ರಾಜ್ಯದಲ್ಲಿ ಹೆಲ್ತ್ ಎಮೆರ್ಜಿನ್ಸಿಗೆ ಕಾರಣರಾದ ನೇತಾರರು!

ತುಮಕೂರು : 

      ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನವೊಂದಕ್ಕೆ 20 ಸಾವಿರ ಗಡಿ ದಾಟಿದ್ದು, ನಿತ್ಯ ಸಾವಿರಾರು ಸಂಖ್ಯೆಯಲ್ಲಿ ತರಗಲೆಗಳಂತೆ ಅಮೂಲ್ಯ ಜೀವಗಳು ಉರುಳುತ್ತಿವೆ. ಹೆಲ್ತ್ ಎಮೆರ್ಜಿನ್ಸಿಯಂತಹ ಪರಿಸ್ಥಿತಿ ಸದ್ಯ ರಾಜ್ಯದಲ್ಲಿ ನಿರ್ಮಾಣವಾಗಿದ್ದು, ಈ ದುಸ್ಥಿತಿಗೆ ರಾಜ್ಯದ ಇತ್ತೀಚಿನ 3 ಉಪಚುನಾವಣೆಗಳು, ರಾಜಕೀಯ ನೇತಾರರ ಬೇಜವಾಬ್ದಾರಿಯುತ ನಡವಳಿಕೆ ಬಹುದೊಡ್ಡ ಕೊಡುಗೆ ನೀಡಿದೆ.

ಏ.17ರಂದು ನಡೆದ ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಕ್ಷೇತ್ರಗಳ ಉಪ ಚುನಾವಣೆ ಪ್ರಚಾರ ಯಾವುದೇ ಸಾರ್ವತ್ರಿಕ ಚುನಾವಣೆಗಿಂತಲೂ ಕಡಿಮೆಯಿಲ್ಲದಂತೆ ಸಾವಿರಾರು ಜನಜಂಗುಳಿಯ ನಡುವೆಯೇ ನಡೆದಿದ್ದು, ಕೋವಿಡ್ 2ನೇ ಅಲೆ, ನಿಯಂತ್ರಣ ಕ್ರಮಗಳುನ್ನು ಉಪೇಕ್ಷಿಸಿ ಪ್ರಚಾರ ರ್ಯಾಲಿಗಳು, ಸಮಾವೇಶಗಳಲ್ಲಿ ತೊಡಗಿಕೊಂಡ ಆಡಳಿತ ಯಂತ್ರ- ರಾಜಕೀಯ ನೇತಾರರು, ಕರುನಾಡಿನ ಜನರು ಸಾವು-ನೋವು, ಯಾವ ಸಮಯದಲ್ಲಿ ಬೇಕಾದರೂ ಲಾಕ್‍ಡೌನ್‍ನಂತಹ ಕಠಿಣ ಕ್ರಮಗಳು ಅನುಭವಿಸವಂತಾಗಲು ನೇರ ಕಾರಣರಾಗಿದ್ದಾರೆ.

ಸಿಎಂ ಇಲ್ಲದೆ ಆಡಳಿತ ಅರಾಜಕತೆ:

     ಅದರಲ್ಲೂ 79 ವರ್ಷ ವಯಸ್ಸಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಚುನಾವಣೆ ಗೆಲುವಿನ ಗುರಿಯನ್ನೇ ಇಟ್ಟುಕೊಂಡು ಪ್ರಚಾರಕ್ಕೆ ಸಕ್ರಿಯವಾಗಿ ಕರೆದೊಯ್ದು, ಅವರಿಗೆ ಮತ್ತೆ ಕೋವಿಡ್ ಸೋಂಕು ತಗುಲಿ ರಾಜ್ಯದಲ್ಲಿ ಆಡಳಿತ ಅರಾಜಕತೆ ಸೃಷ್ಟಿಯಾಗಿದೆ. ಆಡಳಿತ ಯಂತ್ರದ ಮುಖ್ಯಸ್ಥರಿಲ್ಲದಿರುವುದು ಕೋವಿಡ್ ನಿಯಂತ್ರಣ ವಿಷಯದಲ್ಲಿ ದೊಡ್ಡ ಹಿನ್ನಡೆಯಾಗಿದ್ದು, ಆಸ್ಪ್ರತ್ರೆಗಳಲ್ಲಿ ಸೋಂಕಿತರಿಗೆ ಬೆಡ್, ಔಷಧಿ ಸಿಗದೆ ಪರದಾಡುತ್ತಿದ್ದಾರೆ. ಹಳಿತಪ್ಪಿರುವ ಆಡಳಿತ, ಆರೋಗ್ಯ ವ್ಯವಸ್ಥೆಯನ್ನು ಕಂಡು ಖುದ್ದು ರಾಜ್ಯಪಾಲರೇ ಸರ್ವಪಕ್ಷ ಸಭೆ ನಡೆಸುವಂತಹ ಪರಿಸ್ಥಿತಿ ಬಂದಿದ್ದು, ರಾಜ್ಯದ ಆಡಳಿತ ಇತಿಹಾಸದಲ್ಲೇ ಮೊದಲು. ಇದು ಸಂವಿಧಾನ ಬಾಹಿರ ಕ್ರಮವೆಂದು ವಿಪಕ್ಷ ನಾಯಕರಿಂದ ಟೀಕೆಗೂ ಗುರಿಯಾಗಿದೆ.

ಉಪಚುನಾವಣೆಯಿಂದ ಸಾಧನೆಯಾದರೂ ಏನು? :

      ಕೋವಿಡ್ 2ನೇ ಅಲೆಯ ಈ ತುರ್ತು ಸಂದರ್ಭದಲ್ಲಿ ಉಪಚುನಾವಣೆ ಗೆಲ್ಲಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು ಹಾಕಿದ ಶ್ರಮವನ್ನು ಕೋವಿಡ್ ನಿಯಂತ್ರಣ ಕಾರ್ಯಗಳಿಗಾದರೂ ಹಾಕಿ, ಬಹಿರಂಗ ಪ್ರಚಾರ ರಹಿತ ಮಾದರಿ ಚುನಾವಣೆ ನಡೆಸಿದ್ದರೆ ಇಡೀ ದೇಶಕ್ಕೆ ಉತ್ತಮ ಸಂದೇಶದ ಜೊತೆಗೆ ಕರುನಾಡಿನ ಜನರ ಆರೋಗ್ಯ ಹಿತರಕ್ಷಣೆ ಮಾಡಬಹುದಿತ್ತು. ಇದನ್ನು ಮಾಡದ ಮೂರು ಪಕ್ಷಗಳ ನಾಯಕರು ಪ್ರತಿಷ್ಟೆ, ರಾಜಕೀಯ ಜಿದ್ದಿಗೆ ಬಿದ್ದು, ಉಪಚುನಾವಣೆ ಕ್ಷೇತ್ರಗಳಲ್ಲಿ ಸಾರ್ವತ್ರಿಕ ಚುನಾವಣೆಯನ್ನು ಮೀರಿಸುವಂತೆ ನಡೆಸಿ ತಾವೂಗಳು ಸೋಂಕು ಅಂಟಿಸಿಕೊಂಡು ಕೋವಿಡ್ ಸ್ಪ್ರೆಡರ್‍ಗಳಾಗಿ ಬದಲಾಗಿದ್ದು ದುರಂತವೇ ಸರಿ.

      ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿಯಾಗಲೀ, ಕಾಂಗ್ರೆಸ್ ಆಗಲಿ ಯಾರೇ ಗೆದ್ದು, ಯಾರೇ ಸೋತರೂ ಕೇಂದ್ರ ಸರಕಾರಕ್ಕಾಗಲೀ, ಕಾಂಗ್ರೆಸ್‍ಗಾಗಲೀ ಯಾವುದೇ ಲಾಭವಿಲ್ಲ. ಒಂದು ಸ್ಥಾನ ಹೆಚ್ಚು ಬಂದರೆ ಕಾಂಗ್ರೆಸ್ ಪಕ್ಷವೇನು ಕೇಂದ್ರದಲ್ಲಿ ಅಧಿಕಾರ ಹಿಡಿಯೋಲ್ಲ. ಅಂತೆಯೇ ಇದ್ದ ಒಂದು ಸ್ಥಾನ ಕಳೆದುಕೊಂಡರೆ ಬಿಜೆಪಿ ಸರಕಾರವೇನು ಉರುಳುವುದಿಲ್ಲ. ಹಾಗೆಯೇ ಮಸ್ಕಿ, ಬಸವಕಲ್ಯಾಣ ಕ್ಷೇತ್ರದ ಎರಡು ವಿಧಾನಸಭಾ ಕ್ಷೇತ್ರಗಳಲ್ಲೂ ಸಹ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾರೇ ಗೆದ್ದರೂ, ಯಾರೇ ಸೋತರೂ ಹಾಲಿ ಬಿಜೆಪಿ ಸರಕಾರಕ್ಕೇನು ಧಕ್ಕೆಯಿಲ್ಲ. ಇನ್ನೂಈ ವಿಪಕ್ಷಗಳು ಸಹ ಅಧಿಕಾರಕ್ಕೆ ಬರುವ ಸ್ಥಿತಿಯಿಲ್ಲ. ಆದರೂ ರಾಜಕೀಯ ಪ್ರತಿಷ್ಠೆಗಾಗಿ ಮೂರು ಪಕ್ಷಗಳು ಉಪಚುನಾವಣೆಯನ್ನೇ ಕೇಂದ್ರೀಕರಿಸಿ ಮತದಾರರನ್ನು ಕೇವಲ ಮತಸರಕೆಂಬಂತೆ ನಡೆಸಿಕೊಂಡಿರುವುದದ್ದು, ಸದ್ಯದ ಭೀಕರ ಪರಿಸ್ಥಿತಿಗೆ ನಾಂದಿಹಾಡಿದೆ

ಬಹಿರಂಗ ಪ್ರಚಾರ ಮಾಡೋಲ್ಲವೆನ್ನಲು ಸಾಧ್ಯವಿರಲಿಲ್ಲವೇ?

     ಉಪ ಚುನಾವಣೆ ಘೋಷಣೆಯಾದಗಲೇ ಮೂರು ಪ್ರಮುಖ ಪಕ್ಷಗಳು ಒಂದು ಮಹತ್ವದ ತೀರ್ಮಾನ ಕೈಗೊಂಡು ನಮ್ಮ ಅಭ್ಯರ್ಥಿಗಳು ಇವರು. ಬಹಿರಂಗ ಪ್ರಚಾರ ಮಾಡೋಲ್ಲ. ನಿಯಮಾನುಸಾರ ಮಾಸ್ಕ್ ಧರಿಸಿ ಅಂತರ ಕಾಪಾಡಿ ಅಭ್ಯರ್ಥಿಗೆ ಮತ ಹಾಕಿ ಹೋಗಿ ಎಂದು ಆರೋಗ್ಯಪೂರ್ಣ ಮನವಿಯನ್ನು ಯಾವುದೇ ರಾಜಕೀಯ ಪಕ್ಷದವರು ಮಾಡಿಕೊಳ್ಳದಿರುವುದು ಜನಸಾಮಾನ್ಯರ ಆರೋಗ್ಯದ ಬಗೆಗೆ ನಮ್ಮ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳಿಗಿರುವ ಕಾಳಜಿಯ ಧ್ಯೋತಕವೆನಿಸಿದೆ. ಬಹಿರಂಗವಾಗಿ ರಾಜಕೀಯ ಪಕ್ಷಗಳು ಕೋವಿಡ್ ನಿಯಮ ಉಲ್ಲಂಘಿಸಿ ಚುನಾವಣೆ ಪ್ರಚಾರ ನಡೆಸುತ್ತಿದ್ದರೂ ಚುನಾವಣೆ ಆಯೋಗ ಕೈಗೊಂಡ ಕ್ರಮವಾದರೂ ಏನು ಎಂದು ಪ್ರಶ್ನಿಸುವಂತಾಗಿದೆ. ಬೆಳಗಾವಿ ಹಾಗೂ ಬಸವಕಲ್ಯಾಣವನ್ನು ಪ್ರತಿನಿಧಿಸಿದ್ದ ಸುರೇಶ್ ಅಂಗಡಿ ಹಾಗೂ ನಾರಾಯಣರಾವ್ ಇಬ್ಬರೂ ಕೋವಿಡ್‍ಗೆ ಬಲಿಯಾಗಿದ್ದು, ಅವರ ನಿಧನಾ ನಂತರ ನಡೆದ ಉಪಚುನಾವಣೆಯಾದರೂ ಮಾದರಿಯಾಗಿ ನಡೆಯದೆ ಕೋವಿಡ್ ಸೋಂಕಿಗೆ ಜನರ ಬಲಿಯಾಗುವಂತೆ ಆಗಿದ್ದು ಮಾತ್ರ ವಿಪರ್ಯಾಸ

ಬೆಳಿಗ್ಗೆ ಉಲ್ಲಂಘನೆ, ಸಂಜೆ ನಿಯಮ ಪಾಲನೆಯ ನೀತಿಬೋಧನೆ!

      ಉಪ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಲಕ್ಷಾಂತರ ಜನರ ಮಧ್ಯೆ ಪ್ರಚಾರ ರ್ಯಾಲಿಗಳಲ್ಲಿ ಸರಿಯಾಗಿ ಮಾಸ್ಕ್ ಧರಿಸದೆ, ಅಂತರ ಕಾಪಾಡದೇ ತಾವೇ ಕೋವಿಡ್ ನಿಯಮಾವಳಿಯನ್ನು ಉಲ್ಲಂಘಿಸಿ ಪ್ರಚಾರ ಮಾಡುತ್ತಿದ್ದ ರಾಜಕೀಯ ನೇತಾರರು, ಆಡಳಿತ ಸಚಿವರುಗಳು ಸಂಜೆ ವಾಹಿನಿಗಳ ಕ್ಯಾಮೆರಾ ಮುಂದೆ, ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಕೋವಿಡ್ ಮಾರ್ಗಸೂಚಿ ಸಾರ್ವಜನಿಕರೆಲ್ಲರೂ ಪಾಲಿಸಬೇಕು. ಮಾಸ್ಕ್ ಅಂತರ ಕಾಪಾಡಬೇಕು ಎಂದು ನೀತಿಬೋಧನೆ ಮಾಡುತ್ತಿದ್ದುದು ಎಷ್ಟರ ಮಟ್ಟಿನ ನೈತಿಕತೆ? ಸಾರ್ವಜನಿಕರ ಮೇಲೆ ದಂಡ ವಿಧಿಸಲು ಪೊಲೀಸರು ಮುಂದಾದಾಗ ಇದೇ ವಿಷಯವನ್ನು ಮುಂದಿಟ್ಟುಕೊಂಡು ಜನತೆ ಪೊಲೀಸರು, ಅಧಿಕಾರಿಗಳ ಮೇಲೆ ಮುಗಿ ಬೀಳುತ್ತಿದ್ದಾರೆ. ಆಡಳಿತ-ಜನರ ನಡುವೆ ಸಂಘರ್ಷಕ್ಕೆ ನೇತಾರರ ವರ್ತನೆಗಳು ಕಾರಣವಾಗಿದೆ.
 

 ಟಿ.ಎನ್. ಮಧುಕರ್

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link