ತುಮಕೂರು : ನಗರ ಪಾಲಿಕೆ ಸಿಬ್ಬಂದಿಗೆ ಕ್ರಿಕೆಟ್, ಕಬಡ್ಡಿಯ ಮೇಯರ್ ಕಪ್ ಟೂರ್ನಿ

ತುಮಕೂರು : 

      ನಗರದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ನಗರದಲ್ಲಿ ಕ್ರೀಡಾ ಸಪ್ತಾಹ ಏರ್ಪಡಿಸಲಾಗಿದೆ. ಇದೇ ವೇಳೆ ಈ ವರ್ಷದಿಂದ ತುಮಕೂರು ನಗರ ಮಟ್ಟದ ಮೇಯರ್ ಕಪ್ ಕ್ರಿಕೆಟ್ ಹಾಗೂ ಕಬ್ಬಡ್ಡಿ ಪದ್ಯಾವಳಿಗಳನ್ನು ನಗರಪಾಲಿಕೆಯು ಇತರ ಕ್ರೀಡಾ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಲಲಾಗಿದೆ.

      ನಗರ ಪಾಲಿಕೆ ಮೇಯರ್ ಫರೀದಾ ಬೇಗಂ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಸಾರ್ವಜನಿಕರು ಹಾಗೂ ನಗರಪಾಲಿಕೆ ಸದಸ್ಯರು ಮತ್ತು ಸಿಬ್ಬಂದಿಗೆ ಪ್ರತ್ಯೇಕ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

      ಈ ತಿಂಗಳ 12ರಂದು ಬೆಳಿಗ್ಗೆ 10.30ಕ್ಕೆ ಸರ್ಕಾರಿ ಪದವೀಪೂರ್ವ ಕಾಲೇಜು ಮೈದಾನದಲ್ಲಿ ಕ್ರೀಡಾಕೂಟವನ್ನು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್ ಮತ್ತಿತರರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ನಗರ ಪಾಲಿಕೆ ಸಿಬ್ಬಂದಿಯಲ್ಲಿ ಕ್ರೀಡಾ ಮನರಂಜನೆ ಹಾಗೂ ಅವರಲ್ಲಿ ಕ್ರೀಡಾಮನೋಭಾವ ಹೆಚ್ಚಿಸಲು ಈ ಟೂರ್ನಿ ನೆರವಾಗಲಿದೆ ಎಂದ ಮೇಯರ್, ಇದಕ್ಕಾಗಿ ಪಾಲಿಕೆಯ ಕ್ರೀಡಾ ನಿಧಿಯ ಸುಮಾರು 4.5 ಲಕ್ಷ ರೂ.ಗಳನ್ನು ಬಳಸಲಾಗುವುದು ಎಂದು ಹೇಳಿದರು.

      ರಾಕ್‍ಯೂತ್ ಕ್ಲಬ್ ಸಹಯೋಗದ ಕ್ರಿಕೆಟ್ ಪಂದ್ಯಾವಳಿಗೆ 8 ಕ್ರಿಕೆಟ್ ತಂಡಗಳು ನೊಂದಣಿಯಾಗಿವೆ. ಕ್ರಿಕೆಟ್‍ನಲ್ಲಿ ಗೆದ್ದ ತಂಡಕ್ಕೆ ಈ ವರ್ಷದ ಮೇಯರ್ ಕಪ್ ಜೊತೆಗೆ 1.5 ಲಕ್ಷ ರೂ.ಗಳ ನಗದು ಬಹುಮಾನ ನೀಡಲಾಗುತ್ತದೆ. ದ್ವಿತೀಯ ಸ್ಥಾನ ಪಡೆದ ತಂಡ 50 ಸಾವಿರ ರೂ.ಗಳ ಬಹುಮಾನ ಪಡೆಯಲಿದೆ. ಸಾರ್ವಜನಿಕ ಪುರುಷರು ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾವಳಿಯಲ್ಲೂ ಗೆಲ್ಲುವ ತಂಡಗಳಿಗೆ ಮೇಯರ್ ಕಪ್ ಹಾಗು ನಗದು ಬಹುಮಾನ ನಿಡಲಾಗುತ್ತದೆ ಎಂದು ಮೇಯರ್ ಫರೀದಾ ಬೇಗಂ ಹೇಳಿದರು.

      ಪಾಲಿಕೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕ್ರೀಡಾ ಸಂಸ್ಥೆಗಳ ಸಹಯೋಗದಲ್ಲಿ ನಗರಪಾಲಿಕೆ ನೌಕರರಿಗೆ ಸೀಮಿತವಾಗುವಂತೆ ಮಹಾನಗರ ಪಾಲಿಕೆ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಪಾಲಿಕೆ ಸದಸ್ಯರಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಸರಳ ಕ್ರೀಡಾಚಟುವಟಿಕೆಗಳು ನಡೆಯಲಿವೆ. ಇದೇ ರೀತಿ ಪಾಲಿಕೆ ಸಿಬ್ಬಂದಿ ಹಾಗೂ ಪೌರನೌಕರರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಾಗಿ ಕೊರೊನಾ ಜಾಗೃತಿ ಗೀತೆಗಳ ಗಾಯನ, ಅಂತ್ಯಕ್ಷರಿ ಸ್ಪರ್ಧೆಗಳು ನಡೆಯಲಿವೆ ಎಂದು ಹೇಳಿದರು.

     ಉಪಮೇಯರ್ ಶಶಿಕಲಾ ಗಂಗಹನುಮಯ್ಯ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link