ತುಮಕೂರು :
ಕೋವಿಡ್ 2ನೇ ಅಲೆಯಿಂದ ಸೋಂಕಿತರು ಹೆಚ್ಚಳವಾಗುತ್ತಿರುವ ಈ ಸಂದರ್ಭದಲ್ಲಿ ಪೊಲೀಸರು ಸ್ವರಕ್ಷಣೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಜೊತೆಗೆ ಜನಸಾಮಾನ್ಯರು ಪಾಲಿಸುವಂತೆ ಮಾಡುವ ದಿಸೆಯಲ್ಲಿ ಪೊಲೀಸರ ವರ್ತನೆ ಸಂಯಮದಿಂದ ಕೂಡಿರಬೇಕೆಂದು ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಸೂಚಿಸಿದರು.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪರಾಮರ್ಶೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೋವಿಡ್ ಹೆಚ್ಚುತ್ತಿರುವ ಸನ್ನಿವೇಶದಲ್ಲಿ ಸರಕಾರದ ಆದೇಶಗಳು, ನಿಯಮ ಪಾಲನೆಗಳ ಮೇಲೆ ನಿಗಾ ವಹಿಸುವ ಹೆಚ್ಚಿನ ಜವಾಬ್ದಾರಿ ಪೊಲೀಸರ ಮೇಲಿದೆ. ಈ ಕಾರ್ಯಾನುಷ್ಟಾನದಲ್ಲಿ ಜನರೊಂದಿಗೆ ಪೊಲೀಸರ ವರ್ತನೆ ಸಂಯಮವಾಗಿರಬೇಕು. ನೈಟ್ ಕಪ್ರ್ಯೂ, ಕೋವಿಡ್ ನಿಯಮಗಳ ಪಾಲನೆ ಮಾಡದಿರುವ ಸಾರ್ವಜನಿಕರೊಂದಿಗೆ ವಾಗ್ವಾದಕ್ಕಿಳಿಯದೆ ತಪ್ಪಿನ ಅರಿವು ಮೂಡಿಸಿ ಎಚ್ಚರಿಕೆ ನೀಡಬೇಕೆಂದು ಪೊಲೀಸರಿಗೆ ಸೂಚಿಸಿರುವುದಾಗಿ ತಿಳಿಸಿದರು.
ಮಟ್ಕಾ ಕಿಂಗ್ಪಿನ್ಗಳ ಎಡೆಮುರಿ ಕಟ್ಟುತ್ತೇವೆ:
ತುಮಕೂರು ಜಿಲ್ಲೆಯ 9 ಮಂದಿ ಪೊಲೀಸರು ಕೋವಿಡ್ ಪಾಸಿಟಿವ್ ಸೋಂಕಿತರಾಗಿದ್ದು, ಪೊಲೀಸರು ತಮ್ಮ ಆರೋಗ್ಯ ಕಾಳಜಿಯನ್ನು ಮಾಡುವುದು ಅತೀ ಅವಶ್ಯಕವಾಗಿದೆ ಎಂದ ಐಜಿಪಿ ಅವರು ಜಿಲ್ಲೆಯ ಮಟ್ಕಾದಂಧೆಕೋರರನ್ನು ಮಟ್ಟಹಾಕಲು ಪೊಲೀಸರು ಕಠಿಣ ಕ್ರಮ ಜಾರಿಗೊಳಿಸುತ್ತಿದ್ದು, ಕಿಂಗ್ಪಿನ್ಗಳ ಎಡೆಮುರಿ ಕಟ್ಟಲು ಕಾರ್ಯ ಯೋಜನೆ ರೂಪಿಸಲಾಗಿದೆ. ನಿಷೇಧಿತ ಗಾಂಜಾ, ಮಾದಕ ದ್ರವ್ಯಗಳ ಸೇವನೆ, ಮಾರಾಟ ಪ್ರಕರಣಗಳಲ್ಲಿ ಚಿಕ್ಕಬಳ್ಳಾಪುರ ಮಾದರಿಯಲ್ಲಿ ಠಿiಣ ಟಿಜಠಿs ಕಾಯ್ದೆಯಡಿ ಜಿಲ್ಲೆಯಲ್ಲೂ ಪುನರಾವರ್ತಿತ ಮಾದಕದ್ರವ್ಯ ಆರೋಪಿತರನ್ನು ಸೆರೆ ಮನೆಗೆ ತಳ್ಳಲಾಗುವುದು. ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದರು.
ಜಿಲ್ಲೆಗೆ ಹೊಸ ಠಾಣೆ ಮಂಜೂರು ಪ್ರಸ್ತಾಪ ಸದ್ಯಕ್ಕಿಲ್ಲ. ಬಾಡಿಗೆ ಕಟ್ಟಡದಲ್ಲಿರುವ ಎನ್ಇಪಿಎಸ್, ಮಹಿಳಾಠಾಣೆ, ನಗರಠಾಣೆ ಸೇರಿ 5 ಠಾಣೆಗಳನ್ನು ಸ್ವಂತ ಕಟ್ಟಡಕ್ಕೆ ಹಂತ ಹಂತವಾಗಿ ಸ್ಥಳಾಂತರಿಸಲಾಗುವುದು. ಪೊಲೀಸರಿಗೆ ಸೈಬರ್ಕ್ರೈಂ, ಮಾದಕದ್ರವ್ಯ ಜಾಲದ ತನಿಖೆ ಕುರಿತಂತೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದರು.
ಎಸ್ಪಿ ಡಾ.ಕೆ.ವಂಸಿಕೃಷ್ಣ ಮಾತನಾಡಿ ಶೇ.18ರಷ್ಟು ಸಿಬ್ಬಂದಿ ಕೊರತೆಯಿದ್ದು, ಹಿಂದೆ ನೇಮಕಾತಿಗೊಂಡ ಪೊಲೀಸರು ತರಬೇತಿ ಪಡೆಯುತ್ತಿದ್ದು, ತರಬೇತಿ ಮುಗಿಸಿ ಅವರೆಲ್ಲರು ಕೆಲಸಕ್ಕೆ ನಿಯೋಜನೆಗೊಂಡರೆ ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆ ನೀಗಲಿದೆ ಎಂದು ಮಾಹಿತಿ ನೀಡಿದರು.ಎಎಸ್ಪಿ ಉದೇಶ್ಕುಮಾರ್ ಹಾಜರಿದ್ದರು.
ಐಜಿ ದಿಢೀರ್ ಭೇಟಿ ; ಲಾಕ್ಡೌನ್ನಂತಹ ಕಠಿಣ ಕ್ರಮಗಳು ಜಾರಿಯಾಗಲಿದೆಯೇ?
ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಅವರು ದಿಢೀರನೇ ಜಿಲ್ಲಾಪೊಲೀಸ್ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಕೋವಿಡ್ ನಿಯಂತ್ರಣಾ ಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಮುಂದೆ ಲಾಕ್ಡೌನ್ನಂತಹ ಕಠಿಣ ಕ್ರಮಗಳು ಜಾರಿಗೊಳ್ಳಬಹುದಾ ಎಂಬ ಚರ್ಚೆಗಳಿಗೆ ಎಡೆಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಐಜಿಪಿ ಅವರು ಸಾರ್ವಜನಿಕರೆಲ್ಲರೂ ಅಗತ್ಯ ಮುನ್ನೆಚ್ಚರಿಕೆ ವಹಿಸಿ ನಿಯಮ ಪಾಲಿಸಿ ಲಾಕ್ಡೌನ್ನಂತಹ ಕಠಿಣ ಕ್ರಮಗಳು ಜಾರಿಯಾಗದಿರಲಿ ಎಂದು ಆಶೀಸೋಣ. ಹಾಲಿ ಜಾರಿಯಲ್ಲಿರುವ ನೈಟ್ ಕಪ್ರ್ಯೂ ನಿಯಂತ್ರಣಕ್ಕೆ ಸಾಕೆನಿಸುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ನೀಗಿಸಲು ಹಂತ ಹಂತ ನೇಮಕಾತಿ ಮೂಲಕ ಕ್ರಮವಹಿಸಲಾಗುವುದು. ಸುಗಮ ಸಂಚಾರ ವ್ಯವಸ್ಥೆ, ಕಳ್ಳತನ, ದರೋಡೆ, ಕೊಲೆ ಆರೋಪಿಗಳನ್ನು ತ್ವರಿತವಾಗಿ ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಶ್ರಮ ಹಾಕುತ್ತಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ರಾಜಕೀಯ ವೈಷಮ್ಯ ಚಟುವಟಿಕೆಗಳನ್ನು ಮಟ್ಟಹಾಕಲು ಕ್ರಮ ವಹಿಸಲಾಗುವುದು. ತುರುವೇಕೆರೆ, ಗ್ರಾಮಾಂತರ ಭಾಗದಲ್ಲಿ ಹಿಂದೆ ನಡೆದಿರುವ ಪ್ರಕರಣಗಳಲ್ಲೂ ನಿಷ್ಪಕ್ಷಪಾತವಾದ ತನಿಖೆ ನಡೆಯಲಿದೆ. ಕಷ್ಟಪಟ್ಟು ಕೆಲಸ ಮಾಡುವ ಪೊಲೀಸರಿಗೆ ಬಡ್ತಿ ನೀಡಿ, ಖಾಲಿ ಇರುವ ಸ್ಥಾನಕ್ಕೆ ನಿಯೋಜಿಸುವ ಪ್ರಕ್ರಿಯೆ ಜಿಲ್ಲೆಯಲ್ಲಿ ಉತ್ತಮವಾಗಿ ನಡೆಯುತ್ತಿದೆ.
-ಚಂದ್ರಶೇಖರ್, ಕೇಂದ್ರ ವಲಯ ಐಜಿಪಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ