ತುಮಕೂರು :
ತುಮಕೂರು ಮಹಾನಗರಪಾಲಿಕೆ ನಾಗರಿಕರ ಮನೆಬಾಗಿಲಲ್ಲೇ ಕಂದಾಯಸ್ವೀಕೃತಿ ವ್ಯವಸ್ಥೆ ಹಾಗೂ ಡಿಜಿಟಲ್ ರೆಕಾರ್ಡ್ ರೂಂ ಅಸ್ಥಿತ್ವಕ್ಕೆ ತಂದಿರುವ ಹಿನ್ನೆಲೆಯಲ್ಲಿ ಪೌರಾಡಾಳಿತ ನಿರ್ದೇಶನಾಲಯದಿಂದ ರಾಜ್ಯಕ್ಕೆ ಪ್ರಥಮ ಪ್ರಶಸ್ತಿಗೆ ಭಾಜನವಾಗಿದೆ.
ಜನರ ಮನೆ ಬಳಿಯೇ ತೆರಳಿ ಕರ ಸಂಗ್ರಹಿಸುವಂತಹ ಸ್ಮಾರ್ಟ್ ಹಾಗೂ ಜನಸ್ನೇಹಿ ವ್ಯವಸ್ಥೆಯನ್ನು ಜಾರಿಗೆ ತಂದಿರುವುದಕ್ಕಾಗಿ 2018-19ನೇ ಸಾಲಿಗೆ ರಾಜ್ಯದ 10 ಪಾಲಿಕೆಗಳಲ್ಲೆ ಅತ್ಯುತ್ತಮ ಮೊದಲ ಸ್ಥಾನ ನೀಡಿ ಬೆಸ್ಟ್ ಪ್ರಾಕ್ಟೀಸ್ ಅವಾರ್ಡ್ ಅನ್ನು ಪ್ರದಾನ ಮಾಡಲಾಗಿದೆ. 2019-20ನೇ ಸಾಲಿನಲ್ಲಿ ಡಿಜಿಟಲ್ ರೆಕಾರ್ಡ್ ರೂಂ ಅನುಷ್ಠಾನದಲ್ಲೂ ರಾಜ್ಯಕ್ಕೆ ಪ್ರಥಮಸ್ಥಾನಗಳಿಸಿದ್ದು, ಎರಡು ವಿಭಾಗದ ಪ್ರಶಸ್ತಿಯನ್ನು ಸೋಮವಾರ ಪ್ರದಾನ ಮಾಡಲಾಯಿತು.
ಪೌರಾಡಳಿತ ನಿರ್ದೇಶನಾಲಯದ ಸಿಮ್ಯಾಕ್ ಸಂಸ್ಥೆ ಕೊಡಮಾಡುವ ಲಕ್ಷರೂ. ಮೊತ್ತದ ಪ್ರಶಸ್ತಿಗಳನ್ನು ಬೆಂಗಳೂರಿನವಿಕಾಸಸೌಧದ ಸಭಾಂಗಣದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಹಾಗೂ ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜು ಅವರಿಂದ ಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ, ಆಯುಕ್ತೆ ರೇಣುಕಾ ಹಾಗೂ ಐಟಿ ಸೆಲ್‍ನ ಎಸ್.ಪಿ. ಹನುಮಂತರಾಜುಸ್ವೀಕರಿಸಿದರು.
ಸ್ಮಾರ್ಟ್ ಸಿಟಿಯಾಗಿ ರೂಪಿತವಾಗುತ್ತಿರುವ ತುಮಕೂರು ನಗರದ ಕೀರ್ತಿ ಹೆಚ್ಚಿಸುವಂತೆ ತೆರಿಗೆ ಸಂಗ್ರಹದಲ್ಲಿ ಸ್ಮಾರ್ಟ್ ವ್ಯವಸ್ಥೆ ಅಳವಡಿಕೆ ಹಾಗೂ ಡಿಜಿಟಲ್ ರೆಕಾರ್ಡ್ ರೂಂ ವಿಭಾಗದಲ್ಲಿ ಮಹಾನಗರಪಾಲಿಕೆಗೆ ಪ್ರಶಸ್ತಿ ಸಂದಾಯವಾಗಿರುವುದನ್ನು ಸ್ವಾಗತಿಸುವೆ. ಇದಕ್ಕೆ ಕಾರಣರಾದವೆಲ್ಲರನ್ನು ಅಭಿನಂದಿಸುವೆ.
-ಜಿ.ಬಿ.ಜ್ಯೋತಿಗಣೇಶ್, ನಗರ ಶಾಸಕ.’
ತುಮಕೂರು ಮಹಾನಗರಪಾಲಿಕೆ ಜನಸ್ನೇಹಿ ಆಡಳಿತ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಹಲವು ಮಹತ್ವದ ಹೆಜ್ಜೆಯನ್ನಿರಿಸಿದ್ದು, ತೆರಿಗೆ ಸಂಗ್ರಹ, ಡಿಜಿಟಲ್ ರೆಕಾರ್ಡ್ ರೂಂ ಸ್ಥಾಪನೆಯಲ್ಲಿ ರಾಜ್ಯಕ್ಕೆ ಮೊದಲಸ್ಥಾನ ತಂದಿರುವುದು ಇಡೀ ನಗರ, ಜಿಲ್ಲೆಗೆ ಹೆಮ್ಮೆಯ ಸಂಗತಿ. ಈ ಸಾಧನೆಗೆ ಪಾಲಿಕೆ ಸದಸ್ಯರು, ಸ್ಥಾಯಿಸಮಿತಿ ಅಧ್ಯಕ್ಷರು, ಶಾಸಕರು, ಸಚಿವರ ಮಾರ್ಗದರ್ಶನ ಹಾಗೂ ಆಯುಕ್ತಾರಾದಿಯಾಗಿ ಎಲ್ಲಾ ಸಿಬ್ಬಂದಿ, ಜನರ ಸಹಕಾರ ಮುಖ್ಯ ಕಾರಣ
– ಬಿ.ಜಿ.ಕೃಷ್ಣಪ್ಪ, ಪಾಲಿಕೆ ಮೇಯರ್.
ರಾಜ್ಯದಲ್ಲಿರುವ ಹತ್ತುಪಾಲಿಕೆಗಳಲ್ಲಿ ತುಮಕೂರು ಮಹಾನಗರ ಪಾಲಿಕೆ ತೆರಿಗೆ, ಡಿಜಿಟಲ್ ರೆಕಾರ್ಡ್ ರೂಂ ವಿಭಾಗಗಳಲ್ಲಿ ರಾಜ್ಯಕ್ಕೆ ಮಾದರಿ ವ್ಯವಸ್ಥೆ ಅಳವಡಿಸಿಕೊಂಡಿರುವುದಕ್ಕೆ ಪ್ರಥಮ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿ ಜನಸ್ನೇಹಿ ಆಡಳಿತ ನೀಡುವ ನಿಟ್ಟಿನಲ್ಲಿ ಪಾಲಿಕೆಯ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ಪಾಲಿಕೆ ಆಡಳಿತ ಸಿಬ್ಬಂದಿ ಮಾಡುತ್ತಿರುವ ಪ್ರಯೋಗಗಳಿಗೆ ಸಹಕರಿಸುತ್ತಿರುವ ತುಮಕೂರಿನ ನಾಗರಿಕರಿಗೆ ಈ ಪ್ರಶಸ್ತಿ ಅರ್ಪಣೆಯಾಗಬೇಕು.
-ರೇಣುಕಾ, ಆಯುಕ್ತೆ, ಮಹಾನಗರಪಾಲಿಕೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ