ತುಮಕೂರು :
ಜಾಡ್ಸಿ ಒದ್ದರೆ ಎಲ್ಲಿಗೆ ಬೀಳ್ತಿಯಾ ಗೊತ್ತಾ?.. ರಾಸ್ಕಲ್, ನಿನ್ ಹೆಂಡ್ತಿ ಸೀರೆ ತೊಳೆಯೋಕೆ ಯಾವ್ ಸೋಪ್ ತಗೊಂಡೋಗ್ತೀಯಾ?, ಈ ಜಿಲ್ಲೆಯನ್ನು ನೀವೆಲ್ಲ ನಿರ್ನಾಮ ಮಾಡಲೆಂದೇ ಬಂದಿದ್ದೀರಿ.., ಮೊದಲು ಇವನನ್ನು ಕೆಲಸದಿಂದ ವಜಾ ಮಾಡಿ.., ಇದು
ಪಂಚಾಯತ್‍ರಾಜ್ ಮತ್ತು ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್ಸ್‍ಗಳ ವಿರುದ್ಧ ಕಾನೂನು ಸಂಸದೀಯ ವ್ಯವಹಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹರಿಹಾಯ್ದ ಪರಿ.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ 2020-21ನೇ ಸಾಲಿನ 3ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಜಿಲ್ಲಾ ಪಂಚಾಯತ್ ಪಂಚಾಯತ್‍ರಾಜ್ ಮತ್ತು ಎಂಜಿನಿಯರಿಂಗ್ ತುಮಕೂರು ಉಪ ವಿಭಾಗದ ಎಕ್ಸಿಕ್ಯೂಟಿವ್ ಎಂಜಿನಿಯರ್ ಹರೀಶ್‍ಬಾಬು, ಗುಬ್ಬಿ ಹಾಗೂ ತುಮಕೂರು ಎಇಇಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಚಿವರು 4ನೇ ತಾರೀಖು ಪೂರ್ವಭಾವಿ ಸಭೆ ನಡೆಸಿ ಕೆಡಿಪಿ ಸಭೆಯೊತ್ತಿಗೆ ಕಾಮಗಾರಿಗಳ ಅಗ್ರಿಮೆಂಟ್ ಮಾಡಿ ಎಂದು ಸೂಚಿಸಿದ್ದರೂ ಮಾಡಿಲ್ಲ ಎಂದು ಕ್ರೋದಗೊಂಡರು.
ಸಿಇಒ ಗಮನಹರಿಸಿಲ್ಲವೇಕೆ? :
ಸಂಸದ ಜಿ.ಎಸ್.ಬಸವರಾಜು, ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಶಾಸಕರಾದ ಬಿ.ಸಿನಾಗೇಶ್, ಮಸಾಲೆಜಯರಾಂ ಸಹ ದನಿಗೂಡಿಸಿದರು. ಪರಿಷತ್ ಸದಸ್ಯ ವೈ.ಎ.ಎನ್ ಸಿಇಒ ಅವರನ್ನು ಕುರಿತು ತಮ್ಮ ಅಧೀನ ವಿಭಾಗದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದರೆ ಕ್ರಮ ನೀವೆ ತೆಗೆದುಕೊಳ್ಳಬೇಕಲ್ಲವೇ?, ಏಕೆ ಗಮನಹರಿಸಿಲ್ಲ ಎಂದು ಪ್ರಶ್ನಿಸಿದರು. ಸಿಇಒ ಅವರು ಈ ಸಂಬಂಧ ಡಿಸೆಂಬರ್‍ನಲ್ಲಿ 3 ಸಭೆಗಳನ್ನು ನಡೆಸಿ ನಿರ್ದೇಶಿಸಿದ್ದಾಗಿ ಸಮಜಾಯಿಷಿ ನೀಡಿದರು.
ಕುಣಿಗಲ್ ಶಾಸಕ ಡಾ.ರಂಗನಾಥ್ ನೀವು ಉದಾಸೀನ ತೋರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳದ ಹೊರತು ಪ್ರತೀ ಸಭೆಗಳನ್ನು ಇದೇ ಆಗುತ್ತದೆ. ಏನೂ ಪ್ರಯೋಜನವಿಲ್ಲ ಎಂದು ಸಚಿವರನ್ನು ಛೇಡಿಸಿದರು.
ಪ್ರತಿಕ್ರಿಯಿಸಿದ ಸಚಿವರು ಜಿಪಂ ಲಿಂಕ್ ಡಾಕ್ಯುಮೆಂಟ್ ಕಾಮಗಾರಿಗಳ ಟೆಂಡರ್‍ಪ್ರಕ್ರಿಯೆ ತಿಂಗಳಾಂತ್ಯದಲ್ಲಿ ಪೂರ್ಣಗೊಂಡು ಕಾಮಗಾರಿಗಳಾಗಬೇಕು. ತಪ್ಪಿತಸ್ಥರ ಮೇಲೆ ಶಿಸ್ತುಕ್ರಮವಾಗಬೇಕು ಎಂದು ಸಿಇಓಗೆ ನಿರ್ದೇಶಿಸಿ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ, ಪಿಡಬ್ಲ್ಯೂಡಿ ಇಲಾಖೆ ಕಾಮಗಾರಿಗಳಲ್ಲೂ ಕುಂಠಿತವಾಗಿದೆ. ಏನೂ ಕೆಲಸ ಮಾಡದೆ ಸರಕಾರಕ್ಕೆ ಅನುದಾನ ವಾಪಸ್ ಕಳುಹಿಸಬೇಕಿಂದಿರುವಿರೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಹೇಮೆ ಹರಿಸುವಲ್ಲಿ ಅನ್ಯಾಯ :
ಕುಣಿಗಲ್ ತಾಲೂಕಿಗೆ ಹೇಮಾವತಿ ನೀರು ಹರಿಸುವಲ್ಲಿ ಅನ್ಯಾಯ ಮಾಡಲಾಗಿದೆ ಎಂಬ ಶಾಸಕ ಡಾ.ರಂಗನಾಥ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಾವ್ಯಾರಿಗೂ ಅನ್ಯಾಯ ಮಾಡಿಲ್ಲ. ಮಾರ್ಕೋನಹಳ್ಳಿ ಜಲಾಶಯಕ್ಕೆ ಅಲೋಕೇಷನ್ ಇಲ್ಲದೇ ನೀರು ಬಿಡುತ್ತಾ ಬರಲಾಗಿದೆ. ಈ ಬಗ್ಗೆ ಪ್ರತ್ಯೇಕ ಮಾತನಾಡೋಣ ಎಂದು ಚರ್ಚೆಗೆ ತೆರೆ ಎಳೆದರು.
ಶಿಕ್ಷಕರ ವೈದ್ಯಕೀಯ ವೆಚ್ಚ ಬೇಗ ಪಾವತಿಸಿ: ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ. ಗೌಡ ಮಾತನಾಡಿ ಶಿಕ್ಷಕರ ವೈದ್ಯಕೀಯ ವೆಚ್ಚದ ಹಣ ಮರುಪಾವತಿ ಮಾಡುವಲ್ಲಿ ವಿಳಂಬ ಮಾಡಲಾಗುತ್ತಿದ್ದು, ಬೇಗ ಪಾವತಿಸಬೇಕು. ಶಿಕ್ಷಕರಿಗೆ ಸಂಬಳ ಕೊಡಲಾಗದ ಪರಿಸ್ಥಿತಿಯಲ್ಲೂ ಖಾಸಗಿ ಶಾಲೆಯವರು ಆನ್‍ಲೈನ್‍ಗಳ ಮೂಲಕ ಮಕ್ಕಳ ಕಲಿಕೆಗೆ ಒತ್ತುಕೊಟ್ಟಿದ್ದರೂ, ವಿದ್ಯಾಗಮ ಮಾಡಲೇಬೇಕೆಂದು ಶಿಕ್ಷಣ ಇಲಾಖೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಆಪಾದಿಸಿದರು. ಹಾಸ್ಟೆಲ್, ವಿದ್ಯಾರ್ಥಿಗಳ ಹಳೆಯ ಬಸ್‍ಪಾಸ್ ಅನ್ನೇ ಮುಂದುವರಿಸಬೇಕೆಂದು ಸಚಿವರನ್ನು ಕೋರಿದರು.
ಅಂಬೇಡ್ಕರ್ ಭವನ ನಿರ್ಮಾಣ ಕಡತ ವಿಲೇವಾರಿ ಚರ್ಚೆ :
ಶಾಸಕ ಬಿ.ಸಿ.ನಾಗೇಶ್ ವಿಷಯ ಪ್ರಸ್ತಾಪಿಸಿ ತಿಪಟೂರು ತಾಲೂಕಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 2012ರಲ್ಲಿ ಮಂಜೂರಾದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಿಸಿದ ಕಾಮಗಾರಿ ಮುಗಿದಿದ್ದರೂ 2019ರವರೆಗೆ ಬಿಲ್ ಪಾವತಿಯಾಗಿರಲಿಲ್ಲ. ಈ ಸಂಬಂದ ವಿಚಾರಿಸಲಾಗಿ ಕಡತ ಡಿಸಿ ಕಚೇರಿಗೆ ಬಂದು ಅಲ್ಲಿಂದ ಸಮಾಜ ಕಲ್ಯಾಣ ಇಲಾಖೆಗೆ ರವಾನೆಯಾಗಿತ್ತು. ಶಿರಾ ಬೈ ಎಲೆಕ್ಷನ್ ಸಮಯದಲ್ಲೇ ಮತ್ತೆ ಜಿಲ್ಲಾಧಿಕಾರಿ ಕಚೇರಿಗೆ ಕಡತ ರವಾನಿಸಿದ್ದರೂ ನೀತಿ ಸಂಹಿತೆ ಮತ್ತಿತರ ನೆಪ ಹೇಳಲಾಯಿತು. ಈ ಸಂಬಂಧ ಕಡತ ಪರಿಶೀಲನ ಮಾಡಿದಾಗ ಅದು ಬಿಲ್ ಪಾವತಿಯ ಕಡತವಾಗಿರಲಿಲ್ಲ. ಬದಲಾಗಿ ಕಾಮಗಾರಿ ಮುಗಿದ ಹಲವು ವರ್ಷಗಳ ಬಳಿಕ ಕಾರ್ಯಾದೇಶ ಕೊಡಿಸುವ ಕಡತವಾಗಿತ್ತು. ಇಂತಹ ಪ್ರಕರಣಗಳು ಹೇಗೆ ನಡೆಯುತ್ತವೇ. ಜಿಲ್ಲಾಧಿಕಾರಿಗಳು ಗಮನಿಸಬೇಕಿತ್ತು ಎಂದು ಹೇಳಿದರು. ಡಿಸಿ ಡಾ.ರಾಕೇಶ್‍ಕುಮಾರ್ ಪ್ರತಿಕ್ರಿಯಿಸಿ ಲೋಪವೆಸಗಿದವರ ಮೇಲೆ ಅಮಾನತ್ತಿಗೆ ಜಂಟಿ ನಿರ್ದೇಶಕರಿಗೆ ಸೂಚಿಸಿದ್ದೇ ಎಂದರು.
ಗುರಿಗಿಂತ ಹೆಚ್ಚು ಹೆರಿಗೆ ಏಕೆ ಮಾಡಿಸುತ್ತಿರುವಿರಿ?:
ಕೆಲವು ಸರಕಾರಿ ಆಸ್ಪತ್ರೆಗಳಲ್ಲಿ ಗುರಿಗಿಂತ ಹೆಚ್ಚು ಹೆರಿಗೆ ಮಾಡಿಸುತ್ತಿರುವುದು ಕಂಡು ಬಂದಿದ್ದು, ನೋಂದಣಿಯಾಗದವವರ ಹೆರಿಗೆಯಾಗುತ್ತಿರುವ ಪ್ರಕರಣಗಳು ಹೆಚ್ಚಿದೆ. ಇದು ತಪ್ಪಬೇಕೆಂದು ಹಿಂದಿನ ಸಭೆಯಲ್ಲೂ ಸೂಚಿಸಿದ್ದು, ಪಾಲನೆಯಾಗುತ್ತಿಲ್ಲ. ಚಿಕ್ಕನಾಯಕನಹಳ್ಳಿಯಲ್ಲಿ ಎಕ್ಸರೇ ಮೂರು ಮಿಷನ್‍ಗಳಿದ್ದರೂ ಸಿಬ್ಬಂದಿ ಖಾಸಗಿಗೆ ಕಳುಹಿಸಿಕೊಡುತ್ತಿದ್ದಾರೆಂದರೆ ಏನರ್ಥ ಎಂದು ಡಿಎಚ್‍ಓ ಅವರನ್ನು ಸಚಿವರು ಪ್ರಶ್ನಿಸಿದರು. ಸಂಜೆಯವರೆಗೆ ನಿರ್ಮಿತಿ ಕೇಂದ್ರದ ಕಾಮಗಾರಿ, ಎತ್ತಿನಹೊಳೆ, ಭದ್ರಾಮೇಲ್ದಂಡೆ ಸೇರಿ ವಿವಿಧ ಇಲಾಖೆಗಳ ಕುರಿತು ವಿಸ್ತøತ ಚರ್ಚೆ ನಡೆಯಿತು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಪಂ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಎಸ್ಪಿ, ಡಾ.ಕೆ.ವಂಶಿಕೃಷ್ಣ. ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಮಚಂದ್ರಯ್ಯ, ಚೌಡಪ್ಪ, ಕೆಡಿಪಿ ಸದಸ್ಯರು, ಯೋಜನಾಧಿಕಾರಿ ಬಾಲರಾಜು ಸೇರಿ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಹಾಜರಿದ್ದರು.
ನಿನ್ನಿಂದೆ ಇರುವ ಕೃಷ್ಣ ಪರಮಾತ್ಮ ಯಾರು?
ಕೊರೊನಾ, ನೀತಿ ಸಂಹಿತೆ ಹೆಸರಲ್ಲಿ ಅಧಿಕಾರಿಗಳು, ಸಿಬ್ಬಂದಿ ಯಾವುದೇ ಕೆಲಸ ಆಗೋಲ್ಲವೆಂದು 2020 ವರ್ಷ ಪೂರ್ತಿ ಕಾಲಹರಣ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಪಿಆರ್‍ಐಡಿ ತುಮಕೂರು ವಿಭಾಗದಲ್ಲಿ 296 ಲಕ್ಷ ಮೊತ್ತದ ಕಾಮಗಾರಿಯಲ್ಲಿ 87ಲಕ್ಷ ಮಾತ್ರ ಕಾಮಗಾರಿ ಆಗಿದೆ ಅಂದರೆ ಏನರ್ಥ. ಒಟ್ಟಾರೆ 160 ಕೋಟಿ ಹಣ ಖರ್ಚಾಗದೇ ಉಳಿದಿದೆ. ಎಇಇಗಳು ಸಣ್ಣ ನೀರಾವರಿ ಕೆರೆಗಳ ಅಭಿವೃದ್ಧಿ ಪ್ರಸ್ತಾವನೆ ಕಳುಹಿಸ್ತಾರೆ. ಆದರೆ ಯಾವ ಕೆರೆಯೆಂದು ಕೇಳಿದರೆ ಹೆಸರು ಹೇಳಲು ಬರೋಲ್ಲ. ಇಂತಹವರನ್ನು ಇಟ್ಕೊಂಡು ಹೇಗೆ ಕೆಲ್ಸ ಮಾಡ್ಸೋದು ಎಂದು ಜಾಡಿಸಿದರಲ್ಲದೇ ತುಮಕೂರು ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ನಿಮಗೆ ಕೆಲಸ ಮಾಡೋಕೆ ಆರೋಗ್ಯ ಸಮ್ಮತಿಸುತ್ತಿ ಅಂದ್ರೆ, ನಾನ್ ಎಕ್ಸಿಕ್ಯೂಟಿವ್ ಪೋಸ್ಟ್‍ಗೆ ವರ್ಗ ಮಾಡಿಸಿಕೊಂಡು ಜಿಲ್ಲೆ ಬಿಡಬೇಕು. ಇಷ್ಟ ದಿನ ಇದ್ದೀರಿ ಎಂದರೆ ಯಾವ ಕೃಷ್ಣನ ಕೃಪೆ ನಿಮ್ಮ ಮೇಲಿದೆಯೆಂದು ಬಹಿರಂಗಪಡಿಸು ಎಂದು ಗುಡುಗಿದರು
ಸಚಿವರ ಪದಬಳಕೆ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ
ಕರ್ತವ್ಯಲೋಪವೆಸಗಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಭರದಲ್ಲಿ ಸಚಿವ ಜೆ.ಸಿ. ಮಾಧುಸ್ವಾಮಿ ಬಳಸಿದ ಪದಗಳ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ, ಸರಕಾರಿ ನೌಕರರ ವಲಯದಲ್ಲೂ ವಿಸ್ತøತ ಚರ್ಚೆ ನಡೆಯುತ್ತಿದ್ದು, ಪರ ವಿರೋಧದ ಚರ್ಚೆಗಳು ವ್ಯಾಪಕವಾಗಿ ಸಾಗಿವೆ. ಕೆಲವರು ಸಂಸದೀಯ ವ್ಯವಹಾರಗಳ ಸಚಿವರಾಗಿ ಮಾಧುಸ್ವಾಮಿ ಅವರು ವೈಯಕ್ತಿಕ ನಿಂದನಾ ಪದ ಬಳಸಬಾರದಿತ್ತು ಎಂದು ಹೇಳಿದರೆ, ಮತ್ತೆ ಕೆಲವರು ಸಚಿವರು ಗುಡುಗಿದ್ದು ಸರಿಯಾಗಿದೆ. ಇಲ್ಲವಾದರೆ ಅಧಿಕಾರಿಗಳು ಮಾತು ಕೇಳುವುದಿಲ್ಲ ಎಂದು ಸಮರ್ಥನೆ ಮಾಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
