ತುಮಕೂರು : ಮಾಸ್ಕ್ ಇಲ್ಲ, ಅಂತರವಿಲ್ಲದೆ ಜನರ ಯರ್ರಾಬಿರ್ರಿ ಓಡಾಟ

ತುಮಕೂರು :  

      ಕೊರೊನಾ ಸೋಂಕು ಪ್ರಕರಣಗಳು ಜಿಲ್ಲೆಯಲ್ಲಿ ಕಡಿಮೆಯಾಗುತ್ತಿರುವ ಲಕ್ಷಣಗಳು ಕಂಡು ಬರುತ್ತಿವೆ. ಸಾವಿನ ಪ್ರಕರಣಗಳಲ್ಲಿಯೂ ಇಳಿಕೆ ಕಂಡಿದೆ. ಪ್ರಸ್ತುತ ಜಿಲ್ಲೆಯಲ್ಲಿ 480 ಸಕ್ರಿಯ ಪ್ರಕರಣಗಳಿವೆ. 400ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಒಂದೇ ದಿನ ವರದಿಯಾಗಿ ಆತಂಕ ಮೂಡಿಸಿದ್ದ ದಿನಗಳು ನಮ್ಮ ಕಣ್ಮುಂದೆಯೇ ಇದೆ. ಇದೀಗ ದಿನ ಒಂದಕ್ಕೆ ಜಿಲ್ಲೆಯಲ್ಲಿ 50 ಪ್ರಕರಣಗಳ ಒಳಗೆ ಸೀಮಿತ ಸಂಖ್ಯೆಯಲ್ಲಿ ವರದಿಯಾಗುತ್ತಿವೆ.

      ಹೀಗೆಂದ ಮಾತ್ರಕ್ಕೆ ಕೊರೊನಾ ಸೋಂಕು ನಿವಾರಣೆಯಾಗಿದೆ ಎಂದಲ್ಲ. ಒಂದಲ್ಲ ಒಂದು ರೀತಿಯಲ್ಲಿ ಕೊರೊನಾ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಲೇ ಇವೆ. ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಮತ್ತಷ್ಟು ಎಚ್ಚರಿಕೆ ವಹಿಸಿದರಷ್ಟೆ ಇದರ ಸಂಪೂರ್ಣ ನಿರ್ಮೂಲನೆ ಸಾಧ್ಯ. ಒಂದು ವೇಳೆ ಹೇಗೋ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದು ಉದಾಸೀನ ಮಾಡಿದ್ದೇ ಆದಲ್ಲಿ ಮುಂದೆ ಎರಡನೇ ಹಂತದ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಅಪಾಯವಂತೂ ಇದೆ.

      ಸೋಂಕಿನ ಎರಡನೇ ಅಲೆಯ ಬಗ್ಗೆ ಈಗಾಗಲೇ ತಜ್ಞರು ಸುಳಿವು ನೀಡಿದ್ದಾರೆ. ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾದರೂ ಇದೇ ಸಮಯದಲ್ಲಿ ಮತ್ತೆ ಹೆಚ್ಚಳವಾಗುವ ಸಾಧ್ಯತೆಗಳ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ಎರಡನೇ ಅಲೆ ಬರದಂತೆ ತಡೆಯಲು ಸರ್ಕಾರದೊಂದಿಗೆ ಜನರೂ ಸಹಕರಿಸಬೇಕು ಎಂದು ಇತ್ತೀಚೆಗಷ್ಟೇ ಆರೋಗ್ಯ ಸಚಿವರು ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ. ಕೊರೊನಾ ಸೋಂಕಿಗೆ ಇನ್ನೂ ಲಸಿಕೆ ಸಿದ್ಧವಾಗಿಲ್ಲ. ಪ್ರಯತ್ನಗಳು ಸಾಗಿವೆ. ಲಸಿಕೆ ಬರುವವರೆಗೆ ಮುಂಜಾಗ್ರತಾ ಕ್ರಮಗಳ ಮೂಲಕವೇ ಈ ಸೋಂಕು ನಿಗ್ರಹ ಸಾಧ್ಯ. ಇದಕ್ಕಾಗಿ ನಮ್ಮ ಮುಂದೆ ಇರುವುದು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು ಮತ್ತು ಸ್ವಚ್ಛತೆ ನಿರ್ವಹಿಸುವುದು

      ಈ ಮೂರೂ ಮುಖ್ಯ ವಿಷಯಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ನಿರ್ಲಕ್ಷ್ಯ ಎದ್ದುಕಾಣತೊಡಗಿದೆ. ಸರ್ಕಾರದ ನಿಯಮಾವಳಿ, ನಿಬಂಧನೆಗಳು ಮುಂದುವರೆದಿದ್ದರೂ ಅವೆಲ್ಲವನ್ನೂ ಬದಿಗೊತ್ತಿ ಜನತೆ ಮುನ್ನಡೆಯುತ್ತಿದ್ದಾರೆ. ಸಾರ್ವಜನಿಕವಾಗಿ ಮಾಸ್ಕ್ ಧರಿಸುವುದು ಕಡಿಮೆಯಾಗುತ್ತಿದೆ. ಅಂತರ ಕಾಪಾಡಿಕೊಳ್ಳಬೇಕೆನ್ನುವ ಪ್ರಜ್ಞೆ ವಿದ್ಯಾವಂತರಿಂದಲೂ ಮರೆಯಾಗುತ್ತಿದೆ. ಈ ನಡಾವಳಿಕೆ ಹೀಗೆಯೇ ಮುಂದುವರೆದರೆ ತಜ್ಞರ ಆತಂಕ ಮರುಕಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಏಕೆಂದರೆ, ಕೊರೊನಾ ತಕ್ಷಣಕ್ಕೆ ಕಡಿಮೆಯಾದರೂ ಮತ್ತೆ ಸಾರ್ವಜನಿಕವಾಗಿ ಹರಡುವ ಆತಂಕವನ್ನು ಕೆಲವರು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

      ತಜ್ಞರ ಇಂತಹ ಸಲಹೆಗಳ ಮೇರೆಗೆ ಶಾಲಾ ಕಾಲೇಜುಗಳೇ ಬಂದ್ ಆಗಿವೆ. ಸಿನಿಮಾ ಮಂದಿರಗಳನ್ನು ಇತ್ತೀಚೆಗಷ್ಟೇ ನಿಬಂಧನೆಯೊಂದಿಗೆ ತೆರೆಯಲು ಅನುವು ಮಾಡಿಕೊಡಲಾಗಿದೆ. ಸಾರ್ವಜನಿಕ ಸಭೆ ಸಮಾರಂಭಗಳಿಗೂ ನಿಬಂಧವಿದೆ. ವಿವಾಹ, ಆರತಕ್ಷತೆ ಮತ್ತಿತರ ಸಮಾರಂಭಗಳಿಗೆ 200 ಜನರ ಮಿತಿಯನ್ನು ಹಾಕಲಾಗಿದೆ. ಈ ನಿರ್ಬಂಧಗಳನ್ನು ಉಲ್ಲಂಘಿಸಿ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳು ಮತ್ತೆ ಯಥಾಸ್ಥಿತಿಗೆ ಮರಳತೊಡಗಿವೆ. ನೂರಾರು ಜನ, ಸಾವಿರಾರು ಜನ ಸೇರತೊಡಗಿದ್ದಾರೆ.ಅಲ್ಲೆಲ್ಲಾ ಮಾಸ್ಕ್ ಧರಿಸದೆ ಇರುವವರೇ ಹೆಚ್ಚುತಿದ್ದಾರೆ. ಇನ್ನು ಅಂತರದ ಮಾತೇ ಇಲ್ಲ. ಹೀಗಾದರೆ ಸೋಂಕಿನ ಅಲೆ ನಿಯಂತ್ರಣಕ್ಕೆ ಬರುವುದಾದರೂ ಹೇಗೆ?
ಕೊರೊನಾ ವೈರಾಣು ಸಾಂಕ್ರಾಮಿಕವಾಗಿ ಒಬ್ಬರಿಂದ ಒಬ್ಬರಿಗೆ ಹರಡುವ ರೋಗ. ಬಾಯಿ ಮತ್ತು ಮೂಗನ್ನು ಗಾಳಿಯ ಅಲೆಗಳಿಂದ ಸಂರಕ್ಷಿಸಿಕೊಳ್ಳಬೇಕು. ವೈರಾಣು ಮನುಷ್ಯನ ದೇಹ ಪ್ರವೇಶಿಸಲು ಸುಲಭದ ಮಾರ್ಗಗಳಿವು. ಇದಕ್ಕಾಗಿಯೇ ಮಾಸ್ಕ್ ಧರಿಸುತ್ತಿರುವುದು. ಆದರೆ ಮಾಸ್ಕ್ ಧರಿಸುವುದರಲ್ಲಿಯೂ ನಿರ್ಲಕ್ಷ್ಯತೆ ತೋರುತ್ತಾ ಉದಾಸೀನ ಮಾಡುತ್ತಾ ಹೋದರೆ ಎಚ್ಚರಿಕೆಯ ಗಂಟೆ ನಮ್ಮ ತಲೆಯ ಮೇಲೆಯೇ ಬಂದು ಬೀಳುವ ಅಪಾಯವಿದೆ.

ಬಸ್‍ಗಳಲ್ಲಿ ನಿಯಮ ಪಾಲನೆ ಇಲ್ಲ :

      ಬಸ್‍ಗಳನ್ನು ಆರಂಭಿಸಿದ ಸಂದರ್ಭದಲ್ಲಿ ಸ್ಯಾನಿಟೈಸರ್, ಮಾಸ್ಕ್ ಮತ್ತು ಅಂತರ ಕಾಪಾಡಿಕೊಳ್ಳುವ ನಿಯಮ ಜಾರಿಯಲ್ಲಿತ್ತು. ಕ್ರಮೇಣ ಇದೆಲ್ಲವೂ ಮರೆಯಾಗಿದೆ. ಒಮ್ಮೆ ಬಸ್ ನಿಲ್ದಾಣಕ್ಕೆ ಹೋಗಿ ಬಂದರೆ ಕೊರೊನಾ ಲಾಕ್ ಡೌನ್‍ಗಿಂತ ಹಿಂದೆ ಕಂಡುಬರುತ್ತಿದ್ದ ವಾತಾವರಣವೇ ಕಾಣಿಸುತ್ತಿದೆ. ಕೆಲವರು ಮಾಸ್ಕ್ ಧರಿಸಿದರೆ, ಇನ್ನು ಕೆಲವರು ಮಾಸ್ಕ್ ಇಲ್ಲದೆ ಓಡಾಡುತ್ತಿದ್ದಾರೆ. ಇವರನ್ನು ಅಲ್ಲಿ ಪ್ರಶ್ನಿಸುವವರೇ ಇಲ್ಲ. ಇನ್ನು ಅಂತರ ಕಾಪಾಡಿಕೊಳ್ಳುವ ಮಾತೆಲ್ಲಿ?

      ಖಾಸಗಿ ಬಸ್‍ಗಳ ಸಂಚಾರ ಹಿಂದಿನಂತೆ ಯಥಾಸ್ಥಿತಿಗೆ ಬಂದಿಲ್ಲ. ಸಾರ್ವಜನಿಕರು ಸಾರಿಗೆ ನಿಗಮದ ಬಸ್‍ಗಳನ್ನೇ ಆಶ್ರಯಿಸುತ್ತಿದ್ದಾರೆ. ಹೀಗಾಗಿ ಜನದಟ್ಟಣೆ ಹೆಚ್ಚಾಗತೊಡಗಿದೆ. ಕೊರೊನಾಗೆ ಹೆದರಿ ಬಸ್‍ಗಳಿಗೆ ಹತ್ತಲು ಹಿಂಜರಿಯುತ್ತಿದ್ದ ಜನ ಈಗ ಯಾವ ಭಯವೂ ಇಲ್ಲದೆ ಜನರೊಳಗೆ ನುಗ್ಗುತ್ತಿದ್ದಾರೆ. ಸೀಟು ಹಿಡಿಯಲು ಎಲ್ಲರನ್ನು ತಳ್ಳಿ ಮುಂದೆ ಹೋಗುತ್ತಿದ್ದಾರೆ. ಇಷ್ಟು ಜನರಲ್ಲಿ ಯಾರಿಗಾದರೂ ಒಬ್ಬರಿಗೆ ಕೊರೊನಾ ಪಾಸಿಟಿವ್ ಇದ್ದರೂ ಸಾಕು, ಆ ಸುತ್ತಮುತ್ತಲ ಜನರಿಗೆಲ್ಲ ಹರಡುವ ಸಾಧ್ಯತೆ ಹೆಚ್ಚು. ಏಕೆಂದರೆ, ಮಾಸ್ಕ್ ಧರಿಸದೆ ಇರುವ ಕಾರಣ ವೈರಾಣುಗಳು ಗಾಳಿಯಲ್ಲಿ ಸುಲಭವಾಗಿ ಮತ್ತೊಬ್ಬರನ್ನು ಪ್ರವೇಶಿಸಬಹುದು.

Recent Articles

spot_img

Related Stories

Share via
Copy link
Powered by Social Snap