ತುಮಕೂರು : ನಗರಪಾಲಿಕೆ ಮೇಯರ್ ಸ್ಥಾನ ಬಿಜೆಪಿಗೆ

 ತುಮಕೂರು : 

      ತುಮಕೂರು ನಗರ ಪಾಲಿಕೆಯ ಮತ್ತೊಂದು ಅವಧಿಯ ಮೇಯರ್, ಉಪ ಮೇಯರ್ ಆಯ್ಕೆಗೆ ಈ ತಿಂಗಳ 26ರಂದು ಚುನಾವಣೆ ನಿಗದಿಯಾಗಿದೆ. ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಈ ವರ್ಗದಲ್ಲಿ ಬಿಜೆಪಿಯ 32ನೇ ವಾರ್ಡ್ ಸದಸ್ಯ ಬಿ.ಜಿ.ಕೃಷ್ಣಪ್ಪ ಒಬ್ಬರೆ ಇರುವುದರಿಂದ ಇವರ ಅವಿರೋಧ ಆಯ್ಕೆ ಖಚಿತವಾಗಲಿದೆ.

      ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಪಾಲಿಕೆಯ 35 ಸದಸ್ಯರ ಪೈಕಿ 17 ಮಂದಿ ಮಹಿಳಾ ಸದಸ್ಯರಿದ್ದು, ಇವರೆಲ್ಲರೂ ಉಪಮೇಯರ್ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಹೀಗಾಗಿ, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿ ಉಪಮೇಯರ್ ಆಕಾಂಕ್ಷಿಗಳ ಪೈಪೋಟಿ ಇದೆ. ಆದರೆ, ಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲದ ಕಾರಣ ಮತ್ತೊಂದು ಪಕ್ಷದೊಂದಿಗೆ ಮೈತ್ರಿ ಅನಿವಾರ್ಯವಾಗಿದೆ. ಬಿಜೆಪಿ 12, ಕಾಂಗ್ರೆಸ್, ಜೆಡಿಎಸ್‍ನ ತಲಾ 10 ಸದಸ್ಯರಿದ್ದಾರೆ. ಜೊತೆಗೆ ಮೂವರು ಪಕ್ಷೇತರರಿದ್ದಾರೆ. ಬಿಜೆಪಿಗೆ ಶಾಸಕ ಜ್ಯೋತಿಗಣೇಶ್, ಸಂಸದ ಜಿ.ಎಸ್.ಬಸವರಾಜು, ಪಕ್ಷೇತರರಾಗಿ ಬಿಜೆಪಿ ಜೊತೆ ಗುರುತಿಸಿಕೊಂಡಿರುವ 30ನೆ ವಾರ್ಡ್ ಸದಸ್ಯ ವಿಷ್ಣುವರ್ಧನ್ ಅವರ ಮತಗಳು ಸೇರಿ ಬಿಜೆಪಿ ಪರ 15 ಮತಗಳಾಗುತ್ತವೆ. ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಅವರ ಮತ ಸೇರಿದರೆ ಜೆಡಿಎಸ್‍ಗೆ 11 ಮತಗಳ ಅವಕಾಶವಿದೆ. ಆದರೆ. ಉಪಮೇಯರ್ ಆಗಿ ಆಯ್ಕೆಯಾಗಲು ಕನಿಷ್ಟ 20 ಮತ ಪಡೆಯಬೇಕು. ಯಾವ ಪಕ್ಷವೂ 20 ಮತ ಬಲ ಹೊಂದಿಲ್ಲ.

      ಹಿಂದಿನ ಅವಧಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಹೊಂದಾಣಿಕೆಯಲ್ಲಿ ಮೇಯರ್ ಆಗಿ ಕಾಂಗ್ರೆಸ್‍ನ ಫರೀದಾ ಬೇಗಂ, ಉಪಮೇಯರ್ ಆಗಿ ಜೆಡಿಎಸ್‍ನ ಶಶಿಕಲಾ ಗಂಗಹನುಮಯ್ಯ ಆಯ್ಕೆಯಾಗಿದ್ದರು. ಈ ಬಾರಿಯೂ ಕಾಂಗ್ರೆಸ್, ಜೆಡಿಎಸ್ ಮೈತ್ರಿ ನಿರೀಕ್ಷಿಸಲಾಗಿದೆ. ಆದರೆ, ಯಾವ ಪಕ್ಷಕ್ಕೆ ಉಪಮೇಯರ್ ಸ್ಥಾನ ಎಂಬ ಬಗ್ಗೆ ಪಕ್ಷಗಳ ನಾಯಕರು ಪಾಲಿಕೆ ಸದಸ್ಯರ ಜೊತೆ ಇನ್ನೂ ಚರ್ಚೆ ನಡೆಸಿಲ್ಲ, ಬರುವ ಸೋಮವಾರದ ನಂತರ ಮಾತುಕತೆಗಳು ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ.

      ಹಿಂದಿನ ಅವಧಿಯಲ್ಲಿ ಉಪ ಮೇಯರ್ ಸ್ಥಾನವನ್ನು ಜೆಡಿಎಸ್‍ನ ಶಶಿಕಲಾ ಗಂಗಹನುಮಯ್ಯ ಹಾಗೂ ಇದೇ ಪಕ್ಷದ 29ನೇ ವಾರ್ಡಿನ ನಾಜೀನಾ ಬೀ ಅವರ ನಡುವೆ ಅರ್ಧರ್ಧ ಅವಧಿಯ ಅಧಿಕಾರ ಹಂಚಿಕೆಯ ಒಡಂಬಡಿಕೆ ನಡೆದಿತ್ತು ಎನ್ನಲಾಗಿದೆ. ಆದರೆ, ಕೋವಿಡ್ ಮತ್ತಿತರ ಕಾರಣಗಳಿಂದ ಶಶಿಕಲಾ ಅವರು ಅಧಿಕಾರ ಬಿಟ್ಟು ಕೊಡದೆ ಪೂರ್ಣಗೊಳಿಸಿದ್ದಾರೆ. ಹೀಗಾಗಿ, ಈ ಬಾರಿಯ ಉಪಮೇಯರ್ ಸ್ಥಾನಕ್ಕೆ ತಮಗೆ ಅವಕಾಶ ನೀಡಿ ಎಂದು ನಾಜೀನಾ ಬೀ ಹಾಗೂ ಅವರ ಪತಿ ಪಟ್ಟುಹಿಡಿದಿದ್ದಾರೆ.

      ಬಿಜೆಪಿಯಲ್ಲೂ ಉಪಮೇಯರ್ ಸ್ಥಾನದ ಆಕಾಂಕ್ಷಿಗಳು ಸಾಕಷ್ಟಿದ್ದಾರೆ. ಶಾಸಕ ಜ್ಯೋತಿಗಣೇಶ್ ಅವರು ಕೂಡಾ ಈ ಬಗ್ಗೆ ಇನ್ನೂ ಸದಸ್ಯರ ಜೊತೆ ಚರ್ಚೆ ಮಾಡಿಲ್ಲ. ಬಿಜೆಪಿ ಇನ್ನಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಉಪಮೇಯರ್ ಸ್ಥಾನವನ್ನು ತಾನೇ ಪಡೆಯುವುದೇ ಅಥವಾ ಮೇಯರ್ ಸ್ಥಾನ ಸಾಕು ಎಂದು ಸುಮ್ಮನಾಗುವುದೇ ಎಂದು ಕಾದು ನೋಡಬೇಕಾಗಿದೆ. ಮೀಸಲಾತಿ ನಿಗಧಿಯಾದಾಗ ಆಯಾ ವರ್ಗದವರು ಮೇಯರ್, ಉಪಮೇಯರ್ ಆಗಿದ್ದಾರೆ. ಈಗ ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಮೇಯರ್ ಸ್ಥಾನವನ್ನು ಅವಕಾಶ ವಂಚಿತ ಒಕ್ಕಲಿಗ, ಲಿಂಗಾಯತ ಜಾತಿ ಸದಸ್ಯರಿಗೆ ಅವಕಾಶ ಮಾಡಿಕೊಡಬೇಕು ಎಂದು ಈ ವರ್ಗದ ಸದಸ್ಯರ ನಡುವೆ ಚರ್ಚೆಗಳು ಶುರುವಾಗಿವೆ. ಅಂತಿಮವಾಗಿ ಪಕ್ಷಗಳ ನಾಯಕರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದನ್ನು ಅವಲಂಬಿಸಿದೆ.

      ಈ ಬಾರಿ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಶತಾಯಗತಾಯ ತಾವು ಸ್ಪರ್ಧೆ ಮಾಡಬೇಕು ಎಂದು ಹಲವು ಸದಸ್ಯರು ಬಯಸಿದ್ದರು. ಎಸ್ಟಿಗೆ ಮೀಸಲಾಗಿ ಇವರಿಗೆ ನಿರಾಶೆಯಾಗಿದೆ.

     ಮೇಯರ್ ಸ್ಥಾನಕ್ಕಾಗಿದ್ದರೆ ಪ್ರಬಲ ಪ್ರಯತ್ನ ಮಾಡಬಹುದಾಗಿತ್ತು. ಆ ಸ್ಥಾನ ಬಿಜೆಪಿ ಪಾಲಾಗಲಿದೆ. ಉಳಿದ ಉಪ ಮೇಯರ್ ಸ್ಥಾನಕ್ಕಾಗಿ ಅನಗತ್ಯ ಶ್ರಮ ಏಕೆ ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರೂ ಅಷ್ಟೊಂದು ಗಂಭೀರ ಪ್ರಯತ್ನ ಮಾಡುತ್ತಿಲ್ಲ ಎಂದು ಆ ಪಕ್ಷಗಳ ಸದಸ್ಯರೇ ಹೇಳುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap