ತುಮಕೂರು : ನೇತಾಜಿ ಉದ್ಯಾನವನ ಅಭಿವೃದ್ಧಿಗೆ 1 ಕೋಟಿ ಅನುದಾನ!

 ತುಮಕೂರು  : 

      ನಗರದ 21ನೇ ವಾರ್ಡ್‍ನ ಕುವೆಂಪು ನಗರದಲ್ಲಿರುವ ನೇತಾಜಿ ಉದ್ಯಾನವನ್ನು ಸ್ಮಾರ್ಟ್ ಸಿಟಿ ವತಿಯಿಂದ ಅಭಿವೃದ್ಧಿ ಪಡಿಸಲು ಒಂದು ಕೋಟಿ ರೂ. ಅನುದಾನವನ್ನು ನೀಡಲಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.

      ಉದ್ಯಾನ ವನದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕುವೆಂಪು ನಗರದ ನೇತಾಜಿ ಉದ್ಯಾನವನವನ್ನು ನಾಗರಿಕ ವೇದಿಕೆ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದು, ಈ ಹಿಂದೆ ಟೂಡಾ ವತಿಯಿಂದ ಉದ್ಯಾನವನಕ್ಕೆ ಅನುದಾನ ನೀಡಿ ಅಭಿವೃದ್ಧಿ ಪಡಿಸಲಾಗಿದ್ದು, ನಗರದಲ್ಲಿರುವ ಅತ್ಯುತ್ತಮ ಪಾರ್ಕ್‍ಗಳಲ್ಲಿ ಒಂದಾಗಿದೆ ಎಂದರು.

      ಸ್ಮಾರ್ಟ್ ಸಿಟಿಯಿಂದ ಬಿಡುಗಡೆಯಾಗಿರುವ ಅನುದಾನದಲ್ಲಿ ವಾಕಿಂಗ್ ಪಾಥ್, ಮಕ್ಕಳ ಆಟೋಪಕರಣ ಹಾಗೂ ಹಿರಿಯ ನಾಗರಿಕರಿಗೂ ಅನುಕೂಲಕರವಾದ ವಾತಾವರಣ ನಿರ್ಮಾಣ ಮಾಡಲು ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದ ಅವರು, ಉದ್ಯಾನವನವನ್ನು ಉತ್ತಮವಾಗಿ ನಿರ್ವಹಣೆ ಮಾಡಿದ ನಾಗರಿಕರ ಸಮಿತಿಗೆ ಧನ್ಯವಾದವನ್ನು ತಿಳಿಸಿದರು.

      ತುಮಕೂರು ನಗರದಲ್ಲಿರುವ ನೇತಾಜಿ ಉದ್ಯಾನವವನನ್ನು ನಾಗರಿಕರೆ ಅತ್ಯುತ್ತಮವಾಗಿ ನಿರ್ವಹಣೆ ಮಾಡಿದ್ದಾರೆ, ಸಾರ್ವಜನಿಕರ ಒತ್ತಾಯದ ಮೇಲೆ ಎ ದರ್ಜೆಯಲ್ಲಿರುವ ಈ ಉದ್ಯಾನದ ಅಭಿವೃದ್ಧಿಗಾಗಿ ಒಂದು ಕೋಟಿಗೂ ಹೆಚ್ಚು ಅನುದಾನವನ್ನು ನೀಡಲಾಗಿದ್ದು, ಈ ಪಾರ್ಕ್‍ನಲ್ಲಿ ಐಟಿ ಕಾಂಪೋನೆಂಟ್, ಸಿಸಿ ಟಿವಿ ಕ್ಯಾಮರಾ, ಪ್ಯಾನಿಕ್ ಬಟನ್ ಸೇರಿದಂತೆ ಅತ್ಯಾಧುನಿಕ ಉದ್ಯಾನವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.

      ಸ್ಮಾರ್ಟ್‍ಸಿಟಿಯಿಂದ ಅಭಿವೃದ್ಧಿಪಡಿಸುತ್ತಿರುವ ಉದ್ಯಾನವನದ ನಿರ್ವಹಣೆಯನ್ನು ಪಾಲಿಕೆಯೊಂದಿಗೆ ಸೇರಿ ಈ ಭಾಗದ ನಾಗರಿಕರು ಮಾಡಿದರೆ ಉತ್ತಮವಾಗಿ ಉಳಿಯುತ್ತದೆ ಎಂದ ಶಾಸಕರು, ಪಾಲಿಕೆಯ ವಾರ್ಡ್‍ಗಳಿಗೆ ಸಿಗದ ಅನುದಾನವನ್ನು ಉದ್ಯಾನದ ಅಭಿವೃದ್ಧಿಗೆ ನೀಡಲಾಗಿದೆ ಎಂದು ಹೇಳಿದರು.

      ಮೇಯರ್ ಫರೀದಾಬೇಗಂ ಮಾತನಾಡಿ, ನಿರ್ವಹಣೆ ಕೊರತೆಯಿಂದಾಗಿ ನೆನೆಗುದಿಗೆ ಬಿದ್ದಿದ್ದ ಉದ್ಯಾನವನವನ್ನು ಅಭಿವೃದ್ಧಿಪಡಿಸಲು ಶಾಸಕರು ಸ್ಮಾರ್ಟ್‍ಸಿಟಿಯಿಂದ ಅನುದಾನವನ್ನು ನೀಡಿದ್ದು, ಸಾರ್ವಜನಿಕರು ಯಾರಾದರೂ ದತ್ತು ತೆಗೆದುಕೊಂಡು ನಿಮ್ಮ ಉದ್ಯಾನವನ್ನು ನೀವೇ ಉಳಿಸಿಕೊಳ್ಳಬೇಕು. ಸ್ಮಾರ್ಟ್‍ಸಿಟಿಯಿಂದ ಅಭಿವೃದ್ಧಿಪಡಿಸಿದಂತೆ ಉಳಿಸಿಕೊಂಡು ನಿರ್ವಹಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

      ಮಾಜಿ ಮೇಯರ್ ಹಾಗೂ ಪಾಲಿಕೆ ಸದಸ್ಯೆ ಲಲಿತಾ ರವೀಶ್ ಮಾತನಾಡಿ, ಈ ಭಾಗದಲ್ಲಿ ನಾಗರಿಕರಿಗೆ ಅನುಕೂಲವಾಗಿದ್ದ ಪಾರ್ಕ್ ನಿರ್ವಹಣೆ ಕೊರತೆಯನ್ನು ಎದುರಿಸುತ್ತಿದ್ದು, ನಾಗರಿಕರ ಹಿತದೃಷ್ಟಿಯಿಂದ ಶಾಸಕರು ಅನುದಾನವನ್ನು ಒದಗಿಸಿದ್ದು, ಇದರಿಂದ ಪಾರ್ಕ್ ಅತ್ಯಾಧುನಿಕವಾಗಿ ರೂಪುಗೊಳ್ಳಲಿದೆ ಎಂದು ಹೇಳಿದರು.

      ಈ ವೇಳೆ ಉಪಮೇಯರ್ ಶಶಿಕಲಾ ಗಂಗಹನುಮಯ್ಯ ಸೇರಿದಂತೆ ಪಾಲಿಕೆ ಮತ್ತು ಸ್ಮಾರ್ಟ್‍ಸಿಟಿ ಅಧಿಕಾರಿಗಳು, ಮುಖಂಡರಾದ ಮಲ್ಲಿಕಾರ್ಜುನ್, ಪ್ರತಾಪ್, ಶಿವರಾಂ, ವಿಶ್ವನಾಥ್‍ಸ್ವಾಮಿ, ಸರೋಜಗೌಡ, ಹನುಮಂತರಾಜು, ರಕ್ಷಿತ್ ಶ್ರೀರಾಮುಲು, ಭಾರತಿ ರಾಜ್ ಮುಂತಾದ ಮುಖಂಡರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap