ಗೊಂದಲದ ಗೂಡಾದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ

ತುಮಕೂರು :

ತುಮಕೂರು ನಗರದ ಎಸ್‍ಐಟಿ ಮುಖ್ಯ ರಸ್ತೆಯಲ್ಲಿರುವ ಸೈಬರ್ ಸೆಂಟರ್‍ನಲ್ಲಿ ಪದವಿ ದಾಖಲಾತಿಗೆ ಆನ್‍ಲೈನ್ ಅರ್ಜಿ ಸಲ್ಲಿಸುತ್ತಿರುವ ವಿದ್ಯಾರ್ಥಿಗಳು

      ರಾಜ್ಯ ಸರ್ಕಾರವು ಆ.23 ರಿಂದ ಇಡೀ ದೇಶದಲ್ಲಿಯೇ ಎಲ್ಲಾ ರಾಜ್ಯಗಳಿಗಿಂತ ಮೊದಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ವಿದ್ಯುಕ್ತವಾಗಿ ಜಾರಿಗೊಳಿಸಿದೆ. ಇತರೆ ರಾಜ್ಯಗಳಿಗಿಂತ ಮೊದಲು ಅನುಷ್ಠಾನ ಮಾಡಿ, ದಾಖಲೆ ನಿರ್ಮಿಸಬೇಕೆಂಬ ಧಾವಂತದಲ್ಲಿ ತರಾತುರಿಯಲ್ಲಿ ಜಾರಿಗೆ ತಂದು ರಾಜ್ಯ ಸರ್ಕಾರವು ಎಡವಟ್ಟು ಮಾಡಿಕೊಂಡಿದೆ ಎಂಬ ಮಾತುಗಳು ಶೈಕ್ಷಣಿಕ ವಲಯದಿಂದ ಕೇಳಿಬರುತ್ತಿದ್ದು, ಈ ಮಾತುಗಳಿಗೆ ಇಂಬು ನೀಡುವಂತೆ ಅರ್ಜಿ ಸಲ್ಲಿಸಲು ತಾಂತ್ರಿಕ ಸಮಸ್ಯೆ ಎದುರಾಗಿರುವುದು, ನೀತಿಯಲ್ಲಿರುವ ಅರ್ಥವಾಗದ ಕೆಲವು ಗೊಂದಲಗಳು, ಗ್ರಾಮೀಣ ಕಾಲೇಜುಗಳ ಅಸ್ತಿತ್ವದ ಪ್ರಶ್ನೆ, ಇನ್ನೂ ಸಿದ್ಧವಾಗದ ಸಿಲೆಬಸ್, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕಾಡುತ್ತಿರುವ ಸೀಟು ಕುರಿತ ಬಗೆಹರಿಯದ ಆತಂಕ, ಇನ್ನೂ ಮೊದಲಾದ ಸಮಸ್ಯೆಗಳಿಂದಾಗಿ ಸದ್ಯ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಗೊಂದಲದ ಗೂಡಾಗಿದೆ.

 ಅರ್ಜಿ ಸಲ್ಲಿಸಲು ತಾಂತ್ರಿಕ ಸಮಸ್ಯೆ :

      ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯಿಂದಾಗಿ ಈ ವರ್ಷದಿಂದ ಪದವಿ ಕಾಲೇಜುಗಳಲ್ಲಿ ದಾಖಲಾಗುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಇಲಾಖೆಯ https://uucms.karnataka.gov.in ಲಿಂಕ್‍ಗೆ ಹೋಗಿಯೇ ಅರ್ಜಿ ಸಲ್ಲಿಸಬೇಕು. ಶಿಕ್ಷಣ ನೀತಿ ಜಾರಿಗೊಳಿಸುವಾಗಲೆ ಈ ಲಿಂಕ್‍ಗೆ ಚಾಲನೆಯನ್ನೂ ನೀಡಲಾಗಿತ್ತು. ಆದರೆ ಲಿಂಕ್ ಬಿಟ್ಟು ಮೂರು ದಿನ ಕಳೆದರೂ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಸರ್ವರ್ ಸಮಸ್ಯೆ ಕಾಡುತ್ತಿದ್ದು, ಸರ್ವರ್ ಹೋಗಿ ಬಂದು ಮಾಡುತ್ತಿದೆ. ಅಲ್ಲದೇ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದು, ವೆಬ್‍ಸೈಟ್ ಸರಿಯಾಗುತ್ತದೆ ಎಂದು ಎರಡು ದಿನ ಕಾದು ನೋಡಿದ ಅನೇಕ ಪದವಿ ಕಾಲೇಜುಗಳು ಬುಧವಾರದಿಂದ ತಮ್ಮದೇ ಸ್ವಂತ ವೆಬ್‍ಸೈಟ್ ಲಿಂಕ್ ಅನ್ನು ವಿನ್ಯಾಸಗೊಳಿಸಿಕೊಂಡು ವಿದ್ಯಾರ್ಥಿಗಳು ಮೊಬೈಲ್‍ನಲ್ಲೆ ಅರ್ಜಿಸಲ್ಲಿಸಲು ಅನುಕೂಲ ಕಲ್ಪಿಸಿರುವುದು ಕೊಂಚ ಸಮಾಧಾನದ ಸಂಗತಿಯಾಗಿದೆ.

ಸೀಟು ಕುರಿತು ಬಗೆಹರಿಯದ ಆತಂಕ :

      ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷ ಪಿಯುಸಿಯ ಎಲ್ಲಾ ವಿದ್ಯಾರ್ಥಿಗಳನ್ನು ಸರ್ಕಾರ ಪಾಸು ಮಾಡಿದ್ದು, ಸಹಜವಾಗಿ ಪದವಿ ಕಾಲೇಜುಗಳ ಪ್ರವೇಶಕ್ಕೆ ಹೆಚ್ಚು ಅರ್ಜಿ ಬರುತ್ತಿವೆ. ಸರ್ಕಾರವು ನೂತನ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಿರುವಂತೆ ಪದವಿ ಕಾಲೇಜುಗಳಲ್ಲಿ ಪ್ರತಿ ವಿಭಾಗದಲ್ಲಿ ಈ ಹಿಂದೆ ಇದ್ದ ಸೀಟುಗಳ ಸಂಖ್ಯೆಯನ್ನು ಶೇ.10 ರಷ್ಟು ಹೆಚ್ಚಿಸಿ ಕೈ ತೊಳೆದುಕೊಂಡಿದೆ. ಆದರೆ ಅಸಲಿ ಸಮಸ್ಯೆ ಏನೇಂದರೆ ಪ್ರತಿ ವರ್ಷಕ್ಕಿಂತ ಈ ವರ್ಷ ಶೇ.30-40 ರಷ್ಟು ಹೆಚ್ಚುವರಿ ಪ್ರವೇಶಾತಿ ಅರ್ಜಿಗಳು ಬರುವ ನಿರೀಕ್ಷೆ ಇದ್ದು, ಪದವಿ ಓದಲು ಬಯಸಿರುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಲ್ಲಿ ಸೀಟು ಸಿಗುತ್ತದೆಯೊ ಇಲ್ಲವೊ ಎಂಬ ಆತಂಕ ಮನೆ ಮಾಡಿದೆ. ಸೀಟು ಬಯಸಿ ಬರುವ ಹೆಚ್ಚುವರಿ ಪ್ರವೇಶಾತಿ ಸಮಸ್ಯೆಗೆ ಸರ್ಕಾರ ಯಾವ ತೀರ್ಮಾನ ಕೈಗೊಳ್ಳುತ್ತದೆಯೊ ಕಾದು ನೋಡಬೇಕಾಗಿದೆ.

ಗೊಂದಲದ ಗೂಡಾದ ನೀತಿ :

      ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ವಿವಿಯಲ್ಲಿರುವ ಎಷ್ಟೊ ಜನ ಪ್ರಾಧ್ಯಾಪಕರುಗಳಿಗೆ ಇನ್ನೂ ಅರ್ಥವಾಗಿಲ್ಲ. ಅಂತದ್ದರಲ್ಲಿ ಜನಸಾಮಾನ್ಯರು, ವಿದ್ಯಾರ್ಥಿಗಳಿಗೆ ಇನ್ನೆಲ್ಲಿಂದ ಅರ್ಥವಾಗಬೇಕು? ಈ ಹಿಂದೆ ಇದ್ದ ಮೂರು ವರ್ಷದ ಪದವಿ ಕೋರ್ಸ್ ಅನ್ನು ನೂತನ ನೀತಿಯಲ್ಲಿ ನಾಲ್ಕು ವರ್ಷಕ್ಕೆ ಹೆಚ್ಚಿಸಲಾಗಿದ್ದು, ಪ್ರತಿ ವರ್ಷದ ಅಧ್ಯಯನವನ್ನು ಕ್ರಮವಾಗಿ ಸರ್ಟಿಫಿಕೇಟ್ ಕೋರ್ಸ್, ಡಿಪ್ಲೋಮಾ, ಪದವಿ, ಹಾನರ್ಸ್ ಎಂದು ಕರೆಯಲಾಗಿದೆ. ಭೌತಿಕ ತರಗತಿ ಅಥವಾ ಆನ್‍ಲೈನ್ ತರಗತಿ ಯಾವುದೇ ರೀತಿಯಲ್ಲಾದರೂ ಕೋರ್ಸ್ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಯು ಮಾನವಿಕ ಹಾಗೂ ವಿಜ್ಞಾನ ವಿಷಯಗಳನ್ನು ಸಂಯೋಜಿತವಾಗಿ ತೆಗೆದುಕೊಳ್ಳಲು ಅವಕಾಶವಿದೆ. ಅಲ್ಲದೇ ನಾಲ್ಕು ವರ್ಷದ ಪದವಿ ಓದಿದ ನಂತರ ನೇರವಾಗಿ ಪಿಎಚ್ಡಿ ಕೋರ್ಸ್‍ಗೆ ಪ್ರವೇಶ ಪಡೆಯಬಹುದು ಎನ್ನಲಾಗುತ್ತಿದೆ. ವಿದ್ಯಾರ್ಥಿಗಳು ನೀತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಯಾವುದೇ ಕೋರ್ಸ್‍ಗೆ ಪ್ರವೇಶ ಪಡೆದರೆ ಮುಂದೆ ಭವಿಷ್ಯದಲ್ಲಿ ಸಮಸ್ಯೆ ಎದುರಿಸಬಹುದು. ಈ ರೀತಿ ನೀತಿಯು ಅರ್ಥ ಮಾಡಿಕೊಳ್ಳುವಲ್ಲಿ ಜಟಿಲವಾಗಿದ್ದು, ಪದವಿ ಕಾಲೇಜುಗಳ ಸಿಬ್ಬಂದಿಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಅಗತ್ಯ ತರಬೇತಿ ಕೊಡಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ನೀತಿಯನ್ನು ಜಾರಿ ಮಾಡಬಹುದಿತ್ತು ಎಂಬ ಅಭಿಪ್ರಾಯಗಳು ಪದವಿ ಕಾಲೇಜುಗಳ ಪಡಸಾಲೆಯಿಂದ ಕೇಳಿಬರುತ್ತಿವೆ.

-ಪ್ರೋ.ವೈ.ಎಸ್.ಸಿದ್ದೇಗೌಡ, ಕುಲಪತಿಗಳು, ತುಮಕೂರು ವಿವಿ

       ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಸಮಸ್ಯೆ ಇಲ್ಲ, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಮೌಲ್ಯಾಧಾರಿತ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದ್ದು, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳಿಗೆ ಯುವ ತಲೆಮಾರನ್ನು ಸಿದ್ಧಪಡಿಸುವ ಉದೇಶ ಹೊಂದಿದೆ

-ಪ್ರೋ.ವೈ.ಎಸ್.ಸಿದ್ದೇಗೌಡ, ಕುಲಪತಿಗಳು, ತುಮಕೂರು ವಿವಿ

  ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿ ಸ್ನೇಹಿಯಾಗಿದ್ದು, ವೈವಿಧ್ಯಮಯ ಕಲಿಕೆಗೆ ಅವಕಾಶವಿದೆ. ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಎದುರಾದ ತಾಂತ್ರಿಕ ಸಮಸ್ಯೆಗೆ ನಾವೇ ಪರಿಹಾರ ಕಂಡುಕೊಂಡಿದ್ದು, ನಮ್ಮ ಕಾಲೇಜಿನ ಹೆಸರಲ್ಲಿ ವೆಬ್‍ಲಿಂಕ್ ವಿನ್ಯಾಸಗೊಳಿಸಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅನುವು ಮಾಡಿಕೊಟ್ಟಿದ್ದೇವೆ.

-ಪ್ರೊ.ಟಿ.ಬಿ.ವಸಂತ, ಪ್ರಾಂಶುಪಾಲರು, ಜಿಎಫ್‍ಜಿಸಿ, ತುಮಕೂರು

      ನನ್ನ ಮಗಳು ಪಿಯುಸಿ ತೇರ್ಗಡೆಯಾಗಿದ್ದು, ತುಮಕೂರು ವಿವಿ ಕ್ಯಾಂಪಸ್‍ನಲ್ಲಿ ಇತಿಹಾಸ ವಿಷಯದಲ್ಲಿ ಹಾನರ್ಸ್ ಪದವಿ ಓದಲು ಬಯಸಿದ್ದಾಳೆ. ಆದರೇ ಕಳೆದ 2-3 ದಿನಗಳಿಂದ ಅರ್ಜಿ ಸಲ್ಲಿಸುವ ಪೋರ್ಟಲ್‍ನಲ್ಲಿ ತಾಂತ್ರಿಕ ಸಮಸ್ಯೆಯಿದ್ದು, ಪ್ರತಿದಿನ ಸೈಬರ್ ಸೆಂಟರ್‍ಗೆ ಹೋಗಿ ವಾಪಸ್ ಬರುವಂತಾಗಿದೆ.

-ಚಂದ್ರಬಾಬು, ಪೋಷಕರು, ತುಮಕೂರು

     ರಾಷ್ಟ್ರೀಯ ಶಿಕ್ಷಣ ನೀತಿಯು ಅವೈಜ್ಞಾನಿಕವಾಗಿದ್ದು, ಶಿಕ್ಷಣ ತಜ್ಞರು, ಬುದ್ಧಿ ಜೀವಿಗಳ ವಿರೋಧದ ನಡುವೆಯೂ ಸರ್ಕಾರ ತರಾತುರಿಯಲ್ಲಿ ಅನುಷ್ಠಾನ ಮಾಡಿದ್ದು, ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಹುನ್ನಾರ ಎದ್ದು ಕಾಣುತ್ತಿದೆ.

-ಅಶ್ವಿನಿ.ಟಿ.ಇ, ಜಿಲ್ಲಾ ಸಂಚಾಲಕರು, ಅಖಿಲ ಭಾರತ ಪ್ರಜಾಪ್ರಭುತ್ವ ವಿದ್ಯಾರ್ಥಿ ಸಂಘಟನೆ

      ಗ್ರಾಮೀಣ ಕಾಲೇಜುಗಳ ಅಸ್ತಿತ್ವದ ಪ್ರಶ್ನೆ :

      ಶಿಕ್ಷಣ ನೀತಿಯು ವಿದ್ಯಾರ್ಥಿಗಳು ತಮಗಿಷ್ಟದ ವಿಷಯಗಳನ್ನು ಸಂಯೋಜಿಸಿ ಕೋರ್ಸ್ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಿದೆ. ವಿಜ್ಞಾನ ಹಾಗೂ ಕಲಾ ನಿಕಾಯಗಳಲ್ಲಿ ಬರುವ ವಿಷಯಗಳನ್ನು ಒಟ್ಟಿಗೆ ಅಧ್ಯಯನ ಮಾಡಲು ಅವಕಾಶವನ್ನೂ ನೀಡಿದೆ. ನಗರದ ಪದವಿ ಕಾಲೇಜುಗಳಲ್ಲಿ ವೈವಿಧ್ಯದ ಕೋರ್ಸ್‍ಗಳು ಲಭ್ಯವಿದ್ದು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಿದೆ. ಆದರೇ ಗ್ರಾಮೀಣ ಪ್ರದೇಶಗಳಲ್ಲಿರುವ ಪದವಿ ಕಾಲೇಜುಗಳು ಬೆರಳೆಣಿಕೆಯಷ್ಟು ಕೋರ್ಸ್‍ಗಳನ್ನು ಮಾತ್ರ ಹೊಂದಿದ್ದು, ಹಳ್ಳಿ ಮಕ್ಕಳು ವೈವಿಧ್ಯದ ಕೋರ್ಸ್‍ಗಳ ಅಧ್ಯಯನಕ್ಕೆ ನಗರಕ್ಕೆ ಬಂದರೆ ಗ್ರಾಮೀಣ ಕಾಲೇಜುಗಳ ಅಸ್ತಿತ್ವಕ್ಕೆ ಧಕ್ಕೆ ಬರಬಹುದು. ಆದ್ದರಿಂದ ಗ್ರಾಮೀಣ ಪದವಿ ಕಾಲೇಜುಗಳಲ್ಲೂ ವೈವಿಧ್ಯಮಯ ಕೋರ್ಸ್‍ಗಳನ್ನು ಪರಿಚಯಿಸಿ, ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂಬ ಒತ್ತಾಯಗಳು ಗ್ರಾಮೀಣ ಜನರಿಂದ ಕೇಳಿ ಬರುತ್ತಿವೆ.

-ಚಿದಾನಂದ್ ಹುಳಿಯಾರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link