ತುಮಕೂರು : ಮಾರುಕಟ್ಟೆಗೆ ಬಂದ ಹಸಿತೊಗರಿ : ಸೊಪ್ಪಿಗೆ ಫುಲ್ ಡಿಮ್ಯಾಂಡ್!!

 -(ಮಾರುಕಟ್ಟೆ ವಿಶ್ಲೇಷಣೆ)  

 ತುಮಕೂರು :

      ತೊಗರಿ ಸೀಸನ್ ಆರಂಭವಾಗಿದ್ದು, ಮಾರುಕಟ್ಟೆಗೆ ಸ್ಥಳೀಯ ನಾಟಿ ತೊಗರಿಕಾಯಿ ಬರುತ್ತಿದ್ದು ಸೊಪ್ಪಿಗೆ ಬೇಡಿಕೆ ಉಂಟಾಗಿ ಸೊಪ್ಪಿನ ದರ ಹೆಚ್ಚಿದೆ. ಎಲ್ಲಾ ತರಕಾರಿ ಬೆಲೆಗಳು ಕೈ ಗೆಟಕುವ ದರದಲ್ಲೆ ದೊರೆಯುತ್ತಿದ್ದು, ಕಡ್ಲೆಕಾಯಿ ಬೀಜದ ಬೆಲೆ ಕೊಂಚ ಏರಿಕೆಯಾಗಿದೆ. ದಸರಾ ಬರುವ ತನಕ ಸದ್ಯ ಯಾವುದೇ ಹಬ್ಬಗಳಿಲ್ಲದ ಕಾರಣ, ಸೇಬು-ಬಾಳೆಹಣ್ಣು ಹೊರತುಪಡಿಸಿ ಹಣ್ಣುಗಳ ಬೆಲೆ ಯಥಾಸ್ಥಿತಿ ಇದೆ. ಸೀಸನ್ ಇಲ್ಲದ ಕಾರಣ ಹೂವಿನ ದರ ಕುಸಿತ ಕಂಡಿದೆ. ಮಿಕ್ಕಂತೆ ಮಟನ್, ಚಿಕನ್, ಮೊಟ್ಟೆ ಹಾಗೂ ಡ್ರೈಫ್ರೂಟ್ಸ್ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಅಡುಗೆ ಎಣ್ಣೆ ದರ ಕಳೆದ ವಾರ ಇದ್ದಷ್ಟೆ ಇದೆ.

ಕಡ್ಲೆಕಾಯಿ ಬೀಜ ಏರಿಕೆ :

      ಕಳೆದ ವಾರ ಕೆಜಿ 110 ರೂ. ಇದ್ದ ಹಸಿ ಕಡಲೇಬೀಜದ ಬೆಲೆ ಈ ವಾರ 115-120 ರೂ.ಗೆ ಏರಿಕೆಯಾಗಿದೆ. ಬೆಲೆ ಹೆಚ್ಚಳದಿಂದ ಕೆಲ ಹೊಟೇಲ್‍ನವರು ಚಿತ್ರಾನ್ನಕ್ಕೆ ಶೇಂಗಾ ಹಾಕುವ ಬದಲು ಒಣ ಬಟಾಣಿ ಮೊರೆ ಹೋಗಿದ್ದಾರೆ. ಇನ್ನೂ ದಿನಸಿ-ಧಾನ್ಯಗಳ ಬೆಲೆ ಕಳೆದ ವಾರದ ಧಾರಣೆಯಷ್ಟೇ ಇದ್ದು, ಡ್ರೈಫ್ರೂಟ್ಸ್-ಅಡುಗೆ ಎಣ್ಣೆ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ.

ಸೇಬು ಕೊಂಚ ದುಬಾರಿ :

     ಕಳೆದ ವಾರ ಕೆಜಿ ರೂ.140 ಇದ್ದ ಸೇಬಿನ ಬೆಲೆ, ಈ ವಾರ 10 ರೂ. ಏರಿಕೆಯಾಗಿ ಕೆಜಿಗೆ ರೂ.150 ಕ್ಕೆ ಮಾರಾಟವಾಗುತ್ತಿದೆ. ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಏರಿಕೆಯಾಗಿದ್ದ ಬಾಳೆಹಣ್ಣಿನ ಬೆಲೆಗಳು ಇಳಿದಿಲ್ಲ. ಕರಬೂಜ ಕೆಜಿ ಗೆ 10 ರೂ. ಇಳಿದಿದ್ದು, ಪಪ್ಪಾಯ ಬೆಲೆ ಅಗ್ಗವಾಗಿದೆ. ಉಳಿದ ಹಣ್ಣುಗಳ ದರಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ದಸರಾ-ಪಿತೃಪಕ್ಷ ಸಮೀಪಿಸುತ್ತಿದ್ದು, ಹಣ್ಣುಗಳಿಗೆ ಬೇಡಿಕೆ ಉಂಟಾಗಿ ಕೆಲ ಹಣ್ಣುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಅಂತರಸನಹಳ್ಳಿಯ ಟಿಕೆಪಿ ಫ್ರೂಟ್ಸ್ ಸ್ಟಾಲ್‍ನ ಮಾಲೀಕ ವೆಂಕಟೇಶ್.

ಕೈ ಗೆಟಕುವ ತರಕಾರಿಗಳು :

      ಹೆಚ್ಚು ಮಳೆ ಇಲ್ಲವಾಗಿದ್ದು, ತರಕಾರಿ ಬೆಳೆಗೆ ಸೂಕ್ತ ಹವಾಮಾನ ಇರುವುದರಿಂದ ಇಳುವರಿ ಭೋಗವಾಗಿ ಬರುತ್ತಿದ್ದು ಹಲವು ಕಾಯಿಪಲ್ಲೆಗಳ ಬೆಲೆ ಇಳಿಕೆಯಾಗಿದೆ. ಈರುಳ್ಳಿ 5 ರೂ. ಹೆಚ್ಚಳ ಕಂಡಿದ್ದು 30 ರೂ.ಗೆ ಮಾರಾಟವಾಗುತ್ತಿದೆ. ಕಳೆದ ವಾರ 60 ರೂ.ಗಳಿಂದ 40 ರೂ.ಗೆ ಇಳಿಕೆ ಕಂಡಿದ್ದ ಬೀನ್ಸ್ ದರ ಹಾಗೇ ಇದೆ. ಟೊಮ್ಯಾಟೋ 5 ರೂ ಏರಿಕೆ ಕಂಡಿದೆ. ನವಿಲುಕೋಸು, ಬೀಟ್ರೂಟ್, ಮೂಲಂಗಿ, ಕ್ಯಾರೇಟ್, ಆಲೂಗಡ್ಡೆ, ಹೊಕೋಸು, ಹಸಿ ಮೆಣಸಿನಕಾಯಿ, ಬೆಂಡೆಕಾಯಿ ಬೆಲೆಗಳು ಕಳೆದ ವಾರಕ್ಕೂ ಈ ವಾರಕ್ಕೂ ಹೋಲಿಸಿದರೆ ಕೆಜಿಗೆ 10 ರೂ. ನಷ್ಟು ಕುಸಿತ ಕಂಡಿವೆ. ಆದರೇ ಕ್ಯಾಪ್ಸಿಕಂ ಬೆಲೆ 15 ರೂ.ನಷ್ಟು ಏರಿಕೆ ಕಂಡು ಕೆ.ಜಿ ಗೆ 50 ರೂ. ನಂತೆ ಮಾರಾಟವಾಗುತ್ತಿದೆ.

ಕೋಳಿ-ಮೊಟ್ಟೆ ಬೆಲೆ ಯಥಾಸ್ಥಿತಿ :

      ಕಳೆದ ವಾರ ಕೆಜಿ ಗೆ 160 ರೂ. ಇದ್ದ ಕೋಳಿ ಬೆಲೆ ಈ ವಾರವೂ ಅಷ್ಟೇ ಇದೆ. ಬ್ರಾಯ್ಲರ್ ಕೋಳಿ ಕೆ.ಜಿ ರೂ.160, ಫಾರಮ್ 130, ನಾಟಿ ಕೋಳಿ 250-300ಕ್ಕೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಮೊಟ್ಟೆ ಧಾರಣೆ ಯಥಾ ಸ್ಥಿತಿ ಇದೆ. ಇನ್ನೇನೂ ಪಿತೃಪಕ್ಷ ಸಮೀಪಿಸುತ್ತಿದೆ. ಮಾರ್ನಾಮಿ ಹಬ್ಬಕ್ಕೆ ಕೋಳಿ ಮಾಂಸಕ್ಕೆ ಹೆಚ್ಚು ಬೇಡಿಕೆ ಇರುವುದರಿಂದ ಕೋಳಿ ಬೆಲೆ ಮತ್ತಷ್ಟು ಏರಿಕೆಯಾಗುತ್ತದೆ ಎನ್ನುತ್ತಾರೆ ಹುಳಿಯಾರಿನ ಕೋಳಿ ಅಂಗಡಿ ಮಾಲೀಕ ಕರವೇ ಶ್ರೀನಿವಾಸ್.

ಸೊಪ್ಪಿಗೆ ಬೆಲೆ ತಂದ ತೊಗರಿ..! :

       ಮಾರುಕಟ್ಟೆಗೆ ಸ್ಥಳೀಯವಾಗಿ ಬೆಳೆಯುವ ರುಚಿಕರ ನಾಟಿ ತೊಗರಿಕಾಯಿ ಬಂದಿದ್ದು, ಕೆಜಿ ಗೆ 80 ರೂ.ನಂತೆ ಮಾರಾಟವಾಗುತ್ತಿದೆ. ಜನರು ಹಸಿ ತೊಗರಿ ಹಾಗೂ ಸೊಪ್ಪಿನ ಕಾಂಬೀನೇಷನ್‍ನಲ್ಲಿ ಬಸ್ಸಾರು, ಮೊಸ್ಸಪ್ಪು, ಹುಳ್ಸೊಪ್ಪು, ಹಾಗೂ ಹುಳಿಸಾರನ್ನು ಇಷ್ಟ ಪಡುವುದರಿಂದ ತೊಗರಿಕಾಯಿ ಜೊತೆ ಸೊಪ್ಪಿಗೂ ಬೇಡಿಕೆ ಹೆಚ್ಚಿ ಬೆಲೆ ಬಂದಿದೆ. ಸೊಪ್ಪು ಬೆಳೆಯುವ ಪ್ರದೇಶಗಳಲ್ಲಿ ಮಳೆ ಬಿದ್ದಿರುವುದು ಸಹ ಸೊಪ್ಪಿನ ಬೆಲೆ ಏರಿಕೆಯಾಗಲು ಕಾರಣ. ನವೆಂಬರ್‍ನಿಂದ ಸ್ಥಳೀಯ ಸೊಗಡವರೆಕಾಯಿ ಸೀಸನ್ ಶುರುವಾಗಲಿದ್ದು, ಹಸಿ ತೊಗರಿಗೂ ಸೊಪ್ಪಿಗೂ ಇರುವ ಅನುಬಂಧ ಸೊಗಡವರೆಗೂ ಇರುವುದರಿಂದ ಸೊಪ್ಪಿನ ಬೆಲೆ ಇಳಿಕೆ ಯಾಗುವ ಲಕ್ಷಣಗಳಿಲ್ಲ ಎನ್ನುತ್ತಾರೆ. ಅಂತರಸನಹಳ್ಳಿ ಮಾರುಕಟ್ಟೆಯ ವರ್ತಕ ತರಕಾರಿ ವಾಸು.

-ಚಿದಾನಂದ್ ಹುಳಿಯಾರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap