ತುಮಕೂರು : ಆಮೆಗತಿಯ ಕಾಮಗಾರಿ ; ಎಂ.ಜಿ. ರಸ್ತೆಯ ದುಸ್ಥಿತಿ!!

 ತುಮಕೂರು : 

      ತುಮಕೂರಿನ ಫ್ಯಾಮಿಲಿ ಶಾಪಿಂಗ್ ಸ್ಟ್ರೀಟ್ ಎನಿಸಿಕೊಂಡಿರುವ ನಗರದ ಪ್ರಮುಖ ವಾಣಿಜ್ಯ ಪ್ರದೇಶವಾದ ಎಂ.ಜಿ.ರಸ್ತೆಯನ್ನು ಸ್ಮಾರ್ಟ್ ರಸ್ತೆಯಾಗಿ ಅಭಿವೃದ್ಧಿಪಡಿಸುವ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಾಮಗಾರಿ ವರ್ಷವಾದರೂ ಮುಗಿಯುವ ಸ್ಥಿತಿಯಲ್ಲಿಲ್ಲ. ಎಂ.ಜಿ.ರಸ್ತೆಯನ್ನು ಸುಂದರ, ಸುವ್ಯವಸ್ಥಿತ ಸ್ಮಾರ್ಟ್ ರಸ್ತೆಯಾಗಿ ರೂಪಿಸಿ ಅದರ ವೈಭವ ಉಳಿಸಬೇಕು ಎಂಬ ನಿರೀಕ್ಷೆ ಸಾರ್ವಜನಿಕರಲ್ಲಿದೆ.

      ಸ್ಮಾರ್ಟ್ ಸಿಟಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಫುಟ್‍ಪಾತ್‍ಗೆ ಸಮಾನಾಂತರವಾಗಿ ಗಾಯತ್ರಿ ಟಾಕೀಸ್ ಮುಂಭಾಗದಿಂದ ಗುಂಚಿಚೌಕದವರೆಗೆ 750 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಕಾಂಕ್ರಿಟ್ ರಸ್ತೆ ನಿರ್ಮಾಣದ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆ ವ್ಯಕ್ತವಾಗಿದ್ದವು. ಇಲ್ಲಿ ಭಾರಿ ವಾಹನಗಳ ಸಂಚಾರವಿಲ್ಲ, ಕಾಂಕ್ರಿಟ್ ರಸ್ತೆಯ ಅಗತ್ಯವಿರಲಿಲ್ಲ, ಡಾಂಬರು ರಸ್ತೆ ಸಾಕಾಗಿತ್ತು ಎಂದು ಕಾಮಗಾರಿ ಆರಂಭದಲ್ಲೇ ಸಾರ್ವಜನಿಕರು ಒತ್ತಾಯ ಮಾಡಿದ್ದರು.

      ಆ ಸಂದರ್ಭದಲ್ಲಿ ಸ್ಪಷ್ಟೀಕರಣ ನೀಡಿದ್ದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಸ್ಮಾರ್ಟ್ ಸಿಟಿಯಿಂದ ನಗರದ ಅಶೋಕ ರಸ್ತೆ, ಜೆ.ಸಿ.ರಸ್ತೆ ಹಾಗೂ ಎಂ.ಜಿ.ರಸ್ತೆ ಈ ಮೂರು ವಾಣಿಜ್ಯ ರಸ್ತೆಗಳನ್ನು ಗುಣಮಟ್ಟದ ಕಾಂಕ್ರೀಟ್ ರಸ್ತೆಯಾಗಿಯೇ ಅಭಿವೃದ್ಧಿ ಪಡಿಸಲು ಈಗಾಗಲೇ ಅನುಮೋದನೆ ದೊರೆತಿದ್ದು, ಮತ್ತೆ ಅದನ್ನು ಡಾಂಬರ್ ರಸ್ತೆಯಾಗಿ ಪರಿವರ್ತಿಸಲು ನಿಯಮಾನುಸಾರ ಸಾಧ್ಯವಿಲ್ಲ.

      ಕಾಂಕ್ರೀಟ್ ರಸ್ತೆಯಿಂದ ಕನಿಷ್ಠ 10 ರಿಂದ 20 ವರ್ಷ ರಸ್ತೆ ಹಾಳಾಗುವ ಸಮಸ್ಯೆಯಿರುವುದಿಲ್ಲ. ಹಾಲಿ ಇರುವ ಫುಟ್‍ಪಾತ್ ಅನ್ನಾಗಲೀ, ರಸ್ತೆಯನ್ನಾಗಲೀ ವಿಸ್ತರಿಸಿ ಅಭಿವೃದ್ಧಿ ಪಡಿಸುವುದಿಲ್ಲ. ಯಥಾ ಸ್ಥಿತಿ ಫುಟ್‍ಪಾತ್ ಸಮಕ್ಕೆ ಕಾಂಕ್ರೀಟ್ ಹಾಕಿ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದ್ದರು.

      ಈಗ ಕಾಂಕ್ರಿಟ್ ರಸ್ತೆ ಕಾಮಗಾರಿ ಮುಗಿದಿದೆ. ಇಲ್ಲಿನ ಬಾಲಭವನ ಕಾಂಪ್ಲೆಕ್‍ನ ಅಂಗಡಿ ಮಳಿಗೆಗಳಿಗಿಂತಾ ಎತ್ತರದಲ್ಲಿ ಕಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಮಳೆಗಾಲದಲ್ಲಿ ನೀರು ಅಂಗಡಿಗಳಿಗೆ ನುಗ್ಗಬಹುದೇ ಎಂಬ ಆತಂಕ ವ್ಯಾಪಾರಿಗಳಲ್ಲಿದೆ. ಇಂತಹ ಸಮಸ್ಯೆಯಾಗದಂತೆ ಸಮರ್ಪಕವಾಗಿ ಚರಂಡಿ ನಿರ್ಮಾಣ ಮಾಡಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು ಎಂದು ಇಲ್ಲಿನ ವ್ಯಾಪಾರಿ ನಂಜುಂಡಪ್ಪ ಒತ್ತಾಯ ಮಾಡಿದ್ದಾರೆ.

       ರಸ್ತೆ ಕಾಮಗಾರಿ ಆರಂಭವಾಗಿ ವರ್ಷದ ಮೇಲಾಯಿತು. ಆಗಿನಿಂದ ಇಲ್ಲಿನ ಅಂಗಡಿಯವರಿಗೆ ವ್ಯಾಪಾರ ಆಗುತ್ತಿಲ್ಲ. ಒಮ್ಮೊಮ್ಮೆ ಮಧ್ಯಾಹ್ನದವರೆಗೂ ಬೋಣಿ ಆಗದಂತಹ ಪರಿಸ್ಥಿತಿ ಹಲವು ಅಂಗಡಿಗಳಲ್ಲಿದೆ. ಕೊರೊನಾ ಲಾಕ್‍ಡೌನ್ ವೇಳೆ ಸಂಪೂರ್ಣ ಸ್ಥಗಿತಗೊಂಡಿದ್ದ ಎಂ.ಜಿ.ರಸ್ತೆಯ ವ್ಯಾಪಾರ ವಹಿವಾಟು, ಈಗ ಚೇತರಿಸಿಕೊಳ್ಳುವ ಸಂದರ್ಭದಲ್ಲಿ ಕಾಮಗಾರಿಯಿಂದ ವ್ಯಾಪಾರಕ್ಕೆ ಪೆಟ್ಟಾಗಿದೆ ಎಂದು ಹೇಳುತ್ತಾರೆ. ರಸ್ತೆಯ ಎರಡೂ ಬದಿ ಪಾರ್ಕಿಂಗ್ ಜಾಗ, ಫುಟ್‍ಪಾತ್, ಚರಂಡಿ ನಿರ್ಮಾಣ ಮತ್ತಿತರ ಕೆಲಸ ಬಾಕಿ ಇವೆ. ಎಲ್ಲವನ್ನೂ ತುರ್ತಾಗಿ ಮುಗಿಸಬೇಕು ಎಂಬುದು ವ್ಯಾಪಾರಿಗಳ ಒತ್ತಾಯವಾಗಿದೆ.

      ವಾಣಿಜ್ಯ ಮಳಿಗೆಗಳು, ಸಿನಿಮಾಮಂದಿರ ಹೋಟೆಲ್, ಬ್ಯಾಂಕ್, ಕಚೇರಿಗಳು, ಮೆಡಿಕಲ್ ಸ್ಟೋರ್ಸ್, ಜ್ಯೂವೆಲ್ಲರಿ ಮಳಿಗೆಗಳು ಸೇರಿದಂತೆ ಎಲ್ಲಾ ರೀತಿಯ ವ್ಯಾಪಾರ ವಹಿವಾಟು ಒಳಗೊಂಡ ಎಂ.ಜಿ.ರಸ್ತೆಯಲ್ಲಿ ಸದಾ ಜನಸಂದಣಿ ಇರುತ್ತದೆ. ತುಮಕೂರು ನಗರ ಮಾತ್ರವಲ್ಲದೆ, ಜಿಲ್ಲೆಯ ಎಲ್ಲಾ ತಾಲ್ಲ್ಲೂಕುಗಳಿಂದಲೂ ಜನ ಇಲ್ಲಿಗೆ ವ್ಯಾಪಾರಕ್ಕೆ ಬರುತ್ತಾರೆ. ಒಂದು ಅಂದಾಜಿನ ಪ್ರಕಾರ ಎಂ.ಜಿ.ರಸ್ತೆಗೆ ಪ್ರತಿನಿತ್ಯ ಸುಮಾರು ಒಂದು ಲಕ್ಷ ಜನ ಬಂದು ಹೋಗುತ್ತಾರೆ. ಅಷ್ಟು ಪ್ರಮಾಣದ ಜನರಿಗೆ ಇಲ್ಲಿ ವಾಹನಗಳ ಪಾರ್ಕಿಂಗ್, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸಂಬಂಧ ನಿರ್ದಿಷ್ಟ ಯೋಜನೆ ರೂಪುಗೊಂಡಿಲ್ಲ.

      ತುಮಕೂರು ನಗರದ ಆಕರ್ಷಣೆಯಾಗಿರುವ ಎಂ.ಜಿ.ರಸ್ತೆಯನ್ನು ಕೇವಲ ಕಾಂಕ್ರಿಟ್ ರಸ್ತೆಯಾಗಿ ರೂಪಿಸಬಾರದು. ಸುಂದರ, ಸುಸಜ್ಜಿತವಾಗಿ ಮಾದರಿ ರಸ್ತೆಯಾಗಬೇಕು. ರಸ್ತೆ ಬದಿ ಗಿಡಮರ, ಅಲಂಕಾರಿಕ ಗಿಡಗಳನ್ನು ಬೆಳೆಸಿ ಹಸಿರು ಮೂಡಿಸಬೇಕು. ರೆಂಬೆ ಕೊಂಬೆ ಬೆಳೆಯುವ ದೊಡ್ಡ ಮರಗಳ ಬದಲು ಸುಂದರವಾಗಿ ಕಾಣುವ ಸೀತಾಅಶೋಕ ಗಿಡಗಳನ್ನು ರಸ್ತೆ ಬದಿ ಬೆಳೆಬಹುದು ಎಂದು ಎನ್.ಎಸ್.ಮೆಡಿಕಲ್ಸ್‍ನ ಎನ್.ಎ.ರಮೇಶ್ ಸಲಹೆ ನೀಡುತ್ತಾರೆ.

      ಎಂ.ಜಿ.ರಸ್ತೆಯ ಪೂರ್ವ ಭಾಗದಲ್ಲಿ ಶೇಕಡ 80ರಷ್ಟು ತುಮಕೂರು ನಗರ ಬೆಳೆದಿದೆ. ಆದರೆ, ಈ ರಸ್ತೆ ಪ್ರವೇಶವೇ ಸರಾಗವಾಗಿಲ್ಲ. ಪೂರ್ವ ಭಾಗದಿಂದ ಎಂ.ಜಿ.ರಸ್ತೆಗೆ ಬರಲು ಭದ್ರಮ್ಮ ವೃತ್ತ, ಇಲ್ಲವೆ, ಕಾರ್ಯಪ್ಪ ರಸ್ತೆ ಮೂಲಕ ಸಂಪರ್ಕ ರಸ್ತೆ ಹಾದು ಬರಬೇಕು. ಇದರ ಬದಲು ಗಾಯತ್ರಿ ಥಿಯೇಟರ್ ಎದುರು ಬಂದ್ ಆಗಿರುವ ಬಿ.ಹೆಚ್.ರಸ್ತೆಯಿಂದ ಎಂ.ಜಿ.ರಸ್ತೆ ಪ್ರವೇಶಕ್ಕೆ ಅವಕಾಶ ನೀಡಿ, ಉತ್ತರಾಭಿಮುಖಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೆ ತರುವುದರಿಂದ ಹೆಚ್ಚು ಅನುಕೂಲವಿದೆ. ಜೊತೆಗೆ, ಕೇಂದ್ರ ಗ್ರಂಥಾಲಯ ಸಮೀಪ ಇರುವ ಅವೈಜ್ಞಾನಿಕ, ಅಪಾಯಕಾರಿ ಯು-ಟರ್ನ್ ರದ್ದು ಮಾಡಬೇಕು ಎಂದು ಸಲಹೆ ಮಾಡಿದ್ದಾರೆ.

       ಸ್ಮಾರ್ಟ್ ಸಿಟಿಯ ಸ್ಮಾರ್ಟ್ ರಸ್ತೆ ಯೋಜನೆಗಳು ಮುಂದಿನ ಹತ್ತಾರು ವರ್ಷದ ಸಂಚಾರ ವ್ಯವಸ್ಥೆಯನ್ನು ಆಧರಿಸಿ ರೂಪಿಸಬೇಕು. ಸ್ಮಾರ್ಟ್ ರಸ್ತೆಯಾಗಿರುವ ಜನರಲ್ ಕಾರ್ಯಪ್ಪ ರಸ್ತೆ ಯೋಜನೆ ಬಗ್ಗೆ ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ. ಈಗಲೇ ಈ ರಸ್ತೆಯಲ್ಲಿ ಸುಗಮ ಸಂಚಾರ ಸಾಧ್ಯವಾಗುತ್ತಿಲ್ಲ, ಮುಂದಿನ ದಿನಗಳಲ್ಲಿ ಏಕಮುಖ ಸಂಚಾರ ರಸ್ತೆಯಾಗಿ ಪರಿವರ್ತಿಸಬೇಕಾಗುತ್ತದೆ. ಹೀಗಾದರೆ ಯೋಜನೆಯ ಆಶಯ ಈಡೇರಿದಂತಾಗುವುದಿಲ್ಲ. ಅದರಲ್ಲೂ ವಾಣಿಜ್ಯ ಪ್ರದೇಶದ ರಸ್ತೆಗಳು ತೆರಿಗೆಯ ಆದಾಯ ನೀಡುವ ಹಾಲು ಕರೆಯುವ ಹಸುಗಳಿದ್ದಂತೆ, ಇಂತಹ ರಸ್ತೆಗಳ ಅಭಿವೃದ್ಧಿ ಯೋಜನೆ ರೂಪಿಸುವಾಗ ದೂರದೃಷ್ಟಿ ಮುಖ್ಯವಾಗುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap