ತುಮಕೂರು : ಅಕ್ರಮ ನಲ್ಲಿ ಸಂಪರ್ಕ ; ಪಾಲಿಕೆಗೆ 18.81 ಕೋಟಿ ಖೋತಾ!

ತುಮಕೂರು : 

      ಸ್ಮಾರ್ಟ್‍ಸಿಟಿ ಯೋಜನೆ, ದಿನದ 24 ತಾಸು ನೀರು ಸರಬರಾಜು ಯೋಜನೆ ಅನುಷ್ಠಾನಗೊಳ್ಳುತ್ತಿರುವ ತುಮಕೂರು ನಗರದಲ್ಲಿ ಸುಮಾರು 15 ಸಾವಿರದಷ್ಟು ಅನಧಿಕೃತ ನಲ್ಲಿ ಸಂಪರ್ಕಗಳಿರುಗಿ ಮಹಾನಗರಪಾಲಿಕೆ ಅಂದಾಜಿಸಿದ್ದು, 18 ಕೋಟಿ 81 ಲಕ್ಷ ಆದಾಯ ಪಾಲಿಕೆಗೆ ಕಳೆದ ಹಲವಾರು ವರ್ಷಗಳಿಂದ ಖೋತಾ ಆಗಿದೆ.

      ತುಮಕೂರು ನಗರದಲ್ಲಿ ಅಧಿಕೃತವಾಗಿ 52 ಸಾವಿರದಷ್ಟು ಮನೆ, ವಸತಿಯೇತರ ಕಟ್ಟಡಗಳಿಗೆ ಕೊಳಾಯಿ ನೀರು ಸಂಪರ್ಕವನ್ನು ಕಲ್ಪಿಸಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಅಕ್ರಮ ನಲ್ಲಿ ಸಂಪರ್ಕಗಳಿರುವುದು ಪಾಲಿಕೆಗೆ ನೀರಿನ ಕರ ಸಂಗ್ರಹದಲ್ಲಿ ಕೊರತೆಗೆ ಕಾರಣವಾಗಿದೆ. ನಗರದ ಕೆಲವು ಬಲಾಡ್ಯರೇ ಅಧಿಕಾರ ಬಲದಿಂದ ಹೆಚ್ಚುವರಿ ನಲ್ಲಿ ಸಂಪರ್ಕಗಳನ್ನು ಮನೆ, ವಾಣಿಜ್ಯ ಮಳಿಗೆ, ಸಂಸ್ಥೆಗಳಿಗೂ ಹಾಕಿಸಿಕೊಂಡು ಯಾವುದೇ ಕರ, ಶುಲ್ಕಗಳನ್ನು ಪಾವತಿಸದೆ ನೀರನ್ನು ಬಳಸುತ್ತಿರುವ ದೂರುಗಳು ವ್ಯಾಪಕವಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಪಾಲಿಕೆ ನವೆಂಬರ್‍ನಿಂದ ಕಾರ್ಯಾಚರಣೆಗೆ ಮುಂದಾಗಿದೆ.

     ಅಕ್ರಮ -ಸಕ್ರಮ ನಲ್ಲಿ ದರ ಶೇ 50ರಷ್ಟು ಇಳಿಕೆ:

ನಲ್ಲಿ ಸಂಪರ್ಕ ಸಾಂದರ್ಭಿಕ ಚಿತ್ರ.

     ಪಾಲಿಕೆಗೆ ಖೋತಾ ಆಗಿರುವ ಸಂಪನ್ಮೂಲವನ್ನು ಸಂಗ್ರಹಿಸುವ ಜೊತೆಗೆ ಅಕ್ರಮ ಸಂಪರ್ಕಗಳನ್ನು ಸಕ್ರಮೀಕರಣಗೊಳಿಸಲು ಪಾಲಿಕೆಯಲ್ಲಿ ಮೇಯರ್ ಬಿ.ಜಿ.ಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ಕಳೆದು ತಿಂಗಳು ನಡೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, 5000ವಿದ್ದ ದರವನ್ನು ಶೇ.50ರಷ್ಟು ಇಳಿಕೆ ಮಾಡಿ 2,500 ದರಕ್ಕೆ ನಿಗದಿಪಡಿಸಲಾಗಿದೆ. ಯಾರು ಅನಧಿಕೃತ ನಲ್ಲಿ ಸಂಪರ್ಕ ಪಡೆದಿರುವರೇ ತಾವೇ ಖುದ್ದಾಗಿ ಪಾಲಿಕೆಗೆ ಸಕ್ರಮೀಕರಣಕ್ಕೆ ಎರಡೂವರೆ ಸಾವಿರ ಶುಲ್ಕ ಪಾವತಿಸಿ ಅರ್ಜಿಸಲ್ಲಿಸಿದರೆ ಅಂತಹವರ ನಲ್ಲಿ ಸಂಪರ್ಕವನ್ನು ಸಕ್ರಮೀಕರಣಗೊಳಿಸಲಾಗುವುದು ಎಂದು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.

      6 ತಿಂಗಳಲ್ಲಿ ಶೇ.70ರಷ್ಟು ಸಕ್ರಮಕ್ಕೆ ಗುರಿ: ಅಕ್ರಮ ನಲ್ಲಿ ಸಂಪರ್ಕಗಳನ್ನು ಸಕ್ರಮಗೊಳಿಸುವ ಯೋಜನೆಯನ್ನು ವಾರ್ಡ್‍ವಾರು ಅಭಿಯಾನದ ರೂಪದಲ್ಲಿ ಕೈಗೊಳ್ಳಲು ಯೋಜನೆ ರೂಪಿಸುತ್ತಿದ್ದು ಮುಂದಿನ ಆರು ತಿಂಗಳಲ್ಲಿ 15 ಸಾವಿರದಲ್ಲಿ ಸುಮಾರು 10 ಸಾವಿರಕ್ಕೂ ಮೇಲ್ಪಟ್ಟು ಅನಧಿಕೃತ ಸಂಪರ್ಕಗಳನ್ನು ಸಕ್ರಮಕ್ಕೆ ಸದಸ್ಯರ ಸಹಕಾರದೊಂದಿಗೆ ಗುರಿಹಾಕಿಕೊಳ್ಳಲಾಗಿದೆ ಎಂದು ಕಾರ್ಯಪಾಲಕ ಅಭಿಯಂತರ ವಿನಯ್ ತಿಳಿಸಿದ್ದಾರೆ.

ಮೀಟರ್ ಅಳವಡಿಕೆಯಾದರೆ ಅಕ್ರಮಗಳಿಗೆ ಬ್ರೇಕ್:

      ನಗರದಲ್ಲಿ ಜಾರಿಗೊಳಿಸಲಾಗುತ್ತಿರುವ 24 ತಾಸು ನೀರು ಸರಬರಾಜು ಯೋಜನೆ ಡಿಸೆಂಬರ್‍ವೇಳೆಗೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎನ್ನುವ ಪಾಲಿಕೆ ಆಯುಕ್ತರು ಯೋಜನೆಯಡಿ ಹೊಸ ನಲ್ಲಿ ಸಂಪರ್ಕಗಳು ಎಲ್ಲಾ ಮನೆ, ವಾಣಿಜ್ಯ ಕಟ್ಟಡಗಳಿಗೆ ಅಳವಡಿಕೆಯಾಗಲಿದ್ದು, ಬಳಿಕ ನೀರಿನ ಕರ ಸಂಗ್ರಹದಲ್ಲಿ ಪಾರದರ್ಶಕವ್ಯವಸ್ಥೆ ಜಾರಿಗೆ ಬರಲಿದೆ. ಮೀಟರ್ ಅಳವಡಿಕೆ ಮಾಡಿದ ಒಂದೇ ನಲ್ಲಿ ಸಂಪರ್ಕಗಳು ಮಾತ್ರ ಅಸ್ಥಿತ್ವಕ್ಕೆ ಬರಲಿದೆ ಎಂದು ಹೇಳಿದ್ದಾರೆ.

24 ತಾಸು ನೀರು : ದರ ನಿಗದಿ ಮಾಡಿರುವ ಪಾಲಿಕೆ

      ಪ್ರಸ್ತುತ ಪ್ರತೀ ಗೃಹ ಬಳಕೆ ನಲ್ಲಿ ಸಂಪರ್ಕಕ್ಕೆ ಮಾಸಿಕ 200 ರೂ.ಗಳಂತೆ 2400ರೂ. ವಾರ್ಷಿಕ ನೀರಿನ ಕರವನ್ನು ನಾಗರಿಕರು ಪಾವತಿಸುತ್ತಿದ್ದು, 24 ತಾಸು ನೀರು ಸರಬರಾಜು ಯೋಜನೆ ಅನುಷ್ಠಾನಗೊಂಡ ಬಳಿಕ ನೀರಿನ ಬಳಕೆ ಪ್ರಮಾಣದಷ್ಟು ಮಾತ್ರ ಶುಲ್ಕ ಪಾವತಿಸಬೇಕು. ಈ ಸಂಬಂಧ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಪ್ರತೀ ಮನೆಯಲ್ಲಿ 6 ಜನರಂತೆ ಲೆಕ್ಕ ಹಾಕಿ ಮಾಸಿಕ 25000 ಲೀ ನೀರಿನ ಬಳಕೆ ಆಧರಿಸಿ 229 ರೂ. ಕನಿಷ್ಠ ದರ ನಿಗದಿ ಮಾಡಲಾಗಿದೆ. ಮನೆಯಲ್ಲಿ ಕಡಿಮೆ ಸಂಖ್ಯೆಯ ಜನರಿದ್ದು ಮಾಸಿಕ ಕೇವಲ 10,000 ಲಿಟರ್ ಮಾತ್ರ ಬಳಸಿದರೆ ಅಂತಹ ಮನೆಯವರು ಬರೀ 70ರೂ.ಗಳಷ್ಟು ಮಾತ್ರ ನೀರಿನ ಬಿಲ್ ಪಾವತಿಸುವ ಅನುಕೂಲ ನಾಗರಿಕರಿಗೆ ಲಭ್ಯವಾಗಲಿದೆ ಮಹಾನಗರಪಾಲಿಕೆ ಕಾರ್ಯಪಾಲಕ ಅಭಿಯಂತರ ವಿನಯ್ ಮಾಹಿತಿ ನೀಡಿದ್ದಾರೆ.

      ಕರ ಸಂಗ್ರಹ ವ್ಯವಸ್ಥೆಯಲ್ಲಿ ಪಾಲಿಕೆ ಮಾಡುತ್ತಿರುವ ಪ್ರಯೋಗಗಳು ರಾಜ್ಯಮಟ್ಟದಲ್ಲಿ ಪ್ರಶಂಸೆಗೆ ಭಾಜನವಾಗಿರುವುದು ನಮ್ಮ ಜವಾಬ್ದಾರಿ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ನಲ್ಲಿ ಸಂಪರ್ಕಗಳಿಂದ ಪಾಲಿಕೆಯ ಆದಾಯಕ್ಕೆ ಆಗುತ್ತಿರುವ ಖೋತಾವನ್ನು ತಡೆಗಟ್ಟಿ ಸಂಪನ್ಮೂಲ ಹೆಚ್ಚಳ, ಪಾರದರ್ಶಕತೆಗೆ ಒತ್ತುಕೊಡಲು ನವೆಂಬರ್‍ನಿಂದ ಸಕ್ರಮೀಕರಣ ಅಭಿಯಾನ ಎಲ್ಲಾ 35 ವಾರ್ಡ್‍ಗಳಲ್ಲೂ ಸದಸ್ಯರ ಸಹಕಾರದೊಂದಿಗೆ ಕೈಗೆತ್ತಿಕೊಳ್ಳಲಾಗುವುದು.

-ರೇಣುಕಾ ಆಯುಕ್ತರು, ಮಹಾನಗರಪಾಲಿಕೆ

 ಎಸ್.ಹರೀಶ್ ಆಚಾರ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap