ತುಮಕೂರು:
ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳೆಲ್ಲವೂ ಕಳಪೆಯಿಂದ ಕೂಡಿದ್ದು, ಮನಸೋಇಚ್ಚೆ ವೆಚ್ಚವನ್ನು ಹೆಚ್ಚಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ ವಿಪಕ್ಷ ನಾಯಕರು ಹಾಗೂ ಸದಸ್ಯರು ಕಾಮಗಾರಿಗಳ ಕುರಿತು ಲೋಕಾಯುಕ್ತ ತನಿಖೆ ನಡೆಸುವಂತೆ ಪ್ರಬಲ ಒತ್ತಾಯ ಮಾಡಿದರು.
ಮೇಯರ್ ಬಿ.ಜಿ.ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಕುಮಾರ್‍ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸೈಯದ್ ನಯಾಜ್, ಧರಣೇಂದ್ರಕುಮಾರ್ ಸದಸ್ಯರಾದ ಮೆಸ್ ಮಹೇಶ್, ಮಂಜುನಾಥ್, ಶ್ರೀನಿವಾಸ್, ಗಿರಿಜಾ, ದೀಪಶ್ರೀ, ಮನು, ಲಕ್ಷ್ಮಿನರಸಿಂಹರಾಜು, ಮಾಜಿ ಮೇಯರ್ ಫರೀದಾಬೇಗಂ ಮತ್ತಿತರರು ಸ್ಮಾರ್ಟ್ ಸಿಟಿ ಕಾಮಗಾರಿ ಹೆಸರಲ್ಲಿ ಹಣ ಲೂಟಿಮಾಡಲಾಗುತ್ತಿದೆ ಹೊರತು ಗುಣಮಟ್ಟದ ಕಾಮಗಾರಿ ನಡೆಯುತ್ತಿಲ್ಲ. ಮೊದಲು ಅನುಮೋದಿಸಿದ ಕಾಮಗಾರಿಗಳ ಪ್ಯಾಕೇಜ್ ಮೊತ್ತವನ್ನು ಏಕಾಏಕಿ ಹೆಚ್ಚಿಸಲಾಗಿದೆ. ಮಾದರಿಯಾದ ಯಾವ ಕಾಮಗಾರಿಯೂ ಉದಾಹರಿಸುವಂತಿಲ್ಲ. ಪಾಲಿಕೆ ಸದಸ್ಯರು, ಆಡಳಿತದ ಗಮನಕ್ಕೆ ತಾರದೆ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿ ಬಿಲ್ ಮಾಡಲಾಗುತ್ತಿದೆ. ಸರಿಯಾದ ಮಾಹಿತಿ ಕೇಳಿದರೂ ನೀಡುವುದಿಲ್ಲ. ಸ್ಮಾರ್ಟ್ ಸಿಟಿ ಕಾಮಗಾರಿಯ ಟೆಂಡರ್ ಹಂತದಿಂದ ಇಲ್ಲಿಯವರೆಗಿನ ಸಮಗ್ರ ವಿವರವನ್ನು ಪಾಲಿಕೆಗೆ ಒದಗಿಸಬೇಕು ಜೊತೆಗೆ ಎಲ್ಲಾ ಕಾಮಗಾರಿಗಳನ್ನು ಲೋಕಾಯುಕ್ತದಿಂದ ಸಮಗ್ರ ತನಿಖೆಗೊಳಪಡಿಸಬೇಕು ಎಂದು ವಿಪಕ್ಷ ನಾಯಕ ಕುಮಾರ್ ಆಗ್ರಹಿಸಿದರು. ಈ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯಿಸಲಾಯಿತು.
7ನೇ ವಾರ್ಡ್‍ನಲ್ಲಿ ಕಾಂಕ್ರಿಟ್, ಎಂಸ್ಯಾಂಡ್ ಬದಲಾಗಿ ಮಣ್ಣನ್ನು ಹಾಕಿ ಗುಂಡಿಗಳನ್ನು ಮುಚ್ಚಿದ್ದು, ಅವ್ಯವಸ್ಥೆ ಸರಿಪಡಿಸದಿದ್ದಲ್ಲಿ ಸ್ಮಾರ್ಟ್ ಸಿಟಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ವಿಪಕ್ಷ ನಾಯಕ ಕುಮಾರ್ ಎಚ್ಚರಿಸಿದರು.
ಎಲ್ಲಾ ವಾರ್ಡ್‍ಗಳಿಗೆ ಮೊದಲೇ ಅನುದಾನ ಹಂಚಬೇಕಿತ್ತು: ಮೇಯರ್ ಬಿ.ಜಿ. ಕೃಷ್ಣಪ್ಪ ಅವರು ಮಾತನಾಡಿ ಸ್ಮಾರ್ಟ್ ಸಿಟಿ ಕಾಮಗಾರಿಯ ಶೇ.70ರಷ್ಟು ಭಾಗವನ್ನು ಕೇವಲ 7 ವಾರ್ಡ್‍ಗಳಿಗೆ ಮಾತ್ರ ಮೀಸಲಿರಿಸದೆ 35 ವಾರ್ಡ್‍ಗಳಲ್ಲೂ ರಸ್ತೆ ಚರಂಡಿ ಅಭಿವೃದ್ಧಿಗೆ ಮೊದಲೇ ಪ್ಲ್ಯಾನ್ ಮಾಡಿದ್ದರೆ ಇಂತಹ ಪರಿಸ್ಥಿತಿ ಉದ್ಬವಿಸುತ್ತಿರಲಿಲ್ಲ. ವಿಳಂಬ, ಅವೈಜ್ಞಾನಿಕ ಕಾಮಗಾರಿಗಳ ಬಗ್ಗೆ ಸ್ಮಾರ್ಟ್‍ಸಿಟಿ ಸಭೆಗಳಲ್ಲೂ, ಜಿಲ್ಲಾಡಳಿತದ ಸಭೆಯಲ್ಲೂ ಗಮನಸೆಳೆದಿದ್ದೇನೆ. ಸದಸ್ಯರ ನ್ಯಾಯಯುತ ಹೋರಾಟಕ್ಕೆ ಸದಾ ಜೊತೆಗಿರುವೆ ಎಂದು ಹೇಳಿದರು.
ತಮ್ಮ ಗಮನಕ್ಕೂ ತಾರದೆ ಪ್ಲಾಂಟೇಷನ್ ಸಹ ಮಾಡದೆ ಉದ್ಯಾನವನವನ್ನು ಉದ್ಘಾಟಿಸಲಾಗಿದೆ ಎಂದು 17ನೇ ವಾರ್ಡ್ ಸದಸ್ಯ ಮಂಜುನಾಥ್ ದೂರಿದರೆ, ಕೋಡಿಬಸವೇಶ್ವರ ವೃತ್ತ, ಶಿರಾಗೇಟ್ ಕನಕವೃತ್ತ ಕಾಮಗಾರಿ ಕುಂಠಿತವಾಗಿರುವ ಬಗ್ಗೆ 3ನೇ ವಾರ್ಡ್ ಸದಸ್ಯ ಲಕ್ಷ್ಮೀನರಸಿಂಹರಾಜು ಸಭೆಯ ಗಮನಸೆಳೆದರು. ಮಾಜಿ ಉಪಮೇಯರ್‍ಗಳಾದ ರೂಪಶ್ರೀ, ಶಶಿಕಲಾ, ಸದಸ್ಯೆ ಗಿರಿಜಾಧನಿಯಾಕುಮಾರ್ ಸೇರಿ ಪಕ್ಷಾತೀತವಾಗಿ ಹಲವು ಮಹಿಳಾ ಸದಸ್ಯರು ಅವೈಜ್ಞಾನಿಕ ಕಾಮಗಾರಿಗಳ ಬಗ್ಗೆ ಧ್ವನಿ ಎತ್ತಿದರು.
ಡಿಸೆಂಬರ್ ವೇಳೆಗೆ ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿ ಪೂರ್ಣ:
ಸದಸ್ಯರ ಆರೋಪಗಳಿಗೆ ಪ್ರತಿಕ್ರಿಯಿಸಿದ ಸ್ಮಾರ್ಟ್ ಸಿಟಿ ಎಂಡಿ ರಂಗಸ್ವಾಮಿ ಅವರು ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳೆಲ್ಲವೂ ಉನ್ನತ ಮಟ್ಟದ ಸಮಿತಿಯಲ್ಲಿ ಅನುಮೋದನೆಯಾದಂತೆ ವೈಜ್ಞಾನಿಕವಾಗಿಯೇ ನಡೆಸಲಾಗುತ್ತಿದೆ ಎಂದು ಸಮಾಜಾಯಿಷಿ ನೀಡಿದರಲ್ಲದೆ, ಕೋವಿಡ್ ಲಾಕ್‍ಡೌನ್ ಕಾರಣಕ್ಕೆ ಕಾರ್ಮಿಕರ ಕೊರತೆಯಿಂದ ಕಾಮಗಾರಿಗಳು ವಿಳಂಬವಾಗಿದೆ. ಬೆಸ್ಕಾಂ, ಯುಜಿಡಿ, ನಿರಂತರ ನೀರು ಸರಬರಾಜು ಯೋಜನೆಯವರು ಕಾಮಗಾರಿ ನಡೆದ ಸ್ಥಳಗಳಲ್ಲೇ ರಸ್ತೆಗಳನ್ನು ಅಗೆದು, ಪೂರ್ಣಗೊಂಡ ರಸ್ತೆಗಳನ್ನು ಹಾಳು ಮಾಡಿದ್ದು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 3-4 ಸಭೆ ನಡೆಸಿದ ಬಳಿಕ ಈ ಸಮಸ್ಯೆಗೆ ಮುಕ್ತಿ ದೊರಕಿದೆ. ಪಾಲಿಕೆಯವರನ್ನು ವಿಶ್ವಾಸಕ್ಕೆ ಪಡೆದು ಕಾಮಗಾರಿ ಪೂರ್ಣಗೊಳಿಸಲಾಗುವುದು. ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಕಾಮಗಾರಿಯ ಉಸ್ತುವಾರಿಯನ್ನು ಸಾರಿಗೆ ನಿಗಮದ ಅಧಿಕಾರಿಗಳೇ ನೋಡಿಕೊಳ್ಳುತ್ತಿದ್ದು, ಪಿಎಂಸಿಯವರು ವಿಸ್ತøತ ಯೋಜನಾ ವರದಿಯನ್ನಷ್ಟೇ ಮಾಡಿದ್ದಾರೆಂದರು.
ಸಭೆಯ ಆರಂಭದಲ್ಲಿ ಸದಸ್ಯರ ಗಮನಕ್ಕೆ ತಾರದೇ ಸಭೆಯನ್ನು 9ಕ್ಕೆ ನಿಗದಿಪಡಿಸಲಾಗಿದೆ ಎಂದು ಸದಸ್ಯ ಮನು, ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯ ಶ್ರೀನಿವಾಸ್ ಬೆಳಗುಂಬ ಕೋತಿತೋಪು ರಸ್ತೆಯನ್ನು ಯಾವಾಗ ಪೂರ್ಣಗೊಳಿಸುತ್ತೀರಿ ಒತ್ತುವರಿ ತೆರವು ಮಾಡಿಸಿಕೊಟ್ಟ ಮೇಲೂ ಏಕೆ ವಿಳಂಬ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಸ್ಮಾರ್ಟ್ ಸಿಟಿ ಎಂಡಿ ಪ್ರತಿಕ್ರಿಯಿಸಿ ಅಕ್ಟೋಬರ್ ಅಂತ್ಯದ ವೇಳೆಗೆ ಕಾಮಗಾರಿ ಮುಗಿಸಿಕೊಡುವುದಾಗಿ ತಿಳಿಸಿದರು. ಉಪಾಧ್ಯಕ್ಷೆ ನಾಜೀಮಾ ಬಿ, ಆಯುಕ್ತೆ ರೇಣುಕಾ , ಸ್ಥಾಯಿ ಸಮಿತಿ ಅಧ್ಯಕ್ಷರಾದ ನಳಿನಾ ಇಂದ್ರಕುಮಾರ್, ಮುಜಿದಾಖಾನಂ. ಸದಸ್ಯರುಗಳು, ನಾಮನಿರ್ದೆಶಿತರು, ವಿವಿಧ ಇಲಾಖೆ, ಪಾಲಿಕೆ ಅಧಿಕಾರಿಗಳು ಹಾಜರಿದ್ದರು.
45 ದಿನದೊಳಗೆ ಅರ್ಜಿ ವಿಲೆಗೆ ಮೇಯರ್ ಸೂಚನೆ
ಪಾಲಿಕೆಗೆ ಸಲ್ಲಿಕೆಯಾಗುವ ಸಾರ್ವಜನಿಕ ಕೆಲಸದ ಅರ್ಜಿಯನ್ನು ತಿಂಗಳಾನುಗಟ್ಟಲೇ ವಿಳಂಬ ಮಾಡದೆ 45 ದಿನದೊಳಗೆ ವಿಲೇವಾರಿ ಮಾಡಬೇಕು ಎಂದು ಸಭೆಯಲ್ಲಿ ಮೇಯರ್ ಬಿ.ಜಿ.ಕೃಷ್ಣಪ್ಪ ಸೂಚಿಸಿದರು.
ಇಂದಿಗೂ ಮುಂದುವರಿದ ಸಭೆ
ಖಾಲಿ ನಿವೇಶನಗಳ ಆಸ್ತಿ ತೆರಿಗೆ ನಿರ್ಧರಣೆ, ಅಸೆಸ್‍ಮೆಂಟ್ ಆಗಿರುವ, ಅಸೆಸ್‍ಮೆಂಟ್ ಆಗದಿರುವ ಆಸ್ತಿಗಳಿಗೆ ಇ-ಖಾತೆ ನೀಡಿಕೆ ಹಾಗೂ ಸ್ಮಾರ್ಟ್‍ಸಿಟಿ ಕಾಮಗಾರಿಗಳ ಚರ್ಚೆಯೇ ಮಧ್ಯಾಹ್ನದವರೆಗೂ ಮುಗಿದು, ಮಧ್ಯಾಹ್ನದ ಮೇಲೆ ಅಜೆಂಡಾ ಚರ್ಚೆಗಳನ್ನು ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಸಭೆಯ ಅಜೆಂಡಾ ಪೂರ್ಣಗೊಳಿಸಲಾಗಿದೆ ಇಂದಿಗೂ ಸಭೆಯನ್ನು ಮುಂದುವರಿಸಲಾಗಿದೆ.
ಅಮಾನಿಕೆರೆ ನೀರಿನಂತೆ ಕಾಮಗಾರಿಯೂ ಬಳಕೆಗೆ ಯೋಗ್ಯವಲ್ಲದಂತಾಗಿವೆ :
5ನೇ ವಾರ್ಡ್ ಸದಸ್ಯ ಟಿ.ಎಂ.ಮಹೇಶ್, ಪರಿಜ್ಞಾನವಿಲ್ಲದೆ ಸ್ಮಾರ್ಟ್‍ಸಿಟಿ ಕಾಮಗಾರಿಗಳು ನಡೆಯುತ್ತಿವೆ ಎಂದು ಕಟುಶಬ್ದಗಳಲ್ಲೇ ಟೀಕಿಸಿದರಲ್ಲದೆ 50 ಲಕ್ಷ ವೆಚ್ಚದಲ್ಲಿ ಆಗಬಹುದಾದ ವಿವೇಕಾನಂದ ರಸ್ತೆ ಕಾಮಗಾರಿಯನ್ನು 3.5 ಕೋಟಿಗೆ ಹೆಚ್ಚಿಸಿ ಟೆಂಡರ್ ಮಾಡಿರುವುದಾದರೂ ಏಕೆ? 2 ವರ್ಷದ ಹಿಂದೆ ಹಾಕಿದ ಲೈಟ್‍ಕಂಬಗಳನ್ನು ಕಿತ್ತು ಹೊಸ ಲೈಟ್ ಕಂಬಗಳನ್ನು ಹಾಕುತ್ತಿರುವುದು ಕೋಟಿಗಟ್ಟಲೇ ಹಣದ ವ್ಯರ್ಥವಲ್ಲವೇ, ಬೆಸ್ಕಾಂ, ನೆಟ್‍ವರ್ಕ್ ಕೇಬಲ್ ಲೈನ್‍ಗಳನ್ನು ಅಳವಡಿಸಿರುವ ಬಗ್ಗೆ ಮಾರ್ಗಸೂಚಿ ಫಲಕವನ್ನೇ ಹಾಕಿಲ್ಲ. ಬಸ್‍ಸ್ಟ್ಯಾಂಡ್ ಎಂ.ಜಿರಸ್ತೆ ನಡುವೆ ಮಂದಗತಿ ಕಾಮಗಾರಿ ನಡೆಯುತ್ತಿದ್ದು, ಮೊದಲೇ ಒತ್ತುವರಿಯಾಗಿರುವ ಅಮಾನಿಕೆರೆಗೆ ಕಾಮಗಾರಿ ಹೆಸರಲ್ಲಿ ಮಳೆನೀರಿನ ಹರಿವನ್ನೇ ತಡೆದಿದ್ದು, ಕಲುಷಿತ ನೀರು ತೆಗೆಯದೆ ಕೆರೆಯ ನೀರು ಬಳಕೆಗೆ ಯೋಗ್ಯವಲ್ಲದ್ದಾಗಿರುವಂತೆ ಸ್ಮಾರ್ಟ್ ಸಿಟಿ ಕಾಮಗಾರಿಗಳ ಕಥೆಯೂ ಆಗಿದೆ ಎಂದು ವ್ಯಂಗ್ಯವಾಡಿದರು. ಸದಸ್ಯರಾದ ನರಸಿಂಹಮೂರ್ತಿ, ಶ್ರೀನಿವಾಸ್ ಧನಿಗೂಡಿಸಿ ಕೆರೆಗೆ ನೀರು ಹರಿಯುವ ಕಾಲುವೆಗಳನ್ನು ಮುಚ್ಚಿ ತಗ್ಗು ಪ್ರದೇಶ ಮನೆಗಳಿಗೆ ನೀರು ನುಗ್ಗುವಂತಾಗಿದೆ ಎಂದು ದೂರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
