ತುಮಕೂರು :

ತುಮಕೂರು ನಗರ ಪಾಲಿಕೆ ಮೇಯರ್, ಉಪ ಮೇಯರ್ ಹಾಗೂ ವಿವಿಧ ಸ್ಥಾಯಿ ಸಮಿತಿ ಸದಸ್ಯರ ಸ್ಥಾನಕ್ಕೆ ಚುನಾವಣೆ ಇಂದು(ಫೆ.26) ನಡೆಯಲಿದೆ. ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, 32ನೇ ವಾರ್ಡ್ ಸದಸ್ಯ ಬಿಜೆಪಿಯ ಬಿ.ಜಿ.ಕೃಷ್ಣಪ್ಪ ಮೇಯರ್ ಆಗುವುದು ಖಚಿತವಾಗಿದೆ. ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಮೇಯರ್ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲು ಮಾಡಿರುವ ಮೂಲಕ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಮೀಸಲಾತಿ ವಿರುದ್ಧ ಪಾಲಿಕೆಯ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಗುರುವಾರ ಅರ್ಜಿ ವಿಚಾರಣೆಗೆ ತೆಗೆದುಕೊಂಡ ನ್ಯಾಯಾಲಯ, ವಿಚಾರಣೆ ಕಾಯ್ದಿರಿಸಿ ಚುನಾವಣೆ ನಡೆಯಲು ಅವಕಾಶ ನೀಡಿದೆ. ಇದರೊಂದಿಗೆ ಮೇಯರ್ ಚುನಾವಣೆಗೆ ಹಸಿರು ನಿಶಾನೆ ದೊರೆತಿದೆ.
ಚುನಾವಣಾ ಪ್ರಕ್ರಿಯೆಯು ಮಹಾನಗರಪಾಲಿಕೆಯ ಸಭಾಂಗಣದಲ್ಲಿ ಫೆಬ್ರವರಿ 26ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಈ ಸಭೆ ಕರೆಯಲಾಗಿದೆ.
ಬೆಳಿಗ್ಗೆ 11 ಗಂಟೆಯಿಂದ ಸದಸ್ಯರ ಹಾಜರಾತಿ ಪಡೆದ ನಂತರ ಮೇಯರ್ ಸ್ಥಾನದ ಚುನಾವಣೆ ಪ್ರಾರಂಭಿಸಲಾಗುವುದು. ನಂತರ ಉಪಮೇಯರ್ ಸ್ಥಾನದ ಚುನಾವಣೆ ನಂತರ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಸದಸ್ಯರ ಸ್ಥಾನಕ್ಕೆ ಚುನಾವಣೆ ನಂತರ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸದಸ್ಯರ ಸ್ಥಾನಕ್ಕೆ ತದನಂತರ ಪಟ್ಟಣ ಯೋಜನೆ ಮತ್ತು ಸುಧಾರಣೆಗಾಗಿ ಸ್ಥಾಯಿ ಸಮಿತಿ ಸದಸ್ಯರ ಸ್ಥಾನಕ್ಕೆ, ಕೊನೆಯದಾಗಿ ಲೆಕ್ಕಪತ್ರ ಸ್ಥಾಯಿ ಸದಸ್ಯರ ಸ್ಥಾನಕ್ಕೆ ಚುನಾವಣೆ ನಡೆಸಲಾಗುವುದು ಎಂದು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.
ಕಾಂಗ್ರೆಸ್, ಜೆಡಿಎಸ್‍ನಲ್ಲಿ ಪರಿಶಿಷ್ಟ ಪಂಗಡದ ಸದಸ್ಯರು ಆಯ್ಕೆ ಆಗಿಲ್ಲದ ಕಾರಣ, ಈ ವರ್ಗದ ಏಕೈಕ ಸದಸ್ಯ ಬಿಜೆಪಿಯ ಬಿ.ಜಿ.ಕೃಷ್ಣಪ್ಪ ಅವರು ಮೇಯರ್ ಆಗಿ ಅವಿರೋಧ ಆಯ್ಕೆಯಾಗುವುದು ಖಚಿತವಾಗಿದೆ. ಈ ಮೂಲಕ ಬಿಜೆಪಿ ಪಾಲಿಕೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲಿದೆ. ಇದೇ ರೀತಿ ಉಪಮೇಯರ್ ಸ್ಥಾನವನ್ನೂ ಬಿಜೆಪಿ ವಶಕ್ಕೆ ಪಡೆಯಲು ಕಸರತ್ತು ನಡೆದಿದೆ. ಆದರೆ, ಸದಸ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಉಪಮೇಯರ್ ಹುದ್ದೆ ಕಷ್ಟಸಾಧ್ಯ ಎನ್ನಲಾಗಿದೆ.
ಕಳೆದ ಅವಧಿಯಲ್ಲಿ ಈ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮೇಯರ್(ಫರೀದಾ ಬೇಗಂ), ಜೆಡಿಎಸ್‍ಗೆ ಉಪಮೇಯರ್(ಶಶಿಕಲಾ ಗಂಗಹನುಮಯ್ಯ) ಅವರಿಗೆ ಅವಕಾಶ ನೀಡಲಾಗಿತ್ತು. ನಗರ ಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲದ ಕಾರಣ ಮತ್ತೊಂದು ಪಕ್ಷದೊಂದಿಗೆ ಮೈತ್ರಿ ಅನಿವಾರ್ಯವಾಗಿದೆ. ಬಿಜೆಪಿ 12, ಕಾಂಗ್ರೆಸ್ ಹಾಗೂ ಜೆಡಿಎಸ್‍ನ ತಲಾ 10 ಸದಸ್ಯರಿದ್ದಾರೆ. ಜೊತೆಗೆ ಮೂವರು ಪಕ್ಷೇತರರಿದ್ದಾರೆ. ಶಾಸಕ ಜ್ಯೋತಿಗಣೇಶ್, ಸಂಸದ ಜಿ.ಎಸ್.ಬಸವರಾಜು, ಒಬ್ಬರು ಪಕ್ಷೇತರ ಸದಸ್ಯರ ಮತ ಬಿಜೆಪಿ ಅಭ್ಯರ್ಥಿಗೆ ದೊರೆಯಬಹುದು. ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಅವರ ಮತ ಸೇರಿದರೆ ಜೆಡಿಎಸ್‍ಗೆ 11 ಮತಗಳ ಅವಕಾಶವಿದೆ. ಉಪಮೇಯರ್ ಆಗಿ ಆಯ್ಕೆಯಾಗಲು ಯಾವುದೇ ಅಭ್ಯರ್ಥಿ ಕನಿಷ್ಟ 20 ಮತ ಪಡೆಯಬೇಕು. ಯಾವ ಪಕ್ಷವೂ 20 ಮತ ಬಲ ಹೊಂದಿಲ್ಲ ಕಾರಣ ಮತ್ತೊಂದು ಪಕ್ಷದ ಸದಸ್ಯರ ಬೆಂಬಲ ಬೇಕಾಗಿದೆ. ಈ ಬಾರಿಯೂ ಕಾಂಗ್ರೆಸ್, ಜೆಡಿಎಸ್‍ನವರು ಮೈತ್ರಿ ಮಾಡಿಕೊಂಡು ಉಪಮೇಯರ್ ಹುದ್ದೆ ಪಡೆಯುವ ಸಾಧ್ಯತೆ ಇದೆ. ಆದರೆ, ಉಪಮೇಯರ್ ಸ್ಥಾನವನ್ನು ಮೈತ್ರಿಯ ಯಾವ ಪಕ್ಷಕ್ಕೆ ನೀಡಬೇಕು ಎಂಬ ಬಗ್ಗೆ ತೀರ್ಮಾನಿಸಲು ಎರಡೂ ಪಕ್ಷಗಳ ನಾಯಕರ, ಸದಸ್ಯರ ನಡುವೆ ಸಭೆಗಳು ನಡೆದಿವೆ. ಈ ಬಾರಿಯೂ ಜೆಡಿಎಸ್‍ಗೆ ಉಪಮೇಯರ್ ಅವಕಾಶ ಸಿಗುವುದೇ ಇಲ್ಲವೇ, ಕಾಂಗ್ರೆಸ್‍ಗೆ ದೊರೆಯುವುದೇ ಎಂಬುದನ್ನು ಕಾದುನೋಡಬೇಕಾಗಿದೆ. ಈ ಬಗ್ಗೆ ಎರಡೂ ಪಕ್ಷದ ಮುಖಂಡರ ನಡುವೆ ಚರ್ಚೆಗಳು ನಡೆದಿದ್ದು, ಗುರುವಾರ ಸಂಜೆವರೆಗೂ ಅಂತಿಮ ನಿರ್ಧಾರಕ್ಕೆ ಬರಲಾಗಿರಲಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








