಡೆಯಿತು. ಖ್ಯಾತ ಅಥ್ಲೀಟ್, ಅರ್ಜುನ ಪ್ರಶಸ್ತಿ ಪುರಸ್ಕøತೆ ಅಶ್ವಿನಿ ನಾಚಪ್ಪ ಸಿದ್ದಗಂಗಾ ಆಸ್ಪತ್ರೆ ಮುಂಭಾಗ ಮ್ಯಾರಥಾನ್‍ಗೆ ಹಸಿರು ನಿಶಾನೆ ತೋರಿದರು.

      ನಗರ, ಜಿಲ್ಲೆಯ ವಿವಿಧ ಭಾಗದಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ಯುವಜನರು ಉತ್ಸಾಹದಿಂದ ವಯೋ ಮಾನುವಾರು 5 ಕಿ.ಮೀ ಸ್ಪರ್ಧೆಯಲ್ಲಿ ಭಾಗಿಯಾಗುವ ಮೂಲಕ ಹೃದಯ ರಕ್ಷಣೆಯ ಜಾಗೃತಿ ಕರೆಗೆ ಸ್ವಯಂಪ್ರೇರಣೆಯಿಂದ ಮಿಡಿದಿದ್ದು ಯಶಸ್ವಿಯಾಗಿ ಸಂಪನ್ನಗೊಂಡಿತು.

      ಮ್ಯಾರಥಾನ್‍ಗೆ ಚಾಲನೆ ನೀಡಿ ಮಾತನಾಡಿದ ಖ್ಯಾತ ಅಥ್ಲೀಟ್ ಅಶ್ವಿನಿ ನಾಚಪ್ಪ ಅವರು, ಮ್ಯಾರಥಾನ್‍ನಲ್ಲಿ 800 ಮಂದಿ ಅದರಲ್ಲೂ ಹೆಚ್ಚಿನದಾಗಿ ಯುವಜನರು, ವಿದ್ಯಾರ್ಥಿಗಳು ಭಾಗವಹಿಸಿ ಭವಿಷ್ಯದ ಅಥ್ಲೀಟ್‍ಗಳಾಗುವ ಆಶಾಭಾವ ಮೂಡಿಸಿದ್ದಾರೆ. ಯುವಜನರ ಆರೋಗ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಅವಕಾಶವನ್ನು ಸೃಷ್ಟಿಸಿದ ಆಯೋಜಕರೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ಕೋವಿಡ್ ಬಂದ ಬಳಿಕ ಕ್ರೀಡೆಯ ಅಗತ್ಯದ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ದೈಹಿಕವಾಗಿ ಸಶಕ್ತವಾಗಿರಲು ಕ್ರೀಡೆ ಅತಿ ಮುಖ್ಯ, ಕ್ರೀಡೆ ಪ್ರತಿಯೊಬ್ಬರ ಜೀವನದ ಭಾಗವಾಗಬೇಕು ಎಂದು ಕರೆಕೊಟ್ಟರು.

ಯೋಗ, ವ್ಯಾಯಾಮ ನಿತ್ಯ 45 ನಿಮಿಷ ತಪ್ಪದೆ ಮಾಡಿ:

      ನಮ್ಮ ನಿತ್ಯದ ದಿನಚರಿಯಲ್ಲಿ ಯೋಗ ಆಗಿರಬಹುದು, ವಾಕಿಂಗ್ ಆಗಿರಬಹುದು 45 ನಿಮಿಷ ಅದಕ್ಕಾಗಿ ಮೀಸಲಿರಿಸಬೇಕು. ಪ್ರತಿನಿತ್ಯ 5 ಕಿಮೀ ಓಡಿ. ಸೈಕಲ್ ತುಳಿಯುವುದಾದರೆ 16 ರಿಂದ 18 ಕಿ.ಮೀ. ತುಳಿಯಿರಿ. ಕ್ರೀಡಾಕ್ಷೇತ್ರದಲ್ಲಿ ತುಮಕೂರಿನ ಪ್ರತಿಭೆಗಳು ಅದ್ವಿತೀಯ ಸಾಧನೆ ಮಾಡಿದ್ದಾರೆ. ಪ್ಯಾರಾ ಒಲಂಪಿಕ್ಸ್‍ನಲ್ಲಿ ಪದಕ ಗೆದ್ದು ವಿಶ್ವಮಟ್ಟದಲ್ಲಿ ಮಿಂಚಿರುವ ಪ್ರಿಯಾಮೋಹನ್ ಜಿಲ್ಲೆಗೆ ರೋಲ್ ಮಾಡಲ್ ಆಗಿದ್ದಾರೆ. ನಾವು ಆರೋಗ್ಯಕರವಾಗಿದ್ದಷ್ಟು ವೈದ್ಯರಿಗೆ ಕೆಲಸ ಕಡಿಮೆ ಎಂದು ಹೇಳಿ ಸಿದ್ಧಗಂಗಾ ಶ್ರೀಗಳ ಸಾಧನೆಯನ್ನು ಸ್ಮರಿಸಿದರು. ಈ ವೇಳೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಸಿದ್ಧಗಂಗಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ, ಆಸ್ಪತ್ರೆ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಎಚ್.ಎಂ.ಭಾನುಪ್ರಕಾಶ್, ಹೃದ್ರೋಗ ತಜ್ಞ ಡಾ.ಜೆ.ವಿ.ಶರತ್‍ಕುಮಾರ್, ಸಿದ್ಧಗಂಗಾ ವೈದ್ಯಕೀಯ ಕಾಲೇಜು ಪ್ರಾಂಶುಪಾಲೆ ಡಾ.ಶಾಲಿನಿ, ಪ್ರಜಾಪ್ರಗತಿ ಸಹ ಸಂಪಾದಕ ಟಿ.ಎನ್.ಮಧುಕರ್, ಪ್ರಗತಿ ಟಿವಿ ಸಿಇಓ ಟಿ.ಎನ್.ಶಿಲ್ಪಶ್ರೀ, ವೈದ್ಯರುಗಳು, ತೀರ್ಪುಗಾರರು, ಹಿರಿಯ ಕ್ರೀಡಾಪಟುಗಳು ಪಾಲ್ಗೊಂಡರು. ಕಾರ್ಯಕ್ರಮಕ್ಕೆ 12ನೇ ಕೆಎಸ್‍ಆರ್‍ಪಿ ಪಡೆ ಹಾಗೂ ಗೋಲ್ಡ್ ಜಿಮ್ ತುಮಕೂರು ಪ್ರಾಯೋಜಕತ್ವ ನೀಡಿದ್ದರು.

ಮ್ಯಾರಥಾನ್ ವಿಜೇತರು

      ವಿವಿಧ ವಯೋಮಾನದ 4 ವಿಭಾಗಗಳಲ್ಲಿ ನಡೆದ ಮ್ಯಾರಥಾನ್ ಸ್ಪರ್ಧೆಯಲ್ಲಿ 14ರ ಒಳಗಿನ ವಿಭಾಗದಲ್ಲಿ ದರ್ಶನ್, ಆಕಾಶ್.ಪಿ, ವಿನೋದ್ ಮೊದಲ 3 ಸ್ಥಾನ ಗಳಿಸಿದರೆ, ಅತಿ ಕಿರಿಯರ ವಿಭಾಗದಲ್ಲಿ ಸಚಿನ್, ಸ್ಪರ್ಶ, 14 ವರ್ಷ ಮೇಲ್ಪಟ್ಟವರಲ್ಲಿ ಎನ್.ಸುನೀಲ್, ಶಿವಾಗಿ, ಎಸ್.ರಾಹುಲ್, 50 ವರ್ಷ ಮೇಲ್ಪಟ್ಟವರ ಪುರುಷರ ವಿಭಾಗದಲ್ಲಿ ಡಾ.ಸಿ.ಎಂ.ರವಿ, ಎಚ್.ಸಿದ್ಧಲಿಂಗಯ್ಯ, ಜಗದೀಶ್.ಸಿ, ಮಹಿಳೆಯರ ವಿಭಾಗದಲ್ಲಿ ಶಾಹಿನ್ ಎಸ್.ಡಿ., ನಾಗಶ್ರೀ ಎಚ್.ಎನ್, ಶಿವಲಿಂಗಮ್ಮ ಬಿ.ಕೆ ಮೊದಲ 3 ಸ್ಥಾನಗಳೊಂದಿಗೆ ಬಹುಮಾನ ಪಡೆದರು. ಸಿದ್ಧಗಂಗಾ ಆಸ್ಪತ್ರೆ ಬಿ.ಎಚ್.ರಸ್ತೆಯಿಂದ ಆರಂಭಗೊಂಡು ಅಶೋಕರಸ್ತೆ, ಅಮಾನಿಕೆರೆ ರಸ್ತೆ, ಕೋತಿತೋಪು, ಶಿವಕುಮಾರಸ್ವಾಮೀಜಿ ವೃತ್ತದಿಂದ ಸಿದ್ಧಗಂಗಾ ಆಸ್ಪತ್ರೆವರೆಗೆ 5 ಕಿ.ಮೀ ಮ್ಯಾರಥಾನ್ ನಡೆಯಿತು. ಸ್ಪರ್ಧಾಳುಗಳೆಲ್ಲರಿಗೂ ಪ್ರಮಾಣಪತ್ರ ಟೀ-ಶರ್ಟ್ ವಿತರಿಸಲಾಯಿತು.

      ಸಿದ್ಧಗಂಗಾ ಆಸ್ಪತ್ರೆ ಮುಂದಿನ ಶೈಕ್ಷಣಿಕ ಸಾಲಿನಿಂದ ಮೆಡಿಕಲ್ ಕಾಲೇಜು ಆಗಿ ಮೇಲ್ದರ್ಜೆಗೇರುವ ಜೊತೆಗೆ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಉಚಿತ ಆರೋಗ್ಯ ತಪಾಸಣೆ ಸೌಲಭ್ಯ, ಸಮುದಾಯ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ. ಜನರ ಹೃದಯದ ಮೇಲಾಗುತ್ತಿರುವ ಒತ್ತಡದ ಬಗ್ಗೆ ಅರಿವು ಮೂಡಿಸಲು ಮ್ಯಾರಥಾನ್ ಆಯೋಜಿಸಿದ್ದು, ಯುವಜನರು, ನಾಗರಿಕರ ಸ್ಪಂದನೆ ಖುಷಿ ತರಿಸಿದೆ. ಸಹಯೋಗ ನೀಡಿದ ಪ್ರಜಾಪ್ರಗತಿ-ಪ್ರಗತಿಟಿವಿ ಬಳಗ, ಪ್ರಾಯೋಜಕರಿಗೂ ಅಭಿನಂದಿಸುವೆ.

-ಡಾ.ಎಸ್.ಪರಮೇಶ್, ನಿರ್ದೇಶಕರು, ಸಿದ್ಧಗಂಗಾ ಆಸ್ಪತ್ರೆ .

ಕೋವಿಡ್‍ನಿಂದ ಚಿಂತಿತರಾದವರಲ್ಲಿ ಚೇತರಿಕೆ : ಎಸ್.ನಾಗಣ್ಣ

      ರಾಜ್ಯ ರೆಡ್‍ಕ್ರಾಸ್ ಸಭಾಪತಿ ಹಾಗೂ ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣ ಅವರು ಮಾತನಾಡಿ, ಕೋವಿಡ್‍ನಿಂದ ದೇಹದ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದ ತುಮಕೂರಿನ ಜನತೆಯಲ್ಲಿ ಈ ಮ್ಯಾರಥಾನ್ ಆರೋಗ್ಯ ಜಾಗೃತಿಯ ಜೊತೆಗೆ ಬದುಕಿಗೆ ಸ್ಫೂರ್ತಿ ನೀಡಿದೆ. ಹೃದಯರೋಗಕ್ಕೆ ಅತಿ ಹೆಚ್ಚು ತುತ್ತಾಗುತ್ತಿರುವ ಈ ಸಂದರ್ಭದಲ್ಲಿ ಸಿದ್ಧಗಂಗಾ ಆಸ್ಪತ್ರೆಯವರು ಕಾಳಜಿಯಿಂದ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಸ್ವಾಗತಾರ್ಹ. ರಚನಾತ್ಮಕ ಕಾರ್ಯಗಳಿಗೆ ಜನರ ಧ್ವನಿಯಾದ ಪ್ರಜಾಪ್ರಗತಿ-ಪ್ರಗತಿ ಟಿವಿ ಸದಾ ಬೆಂಬಲವಾಗಿ ನಿಲ್ಲುತ್ತದೆ ಎಂದರು.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap