ತುಮಕೂರು :
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1.09ಲಕ್ಷ ನೋಂದಾಯಿತ ಆಸ್ತಿಗಳಿದ್ದು, ಶೇ.50ರಷ್ಟು ಆಸ್ತಿ ಮಾಲೀಕರು ಇನ್ನೂ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಪಾಲಿಕೆ ಜನಪ್ರತಿನಿಧಿಗಳು, ಅಧಿಕಾರಿಗಳು ದಾಳಿ ನಡೆಸಿ, ಆಸ್ತಿ ತೆರಿಗೆ ಕಟ್ಟಿಸುವ ಅಭಿಯಾನಕ್ಕೆ ಸೋಮವಾರದಿಂದ ಮುಂದಾಗಿದ್ದಾರೆ.
ಸೋಮವಾರ ಮಧ್ಯಾಹ್ನ ನಗರದ ಎಂ.ಜಿ.ರಸ್ತೆ, ಹೊರಪೇಟೆ ರಸ್ತೆ, ಶಿರಾನಿ ರಸ್ತೆಯಲ್ಲಿ ಕಾರ್ಯಚರಣೆಗಿಳಿಸಿ ಪಾಲಿಕೆ ಮೇಯರ್, ಆಯುಕ್ತರು, ಸ್ಥಾಯಿಸಮಿತಿ ಅಧ್ಯಕ್ಷರುಗಳು, ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡ ಅಂಗಡಿಗಳಿಗೆ ಬೀಗಜಡಿದು ಮಾಲೀಕರಿಗೆ ನೋಟಿಸ್ ಕೊಟ್ಟು ಎಚ್ಚರಿಕೆ ಮೂಡಿಸಿದರು.
ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ಕಟ್ಟದವರಿಗೆ ನೋಟೀಸ್ ನೀಡಿದ್ದರೂ ಸಹ ತೆರಿಗೆ ಪಾಲಿಸುತ್ತಿಲ್ಲ, ವಾಣಿಜ್ಯ ಪ್ರದೇಶಗಳಲ್ಲಿಯೂ ಹಣ ಪಾವತಿಸಿಲ್ಲ, ವ್ಯಾಪಾರಿಗಳ ಸಮಯ ತೆಗೆದುಕೊಂಡಿದ್ದು, ತೆರಿಗೆ ಕಟ್ಟದೇ ಇದ್ದರೆ ಕಾರ್ಪೋರೇಷನ್ ನಿಯಮಗಳ ಅನ್ವಯ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪಾಲಿಕೆ ವ್ಯಾಪ್ತಿಯ 35 ವಾರ್ಡ್‍ಗಳಲ್ಲಿ ತೆರಿಗೆ ವಸೂಲಾತಿ ಸಮಿತಿ ರಚಿಸಲಾಗಿದ್ದು, ಬಿಲ್‍ಕಲೆಕ್ಟರ್ ಮತ್ತು ಕಂದಾಯ ಅಧಿಕಾರಿಗಳು ಮನೆಮನೆ ಬಾಗಲಿಗೆ ತೆರಳಿ ಕಂದಾಯ ವಸೂಲಿ ಮಾಡಲಿದ್ದಾರೆ, ಸಾರ್ವಜನಿಕರು ಬಿಲ್‍ಕಲೆಕ್ಟರ್ ಮನೆ ಬಳಿಗೆ ಬಂದಾಗ ತೆರಿಗೆ ಕಟ್ಟಬಹುದಾಗಿದ್ದು, ಅದನ್ನು ಹೊರತು ಪಡಿಸಿದರೆ ತುಮಕೂರು ಒನ್ ಮತ್ತು ಮೊಬೈಲ್ ಅಪ್ಲೀಕೇಶನ್ ಮೂಲಕ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಗಿದ್ದು, ತೆರಿಗೆ ಪಾವತಿಸದೇ ಇದ್ದರೇ ಶೇ.24ರಷ್ಟು ಸೆಸ್ ಹಾಕಲಾಗುವುದು ಎಂದು ತಿಳಿಸಿದರು.
ನಗರ ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷ ಧರಣೇಂದ್ರಕುಮಾರ್ ಮಾತನಾಡಿ, ತೆರಿಗೆ ವಸೂಲಾತಿ ಆದರೆ ಪಾಲಿಕೆ ಅಭಿವೃದ್ಧಿಯಾಗಲಿದೆ, ಸರ್ಕಾರದ ಅನುದಾನದೊಂದಿಗೆ ತೆರಿಗೆ ವಸೂಲಾತಿ ಜೊತೆ ಆದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗಲಿದೆ, ತುಮಕೂರು ನಗರ ಈಗಲೂ ಗ್ರಾಮದ ಮಟ್ಟದಲ್ಲಿಯೇ ಇದ್ದು, ತೆರಿಗೆ ಕಟ್ಟದವರು ಇದನ್ನು ಎಚ್ಚರಿಕೆಯಾಗಿ ಪರಿಗಣಿಸಿ ತೆರಿಗೆ ಕಟ್ಟುವಂತೆ ಸೂಚಿಸಿದರು. ಕಾರ್ಯಾಚರಣೆಯಲ್ಲಿ ಮೇಯರ್ ಬಿ.ಜಿ.ಕೃಷ್ಣಪ್ಪ, ಪಾಲಿಕೆಯ ಕಂದಾಯ ಉಪ ಆಯುಕ್ತ ಗುರುಬಸವೇಗೌಡ, ಒಳಚರಂಡಿ ಮತ್ತು ಕುಡಿಯುವ ನೀರು ವಿಭಾಗದ ಅಧಿಕಾರಿಗಳು ಪಾಲ್ಗೊಂಡಿದ್ದರು.
80 ಕೋಟಿ ತೆರಿಗೆ ಬಾಕಿ:
ತೆರಿಗೆ ನಿರ್ಧರಣೆ ಸ್ಥಾಯಿ ಸಮಿತಿ ಅಧ್ಯಕ್ಷೆ ನಳಿನಾ ಇಂದ್ರಕುಮಾರ್ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ಕುಂಠಿತವಾಗಿರುವಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳೊಡನೆ ಮೇಯರ್ ಹಾಗೂ ಜನಪ್ರತಿನಿಧಿಗಳೊಂದಿಗೆ ಕಾರ್ಯಾಚರಣೆ ನಡೆಸಿ ತೆರಿಗೆ ಕಟ್ಟದ ಮೂರು ಅಂಗಡಿಗಳ ಬೀಗ ಹಾಕಲಾಗಿದೆ, ತೆರಿಗೆ ಸಂಗ್ರಹಿಸುವ ಮೂಲಕ ನಗರದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಕೊರೋನಾ ಹಿನ್ನೆಲೆಯಲ್ಲಿ ತೆರಿಗೆ ಕಟ್ಟಲು ವ್ಯಾಪಾರಿಗಳು ಹಾಗೂ ಮಾಲೀಕರು ಹಿಂದೇಟು ಹಾಕುತ್ತಿದ್ದರು, ಆದರೆ ಒಂದೊಂದು ಅಂಗಡಿಗಳು 5,10 ಲಕ್ಷರೂ ತೆರಿಗೆ ಉಳಿಸಿಕೊಂಡಿದ್ದು, ತೆರಿಗೆ ಕಟ್ಟದ ಮಾಲೀಕರುಗಳು ಈಗ ತೆರಿಗೆ ಕಟ್ಟಲೇಬೇಕಿದೆ, ಪಾಲಿಕೆ ಮಾನವೀಯ ನೆಲೆಯಲ್ಲಿ ಕೊರೋನಾ ಅವಧಿಯಲ್ಲಿ ತೆರಿಗೆ ವಸೂಲಾತಿ ಮಾಡಿರಲಿಲ್ಲ, ಆದರೆ 80 ಕೋಟಿ ತೆರಿಗೆ ಉಳಿದುಕೊಂಡಿರುವುದರಿಂದ ಕಾರ್ಯಾಚರಣೆ ನಡೆಸಬೇಕಿರುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ